ನನ್ನ ಮುದ್ದಿನ ಚೋಟು… ಆರ್,ಸಮತಾ ಲಹರಿ

ಕಾವ್ಯ ಸಂಗಾತಿ

ನನ್ನ ಮುದ್ದಿನ ಚೋಟು

ಆರ್,ಸಮತಾ

ಹೋದ ಭಾನುವಾರದ ಸಂಜೆ  ಮಗನೊಂದಿಗೆ ಯಾವುದೋ ಅಂಗಡಿಗೆ ಹೋಗುವುದಿತ್ತು. ಗೇಟ್ ತೆಗೆದು ನನ್ನ ಲಿಯೋನನ್ನು ಹೊರಗೆ ತಂದು ಇನ್ನೇನು ಗಾಡಿ ಸ್ಟಾರ್ಟ್ ಮಾಡಬೇಕಿತ್ತು ಅಷ್ಟರಲ್ಲಿ “ಕುಯ್ ಕುಯ್ ಕುಯ್” ಎನ್ನೋ ಸದ್ದು ಕೇಳಿ ತಕ್ಷಣ ನಿಂತೆ.

ಹಿಂದೆ ಕುಳಿತಿದ್ದ ಮಗ ತಕ್ಷಣ ಇಳಿದು ಗಾಡಿ ಸುತ್ತ ನೋಡಿದರೆ ಹಿಂದಿನ ಚಕ್ರದ ಬಳಿ ಒಂದು ಬಿಳಿ ಬಿಳಿ ಮುದ್ದು ಮುದ್ದು ನಾಯಿಮರಿ ಬಾಲ ಅಲ್ಲಾಡಿಸುತ್ತಾ ಕುಯ್ಯಿ ಗುಟ್ಟುತ್ತಿತ್ತು.ಮಗನಂತೂ “ಅಮ್ಮಾ ಎಷ್ಟು ಚೆನ್ನಾಗಿದೆ ಅಲ್ವಾ!”ಎನ್ನುತ್ತಾ ಎತ್ತಿ ಹಿಡಿದು ಮುದ್ದು ಮಾಡಲು ಶುರು ಮಾಡಿದ.ನನಗೆ ಗಾಬರಿ,”ಅಯ್ಯೋ ಮುಟ್ಟಬೇಡ ಕಣೋ,ಬೀದಿ ನಾಯಿಮರಿ ಅನ್ನಿಸುತ್ತೆ,ಅವೆಲ್ಲ ರೇಬೀಸ್ ಕ್ಯಾರಿಯರ್ ಆಗಿರುತ್ತೆ,ಮೊದಲು ಕೆಳಗಿಟ್ಟು ಕೈ ತೊಳೆದು ಕೋ,” ಎಂದು ಗದರಿಸಿದೆ.ಮಗನಿಗೆ ಮುನಿಸು ಉಕ್ಕಿ ಬಂತು.” ಏನಮ್ಮಾ ನೀನು! ಅಷ್ಟೊಂದೆಲ್ಲ ಯೋಚ್ನೆ ಮಾಡಿದ್ರೆ ಬದುಕೋದು ಕಷ್ಟ ಬಿಡು.ಹಂಗೆಲ್ಲಾ ಏನೂ ಆಗೊಲ್ಲ,ಇನ್ನೂ ಸಣ್ಣಮರಿ ಪಾಪ.ಅದರಮ್ಮನ ಬಿಟ್ಟು ಇನ್ಯಾರ ಹತ್ರಾನೂ ಹೋಗಿರಲ್ಲ,ಅದು ಹೇಗೆ ರೇಬೀಸ್ ಕ್ಯಾರಿಯರ್ ಆಗ್ಬಿಡುತ್ತೆ.ನೀನು ಓವರ್ ಥಿಂಕರ್,” ಅಂದು ನನ್ನ ಬಾಯಿ ಮುಚ್ಚಿಸಿದ. ನಾನೂ ಗೊಣಗುತ್ತಾ,”ಸರಿ ಈಗ್ಲೇ ತಡವಾಗಿದೆ,ಅದನ್ನು ಕೆಳಗಿಟ್ಟು ಬೇಗ ಬಾ,” ಎಂದು ಅವಸರಿಸಿದೆ.

