ಕಾವ್ಯ ಸಂಗಾತಿ
ಗಜಲ್
ಅನಸೂಯ ಜಹಗೀರದಾರ
ಈಗ ತಾನೆ ಅಲ್ಲಿ ಸಮಾಧಿಯಾಯಿತು
ಮತ್ತೇನಿದೆ ಹೇಳು ಒಡೆಯ
ಬೆಳಗುವ ದೀಪ ಗಾಳಿ ಪಾಲಾಯಿತು
ಸಾಕೆ ಒಡಲಿಗೆ ಗೋಳು ಒಡೆಯ
ನಿನ್ನ ತೀರದ ದಾಹಕೆ ಎಲ್ಲೆಲ್ಲಿಯ ನೆತ್ತರಿನ
ಕೊಡ ಸುರಿಯಲಿ
ದಿಗ್ವಿಜಯಕೆ ಕಂಬನಿ ಕಾಣಿಕೆಯಾಯಿತು
ಸೊಗದಿ ಬಾಳು ಒಡೆಯ
ಎಲ್ಲ ಅಹವಾಲುಗಳೂ ಫೈಲಲಿ ಹೂತಿವೆ
ಉಸಿರು ಸಿಲುಕಿ ಇಲ್ಲಿ
ಅಲಕ್ಷ್ಯ ಅನಲಕೆ ಚಿಗುರು ಕರಕಲಾಯಿತು
ಸಾಕೆ ಆನಂದಕೆ ಹಾಳು ಒಡೆಯ
ಊಳಿಗ ಮಾನ್ಯದಿ ಸಿಕ್ಕವರ ತೊಗಲನೆ
ಪೋಷಾಕಾಗಿಸಿದ ಕಥೆಯಿದೆ ಇಲ್ಲಿ
ಕೇಶದೆಳೆಯಲಿ ಉರುಳು ಹಾಕಲಾಯಿತು
ಹರಣವೆ ಕೂಳು ಒಡೆಯ
ರೇಶಿಮೆ ರುಮಾಲಿನ ಏಟು ಎದಿರೇಟಿಗೆ
ಬಾಸುಂಡೆ ಪಿಸು ನುಡಿದಿವೆ ಅನು
ಉಡುಪು ಹರಿದ ಶಬುದ ಪ್ರಿಯವಾಯಿತು
ಹಿತವೆ ಕೇಳು ಒಡೆಯ