ಸ್ವರ್ಗದ ಗಾಂಧಿ ನಗಬೇಕು
ಸಂಗೀತ ರವಿರಾಜ್
ಪಂಜರದ ಬಾಗಿಲು ತೆರೆದೆ ಇದ್ದರು
ಹಾರದ ಹಕ್ಕಿಯ ಮನಸ್ಸು
ನಮ್ಮ ಬಿಡುಗಡೆಯ ಕನಸು
ಹಲವಾರು ವರುಷ ಪಕ್ಷಿ
ಪಂಜರದೊಳಗೆ ಇದ್ದು ಇದ್ದೂ
ಸ್ವಾತಂತ್ರ್ಯ ದ ಚಿಲಕ ತೆಗೆದರು
ಹಾರದೆ ಹಾಗೆಯೇ ಕುಳಿತಿದೆ
ಯಾಕೆಂದು ನಿಮ್ಮ ಆಲೋಚನೆಗೆ ಲೋಕ ಬಿಟ್ಟಿದೆ !!
ಸಾವಿರ ವರುಷದ ದಾಸ್ಯ ಮುಕ್ತದಿ
ದಕ್ಕಿದ ಜೀವನವ ಹೇಗನುಭವಿಸಬೇಕೆಂಬ
ಪಾಠವ
ಮಹಾತ್ಮನಾದಿಯಾಗಿ ಹೋರಾಡಿದ
ಯಾರೊಬ್ಬರೂ ಹೇಳಿ ಹೊರಡಲಿಲ್ಲ.
ಅರೆಬಟ್ಟೆ ಫಕೀರನ
ಜೀವನವೇ ಒಂದು ಪಾಠ
ಎಂಬುದು ಕೊನೆಗೂ ನಮಗರ್ಥವಾಗಲಿಲ್ಲ.
ಪಂಜರದ ಕೀಲಿಕೈ
ಅಧಿಕಾರಶಾಹಿ ಕೈಯೊಳಡಗಿ
ಉಡುಗಿದ್ದು
ಮಹಾತ್ಮನಿಗೆಲ್ಲಿಂದ ತಿಳಿಸಲಿ?
ಬಿಸಿರಕ್ತಕ್ಕೆ ವಿದೇಶಿ ವ್ಯಾಮೋಹ ಹೋಗಿ
ಪರದೇಶಿ ಕೈವಶ ಕಳಚಿದಂದು
ಸ್ವರ್ಗದ ಗಾಂಧಿ ನಗುತ್ತಾರೆ!
ಗಗನ ಚುಂಬುವರೆಗೆ ಪ್ರಗತಿಪಥ
ಇಲ್ಲವೆಂದಲ್ಲ, ಆದರೆ
ಭಾರತದ ಕಟ್ಟ ಕಡೆಯ ಪ್ರಜೆಯು
ಪಂಜರದ ಬಾಗಿಲು ತೆರೆದೊಡನೆ
ಗರಿಬಿಚ್ಚಿ ಆಗಸದಲ್ಲಿ ಕೇವಲ
ಸಂತಸ , ಸಮಾನತೆಯ ಆಸೆಗೆ ಮಾತ್ರ
ಹಾರುವ ಕ್ಷಣ ಬಂದೊಡನೆ
ನಿಜವಾದ ಸ್ವಾತಂತ್ರ್ಯ.
ಸಂಗೀತ ರವಿರಾಜ್
ಸತ್ಯ ದರ್ಶನದ ಅಧ್ಬುತ ಕವಿತೆ ಮೇಡಂ
ಶುಭಾಶಯಗಳು