ಸಿಹಿಗಟ್ಟು – ದೇವರಾಜ್ ಹುಣಸಿಕಟ್ಟಿ ಕವಿತೆ

ದೇವರಾಜ್ ಹುಣಸಿಕಟ್ಟಿ

ಸಿಹಿಗಟ್ಟು

ಒಗ್ಗಟ್ಟಿನಲಿ ಬಲವಿದೆ ಎನಲು
ಹನಿ ಹನಿಗೂಡಿ ನದಿಗಳ ಕೂಡಿ
ಪರ್ವತ ನುಂಗಿದ ಸಾಗರವೇ ಸಾಕ್ಷಿ…!!

ಒಗ್ಗಟ್ಟಿನಲಿ ಒಲವಿದೆ ಏನಲು
ಭುವಿ ಆಕಾಶವ ಒಂದೂಗೂಡಿಸಿದ
ಕಾಮನ ಬಿಲ್ಲೆ ಸಾಕ್ಷಿ…!!

ಒಗ್ಗಟ್ಟಿನಲಿ ಸಿಹಿಯಿದೆ ಎನಲು
ನೊಣ-ನೊಣ ಸೇರಿ
ಮಕರಂದವ ಹೀರಿ ಕೂಡಿಟ್ಟ
ಜೇನಿನ ಹುಟ್ಟೇ ಸಾಕ್ಷಿ….!!

ಒಗ್ಗಟ್ಟಿನಲಿ ಸಂಸ್ಕೃತಿಯಿದೆ ಎನಲು
ಅಕ್ಷರಗಳು ಕೂಡಿ ಪದವಾಗಿ
ಪದ ಪದ ಸೇರಿ ಹದವಾಗಿಹ
ಪದ್ಯವೇ ಸಾಕ್ಷಿ….!!

ಒಗ್ಗಟ್ಟಿನಲಿ ಯಶವಿದೆ ಎನಲು
ಪಂಚೆಂದ್ರೀಯಗಳು ಕೂಡಿ
ಕೆಲಸವ ಮಾಡಿ ಗಳಿಸಿದ
ಗೆಲುವೇ ಸಾಕ್ಷಿ…!!

ಒಗ್ಗಟ್ಟಿನಲಿ ಮಂಗಳವಿದೆ ಎನಲು
ಮಂಗಳ ಕಾರ್ಯಕೆ ಬಳಸಿದ
ಬಾಳೆಯ ಗೊನೆಯೇ ಸಾಕ್ಷಿ….!!

ಒಗ್ಗಟ್ಟೇ ಜೀವನದ ಒಳಗುಟ್ಟು
ಕಾಲದಲಿ ಕಾದು ಸಿಹಿಗಟ್ಟು…!!


Leave a Reply

Back To Top