ಕಾವ್ಯ ಸಂಗಾತಿ
ಒಮ್ಮೊಮ್ಮೆ ಹೀಗೂ ಆನ್ನಿಸುವುದುಂಟು
ಸುಧಾ ಹಡಿನಬಾಳ
ಒಮ್ಮೊಮ್ಮೆ ಹೀಗೂ
ಅನ್ನಿಸುವುದುಂಟು
ನಾನು ನನ್ನ ಹುಟ್ಟಿನೊಂದಿಗೆ
ಜಾತಿ ಹೆಸರನ್ನು ಹೊತ್ತು
ಬರಲೇ ಬಾರದಿತ್ತು ಎಂದು!
ಕನ್ನಡ ಶಾಲೆಯಲ್ಲಿ
ಓದುವಾಗೆಲ್ಲ ಏನೂ
ಅನ್ನಿಸಿರಲಿಲ್ಲ ಆದರೆ
ಪ್ರೌಢ ಶಾಲೆಗೆ ಬಂದಾಗ
ಮಾಸ್ತರರೆಲ್ಲ ‘ಜಾತಿ’
ಹೆಸರಿಡಿದು ಕರೆದಾಗ
ಮೈಮೇಲೆ ಹುಳ ಬಿಟ್ಟಂತ ಅನುಭವ!
ತಿಳಿವಳಿಕೆ ಇಲ್ಲದ ಕಾಲವದು
ಹೀಗಾಗಿ ಏನು ಮಾಡಬೇಕೆಂದು ತಿಳಿಯುತ್ತಿರಲಿಲ್ಲ
ಆದರೆ ಮಗನ ಹೆಸರನ್ನು ಯಾರೂ ಜಾತಿಯಿಂದ
ಕರೆಯಬಾರದೆಂದು ಜಾತಿಯನ್ನು ಮರೆಮಾಚಿ ಹೆಸರಿಟ್ಟೇವು ಆದರೂ
ಅಲ್ಲಲ್ಲಿ ಸರ್ಟಿಫಿಕೇಟ್ನಲ್ಲಿ
ಜಾತಿ ಸೇರಿಸಿಯೇ ಕೊಟ್ಟಾಗ
ಏನೋ ಒಂಥರಾ ಅಸಹನೆ!
ನಾವೆಲ್ಲ ಸರ್ಕಾರಿ ಅನ್ನ
ತಿನ್ನುವವರು ಹೀಗಾಗಿ
ಬೆನ್ನಿಗಂಟಿದ ಜಾತಿಭೂತವನ್ನು
ಎಂದಿಗೂ ಬಿಡಲಾಗದು!
ಹಾಗಂತ ಜಾತಿ ಹೆಸರ
ಹೇಳಲು ನಾಚಿಕೆ ಎಂದಲ್ಲ
ಆದರೆ ‘ಜಾತಿ’ ಹೆಸರಲ್ಲಿ
ಅವಕಾಶ ಮುಂಚಿತರು ನಾವೆಲ್ಲ!!
ಈಗಲೂ ‘ ಜಾತಿ’ ಹೆಸರಿಂದ
ಕರೆಯುವವರು ಇಲ್ಲವೆಂದಲ್ಲ
ಆದರೆ ಈಗ ಸುಮ್ಮನಿರುವುದಿಲ್ಲ…
ಅಲ್ಲಲ್ಲಿ ಆಗಾಗ ಜಾತಿ
ಹೆಸರಲಿ
ನಡೆಯುವ ದೌರ್ಜನ್ಯ
ಮರ್ಯಾದಾ ಹತ್ಯೆ
ಧರ್ಮದ ಹೆಸರಲ್ಲಿ
ಕೋಮುಗಲಭೆಗಳು
ಗುಂಪು ಘರ್ಷಣೆ
ಕೊಲೆ ಸುಲಿಗೆಗಳು
ಬೆಚ್ಚಿ ಬೀಳಿಸುತ್ತವೆ
ಕರುಳು ಚುರ್ ಎನ್ನಿಸುತ್ತವೆ
ಪ್ರಾಣಿ ಪ್ರಪಂಚದಲ್ಲಿ ಈ ಜಾತಿ
ಧರ್ಮದ ಗೊಡವೆಯೇ
ಇಲ್ಲವಲ್ಲ
ಮತ್ತೆ ಯಾಕೆ
ನಮ್ಮ ನಡುವೆ ಈ ಬೇಲಿ ಗೋಡೆ?
ನಾವೆಲ್ಲಾ ವಿಶ್ವಮಾನವರಾಗುವುದು
ಸಾಧ್ಯವಿಲ್ಲವೇ?
ಆಗುವುದಾದರೆ ಯಾವಾಗ?
ಮತ್ತೆ ಮತ್ತೆ ಅನ್ನಿಸುವುದುಂಟು
ನಾವೆಲ್ಲ ಜಾತಿ ಹೆಸರಿನೊಂದಿಗೆ
ಗುರುತಿಸಿಕೊಳ್ಳಲೇ ಬಾರದಿತ್ತು ಎಂದು-
ನಿಜ