ಕಾವ್ಯಯಾನ

ಮೆಲುಮಾತುಗಳ ಮಡಿಲಲ್ಲಿ ನಕ್ಷತ್ರ ಯಾನ

pink flowers

ಡಾ.ಗೋವಿಂದ ಹೆಗಡೆ

ಮೆಲುಮಾತುಗಳ ಮಡಿಲಲ್ಲಿ ನಕ್ಷತ್ರ ಯಾನ

ಇಂಗುತ್ತಿರುವ ಒರತೆಯಿಂದ ಗುಟುಕುಗಳ ಮೊಗೆಯುತ್ತಲೇ ಇದ್ದೆ
ನದಿಯೊಂದು ದಿಕ್ಕು ಬದಲಿಸಿ ತಂಪೆರೆಯುವುದೆಂದು ಊಹಿಸಿರಲಿಲ್ಲ

ಈ ಸಾಲುಗಳು ( ದ್ವಿಪದಿ) ರೇಖಾರ ಗಜಲ್‌ಯಾನವನ್ನು ಸಮರ್ಥವಾಗಿ ಹೇಳುತ್ತವೆ ಎಂದು ಅನಿಸುತ್ತದೆ.

ನಾನು ರೇಖಾ ಭಟ್ಟರನ್ನು ಮೊದಲು ಕಂಡಿದ್ದು ಸಾಹಿತ್ಯ ಸಮ್ಮೇಲನವೊಂದರ ಕವಿಗೋಷ್ಠಿಯಲ್ಲಿ.ಯಾರು ಯಾರೋ ಬಂದು ಬಾಲಿಶ ಸಾಲುಗಳನ್ನು ಕವನವೆಂದು ಓದಿದ ಅಲ್ಲಿ ರೇಖಾರ ಕವನ, ಮೆಲುದನಿಯ ಅವರ ವಾಚನ ‘ ಪರವಾಗಿಲ್ಲ , ಈ ಸಾಲುಗಳಲ್ಲಿ ಕಾವ್ಯ ಇದೆ’ ಅನಿಸುವಂತೆ ಮಾಡಿದ್ದು ನೆನಪಿದೆ.
ಅದಾಗಿ ೩-೪ ತಿಂಗಳಲ್ಲಿ ಧನ್ನೂರ ಜೆ ಡಿ ಯವರು ಆರಂಭಿಸಿದ ‘ಕವಿಬಳಗ’ದಲ್ಲಿ ಕಾವ್ಯದ ಚಟುವಟಿಕೆಗಳು ಎಡೆಬಿಡದೇ ನಡೆದವು.ಆ ಮೂಲಕ ಪರಿಚಿತರಾದ ರೇಖಾ ಆಗೀಗ ವೈಯಕ್ತಿಕವಾಗಿಯೂ ಸಂಪರ್ಕಿಸುತ್ತ , ತಮ್ಮ ಕೋಮಲ ಕವಿತೆಗಳಿಂದ, ಸೌಜನ್ಯಯುತ ಮಾತು- ನಡೆಯಿಂದ ಆತ್ಮೀಯರೇ ಆದರು.ಈ ಗುಂಪಿನಲ್ಲಿ ಪ್ರತಿವಾರ ಗಜಲ್ ಬರೆಯುವ ಸ್ಪರ್ಧೆಯನ್ನು ನಾನು ೭-೮ ತಿಂಗಳ ಕಾಲ ನಿರ್ವಹಿಸಿದಾಗ ಪ್ರತಿ ಸಲವೂ ಬರೆಯುತ್ತ ಬಂದ ರೇಖಾ ಆ ಕುರಿತು ಸಲಹೆ ಸೂಚನೆ ಕೇಳುತ್ತ , ತಿದ್ದುತ್ತ …ವೃತ್ತಿಯಿಂದ ಶಿಕ್ಷಕಿಯಾದರೂ ಇಲ್ಲಿ ‘ವಿದ್ಯಾರ್ಥಿನಿ’ಯೇ ಆದರು!
ನಮ್ಮ ಈ ಗಜಲ್ ಉಪಕ್ರಮದ ಮೊದಲೂ ಆಮೇಲೂ ರೇಖಾ ಕವಿತೆ, ಭಾವಗೀತೆಗಳನ್ನು ಬರೆದಿದ್ದಿದೆ. ಆದರೆ ಗಜಲ್ ಬರಹ ಅವರ ಕೃಷಿಗೆ ಒಂದು ನಿಖರತೆಯನ್ನೂ ಸಂಗ್ರಹವಾಗಿ ಸಮುಚಿತ ಪದಗಳಲ್ಲಿ ಹೇಳುವ ಶಕ್ತಿಯನ್ನೂ ತಂದಿತೆಂದು ನನ್ನ ಅನಿಸಿಕೆ. ಅವರ ಕಾವ್ಯ ತೊರೆ ಆಳ ಅಗಲಗಳನ್ನು ಪಡೆದು ಗಜಲ್ ನದಿಯಾಗಿ ಹರಿದ ಫಲ ಈ ಸಂಕಲನ.

