ಅಂಕಣ ಸಂಗಾತಿ
ನೆನಪಿನದೋಣಿಯಲಿ
ಸ್ವಾತಂತ್ರ್ಯೋತ್ಸವದ ಮೆಲುಕುಗಳು
ಸ್ವಾತಂತ್ರ್ಯೋತ್ಸವದ ಮೆಲುಕುಗಳು
ನನ್ನ ನೆನಪಿನ ಬೊಗಸೆಗೆ ಸಿಗುವಷ್ಟು ಸ್ವಾತಂತ್ರೋತ್ಸವ ದಿನದ ಮೆಲುಕುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಾಸೆ . ಮೊಟ್ಟಮೊದಲ ನೆನಪು ನಾನು 3 _ 4 ವರ್ಷದವಳಿರಬೇಕು ಇನ್ನೂ ಶಾಲೆಗೆ ಸೇರಿರಲಿಲ್ಲ . ತಂದೆ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರ ಕಚೇರಿಯಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ನನ್ನನ್ನು ಕರೆದೊಯ್ದಿದ್ದರು . ಮೊಟ್ಟಮೊದಲ ಧ್ವಜಾರೋಹಣ ನೋಡಿದ್ದು ಆಗಲೇ. ಬಾವುಟ ಹಾರಿಸಿದಾಗ ಉದುರಿದ ಹೂಗಳಲ್ಲಿ ನಾಲ್ಕೈದು ನನ್ನ ತಲೆಯ ಮೇಲೆ ಬಿದ್ದಾಗ ಕೈ ತಟ್ಟಿ ಚಪ್ಪಾಳೆ ಹಾಕಿ ಕುಣಿದಿದ್ದೆ. ನಂತರ ಅಲ್ಲಿ ಕೊಟ್ಟ ಸಿಹಿ ತಿಂಡಿ ಪೊಟ್ಟಣವನ್ನು ತೆಗೆದು ಕೊಂಡು ದಾರಿಯಲ್ಲಿ ಬರುವಾಗ ಗಾಯತ್ರಿ ಟಿಫಿನ್ ರೂಂ ನಲ್ಲಿ ಅಣ್ಣ ಜಾಮೂನು ಮಸಾಲೆದೋಸೆ ಕೊಡಿಸಿದ್ದ ನೆನಪು ಇನ್ನೂ ಸವಿಯಾಗಿ ಮನದಲ್ಲಿ ಹಾಗೇ ಕುಳಿತಿದೆ.
ರಾಜರಾಜೇಶ್ವರೀ ಶಾಲೆಯಲ್ಲಿ ಓದುವಾಗ ಎರಡನೆಯ ಕ್ಲಾಸಿರಬೇಕು ಧ್ವಜಾರೋಹಣ ಸಂದರ್ಭದಲ್ಲಿ ಮುಂದೆ ನಿಲ್ಲಿಸಿದ್ದರು ಪುಟ್ಟ ಮಕ್ಕಳೆಂದು. ಮುಖ್ಯ ಅತಿಥಿ ಧ್ವಜಾರೋಹಣ ಮಾಡಿ ಭಾಷಣ ಮಾಡಿ ಆದ ಮೇಲೆ ನಿಮಗೆ ಗೊತ್ತಿರುವ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಹೇಳಿ ಎಂದಾಗ ಜೋರಾಗಿ ಗಾಂಧಿತಾತಾ ಚಾಚಾ ನೆಹರು ಎಂದು ಕೂಗಿದ್ದೆ. ಗುಡ್ ಎಂದದ್ದು ಇನ್ನೂ ನೆನಪಿದೆ .
