ಕಾವ್ಯಯಾನ

ಮಾನವರು

Purple Bell Flowers

ಮಾಲತಿ ಹೆಗಡೆ

ಮಾನವರು!

ತಾಳು ಅರಳಿಸಿ ನಗಿಸುವೆ ನನ್ನೊಡಲ ಮಗುವೆ
ಎನುವ ಗಿಡಗಳ
ಸಂಭ್ರಮದರಿವೆಲ್ಲಿದೆ
ಹೂವಾಡಗಿತ್ತಿಗೆ..

ನಾಳೆಗರಳುವ ಹೂವ
ಇಂದೇ ಕೊಯ್ದ ಬಳ್ಳಿಯಲಿ
ಕಟ್ಟಿ ಮಾಲೆ,ದಂಡೆಯನ್ನಾಗಿಸಿ
ಬುಟ್ಟಿ ತುಂಬಿ ಬೆಳಂಬೆಳಿಗ್ಗೆ
ಅದನು ನೆತ್ತಿಗೇರಿಸಿ
‘ಮೊಲ್ಲೆ ಮಲ್ಗಿ ಮಾಲೇರಿ’
ರಾಗವೆಳೆಯುತ್ತ ಊರೆಲ್ಲ
ಸುತ್ತದಿದ್ದರೆ ಅವಳ
ಮನೆಯೊಲೆ ಉರಿಯುವುದಿಲ್ಲ…

ಕೆಚ್ಚಲು ತುಂಬಿದ ಹಾಲ ಕರುವಿಗುಣಿಸಬೇಕೆಂಬ
ಹಸುವಿನ ಮಮತೆಯ
ಹಂಬಲದರಿವೆಲ್ಲಿ
ಗೋವಳನಿಗೆ

ಹಿಡಿಹುಲ್ಲು ಕರುವಿಗಿತ್ತು
ಹಸುವಿನ ಹಾಲನೆಲ್ಲ ಹಿಂಡಿ
ಕ್ಯಾನು ತುಂಬಿ
‘ಹಾಲರೀ ಹಾಲ’ ಎನ್ನುತ್ತ
ವರ್ತನೆ ಮನೆಗಳ
ಪಾತ್ರೆಗಳಿಗೆ ಹಾಲು ತುಂಬಿ
ಕಾಸೆಣಿಸದಿದ್ದರೆ ಅವನ
ಮನೆಯೊಲೆ ಉರಿಯುವುದಿಲ್ಲ…

ಹೂವ ಹೀಚಾಗಿಸಿ, ಕಾಯಿ
ಹಣ್ಣಾಗಿಸಿ ತಳಿ ಉಳಿಸಿ
ಬೆಳೆಸುವಾಸೆಯ ಮರದ
ಬೆಲೆಯರಿವೆಲ್ಲಿದೆ ಹಣ್ಣಿನ ವ್ಯಾಪಾರಿಗೆ..

ಬಲಿತ ಕಾಯಿಗಳ ಕಿತ್ತು
ಒತ್ತಾಯದಲಿ ಹಣ್ಣಾಗಿಸಿ
‘ತಾಜಾ ಮಾಲು, ಸಸ್ತಾ ಇದೆ:
ಎಂದೆಲ್ಲ ಬಣ್ಣಿಸಿ ತೂಕ ಹಾಕಿ ಮಾರದಿದ್ದರೆ ಅವನ
ಮನೆಯೊಲೆಯೂ ಉರಿಯುವುದಿಲ್ಲ…

ಎಲ್ಲ ಜೀವಗಳನುರಿಸಿ
ತಂಪಾಗುವ ಜೀವಗಳಿಗೆ
ಹೆಸರು ಮಾನವರು!?

One thought on “ಕಾವ್ಯಯಾನ

  1. ಮಾನವರಿಗೆ ಉಳಿದ ಜೀವಿಗಳ ಬಗ್ಗೆ ಆಲೋಚನೆ ಕಡಿಮೆ ಸ್ವಾರ್ಥಿಗಳು
    ಅಕ್ಷರಶಃ ಸತ್ಯವಾದ ಬರಹ

Leave a Reply

Back To Top