ಇನ್ನು ಗಜಲ್‌ಗಳತ್ತ ಹೊರಳಿದರೆ- ಗಜಲ್ ತನ್ನದೇ ಆದ ಚೌಕಟ್ಟುಳ್ಳ, ಆ ಕಾರಣಕ್ಕಾಗೇ ವಿಶಿಷ್ಟವೆನಿಸುವ ಕಾವ್ಯಪ್ರಕಾರ. ಪಾರ್ಸಿಯಲ್ಲಿ ಹುಟ್ಟಿ ನಮ್ಮ ದೇಶದಲ್ಲಿ ಉರ್ದುವಿನಲ್ಲಿ ಬೆಳೆದ ಗಜಲ್‌ಗೆ ೭-೮ ಶತಮಾನಗಳ ಇತಿಹಾಸವಿದೆ.ಆದರೆ ಕನ್ನಡ ಗಜಲ್ ಮೊಳೆದಿದ್ದು ಇತ್ತೀಚೆಗೇ.
ಗಜಲ್ ದ್ವಿಪದಿಗಳಲ್ಲಿ ಮಂಡಿತವಾಗುವ ಕಾವ್ಯ ಪ್ರಕಾರ.ಈ ದ್ವಿಪದಿಗಳಿಗೆ ‘ಷೇರ್/ಬೈತ್ ‘ಎಂದು ಹೆಸರು.ಪ್ರತಿ ಸಾಲು ‘ಮಿಸ್ರ’.ಮೊದಲ ‘ಷೇರ್’ ಮತ್ಲಾ. ಕೊನೆಯದು ಮಕ್ತಾ. ಗಜಲ್‌ಗಳಲ್ಲಿ ಐದರಿಂದ ಇಪ್ಪತ್ತೈದು ಷೇರ್‌ಗಳಿರುವುದುಂಟು. ಸಾಮಾನ್ಯವಾಗಿ ೭ ಬರೆಯುವ ರೂಢಿ.
ಇನ್ನು ಗಜಲ್‌ನ ಮುಖ್ಯ ಅಂಗಗಳಾದ ‘ರದೀಫ್’ ಮತ್ತು ‘ಕಾಪಿಯಾ’ಗಳ ಬಗ್ಗೆ ತಿಳಿಯೋಣ. ಷೇರ್‌ನ ಕೊನೆಯಲ್ಲಿ ಪುನರಾವರ್ತನೆಯಾಗುವ ಪದ ಅಥವಾ ಪದಗುಚ್ಛ ಇದ್ದರೆ ಅದು ‘ರದೀಫ್’.ಈ ರದೀಫ್‌ನ ಹಿಂದಿನ ಪದ ಅಂತ್ಯಪ್ರಾಸವುಳ್ಳ ಪದ ‘ಕಾಪಿಯಾ’. ರದೀಫ್ ಇಲ್ಲದ ಗಜಲ್‌ಗಳಿವೆ. ಆಗ ಕಾಪಿಯಾವೇ ಸಾಲಿನ ಕೊನೆಯ ಪದ.
ರದೀಫ್ ಇದ್ದಾಗ ಅದು, ಕಾಪಿಯಾದೊಡನೆ ಇಲ್ಲವೇ ಕಾಪಿಯಾ ಮಾತ್ರ ಮೊದಲ ಷೇರ್‌ನ ( ಮತ್ಲಾದ) ಎರಡೂ ಸಾಲುಗಳಲ್ಲಿ, ಅನಂತರದ ಷೇರ್‌ಗಳ ಎರಡನೇ ಸಾಲಿನಲ್ಲಿ ಬರಬೇಕು.ಇದು ನಿಯಮ. ಇದರಿಂದ ಗಜಲ್‌ನ ಚೆಲುವು ಹೆಚ್ಚುತ್ತದೆ. ಕೇಳುವಾಗ ಒಂದು ರಮಣೀಯತೆ ತಾನಾಗಿ ಒದಗುತ್ತದೆ.ಗಜಲ್ ಮುಷಾಯಿರಾ‌ಗಳಲ್ಲಿ ಹಾಡಲ್ಪಡುವ ಕೇಳುಗಬ್ಬವಾಗಿತ್ತು ಎಂಬುದನ್ನು ಮರೆಯುವಂತಿಲ್ಲ.
ಇಲ್ಲಿ ಮುಖ್ಯವಾದ ಅಂಶವೆಂದರೆ ರದೀಫ್ ಇಲ್ಲದೇ ಗಜಲ್ ಇರಬಹುದು. ಆದರೆ ಕಾಪಿಯಾ ಇಲ್ಲದೇ ಗಜಲ್ ಇಲ್ಲ . ಬಹೆರ್ ( ವೃತ್ತ / ಛಂದಸ್ಸು)ಗಜಲ್‌ನ ಬಹು ಮುಖ್ಯ ಅಂಗವೇ ಆದರೂ ಕನ್ನಡ ಗಜಲ್ ಆ ಬಗ್ಗೆ ಬಹಳ ಲಕ್ಷ್ಯ ವಹಿಸಿದಂತಿಲ್ಲ. ಯಾವುದೇ ಗಜಲ್‌ನಲ್ಲಿ ಅದರ ಸಾಲುಗಳ ಉದ್ದ ಸುಮಾರಾಗಿ ಸಮಾನವಿದ್ದರೆ ಸಾಕು ಎಂಬಲ್ಲಿಗೇ ನಾವು ತೃಪ್ತರಾದಂತಿದೆ.
ಹೀಗೆ ಗಜಲ್ ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿದ್ದರೂ ಸಾಕಷ್ಟು ವೈವಿಧ್ಯಕ್ಕೂ ಇಲ್ಲಿ ಅವಕಾಶವಿದೆ.ಎಲ್ಲ ಷೇರ್‌ಗಳನ್ನೂ ಮತ್ಲಾ ಆಗಿಸುವ , ಮೊದಲ ಎರಡು ಷೇರ್‌ಗಳನ್ನು ಮತ್ಲಾ ಆಗಿಸುವ, ರದೀಫ್‌ನಲ್ಲಿ ವೈವಿಧ್ಯ ತರುವ, ರದೀಫ್ ಇಲ್ಲದೆಯೂ ಬರೆಯುವ…ವಿವಿಧ ಸಾಧ್ಯತೆಗಳಿವೆ.
ಇವಿಷ್ಟು ಗಜಲ್‌ನ ಹೊರ ಆವರಣದ ಮಾತಾಯಿತು.ಇನ್ನು ಅದರ ವಸ್ತು- ವಿಷಯಗಳಿಗೆ ಬಂದರೆ, ಆರಂಭದಲ್ಲಿ ಗಜಲ್ ಹೆಣ್ಣಿನ ಕುರಿತಾದ, ಅನುರಾಗ, ವಿರಹಗಳ ಕುರಿತಿನ ಕಾವ್ಯವೇ ಆಗಿತ್ತು, ನಿಜ.ಆದರೆ ಈಗ ಅದರ ವ್ಯಾಪ್ತಿ ಹಿಗ್ಗಿದ್ದು ವೈವಿಧ್ಯಮಯ ವಸ್ತು, ಆಶಯಗಳ ಗಜಲ್‌ಗಳು ನಮ್ಮೆದುರಿಗಿವೆ.
ನಾನು ಇಲ್ಲಿ ತುಂಬ ಮೇಲು ಮೇಲಿನ ವಿವರಗಳನ್ನು ಮಾತ್ರ ನೀಡಿದ್ದು ಹೆಚ್ಚಿನ ಮಾಹಿತಿಗೆ ಶಾಂತರಸರ ‘ ಗಜಲ್ ಮತ್ತು ಬಿಡಿ ದ್ವಿಪದಿ’ , ಚಿದಾನಂದ ಸಾಲಿಯವರು ಸಂಪಾದಿಸಿದ ‘ಕನ್ನಡ ಗಜಲ್’, ಬಸವಪ್ರಭು ಮತ್ತು ಇತರರು ಸಂಕಲಿಸಿದ ‘ಬಿಸಿಲ ಹೂ’ ಈ ಗ್ರಂಥಗಳನ್ನು ಪರಾಮರ್ಶಿಸಬಹುದು.