ಇನ್ನು ಸೇಂಟ್ ಥಾಮಸ್ ಶಾಲೆಯಲ್ಲಿ ಗುಂಪಿನ ಲೀಡರ್ ಆದ್ದರಿಂದ ಸ್ವಾತಂತ್ರ್ಯೋತ್ಸವ ಸಮಾರಂಭದ ಕಾರ್ಯಕ್ರಮಗಳಲ್ಲಿ ನನ್ನ ಭಾಗವಹಿಸುವಿಕೆ ಇದ್ದೇ ಇರುತ್ತಿತ್ತು . ಬೆಳಿಗ್ಗೆ ಬಂದು ಧ್ವಜ ಕಂಬದ ಸುತ್ತ ರಂಗವಲ್ಲಿ ಹೂವಿನ ಅಲಂಕಾರ ಇದೆಲ್ಲದರಲ್ಲೂ ನನ್ನ ಹಾಜರಿ . ಮನೆಯಲ್ಲಿ ಬಿಡುತ್ತಿದ್ದ ರಾಶಿ ರಾಶಿ ಹೂವುಗಳನ್ನು ಹೊತ್ತು ತರುತ್ತಿದ್ದದು. ಅಲ್ಲದೆ ಕೇರಳ ಮೂಲದ ಕಾನ್ವೆಂಟ್ ಆದ್ದರಿಂದ ಹತ್ತಿರದಲ್ಲೇ ಬರುವ ಓಣಂ ಹಬ್ಬದ ಸಲುವಾಗಿ ಹೂಗಳನ್ನು ಸರಬರಾಜು ಮಾಡುತ್ತಿದ್ದದ್ದು ಉಂಟು . ಹೆಚ್ಚು ಕಡಿಮೆ ಇದೇ ಸಮಯದಲ್ಲಿ ಓಣಂ ಸಹ ಬರುತ್ತಿದ್ದುದರಿಂದ ಇಲ್ಲಿಗೆ ತಂದಾ ಹೂವು ಅಲ್ಲಿಗೂ….. ಬಿಳಿ ಸಮವಸ್ತ್ರ ಕಡ್ಡಾಯ. ಹೆಣ್ಣುಮಕ್ಕಳಿಗೆ ಹೂಪ್ಸ್ ಹಿಡಿದು ಕವಾಯತ್ತು ಗಂಡುಮಕ್ಕಳಿಗೆ ಡಂಬಲ್ಸ್ ಕವಾಯತು ಅಲ್ಲದೆ ಮಾಮೂಲಿ ದೈಹಿಕ ಕವಾಯತ್ತುಗಳು ನಡೆಯುತ್ತಿದ್ದವು . ಜತೆಗೆ ದೇಶಭಕ್ತಿ ಗೀತೆ ಸಮೂಹಗಾನ ಸಮೂಹ ನೃತ್ಯಗಳು ಸಹ . ಸಮೂಹ ಗಾನದಲ್ಲಿ ಒಂದೆರಡರಲ್ಲಾದರೂ ನಾನು ದನಿಗೂಡಿಸಿರುತ್ತಿದ್ದೆ . ಸ್ವಾತಂತ್ರ್ಯೋತ್ಸವಕ್ಕಾಗಿ ನಡೆದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ನಡೆದಿರುತ್ತಿತ್ತು. ಹೆಚ್ಚಿನಂಶ ಇದೇ ರೀತಿ ನಡೆಯುತ್ತಿದ್ದರೂ ಒಂದೇ 1ವರ್ಷದ ಸ್ವಾತಂತ್ರ ದಿನದ ನೆನಪು ಮನಸ್ಸಿನಲ್ಲಿ ತುಂಬಾ ಇದೆ . ಅಂದು ಬೆಳಗಿನಿಂದಲೇ ಜಿಟಿಜಿಟಿ ಮಳೆ ದಿನವಿಡೀ ಸುರಿಯುತ್ತಲೇ ಇತ್ತು. ಆ ಮಳೆಯಲ್ಲಿಯೇ ಎಲ್ಲ ಕಾರ್ಯಕ್ರಮಗಳನ್ನು ಮುಗಿಸಿ ಮನೆಗೆ ಬಂದವರೇ ಬೆಚ್ಚಗಿನ ಬಟ್ಟೆ ಧರಿಸಿ ನಾಗರಪಂಚಮಿಯ ಹಬ್ಬ ಇದ್ದುದರಿಂದ ಬಿಸಿಬಿಸಿ ಕುಚ್ಚಲ ಕಡುಬು ತಿಂದ ಆ ಆಹ್ಲಾದದ ಹಾಯಿ ಹಾಯಿ…..ಅಬ್ಬಾ !
