ಕಾವ್ಯ ಸಂಗಾತಿ
ಅವಳಿದ್ದಳು ಹೀಗೆ
ಅನಸೂಯ ಜಹಗೀರದಾರ
ಅವಳ ಮನದಲ್ಲಿ ಸಾಗರವೇ ಇತ್ತು
ವಿಚಿತ್ರವೆಂದರೆ
ಒಮ್ಮೆಯೂ ಉಕ್ಕಲಿಲ್ಲ
ಉಕ್ಕಬೇಕೆಂದಾಗೊಮ್ಮೆ
ಇನ್ನೇನು ಹುಣ್ಣಿಮೆಯ ದಿನ ಹತ್ತಿರವೆಂದು
ಅಂದುಕೊಂಡು ಸಂಭ್ರಮಿಸಿದಾಗ..
ಭ್ರಮೆಯಾಗಿ ಮಾರ್ಪಡುತ್ತಿತ್ತು
ತೀವ್ರ ಕತ್ತಲಾವರಿಸಿ ಅಮವಾಸ್ಯ
ಧೀಡೀರಾಗಿ ಎದುರುಗೊಂಡು
ಅಡ್ಡಿಗಾಲು ಹಾಕುತ್ತತ್ತು
ಅದಕ್ಕಾಗಿಯೇ ಕಾದಿರುವಂತೆ..!
ಆದ್ದರಿಂದ…,
ಅಲೆಗಳು ತೀವ್ರಗೊಳ್ಳದೆ ನಿಯಮಿತವಾಗಿ
ಅಲೆಯುತ್ತಿದ್ದವು ಏರು ಪೇರಿಲ್ಲದೆ
ಏಳು ಬೀಳುಗಳಿಲ್ಲದ
ಅನಾಡಿ ಅಲೆದಂತೆ..!
ಅವಳು
ಸಕಲ ಮಣಿಗಣ ಸಕಲ ಖನಿಜಾವೈತ
ಸಕಲ ಗುಣ ಭರಿತ ವಸುಂದರೆಯ
ಸಂಜಾತೆ
ಅಗ್ನಿರಸದ ಪ್ರತೀಕ ಕುದಿಯುವ ಲಾವಾರಸ
ಅವಳ ಮನದೊಳಗೆ
ವಿಚಿತ್ರವೆಂದರೆ…,
ಒಮ್ಮೆಯೂ ಸುಡಲಿಲ್ಲ
ಹೊರಬಂದಾಗೊಮ್ಮೆ
ಅಗ್ನಿ ರಸದ ಬಿಂದುಗಳು
ತಣ್ಣಗಾಗಿ ಶಿಲೆಯಾದವು
ಅಗ್ನಿ ಶಿಲೆಯಾಗಿ ಮಾರ್ಪಾಡಾದವು
ಬಿಸಿಲು,ಮಳೆ,ಚಳಿ, ಗಾಳಿಗೆ
ಸವೆದವು ನವೆದವು ತಮ್ಮನ್ನೇ ಒಡ್ಡಿಕೊಂಡವು
ಗಣಿಗಾರಿಕೆಯಲ್ಲಿ ತುಂಡಾದವು
ಪಾಲಾದವು ಬಿಕರಿಯಾದವು
ಆದ್ದರಿಂದ..,
ಅದೆಷ್ಟು ಸಲವೂ..
ತಡಕಾಡಿದಾಗ
ಕಲ್ಲು ಹೃದಯವೊಂದು ಸಿಗುತ್ತಿತ್ತು.
ಮಿಡುಕಿದಾಗ ಕಿವಿಗೊಡದ..
ಯಾವ ಭಾವಕೂ ತುಡಿಯದ ಬಡಿಯದ
ಆ ಹೃದಯ ಕಲ್ಲಾಗಿರುತ್ತತ್ತು..!!
ತಣ್ಣಗೆ…!!
ಅವಳ ಕನಸುಗಳೋ ಕಲ್ಲ ತುಣುಕುಗಳಾಗಿದ್ದವು
ಎಂದೋ..
ಹಾಗಾಗಿ..,
ಯಾವ ಅಪ್ಪಣೆಗೂ ಭಿನ್ನಹಕ್ಕೂ
ಅನುಮತಿಗೂ ವಿನಂತಿಗೂ
ಕಾಯದ ಅನೈಚ್ಛಿಕವಾಹದಂತೆ
ಜೀವಂತಿಕೆಯಷ್ಟೇ ಜಗಸಾರುವ
ನಾಡಿಬಡಿತ ಅವಳದು..!!
ಅವಳಿದ್ದಳು ಹೀಗೆ…!!