ಬದುಕಿನಹಾದಿ -ವಿಶಾಲಾ ಅರಾಧ್ಯ

ಬದುಕಿನಹಾದಿ

ವಿಶಾಲಾ ಅರಾಧ್ಯ

ಹುಟ್ಟಿದ ಮನುಷ್ಯನಿಗೆ ಸಾವು ನಿಶ್ಚಿತ.

ಕೆಲವು ಸಾರಿ ಸಾವೆಂದರೆ ಅದೊಂದು ನಿಗೂಢವಾದ ಭಯಾನಕ ಸ್ಥಿತಿ ಅನ್ನಿಸುತ್ತದೆ.  ಹುಟ್ಟು ಮತ್ತು ಸಾವಿನ ನಡುವಿನ ಬದುಕಿನಲ್ಲಿ ಹಲವು ಬಾರಿ ಸಾವು ನಮಗೆ ಬೆನ್ನು ತಟ್ಟಿ ಹೋದ ಅನೇಕ ಸಂದರ್ಭಗಳು ಎಲ್ಲರ ಜೀವನದಲ್ಲಿ ನಡೆದುಹೋಗಿರುತ್ತವೆ. ಕೆಲವರು ಯಾವುದಾದರೂ ರೋಗ ಬಂದು “ಇನ್ನು ಮನುಷ್ಯ ಉಳಿಯಲಾರನೆಂದು” ತೀರ್ಮಾನಿಸಿದ ನಂತರವೂ ಮನುಷ್ಯ ಪವಾಡ ಸದೃಶವಾಗಿ ಬದುಕಿ ಬರುವುದುಂಟು. ಕೆಲವೊಮ್ಮೆ ಕಾರಣವೇ ಇಲ್ಲದೆ ಯಾವುದೇ ತಪ್ಪಿಲ್ಲದೆ ಅಪಘಾತಗಳು ಸಂಭವಿಸಬಹುದು. ಪ್ರೇಮ ವೈಫಲ್ಯ, ಪ್ರೇಮಿಗಳಿಗೆ ವಿವಾಹವಾಗಲು ಪೋಷಕರ ಸಹಕಾರ ಇಲ್ಲದಿರುವಿಕೆ, ಬಡತನ, ಅವಮಾನ, ಕನಸುಗಳ ಮುರಿಯುವಿಕೆ ಮುಂತಾದ ಸಂದರ್ಭಗಳಲ್ಲಿ ಸಾವಿನಿರುವು ಅರಿವಿಗೆ ಬಂದು ನಿಲ್ಲುತ್ತದೆ. ಬದುಕಿಗಿಂತ ಸಾವೇ ಹತ್ತಿರ ಮತ್ತು ಪ್ರಿಯವಾದ ಅನುಭವ ಎನ್ನಿಸುತ್ತದೆ.

ಆದರೆ ಸಾವೊಂದು ಎಲ್ಲದಕ್ಕೂ ಪರಿಹಾರವಲ್ಲ.‌ಈ ಬದುಕು ಒಡ್ಡುವ ಪರೀಕ್ಷೆಗಳನ್ನು ಸಮಾಧಾನವಾಗಿ ಸ್ವೀಕರಿಸಿದಾಗಲೇ ನೀವು ಏನೆಂದು ನಿಮಗೆ ಅರಿವಾಗುತ್ತಾ ಹೋಗುತ್ತದೆ. ಬೇರೆಯವರ ಬಗ್ಗೆ ಚಿಂತಿಸಬೇಡಿ ಮತ್ತು ನಿಮ್ಮ ವಿಷಯಕ್ಕೆ ಸಂಬಂಧಪಡದ ಬೇರೆಯವರು ನಿಮ್ಮ ಬಗ್ಗೆ ಏನೆಂದುಕೊಳ್ಳುವರೋ ಎಂದು ಚಿಂತಿಸಬೇಡಿ.  ನೀವು ಹೆಚ್ಚು ಸವಾಲುಗಳನ್ನು ಸ್ವೀಕರಿಸುತ್ತಾ ಬಗೆಹರಿಸುತ್ತಾ ಹೋದಂತೆ ಮನಸ್ಸು ಆನಂದವನ್ನು ಅನುಭವಿಸುತ್ತದೆ. ನಿಮಗೆ ನೀವೇ ಗುರುವಾಗುತ್ತಾ ಹೋಗುವಿರಿ. ಆಗ ನೀವು ಗೆಲುವನ್ನು ಸೋಲನ್ನು ಸಮಾನವಾಗಿ ಕಾಣುವ ಗುಣ ಪಡೆದಿರುತ್ತೀರಿ. ನಿಮಗೆ ಯಾವುದೇ ಬಂಧನಗಳು ಕಾಡಿಸವು. ಸಮಾಜದ ಬದುಕನ್ನು ನೀವು ಸ್ವಲ್ಪ ಎತ್ತರದಲ್ಲಿ ನಿಂತು ನೋಡುತ್ತೀರಿ. ಆಗ ಓರೆಕೋರೆಗಳು ಸುಲಭವಾಗಿ ಗ್ರಹಿಸುವವರಾಗುತ್ತೀರಿ . ಮನುಷ್ಯ “ನಾನು ನನದೆಂಬ ಅಹಂ ಸತ್ತು ಹೆಣವಾಗಬೇಕು” ಅಂತಹ ಸಮಾಧಿಯ ಸ್ಥಿತಿ ತಲುಪಬೇಕು. ಒಂದು ಕಲ್ಲು ಅನೇಕ ಪೆಟ್ಟುಗಳನ್ನು ತಿಂದು ಹೇಗೆ ಮೂರ್ತಿ ಆಗುತ್ತದೆಯೋ ಹಾಗೆಯೇ ನೀವು ಸಂಸಾರದ , ಬಂಧುಗಳ, ಸ್ನೇಹಿತರ, ಸಹೋದ್ಯೋಗಿಗಳ ವಂಚನೆ   ಮತ್ತು ಅವಮಾನದಿಂದ ಗಟ್ಟಿಯಾಗಿ ಒಂದು ವಿಶಿಷ್ಟವಾದ ಸ್ಥಿತಿಯನ್ನು ತಲುಪಿ ಜ್ಞಾನ ಪಡೆದಿರುತ್ತೀರಿ.  ಭವ ಬಂಧಗಳ ಪೊರೆ ಕಳಚುತ್ತಾ ಹೋಗುತ್ತದೆ. ಆಗ ಸಾವಿನ ಭಯವೂ ಕಾಡದು.. ಬದಲಾಗಿ  ಭವಿಷ್ಯದಲ್ಲಿ ಸಂಭವವೆನಿಸುವ ಸಾವು ಸಹನೀಯ ಎನ್ನಿಸುತ್ತದೆ.


ವಿಶಾಲಾಆರಾಧ್ಯ

Leave a Reply

Back To Top