ಪ್ರೌಢಶಾಲೆಗೆ ಬಂದ ಮೇಲೆ ಸ್ವಾತಂತ್ರ್ಯೋತ್ಸವ ಇದೇ ತರಹ ನಡೆಯುತ್ತಿದ್ದರೂ ಅಲ್ಲಿ ವಿದ್ಯಾರ್ಥಿಗಳಿಂದ ಭಾಷಣ ಮಾಡಿಸುತ್ತಿದ್ದುದು ವಿಶೇಷ ವೇದಿಕೆಯ ಮೇಲೆ ಗಣ್ಯರ ಭಾಷಣಗಳಿದ್ದರೂ ವಿದ್ಯಾರ್ಥಿ ಪ್ರತಿನಿಧಿಯಾಗಿ ಯಾರಾದರೊಬ್ಬರು ಒಂದೈದು ನಿಮಿಷ ಸ್ವಾತಂತ್ರ ಹೋರಾಟಗಾರರ ಬಗ್ಗೆ ದೇಶದ ಬಗ್ಗೆ ಮಾತನಾಡಬೇಕಿತ್ತು . ದೊಡ್ಡ ತರಗತಿಯ ಮಕ್ಕಳು ಇದ್ದರೂ ನನಗೇ ಸದಾ ಆವಕಾಶ ದೊರಕುತ್ತಿದ್ದುದು ಈಗಲೂ ಹೆಮ್ಮೆಯ ವಿಷಯ. ವಿಷಯ ಸಂಗ್ರಹಿಸಿ ಬರೆದು ಅಣ್ಣನಿಗೆ ತೋರಿಸಿ ನಂತರ ಅದನ್ನು ಉರು ಹೊಡೆದು ನೋಡಿಕೊಳ್ಳದೆಯೇ ಭಾಷಣ ಮಾಡುತ್ತಿದ್ದೆ . ಅದು ಎಲ್ಲರಿಗೂ ಸಂತಸ ಕೊಡುತ್ತಿತ್ತು .
ನಂತರ ಕಾಲೇಜು ಹಾಗೂ ಕಚೇರಿ ಕೆಲಸಕ್ಕೆ ಸೇರಿದ ಮೇಲೆ ಒಂದು ರಜಾದಿನವನ್ನಾಗಿ ಸ್ವಾತಂತ್ರ ಅನುಭವಿಸುತ್ತಿದ್ದುದೇ ವಿನಃ ಧ್ವಜಾರೋಹಣಕ್ಕೆ ಹೋಗಲಿಲ್ಲ ಎಂದು ಬೇಸರದಿಂದ ಅಪರಾಧೀ ಮನೋಭಾವದಿಂದಲೇ ಹೇಳಿಕೊಳ್ಳುತ್ತಿದ್ದೇನೆ . ಅದಕ್ಕೆ ಈ ವರ್ಷವಾದರೂ ಧ್ವಜಾರೋಹಣಕ್ಕೆ ಖಂಡಿತ ಹೋಗುವೆ ಎಂದು ಮನಸ್ಸಿನಲ್ಲಿ ಶಪಥ ಮಾಡಿರುವೆ. ಹೋಗಿ ಬಂದ ಮೇಲೆ ಅದರ ಅನುಭವ ಲೇಖನ ಬರೆಯುವೆ.