ಈ ಪ್ರಾಥಮಿಕ ಮಾಹಿತಿಗಳಿಂದ ರೇಖಾರ ಗಜಲ್‌ಗಳತ್ತ ತಿರುಗಿದರೆ –
ಈ ಸಂಕಲನದಲ್ಲಿ ೬೨ ಗಜಲ್‌ಗಳಿದ್ದು ರದೀಫ್‌ಸಹಿತ ಮತ್ತು ರದೀಫ್‌ರಹಿತ ಎರಡೂ ವರ್ಗಕ್ಕೆ ಸೇರಿವೆ. ಈ ಗಜಲ್‌ಗಳನ್ನು ಓದಿದಾಗ ಕೋಮಲವಾದ, ಅಪ್ಪಟ ಹೆಣ್ಣು ಅಂತಃಕರಣವೊಂದು ಒಳ- ಹೊರಗುಗಳನ್ನು ನೋಡುತ್ತ,ನೋಡಿಕೊಳ್ಳುತ್ತ ಆಡುವ ಮೆಲುಮಾತುಗಳ ಜೊತೆ ನಮ್ಮ ಪಯಣ ನಡೆದಂತೆ ಅನಿಸುತ್ತದೆ.ಏರುದನಿಯ ಚೀರುದನಿಯ ಸಂತೆಮಾತುಗಳಿಗೇ ನಾವು ಒಗ್ಗಿ ಹೋಗಿದ್ದರೆ ಈ ಸಾಲುಗಳು ಫಕ್ಕನೇ ತಮ್ಮನ್ನು ಬಿಟ್ಟುಕೊಡದೇ ಹೋಗಬಹುದು.ಬದಲಿಗೆ ಇವುಗಳ ಪಿಸುದನಿಗೆ ನೀವು ಎದೆ ತೆರೆದರೆ ಅಲ್ಲಿನ ಪುಟ್ಟ ಪುಟ್ಟ ಖುಷಿಗಳ, ನಗು-ಅಳು-ತಲ್ಲಣಗಳ ಆಪ್ತಲೋಕ ನಿಮ್ಮನ್ನು ಬರಮಾಡಿಕೊಂಡೀತು.

