ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ
ತೀನ್ ಕಾಫಿಯಾ ಗಜಲ್
ಎ. ಹೇಮಗಂಗಾ
ದೇಶದೆಲ್ಲೆಡೆ ಶಾಂತಿಮಂತ್ರ ಜಪಿಸಬೇಕೆಂದರೆ ಧ್ಯಾನದಂತೆ ತಪದಂತೆ ಭಾವೈಕ್ಯತೆ
ಸಹಬಾಳ್ವೆ ಸಿಹಿಯಿಂದ ಕೂಡಿರಬೇಕೆಂದರೆ ಜೇನಿನಂತೆ ಸವಿಯಂತೆ ಭಾವೈಕ್ಯತೆ
ಜಾತಿಗಳು , ಧರ್ಮಗಳು ನೂರಿರಲಿ ಕಾಣುವುದೆಲ್ಲೆಲ್ಲೂ ವಿವಿಧತೆಯಲ್ಲಿ ಏಕತೆ
ಭೇದ ಭಾವದಿರುಳ ಬೆಳಗಬೇಕೆಂದರೆ ಜ್ಯೋತಿಯಂತೆ ಕಿರಣದಂತೆ ಭಾವೈಕ್ಯತೆ
ರೋಷ, ದ್ವೇಷ, ಮದ, ಮಾತ್ಸರ್ಯಗಳೆಂದೂ ದಹಿಸುವ ಬಿರುಬಿಸಿಲಿನಂತೆ
ತೊರೆದು ಮುಂದೆ ನಡೆಯಬೇಕೆಂದರೆ ತರುನೆರಳಂತೆ ತಂಪಿನಂತೆ ಭಾವೈಕ್ಯತೆ
ಮನುಜ ಮನುಜನ ಬೆಸೆಯುವುದು ನಿಜಪ್ರೀತಿ, ಪ್ರೇಮದ ಸೇತುವೆಯೊಂದೇ
ಅಸಹನೆಯ ಅಗ್ನಿ ತಣಿಯಬೇಕೆಂದರೆ ಮಳೆಯಂತೆ ಹೊಳೆಯಂತೆ ಭಾವೈಕ್ಯತೆ
ಯಾರಿರುವಿಕೆಯೂ ಇಲ್ಲಿ ಶಾಶ್ವತವಲ್ಲ ‘ಹೇಮ’ ಎಲ್ಲರೊಂದೇ ಮಸಣದಲ್ಲಿ
ಸಮಾನತೆಯ ತತ್ವ ಅರಿಯಬೇಕೆಂದರೆ ಗುರುವಿನಂತೆ ಶಕ್ತಿಯಂತೆ ಭಾವೈಕ್ಯತೆ
ದೇಶ 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ್ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸುಸಂದರ್ಭದಲ್ಲಿ ಮೂಡಿಬಂದ ನಿಮ್ಮ ಗಜಲ್ ತುಂಬಾ ಚೆನ್ನಾಗಿದೆ.. ಮೇಡಂ