ಅರಿವಿನ ಕಿರಣ

ಕಾವ್ಯ ಸಂಗಾತಿ

ಅರಿವಿನ ಕಿರಣ

ಡಾ. ನಾಗರತ್ನ ಅಶೋಕ ಭಾವಿಕಟ್ಟಿ.

ಸಡಗರದಿ ಬಂದಿತೊಂದು ಹಬ್ಬ
ಸಕಲ ಹಬ್ಬಗಳಿಗೂ ಹಬ್ಬ
ಸಂಸ್ಕೃತಿ, ಸಂಪ್ರದಾಯ
ಆಚರಿಸಲು ಅವಕಾಶವಿತ್ತ ಹಬ್ಬ
ಅದು ತ್ರಿವರ್ಣ ಧ್ವಜದ ಹಬ್ಬ

ತ್ಯಾಗ ಬಲಿದಾನ ನಿಸ್ವಾರ್ಥ ಭಾವ
ಹೋರಾಟ ಚಳುವಳಿ ಸೆರೆವಾಸ
ಮನೆ ಮಠಗಳ ಹೆಂಡತಿ ಮಕ್ಕಳ
ಅರಿವಿಲ್ಲದ ಹುಚ್ಚಿನ ಕಿಚ್ಚು
ತಾಯಿ ನೆಲಕಾಗಿ ಈ ಹುಚ್ಚು

ನೆಲೆ ನೀಡಿ ಹಸಿವ ಅಳಿಸಿ
ಉಸಿರು ನೀಡಿ ದಾಹ ತಣಿಸಿ
ಕೊಟ್ಟ ಸಂಕಷ್ಟವ ಸಹಿಸಿ ಪೊರೆಯುವ ಧರಣಿ ಭರತ ಮಾತೆ
ಬಂಧ ಮುಕ್ತಗೊಳಿಸಿದ ಹಬ್ಬ

ಒಡವೆ ವಸ್ತ್ರ ಕೊಡುಗೆಗಳಲಿ
ಕಂಡಿತಿಂದು ತ್ರಿವರ್ಣ ಬಣ್ಣ
ಕಂಗಳಲ್ಲಿ ಪ್ರತಿಬಿಂಬಿಸುತ್ತಿವೆ
ಕೇಸರಿ ಬಿಳಿ ಹಸಿರು ವರ್ಣ
ಮರೆಯಾಯಿತೇಕೋ ಮರುದಿನ

ದೇಶಭಕ್ತಿ ಗೀತೆಗಳು
ನೃತ್ಯ ನಾಟಕ ಭಾಷಣಗಳು
ತಾಯಿ ನೆಲದ ಮೆಚ್ಚುಗೆ ಸೂಚಕಗಳು
ಸಂಜೆಯಾಯಿತಿನ್ನು ಎಲ್ಲ ಮರೆತು
ಅವರವರ ಭಾವ ಬಂಧನಗಳು

ಅಮೃತ ಮಹೋತ್ಸವದ ದಶಕದಲ್ಲಿ
ಕಳೆದು ಮುಕ್ತವಾಗಿರುವುದೇನು
ಮತ್ತೆ ಬಂದಿಯಾಗಿರುವುದೇನು
ರಾರಾಜಿಸುತ್ತಿದೆ ಭ್ರಷ್ಟ ಭಯೋತ್ಪಾದನೆ
ತುಂಬಿ ತುಳುಕುತಿದೆ ಸ್ವಾರ್ಥ ಹಿಂಸೆಯು

ಕಂಡಿದೆ ಬೆಳಕು ವಿಜ್ಞಾನ ತಂತ್ರಜ್ಞಾನದಿ
ಕವಿದಿದೆ ಅಂಧಕಾರ ಮಾನವ ಮನದಿ
ಹೊಸಹೊಸ ಕೃಷಿ ಪದ್ಧತಿಗಳು
ಆದರೂ ಇದೇಕೋ ಆತ್ಮಹತ್ಯೆಗಳು
ಇದೆ ಅವಲೋಕನದ ಅಗತ್ಯತೆಗಳು

ಕಠಿಣ ಮಹಿಳಾ ಕಾನೂನುಗಳು
ಇದ್ದರೂ ಅತ್ಯಾಚಾರ ಶೋಷಣೆಗಳು
ನಿಂತಿಲ್ಲ ಬಾಲ್ಯ ವಿವಾಹಗಳು
ಅಜ್ಞಾನ ಮೂಢನಂಬಿಕೆಗಳು
ಸಿಕ್ಕಿಲ್ಲ ಪ್ರಶ್ನೆಗೆ ಉತ್ತರಗಳು

ಕಾಣಬೇಕಿದೆ ತ್ರಿವರ್ಣ ವರ್ಣದ ಹೊಳಪು
ದೇಶವಾಸಿಗಳಲ್ಲಿ ದೇಶಭಕ್ತಿಯ ಕಂಪು
ಮೂಡಬೇಕಿದೆ ಅರಿವಿನ ಕಿರಣ
ವರ್ಷವಿಡೀ ದೇಶಾಭಿಮಾನ
ಅರ್ಥ ಸಿಗುವುದು ಸ್ವಾತಂತ್ರ್ಯದ ದಿನ.


Leave a Reply

Back To Top