‘ ನಿನ್ನ ಮಾತುಗಳು ಧ್ವನಿಸಲೆಂದು ನಾ ಮೌನವನ್ನು ತಬ್ಬಿಕೊಂಡೆ
ನಿನ್ನ ಕನಸುಗಳು ಅರಳಲೆಂದು ನನ್ನ ಬಯಕೆಗಳ ಬಸಿದುಕೊಂಡೆ
………
ನಿನ್ನ ದಾಟಬಾರದೆಂದು ನನ್ನ ಚಲನೆಗಳಿಗೆ ಗಡಿ ಹಾಕಿಕೊಂಡೆ ‘
( ಗಜಲ್-೩೭)
ಈ ಮಾತುಗಳು ಕಟ್ಟಿಕೊಡುವ ಚಿತ್ರವನ್ನು ಗಮನಿಸಿ.ಹೆಣ್ಣಿನ ‘ಸ್ಥಿತಿ’ಯನ್ನು ಉದ್ವೇಗವಿಲ್ಲದೆ ಆದರೆ ದಿಟ್ಟದನಿಯಲ್ಲಿ , ದಟ್ಟ ವಿಷಾದದಲ್ಲಿ ಕಟ್ಟಿಕೊಡುತ್ತವೆ ಈ ಸಾಲುಗಳು.
‘ ಬಿತ್ತಿದ ಪ್ರೇಮಬೀಜಗಳು ಅಲ್ಲಲ್ಲಿ ಮೊಳಕೆಯೊಡೆಯುತ್ತಿವೆ
ಹಸಿರೊಡಲ ಬಾಚಿ ನುಂಗುವ ಬೆಂಕಿಮಳೆಗೆ ಕೊನೆಯಿಲ್ಲ’
(ಗಜಲ್-೩೮)
‘ ನಾಟಕವಾಡಲು ತರಬೇತಿ ಬೇಡ,ಇಲ್ಲ ರಂಗಮಂಟಪದ ಹಂಗು
ಜಗದ ಜಗಲಿಯಲಿ ನಿತ್ಯ ಸುಳ್ಳಿನಾಟಗಳು, ಮೊದಲು ಹೀಗಿರಲಿಲ್ಲ’
(ಗಜಲ್-೧೧)
ಎಂದು ವಿಷಾದದಲ್ಲೇ ಗಮನಿಸುವ ರೇಖಾ ಇವುಗಳ ನಡುವೆಯೇ ಎದೆದೀಪ ಹಚ್ಚಿ ಕುಡಿಯೊಡೆವ ನಗುವಿಗೆ ಕಾಯುವ, ಇಂಬಾಗುವ ಹಂಬಲಕ್ಕೆ ದನಿಯಾಗಿದ್ದಾರೆ.