ಅವನು ನಾಯಿಮರಿ ಕೆಳಗೆ ಇಡುವಷ್ಟರಲ್ಲಿ ಇನ್ನೊಂದು ದೊಡ್ಡ ನಾಯಿ ಹತ್ತಿರ  ಓಡಿ ಬಂತು. ಈ ಮರಿಯ ಅಮ್ಮನಿರಬೇಕು,ಅದನ್ನು ಕಂಡ ಕೂಡಲೇ ಮರಿ ಅದರ ಬಳಿ ಓಡಿಹೋಗಿ ಹಾಲು ಕುಡಿಯಹತ್ತಿತು.ಕುತೂಹಲದಿಂದ ನೋಡಿದೆ.ನಮ್ಮ ಏರಿಯಾದ ನಾಯಿ ಅನ್ನಿಸಲಿಲ್ಲ.ಯಾವುದೋ ಪಮೇರಿಯನ್ ಮತ್ತು ಬೀದಿನಾಯಿಯ ಮಿಶ್ರ ತಳಿಯ ಹಾಗೆ ಕಂಡು ಬಂತು.ಕುತ್ತಿಗೆಯಲ್ಲಿ ಬೆಲ್ಟ್ ಬೇರೆ.”ಯಾರೋ ಸಾಕಿರೋದು ಇರ್ಬೇಕು.ತಪ್ಪಿಸಿಕೊಂಡು ಇಲ್ಲಿಗೆ ಬಂದಿದೆ,” ಅಂದುಕೊಳ್ಳುತ್ತ ಮಗನಿಗೆ,” ಹತ್ತೋ ಗಾಡಿ,” ಎಂದೆ.ಅವನ ಕಣ್ಣು ಆ ಎರಡು ನಾಯಿಗಳ ಮೇಲೆಯೇ.” ಅಮ್ಮಾ ಎಷ್ಟು ಮುದ್ದು ಮುದ್ದಾಗಿವೆ, ನಾವೇ ಸಾಕೊಳ್ಳೋಣ,” ಅನ್ನೋ ರಾಗ ಶುರುವಾಯಿತು.ನನಗೆ ಸಿಟ್ಟು ಉಕ್ಕೇರಿ ಬಂತು.” ಇರೋ ಎರಡು ಮಕ್ಕಳನ್ನು ನೋಡೋಕೇ ನಂಗೆ ಪುರುಸೊತ್ತಿಲ್ಲ. ಇನ್ನು ನಾಯಿ ಬೇರೆ ಸಾಕಿದ ಹಾಗೇನೇ,” ಅನ್ನುತ್ತಾ,” ಲೋ ಮಾಡಕ್ಕೆ ಬೇರೆ ಕೆಲ್ಸಿಲ್ಲ ನಿಮ್ಮವ್ವನಿಗೆ ಅಂದುಕೊಂಡಿದ್ದಿಯ, ಸುಮ್ನೆ ಬಾ, ” ಎಂದು ಹೇಳುತ್ತಾ ಆ ಎರಡೂ ನಾಯಿಗಳ ಓಡಿಸಿ ಮಗನನ್ನು ಎಳೆದುಕೊಂಡು ಹೊರಟೆ.

ದಾರಿಯುದ್ದಕ್ಕೂ ಮಗನ ಕೊರೆತ ಶುರುವಾಯಿತು.”ಅಮ್ಮ ನೀನು ಮಾತ್ರ ಹುಡುಗಿಯಾಗಿದ್ದಾಗ ನಾಯಿ ಸಾಕ್ಕೊಂಡು ಆಟ ಆಡಿಸಿದಿಯ.ನಮಗೆ ಮಾತ್ರ ಬೇಡ ಅಂತೀಯ.ಯೂ ಆರ್ ಸೋ ಮೀನ್,” ಎಂದು ದೂರಿದ.” ಮೀನೂ ಅಲ್ಲ ಮೊಸಳೆನೂ ಅಲ್ಲ,ಸಾಕಿರೋ ಕಷ್ಟ ಗೊತ್ತಿರೋದಕ್ಕೆ ಬೇಡ ಅನ್ನೋದು.ಸುಮ್ನೆ ಬಾ,” ಅಂತ ಅಂತೂ ಅವನ ಬಾಯಿ ಮುಚ್ಚಿಸಿದೆ.

