ಕಾವ್ಯ ಸಂಗಾತಿ
ಆಗ_ಈಗ
ಸುಜಾತಾ ರವೀಶ್
ಹಿಂದೆಲ್ಲಾ ಅವಳು
ಮೈ ಪರಚಿಕೊಳ್ಳುವ ಅಸಹಾಯಕತೆಗೆ
ಪಾತ್ರೆಗಳ ಕುಕ್ಕಿ ತೋರಿಸುತ್ತಿದ್ದಳು
ಮಕ್ಕಳಿಗೆ ಎರಡು ಬಿಗಿಯುತ್ತಿದ್ದಳು
ಸುಮ್ಮನೆ ಕಣ್ಣೀರು ಸುರಿಸುತ್ತಿದ್ದಳು
ಆದರೀಗ………
ಮೊಬೈಲನಾತುಕೊಳ್ಳುತ್ತಾಳೆ
ಮುಂಗೈಲಿ ಹಿಡಿದು ಮುದ್ದಿಸುತ್ತಾಳೆ
ಆಪ್ತವಾಗಿ ಅದರೊಡನೆ ಸಂಭಾಷಿಸುತ್ತಾಳೆ
ಗಂಟೆಗಟ್ಟಲೆ ಅದರೊಡನೆ ಕಳೆಯುತ್ತಾಳೆ
ಅದೇ ಈಗ……
ಅವಳ ಕಣ್ಣೀರೊರೆಸುವ ಕೈ
ಗೋಳು ಆಲಿಸುವ ಕಿವಿ
ಅವಳಿಗಾಗಿ ಮಿಡಿದ ಹೃದಯ
ತುಡಿದು ಸಾಂತ್ವನಿಸುವ ಮನ
ಅವಳ ಆವೇಗಕ್ಕೆ ಒಡ್ಡು
ಆವೇಶ ಪ್ರವಾಹಕ್ಕೆ ಅಣೆಕಟ್ಟು
ಅಲ್ಲಿಯೇ ಬಚ್ಚಿಟ್ಟಿದ್ದಾಳೆ
ಬಿಕ್ಕುಗಳ ಇಡಿಗಂಟು
ಸಿಕ್ಕುಗಳ ಒಳನಂಟು
ಕಲ್ಪನೆಗಳ ಸಿರಿಸಂಪತ್ತು
ಭಾವಗಳ ಗುಪ್ತನಿಧಿ
ಪದಗಳಲ್ಲಿ ಬಿಚ್ಚಿಡುತ್ತಾಳೆ
ಮೌನದಲೆ ಹೇಳಿಬಿಡುತ್ತಾಳೆ
ಶಬ್ದಗಳಲ್ಲಿ ಮಾತಾಗುತ್ತಾಳೆ
ಹಗುರಾಗುತ್ತಾಳೆ ಭಾವ ಪ್ರಸವದಲಿ
ಧ್ವನಿ ಎತ್ತುತ್ತಾಳೆ ಕವಿತೆಯಾಗಿ
ಭಾರ ಕಳೆದುಕೊಳ್ಳುತ್ತಾಳೆ ಬರೆದು ಬರೆದು
ಅದೇ ಈಗ ಅವಳ ಮುದ್ದು ಕಂದ
ಅವಳ ಬಾಳಿಗೆ ಸಿಕ್ಕಿರುವ ಆನಂದ
ಧನ್ಯವಾದಗಳು ಸಂಪಾದಕರಿಗೆ
ಸುಜಾತಾ ರವೀಶ್
ಚಂದದ ಭಾವ ಹಾಗೂ ವಿಷಯಾಧಾರಿತ ಕವಿತೆ.
ಕಟ್ಟಿದ ಶೈಲಿ ಸಹ ನೈಸ್…
ಭಾವಪೂರಿತ ಮನಮುಟ್ಟುವ ಸಾಲುಗಳು ಮೇಡಂ ತುಂಬಾ ಚಂದಾ ❤