ಕಾವ್ಯ ಸಂಗಾತಿ
ತೋಟಗಾರಿಕೆಗೆ ಮರಿಗೌಡ್ರ ಕೊಡುಗೆ
ಕಮಲಾ ರಾಜೇಶ್
ತೋಟಗಾರಿಕೆ ಪಿತಾಮಹರು ನಮ್ ಮರಿಗೌಡ್ರು
ಸಾಟಿಯಾರಿಹರೇಳಿ ಕರುನಾಡಲಿ
ತೋಟಗಾರಿಕೆ ದಿನದ ತಾಂತ್ರಿಕ ಸಮಾವೇಶ
ನೋಟಕರ ಸೆಳೆಯುವುದು ಕಮಲಾತ್ಮವೆ
ಮರಿಗೌಡರನು ನೆನೆದು ಪುಂಜಭೂಮಿಯ ಅಗೆದು
ಕಿರುಬೀಜ ಹಾಕಿ ಹುಲುಸಾದ ಬೆಳೆಯು
ಧರೆಯೆಲ್ಲ ಚಿಗುರೊಡೆದು ಪಸರಿಸಲು ವನವಾಗಿ
ಹರುಷವಲ್ಲವೆ ಜಗಕೆ ಕಮಲಾತ್ಮವೆ
ತರತರದ ಪುಷ್ಪಗಳು ಅರಳುವುದು ವನದಲ್ಲಿ
ಮರಿಗೌಡರಿಂದ ಶುರುವಾಯ್ತು ಅಂದು
ತರುಣತರುಣಿಯರೆಲ್ಲ ವಿವರಿಸುವ ತಾಣವಿದು
ಕರೆಯುವುದು ಕೈಬೀಸಿ ಕಮಲಾತ್ಮವೆ
ಹರಿಭಕ್ತರಾರೆಂದು ಚಿಂತಿಸಿದ ನಾರದರು
ಕರದಲೆಣ್ಣೆಯ ಪಿಡಿದು ಸುತ್ತಲಂದು
ಅರಿತನವ ನಿಜಭಕ್ತ ಒಕ್ಕಲಿಗ ನೆನ್ನುತ್ತ
ಕರಮುಗಿದ ವಿಷ್ಣುವಿಗೆ ಕಮಲಾತ್ಮವೆ
ಚಿಕ್ಕಮಕ್ಕಳ ಮನದಿ ದವಸಧಾನ್ಯದ ಮಹಿಮೆ
ಅಕ್ಕರೆಯ ಭಾವದಲಿ ತಿಳಿಸಬೇಕು
ಮಕ್ಕಳೆಲ್ಲರು ಕೂಡಿ ವನವೊಂದು ನಿರ್ಮಿಸಲು
ಒಕ್ಕಲಿಗರಿಗೆ ಶಕ್ತಿ ಕಮಲಾತ್ಮವೆ
ನಾವೆಯಲಿ ತುಂಬಿಸಿದ ನಾರಾಯಣನು ಬೀಜ
ನಾವುಗಳು ಬೆಳೆವ ಹುಲುಸಾದ ಬೆಳೆಯು
ಗೋವಿಂದನನು ನೆನೆದು ಬೀಜವನು ನೆಟ್ಟಾಗ
ತೇವಾಂಶ ನೂರ್ಮಡಿಯು ಕಮಲಾತ್ಮವೆ
ಅಂದಚಂದದ ಬೀಜ ಭೂಮಿಯಲಿ ಹುದುಗಿಸಿರಿ
ಸೌಂದರ್ಯ ರಾಶಿ ಚಿಮ್ಮುವುದು ವನದಿ
ನಂದಗೋಕುಲದಂತೆ ಕಾಣುವುದು ಜಗವೆಲ್ಲ
ಕುಂದೆಣಿಸಲಾರುಂಟು ಕಮಲಾತ್ಮವೆ
ಊಟವಿಲ್ಲದೆ ಜೀವಿ ಬದುಕುವುದು ಕಷ್ಟಕರ
ಪಾಠವನು ಕಲಿಬೇಕು ಉತ್ತಮಗೊಳೆ
ಊಟಪಾಠಗಳಂತೆ ತೋಟಗಾರಿಕೆ ಮಾಡಿ
ಮಾಟವಾಗಿಡು ಧರೆಯ ಕಮಲಾತ್ಮವೆ
ಕಿರುಬೀಜ ನೀಡುವುದು ಲಕ್ಷ ಕೋಟಿಯ ಫಸಲು
ಕಿರುಬೀಜದಿಂದ ಅಭಿವೃದ್ಧಿ ಜಗಕೆ
ಧರೆಯನ್ನು ಹದಮಾಡಿ ರೈತಾಪಿ ಜನರೆಲ್ಲ
ಹರುಷ ತುಂಬಿರಿ ಜನಕೆ ಕಮಲಾತ್ಮವೆ
ತೋಟಗಾರಿಕೆಯಿಂದ ಫಲವುಂಡವರು ಬಹಳ
ಪೇಟಕಟ್ಟಿದ ತಲೆಗೆ ಬಾಗುತಿಹರು
ಸಾಟಿಯಾರಿಹರೇಳಿ ಈರೇಳು ಲೋಕದಲಿ
ಕೋಟಿ ಖನಿಜದ ಕಣಜ ಕಮಲಾತ್ಮವೆ