ನಂತರ ರಾತ್ರೆ ಮಲಗಿದಾಗ ನಾನು ಸಾಕಿದ್ದ ನಾಯಿಮರಿ ಚೋಟು ನೆನಪು ನುಗ್ಗಿ ಬಂದು ಕಣ್ಣು ತೇವವಾದವು.ಅವನೀಗ ಇರೋಕೆ ಸಾಧ್ಯವಿಲ್ಲ ಏಕೆಂದರೆ ಇದಾಗಲೇ ಇಪ್ಪತ್ತು ವರ್ಷಗಳ ಹಳೇ ಕಥೆ.

ಚೋಟು ನಮ್ಮನೆಗೆ ಬಂದದ್ದೇ ಒಂದು ದೊಡ್ಡ ಕಥೆ.ಅವನನ್ನೇನು ನಾವು ಸಾಕಬೇಕು ಅಂದುಕೊಂಡು ತಂದು ಸಾಕಿದ್ದಲ್ಲ.ಅದು ಏನಾಯಿತು ಅಂದ್ರೆ ಆ ವರ್ಷ ಸಲ್ಮಾನ್ ಮಾಧುರಿ ದೀಕ್ಷಿತ್ ರ ಹಂ ಆಪ್ಕೆ ಹೈ ಕೌನ್ ಪಿಚ್ಚರ್ ಬಿಡುಗಡೆಯಾಗಿತ್ತು.ಸೂಪರ್ ಡೂಪರ್ ಹಿಟ್ ಕೂಡ ಆಗಿತ್ತು.ಅದರಲ್ಲಿ ಒಂದು ಪಮೇರಿಯನ್ ನಾಯಿ,” ಟಫಿ” ಅಂತ ಅದರ ಹೆಸರು,ಚಿತ್ರದಲ್ಲಿ ಸಲ್ಮಾನ್ ಮಾಧುರಿಯರ ನಡುವಿನ ಪ್ರೇಮ ಸೇತುವಾಗಿ ಕೆಲಸ ಮಾಡುವ ಪಾತ್ರ ಮಾಡಿತ್ತು.ಆಗ ತೊಗೊ ಟಫಿ ನಾಯಿ ಹುಡುಗಿಯರ ಮಧ್ಯೆ ಸಕ್ಕತ್ ಫೇಮಸ್ ಆಗಿಬಿಟ್ಟಿದ್ದ.ಎಷ್ಟೊಂದು ನನ್ನ ಗೆಳತಿಯರು,ಪರಿಚಯದ ಹುಡುಗಿಯರಿಗೆ  ಪಮೇರಿಯನ್ ನಾಯಿ ಸಾಕುವ ಖಯಾಲಿ ಶುರುವಾಗಿ ಬಿಟ್ಟಿತು.ಆದ್ರೆ ನಾವಿದ್ದ ಭದ್ರಾವತಿಯಲ್ಲಿ ಒಳ್ಳೇ ತಳಿ ಪಮೇರಿಯನ್ ಸಿಗೋ ಗ್ಯಾರಂಟೀ ಏನೂ ಇರ್ಲಿಲ್ಲ. ಅದಕ್ಕೇ ಬೆಂಗಳೂರು ಮೈಸೂರುಗಳಿಂದ ತರಿಸಿಕೊಳ್ಳೋರು.ಹಾಗಾಗಿ ನನ್ನ ತಮ್ಮ ಒಮ್ಮೆ ಬೆಂಗಳೂರಿಗೆ ಹೊರಟಿದ್ದಾಗ ಅವನ ಕಾಲೇಜಿನ ಓರ್ವ  ಗೆಳತಿ   ಪಮ್ಮಿ “ಒಂದು ಒಳ್ಳೇ ತಳಿಯ ನಾಯಿಮರಿ ತಂದುಕೊಡು” ಎಂದು ಹೇಳಿ ಅವನಿಗೆ ಹಣ ಕೊಟ್ಟಿದ್ದಳು.ಇವನೋ ಬೆಂಗಳೂರಲ್ಲಿ ನಾಲ್ಕಾರು ಕಡೆ ಸುತ್ತಾಡಿ ಒಂದು ಪಮೇರಿಯನ್ ಮರಿ ತಂದ.

