ಕಾವ್ಯ ಸಂಗಾತಿ

ಗಜಲ್ ಜುಗಲ್ ಬಂದಿ

ಅರುಣಾ ನರೇಂದ್ರ ಮತ್ತು ಡಾ.ಯ.ಮಾ.ಯಾಕೊಳ್ಳಿ

ನಿನಗಾಗಿ ಹಂಬಲಿಸುವ ಜೀವವೊಂದಿದೆ ಹೊರಳಿ ನೋಡು
ನನಗಾಗಿ ಪಡೆದಿರುವ ಪ್ರೇಮವೊಂದಿದೆ ಹೊರಳಿ ನೋಡು

ಎದೆಯ ಕೂಗು ಕೇಳಿಸಿಕೊ ನಡೆವ ದಾರಿಯಲಿ ಒಮ್ಮೆಗೆಳೆಯ
ನೋಟವೊಂದೇ ಸಾಕೆನುವ ಹೃದಯವೊಂದಿದೆ ಹೊರಳಿ ನೋಡು

ನೀನೆಷ್ಟು ಎತ್ತರಕ್ಕೆ ಬೆಳೆದೆ ಕೈ ಚಾಚಿದರೂ ಸಿಗದಷ್ಟು
ಏಳ್ಗೆ ನೋಡಿ ಹಿಗ್ಗುವ ಮನವೊಂದಿದೆ ಹೊರಳಿ ನೋಡು

ಬಳಕೆ ಇರದ ಮೇಲೆ ಬಂಧ ಬಿಗಿ ತಪ್ಪುವುದೇನೋ
ಆಸೆ ಹತ್ತಿಕ್ಕಿರುವ ಭಾವವೊಂದಿದೆ ಹೊರಳಿ ನೋಡು

ಅರುಣಾಗೆ ನೀ ಎರವಾದ ಮೇಲೆ ಇರುವು ಎಲ್ಲಿಯದು
ನಿನಗಾಗಿ ತಪಿಸುವ ಆತ್ಮವೊಂದಿದೆ ಹೊರಳಿ ನೋಡು

ಅರುಣಾ ನರೇಂದ್ರ

ನೀನಿಲ್ಲದೇ ಬಾಡಿ ಹೋದ ಪ್ರೇಮಲತೆಯೊಂದಿದೆ ಹೊರಳಿ ನೋಡು
ನಿನ್ನ ತನಿ ಸ್ಪರ್ಶವಿಲ್ಲದೆ ಮುರುಟಿ ಹೋದ ಪುಷ್ಪವೊಂದಿದೆ ಹೊರಳಿ ನೊಡು

ಅದೆಷ್ಟು ದಿನ ಮನ ನಿನ್ನ ಹೆಸರು‌ ಕೂಗಿ ಕೂಗಿ ದಣಿದು ಹೋಗಿದೆ ಗೆಳತಿ
ನೀ ಬಾರದೆ ಎದೆ ತೆರೆದು ಕಾಯುವ ಒಲವೊಂದಿದೆ ಹೊರಳಿ ನೋಡು

ಕಾಲ ದೇಶಗಳಾಚೆ ನಿನ್ನ ಹೆಸರು ಮೆರೆದು ಹಬ್ಬಲಿ ಕುಣಿದು ತಣಿಯುವೆ
ಬಿಟ್ಟು ಮರೆತು ಹೋದೆ ನಿನಗಾಗಿ ಮಿಡಿವ ಜೀವವೊಂದಿದೆ ಹೊರಳಿ ನೋಡು

ನೀ ನಡೆವ ದಾರಿಯಲಿ ಮುತ್ತು ಸುರಿಯಲಿ ಎಂಬ ಹಾರೈಕೆ ಸದಾ ನನ್ನದು
ನಿನ್ನೊಡನಾಡುವ ಕ್ಷಣಕಾಗಿ ಬೇಯುವ ಮನವೊಂದಿದೆ ಹೊರಳಿ ನೋಡು

ಆಗಸದಿ ಬೆಳಗಿದ ನಕ್ಷತ್ರಗಳಿಂದೇನು ಲಾಭ ನನ್ನೆದೆ ಬೆಳಗಿದ ಚಂದಿರ ನೀನು
ನಿನ್ನ ಕರುಣೆಗಾಗಿ ಕಾಯುವ ‘ಯಯಾ’ನ ಜೀವವೊಂದಿದೆ ಹೊರಳಿ ನೋಡು

ಡಾ.ಯ.ಮಾ.ಯಾಕೊಳ್ಳಿ

One thought on “

  1. ಗಜಲ್, ಗಜಲ್ಗೆ ಜುಗಲಬಂದಿ. ಸಂಗೀತದಲ್ಲಿ ಜುಗಲ್ ಬಂದಿ ಕೇಳಿದ್ದೆವು. ಗಜಲ್ಗಳ ನಿಯಮಾವಳಿಗಳು ಗೊತ್ತಿಲ್ಲ. ನೀವೇ ಪರಿಣಿತರು. ಚೆನ್ನಾಗಿವೆ. ಅಭಿನಂದನೆಗಳು.

Leave a Reply

Back To Top