‘ ನಸುಕಲಿ ಸಹನೆಯಿಂದ ಮುತ್ತುಕಟ್ಟಿದ ಇಬ್ಬನಿ ಸಾಲು
ಕುಡಿಯೊಡೆದ ಚಿಗುರೆಲೆ ಬಾಳಲಿ ಐಸಿರಿಯ ತಂತು’
(ಗಜಲ್-೨೫)
‘ ಆಯುಧಗಳಿಗಿಂತ ರೋಗಗ್ರಸ್ತ ಮನಕೆ ಔಷಧಿ ಬೇಕೀಗ
ರಕ್ಕಸ ಬೆರಳುಗಳಲಿ ಹೂವರಳಿದ ಬಗೆಯೊಂದ ಹೇಳು ಬಾ’
(ಗಜಲ್-೪೮)
ಕತ್ತು ಹಿಸುಕಲು ಬರುವ ನೂರೆಂಟು ಘಾತುಕ ಶಕ್ತಿಗಳ ಎದುರು ಬದುಕನ್ನು ಪೊರೆಯುವ, ಜೀವಕಾರುಣ್ಯವನ್ನು ಎತ್ತಿಹಿಡಿಯುವ ಅಚಲ ಶ್ರದ್ಧೆ ರೇಖಾರ ಗಜಲ್‌ಗಳ ಉದ್ದಕ್ಕೂ ಕಾಣುತ್ತದೆ.
‘ ಕುಸಿಯಬೇಡ ಬದಲಾಗಿ ಹಾರಿಬಿಡು ಎತ್ತರವು ದಕ್ಕೀತು’ಎಂಬ ನಿರೀಕ್ಷೆ, ಆಶಯ ಅವರ ಗಜಲ್‌ಗಳ ಮೂಲಮಂತ್ರವಾಗಿದೆ.
ಸಂಗೀತವನ್ನೂ ಕಲಿತಿರುವ, ಸೊಗಸಾಗಿ ಹಾಡುವ ರೇಖಾ ಸಾಕಷ್ಟು ಲಲಿತವಾದ ಗಜಲ್‌ಗಳನ್ನು ರಚಿಸಿದ್ದಾರೆ.ಮುಖ್ಯವಾದ ಮಾತೆಂದರೆ ಗಜಲ್‌ನ ಮೂಲ ನಿಯಮಗಳನ್ನು ಅನುಸರಿಸಿದ, ಸ್ಥೂಲವಾಗಿ ಬಹೆರ್‌ಯುಕ್ತವಾದ ಬರಹ ಇದು.ಗಜಲ್‌ನ ನಿಯಮಗಳನ್ನು ಮುರಿದು ಮನಸೋ ಇಚ್ಛೆ ಬರೆಯುವ ‘ಪ್ರತಿಭಾ ಸಂಪನ್ನ’ರಿಗೆ, ‘ನನ್ನದೊಂದು ರೀತಿಯ ಸ್ವಚ್ಛಂದ ಗಜಲ್‌ಗಳು’ ಎನ್ನುವವರಿಗೆ ನಿಯಮಗಳ ಒಳಗೇ ರಚಿತವಾದ ಈ ಗಜಲ್‍ಗಳು ತಣ್ಣಗಿನ ಉತ್ತರವಾಗಿವೆ.

ಗಜಲ್‌ಬರಹದಲ್ಲಿ ರೇಖಾರ ಹೆಜ್ಜೆಗುರುತುಗಳನ್ನು ಗಮನಿಸುತ್ತ ಬಂದ ನನಗೆ ಅವರ ಈ ಪ್ರಗತಿ ಸಂತಸ ತಂದಿದೆ.ಈ ಸಂಕಲನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಪುರಸ್ಕಾರವೂ ಲಭಿಸಿರುವುದು ಖುಷಿಯನ್ನು ಇಮ್ಮಡಿಸಿದೆ.
ರೇಖಾರ ಕಾವ್ಯಪಯಣಕ್ಕೆ ಇನ್ನಷ್ಟು ವಿಸ್ತಾರ, ತಿರುವಿನ ವೈವಿಧ್ಯ, ಚೆಲುವುಗಳು ಒದಗಿ ಬರಲಿ.
‘ ಬದುಕು ಕಟ್ಟುವ ಕಲೆಯ ಕನಸುಗಳಿಗೆ ಕಲಿಸಬೇಕು
ಕತ್ತಲೆಯ ಅಟ್ಟುವ ಕಲೆಯ ಮನಸುಗಳಿಗೆ ಕಲಿಸಬೇಕು’
ಎಂಬ ಅವರ ಹಂಬಲ,ಬೆಳಕಿನತ್ತಣ ಪಯಣ ನಿರಂತರವಾಗಿರಲಿ ಎಂದು ಹಾರೈಸುತ್ತೇನೆ.

**********

Leave a Reply

Back To Top