ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ನವಭಾರತ ಗಾಥೆ

ಇಟ್ಟ ಹೆಜ್ಜೆಯು ದಿಟ್ಟವಾಗಿರಲಿ
ಹೊಸತು ಭಾರತ ಸೃಷ್ಟಿಗೆ
ಹೃದಯದ ಅಲೆಯು ಹೊಮ್ಮಿಬರಲಿ
ಸಮತೆ ರಾಷ್ಟ್ರ ಸಮಷ್ಟಿಗೆ

ಭವ್ಯ ಪರಂಪರೆ ಜಾಗೃತವಾಗಲಿ
ಮೂಡಲಿ ಬೆಳಕಿನ ಕಿರಣ
ದಿವ್ಯ ಚರಿತ್ರೆಯ ಪುನರಾಗಮನ
ಅಂಧಕಾರದ ಮರಣ

ಹಲವು ಧರ್ಮಗಳು ಹಲವು ಜಾತಿಗಳು
ಸಂಸ್ಕೃತಿ ಇಂದು ಅನೇಕ
ಜಾತಿ ಪಂಥ ಮತ ಭೇದವ ಮರೆತು
ರಾಷ್ಟ್ರವಾಗಲಿ ಏಕ

ಭೇದ ಭಾವಗಳ ಭಿತ್ತಿಯು ಒಡೆಯಲಿ
ನಡೆಯಲಿ ಮನಗಳ ಮಿಲನ
ಭೂಮಿ ವ್ಯೋಮದಲೂ ಘೋಷಣೆ ಮೊಳಗಲಿ
ತಮಯುತ ಅಸುರೋತ್ಕ್ರಮಣ

ಭೂತ ವರ್ತಮಾನಗಳನು ಜೋಡಿಸೆ
ನಮ್ಮ ಭವಿಷ್ಯವು ಉನ್ನತಿ
ಕೂಡಿ ಒಲುಮೆಯ ಸೊಡರು ಬೆಳಗಿಸೆ
ಆತ್ಮಜ್ಞಾನದ ಸನ್ಮತಿ

ಉತ್ತರ ಹೈಮಾಚಲದೆತ್ತರದ
ನಿಲುವಾಗಲಿ ನಮ್ಮಿರವು
ಉತ್ತರೋತ್ತರ ವಿಜಯ ಯಾತ್ರೆಗೆ
ಬಲು ಹಿಗ್ಗಲಿ ನಮ್ಮುರವು

ಧರ್ಮಗ್ರಂಥಗಳ ಹಿರಿದಕ್ಕರಗಳು
ಇಳಿಯಲಿ ಹೃದಯದ ಒಳಗೆ
ಮಾನವೀಯತೆಯ ಸಾರುವ ಒಸಗೆ
ಭೂಷಣವಾಗಲಿ ಇಳೆಗೆ

ಸಲಿಲದ ಹನಿಗಳು ಸಾರಿ ಹೇಳಲಿ
ಭಾರತಮಾತೆಗೆ ನಮನ
ಅಂದದ ಭಾರತಿಗಂದಣವಾಗಲಿ
ದೇಶದುತ್ಥಾನ ಗಮನ

ಶ್ರೇಷ್ಠ ಭಾರತ ಉತ್ಕೃಷ್ಟ ಭಾರತ
ವಂದೇ ಭಾರತ ಎಂದೆಂದೂ ಉನ್ನತ


ವಿಶ್ವನಾಥ ಎನ್ ನೇರಳಕಟ್ಟೆ
ಸಂಶೋಧನಾ ವಿದ್ಯಾರ್ಥಿ,
ಮಂಗಳೂರು ವಿಶ್ವವಿದ್ಯಾನಿಲಯ


Leave a Reply

Back To Top