ಕಾವ್ಯಯಾನ

ಹೆದರುವುದಿಲ್ಲ!

Green Tree Photo

ವಿಜಯಶ್ರೀ ಹಾಲಾಡಿ

ಹೆದರುವುದಿಲ್ಲ



ನಿಸರ್ಗದೊಂದಿಗೆ ದುಡಿಯುವುದು
ಬೆವರಿನ ತುತ್ತು ತಿನ್ನುವುದು
ಇದೇ ಬದುಕೆಂದು ತಿಳಿದ
ನನ್ನ ಪೂರ್ವಜರ ಕಾಲವದು
ನನಗಾಗಲಿ ನನ್ನ ಓರಗೆಯ
ಮಂದಿಗಾಗಲಿ ಜನನ ಪತ್ರಗಳ
ಸರಕಾರಿ ದಾಖಲೆಗಳ
ಹೊಳಹೂ ತಿಳಿದಿರಲಿಲ್ಲ

ಇಲ್ಲದ ಪ್ರಮಾಣ ಕಾಗದಗಳ
ತಂದುಕೊಡಿರೆಂದು ಆಜ್ಙಿಸುವವರೆ
ಹೂವು ಅರಳಿದ್ದಕ್ಕೆ ಸಾಕ್ಷಿ
ಹೇಳಲು ಒತ್ತಾಯಿಸದಿರಿ
ಶತಮಾನಗಳಿಂದ ಇದೇ
ನೀರು ಮಣ್ಣು ಗಾಳಿ
ಉಸಿರಾಡಿದ್ದೇವೆ- ಇನ್ನೂ ಇಲ್ಲೇ
ಇದ್ದು, ಸತ್ತು ನೆಲದ
ಋಣವ ಸಲ್ಲಿಸುತ್ತೇವೆ…
ನೀವು ಬಂದೂಕಿಗೆ
ಮಾತು ಕಲಿಸಿರುವಿರಿ
ಲಾಠಿ ಬಡಿಗೆ ದೊಣ್ಣೆಗಳ
ಕೆತ್ತಿ ಹರಿತಗೊಳಿಸಿರುವಿರಿ
ಆದರೆ
ರಕ್ತದ ಹಾದಿಯಲ್ಲಿ ಬೀಜ
– ಮೊಳೆಯುವುದಿಲ್ಲ ಮಳೆ
ಬೀಳುವುದಿಲ್ಲ- ಹಸಿವಿಗೆ
ಅನ್ನ ಬೆಳೆಯುವುದಿಲ್ಲ

ಇಲ್ಲದ ಕಾಗದಪತ್ರಗಳ
ಜಾಗದಲ್ಲಿ ನಮ್ಮ ದೇಹಗಳಿವೆ
ಈ ನೆಲದ ಸಾರ
ಹೀರಿದ ಜೀವಕೋಶಗಳಿವೆ
ಮನಸ್ಸುಗಳಿವೆ
ಆತ್ಮಗಳಿವೆ
ಕನಸುಗಳಿವೆ
ನಂಬಿ….
ಇದಕ್ಕೂ ಮೀರಿ
ಬದುಕಿಬಾಳಿದ ಹೊಲ- ಮನೆ
-ಗಳ ಅಗಲಿ ಯಾವ ಕ್ಯಾಂಪು
-ಗಳಿಗೂ ನಾವು ಬರುವುದಿಲ್ಲ
ಕೋಲೂರಿಕೊಂಡು ನಡೆವಾಗಲೂ
ಭುಜಕ್ಕೆ ಆತುಕೊಳ್ಳದ
ಅಜ್ಜ ಅಜ್ಜಿಯರ
ಮೊಮ್ಮಕ್ಕಳು ಮರಿಮಕ್ಕಳು ನಾವು
ದಂಡಿಗೆ ದಾಳಿಗೆ ಹೆದರುವುದಿಲ್ಲ
ಕೇಳಿಕೊಳ್ಳಿ !

********

Leave a Reply

Back To Top