ಸ್ವಾತಂತ್ರೋತ್ಸವ ಎಂದರೆ ಒಂದು ಸಮಾರಂಭ ಅಥವಾ ರಜೆಯ ದಿನ ಎಂದಷ್ಟೇ ಪರಿಗಣಿಸುವ ನಾವು ನಮಗೆ ಸ್ವಾತಂತ್ರ ಇಲ್ಲದಿರುವ ಅನುಭವ ಹೊಂದಿಯೇ ಇಲ್ಲ . ಅಲ್ಲದೆ ಮನುಜ ಸ್ವಭಾವವು ಹಾಗೇ. ಇರುವುದರ ಬಗ್ಗೆ ಗಮನ ಇರುವುದಿಲ್ಲ ಇಲ್ಲದಿದ್ದಾಗ ಮಾತ್ರ ಅದರ ಮಹತ್ವ ತಿಳಿಯುವುದು . ನಾವೆಲ್ಲ ಹುಟ್ಟುವ ವೇಳೆಗೆ ಸ್ವಾತಂತ್ರ ಸಿಕ್ಕಿದುದರಿಂದ ಅದರ ಪ್ರಾಮುಖ್ಯತೆ ನಮಗೆ ಸರಿಯಾಗಿ ಅರ್ಥವಾಗಿಲ್ಲ. ಕಥೆ ಕಾದಂಬರಿಗಳಲ್ಲಿ ಲೇಖನಗಳಲ್ಲಿ ಓದಿದ್ದರೂ ಅನುಭವಜನ್ಯ ಎನಿಸಿರಲಿಲ್ಲ . ಸ್ವಲ್ಪ ಮಟ್ಟಿಗಾದರೂ ಅದರ ಅನುಭವವಾದದ್ದು ತುರ್ತು ಪರಿಸ್ಥಿತಿಯ ಸಮಯದಲ್ಲಿ . ಯಾವುದೊಂದು ಹೇಳಿಕೆ ಕೊಡಲು ಸರಕಾರದ ವಿರುದ್ಧ ಮಾತನಾಡಲು 1ರೀತಿಯ ಭಯದ ವಾತಾವರಣ ಏರ್ಪಟ್ಟಿದ್ದ ಸಂಧರ್ಭ .ನನ್ನ ತಂದೆ ಕಾರ್ಮಿಕ ಸಂಘದ ನಾಯಕರು ಆಗಿದ್ದರಿಂದ ಅವರ ಮೇಲೆ ಸರಕಾರದ ಗಮನವಿದ್ದು 1ರೀತಿ ತಲೆಯ ಮೇಲೆ ಕತ್ತಿ ತೂಗಾಡುವ ಹಾಗೇ ಇತ್ತು. ಆ ಸಮಯದಲ್ಲಿ ಬಹಿಷ್ಕೃತವಾಗಿದ್ದ ಭುಗಿಲು ಪುಸ್ತಕವನ್ನು ಹೇಗೋ ಸಂಪಾದಿಸಿ ತಂದಿದ್ದರು. ಅದನ್ನು ಯಾರಿಗೂ ಕಾಣದಂತೆ ಓದಿದ್ದು. ಹತ್ತು ಹನ್ನೊಂದು ವರ್ಷದವಳಾದ ನನಗೆ “ಇದು 1ರೀತಿಯ ಸ್ವಾತಂತ್ರ್ಯ ಹೋರಾಟ ನನ್ನಪ್ಪ ಒಬ್ಬ ಸ್ವಾತಂತ್ರ್ಯ ಹೋರಾಟಗಾರ” ಎಂಬ ಭಾವವನ್ನು ತಂದಿದ್ದು ಸುಳ್ಳಲ್ಲ . ಆದರೂ ಅಭದ್ರತೆ ಅನಿಶ್ಚಿತ ಪರಿಸ್ಥಿತಿಗಳ ಅನುಭವ ಸ್ವಲ್ಪ ಮಟ್ಟಿಗಾದರೂ ಆಗ ಆಗಿತ್ತು .
ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿವಳಿಕೆ ಸಿಕ್ಕಿದ್ದು ಭಾರತ ಭಾರತಿ ಪುಸ್ತಕಗಳನ್ನು ಓದುವ ಸಂದರ್ಭದಲ್ಲೇ . 1ಬಾರಿ ಅಣ್ಣನ ಆಪ್ತಮಿತ್ರರೊಬ್ಬರು ಮನೆಗೆ ಬಂದಿದ್ದರು ಸ್ವಾತಂತ್ರ್ಯೋತ್ಸವದ ಸಮಯದಲ್ಲೇ ಎಂದು ಕಾಣುತ್ತೆ ನಾನಿನ್ನೂ ಎರಡನೆಯ ಕ್ಲಾಸ್ ಆಗ. .”ನಿನಗೆ ಯಾವ ಯಾವ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಗೊತ್ತು ಹೇಳು ಒಂದೊಂದಾಗಿ” ಎಂದರು .ಗಾಂಧಿಯಿಂದ ಆರಂಭಿಸಿ ನಾಲ್ಕೈದು ಹೆಸರು ಹೇಳಿ ನಂತರ ಭಾರತ ಭಾರತಿ ಪುಸ್ತಕ ಓದಿದ ನೆನಪಿನ ಆಧಾರದಲ್ಲಿ ಸುಭಾಶ್ ಚಂದ್ರ ಬೋಸ್, ಧಿಂಗ್ರ,ಚಂದ್ರಶೇಖರ ಆಜಾದ್, ವೀರ ಸಾವರ್ಕರ್ ಮುಂತಾದವರುಗಳ ಹೆಸರನ್ನು ಜೋಡಿಸಿ ಪಟಪಟ ಹೇಳಿದೆ . ಅವರು ಬಹಳ ಖುಷಿಪಟ್ಟು “ನಿನ್ನ ಮಗಳು ಜಾಣೆ” ಎಂದು ಅಪ್ಪನ ಬಳಿ ಹೇಳಿದ್ದು ನನ್ನನ್ನು ಆಕಾಶಕ್ಕೇರಿಸಿತ್ತು.
ಆದರೂ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಎಲ್ಲಾ ವೀರರನ್ನು ಸ್ಮರಿಸಬೇಕಾಗಿರುವುದು ನಮ್ಮ ಕರ್ತವ್ಯ . ಅವರ ಬಗೆಗಿನ ಪುಸ್ತಕಗಳನ್ನು ಖರೀದಿಸಿ ಓದುವುದು ನಮ್ಮ ಧರ್ಮ . ಆದರೆ ಇಂದಿನ ಯುವ ಜನಾಂಗಕ್ಕೆ ಎಷ್ಟೋ ಹೆಸರುಗಳ ಪರಿಚಯವೇ ಇಲ್ಲ ಓದುವ ಅಭ್ಯಾಸವೂ ಇಲ್ಲ. ತುಂಬಾ ಖೇದವೆನಿಸುತ್ತದೆ .
ಪ್ರತಿ ಬಾರಿಯ ಸ್ವಾತಂತ್ರ್ಯೋತ್ಸವದ ಆಸುಪಾಸಿನಲ್ಲಿ ಈ ಎಲ್ಲ ವಿಷಯಗಳು ನೆನಪಿಗೆ ಬರುತ್ತಿದ್ದರೂ ಅದನ್ನು ಬರೆದಿಡುವ ಮನಸಾಗಿರಲಿಲ್ಲ . ಇಂದು ಅದನ್ನು ಮಾಡಿ ಒಂದು ರೀತಿಯ ನೆಮ್ಮದಿ .
“ಸವಿ ನೆನಪುಗಳು ಬೇಕು ಸವಿಯಲೀ ಬದುಕು” ತಾನೇ?
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ ಬಯಕೆ ಲೇಖಕಿಯವರದು