ಹಸಿರು ತುಂಬಿದ ತೋಟ ಆನಂದ ನೀಡುವುದು
ಉಸಿರಾಡೆ ಜನರು ಪರಿಶುದ್ಧ ಗಾಳಿ
ಹಸಿದ ಹೊಟ್ಟೆಗೆ ನೀಡುವುದು ರಸಕವಳವನ್ನು
ಹಸಿರು ನಮ್ಮುಸಿರೀಗ ಕಮಲಾತ್ಮವೆ
ಮೈಸೂರಿನಲಿ ಜನಿಸಿ ಸಸ್ಯ ವಿಜ್ಞಾನದಲಿ
ನೇಸರನ ಕಿರಣ ಚಲ್ಲಿದರು ಜಗಕೆ
ಮೈಸೂರು ಸರ್ಕಾರ ಉದ್ಯಾನವನಗಳಿಗೆ
ಮೀಸಲಿರಿಸಿತು ಇವರ ಕಮಲಾತ್ಮವೆ
ಶುದ್ಧ ಮನಸಿನ ವ್ಯಕ್ತಿ ಉತ್ಸಾಹ ತುಂಬಿದರು
ಉದ್ಯಾನವನಗಳ ಇಲಾಖೆಯಲ್ಲಿ
ಬದ್ಧ ಕಂಕಣ ಕಟ್ಟಿ ಅಭಿವೃದ್ಧಿ ಪಡಿಸಿದರು
ಹದ್ದು ಮೀರದೆ ನಡೆವ ಕಮಲಾತ್ಮವೆ
ಜವರಾಯರ ಸಮರ್ಥ ಮಾರ್ಗದರ್ಶನದಲ್ಲಿ
ನವರಸವ ತುಂಬಿ ಗಳಿಸಿದರು ಲಾಭ
ಭುವನವನು ಬೆಳಗಿದರು ಹೊರದೇಶ ಸುತ್ತಿದರು
ದವಳ ಕೀರ್ತಿಯ ಗಳಿಸಿ ಕಮಲಾತ್ಮವೆ
ಸ್ಥಿತಿವಂತರಿಗೆ ಮಾತ್ರ ಮೀಸಲಾಗಿರೆ ವೃತ್ತಿ
ಸತತ ಯತ್ನವ ಮಾಡಿ ಯಶವ ಪಡೆದ
ಕ್ಷಿತಿಪಾಲ ಮರಿಗೌಡ ಎಂದು ಹಾರೈಸಿದರು
ಚತುರಮತಿ ಗೌಡರನು ಕಮಲಾತ್ಮವೆ
ವೈಜ್ಞಾನಿಕದ ತೋಟಗಾರಿಕೆಯ ವೃದ್ಧಿಸಿದ
ವಿಜ್ಞಾನಿಯಾಗಿ ಮರಿಗೌಡರಾಗ
ಅಜ್ಞಾನವನು ದೂಡಿ ಹೊಸತನವ ಸೃಷ್ಟಿಸುತ
ಸುಜ್ಞಾನ ಹಂಚಿದರು ಕಮಲಾತ್ಮವೆ
ತಾಮಸವ ಸರಿಸುತ್ತ ದುಡುಮೆಯನು ಮಾಡಿದರು
ಸಾಮಾನ್ಯ ಜನರ ಕೈಗೆಟುಕುವಂತೆ
ಭೂಮಿಯನು ಹದಗೊಳಿಸಿ ಹೊಸತಳಿಯ ಹಾಕಿದರೆ
ನೇಮದಲಿ ಫಲಸಿದ್ಧಿ ಕಮಲಾತ್ಮವೆ
ಗಿಡಗಳನು ಬೆಳೆಸಿದರು ಕೃಷಿ ಇಲಾಖೆಯಲಂದು
ಗಿಡಗಳನು ನೀಡಿದರು ಉಚಿತವಾಗಿ
ಗಿಡನೆಟ್ಟು ಬೆಳೆದವರು ವೃದ್ಧಿಯನು ಕಂಡಾಗ
ಸಡಗರವು ಗೌಡರಿಗೆ ಕಮಲಾತ್ಮವೆ
ಮುನ್ನೂರ ಎಂಬತ್ತು ತೋಟಗಾರಿಕೆ ಕ್ಷೇತ್ರ
ಮನ್ನಣೆಗೆ ಪಾತ್ರವಾಗಿಹುದು ಅಂದು
ಚಿನ್ನದಂತಹ ಮನಕೆ ನೆಮ್ಮದಿಯು ಸಿಗಲೆಂದು
ಹೊನ್ನುಡಿಯ ಹಾಡುವೆನು ಕಮಲಾತ್ಮವೆ
ತುಮಕೂರು ಜಿಲ್ಲೆಯಲಿ ಚಿಕ್ಕನಾಯ್ಕನ ಹಳ್ಳಿ
ಸಮರಸದ ಸೃಷ್ಟಿ ಮರಿಗೌಡ್ರ ಕೊಡುಗೆ
ಸುಮರಾಶಿ ಹಾಕುತ್ತ ಮುಕ್ತಕದ ನುಡಿಯಿಂದ
ನಮಿಸುವೆನು ಕಮಲಾಂಬೆ ಕಮಲಾತ್ಮವೆ
————————-
ಕಮಲಾ ರಾಜೇಶ್