ತಂದ ದಿನ ಒಂದು ಬೆತ್ತದ ಬುಟ್ಟಿಯಲ್ಲಿ ಬೆಣ್ಣೆ ಮುದ್ದೆ ಹಂಗೆ ಮುದುರಿ ಮಲಗಿದ್ದ ಮರಿಯ ಕಂಡು ನನಗೆ ಮುದ್ದು ಉಕ್ಕಿ ಬಂತು.ನಾನು ಏನೋ ಹುರುಪಿನಲ್ಲಿ,” ಲೋ ನಾವೇ ಸಾಕ್ಕೊಳ್ಳೋಣ ಕಣೋ,” ಎಂದಿದ್ದಕ್ಕೆ,” ಇಲ್ಲ ಕಣೆ,ಪಮ್ಮಿ ದುಡ್ಡು ಕೊಟ್ಟಿದ್ದಾಳೆ.ಬೇಜಾರ್ ಮಾಡ್ಕೋಬೇಡ,” ಎಂದು ಹೇಳಿ ನಾಯಿಮರಿ ಅವಳಿಗೆ ಕೊಡಲು ಹೋದ.ಹೋದ ಸ್ಪೀಡಲ್ಲೆ ಮರಳಿ ಮುಖ ಇಳಿ ಬಿಟ್ಟುಕೊಂಡು ಮನೆಗೆ ಬಂದ.ನನಗೆ ಕುತೂಹಲ.” ಏನಾಯ್ತೋ,” ಎಂದು ವಿಚಾರಿಸಿದಾಗ ಹೇಳಿದ್ದು.” ಪಮ್ಮಿ ಅವ್ರಮ್ಮ ನಾಯಿ ಸಾಕಕ್ಕೆ ಒಪ್ತನೇ ಇಲ್ಲ ಕಣೆ,ಎಷ್ಟು ಹೇಳಿದ್ರೂ,” ಥೂ ಗಲೀಜು,ನಮ್ಮ ಮನೆಗೆ ಬೇಡವೇ ಬೇಡ ಅಂದು ಬಿಟ್ರು”.ಪಮ್ಮಿನೂ” ದುಡ್ಡೇನೂ ವಾಪಸ್ ಕೊಡ್ಬೇಡ ನೀನೇ ಇಟ್ಕೋ ” ಅಂದ್ಬಿಟ್ಲು. ಹೆಂಗಿದ್ರೂ ನೀನೂ ನಾವೇ ಸಾಕ್ಕೊಳ್ಳೋಣ ಅಂತಿದ್ಯಲ್ಲ ಅದಕ್ಕೇ ವಾಪಸ್ ತಂದೆ.” ಎಂದ.ನನಗಾಗ ಪೀಕಲಾಟಕ್ಕೆ ಶುರು ಹಚ್ಚಿಕೊಳ್ತು.

ಆಗ ನಾನು ಓದು ಮುಗಿಸಿ ಮನೆಯಲ್ಲಿದ್ದ ಸಮಯ.ಅಮ್ಮ ತೀರಿಕೊಂಡು ನಾಲ್ಕೈದು ವರ್ಷಗಳಾಗಿದ್ದವು.ಮನೆಯಲ್ಲಿ ಅಜ್ಜಿ,ಅಪ್ಪ,ನಾನು ಮತ್ತು ನನ್ನ ತಮ್ಮ ಇದ್ದೆವು.ಮನೆಕೆಲಸ ಮಾಡಿಕೊಂಡು,ಇರೋ ಬರೋ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಹಾಕ್ಕೊಂಡು,ವಧು ಪರೀಕ್ಷೆ ಬೇರೆ ಎದುರಿಸಿಕೊಂಡು ನಾನು ಇದ್ದೆ.ಅದರಲ್ಲಿ ಈ ನಾಯಿಮರಿ ಬೇರೆ ಗಂಟು ಬಿತ್ತಲ್ಲಪ್ಪ ಅನ್ನಿಸಿ,”ಬೇಡ ಕಣೋ,ಬೇರೆ ಇನ್ಯಾರಾದರೂ ನಿನ್ನ ಫ್ರೆಂಡ್ ಗೆ ಕೊಟ್ಟುಬಿಡು,” ಅಂದರೂ ನನ್ನ ತಮ್ಮ ಕೇಳಲಿಲ್ಲ.” ಇಲ್ಲ ನಾವೇ ಸಾಕೋಣ ” ಅಂತ ಹಟ ಹಿಡಿದ.ನಮ್ಮಜ್ಜಿ ಬೇರೆ,” ನಿಮ್ಮುನ್ನೇ ನೋಡೋರು ದಿಕ್ಕಿಲ್ಲ, ಇನ್ನು ನಾಯಿ ಬೇರೆ ಕೇಡು,” ಅಂತ ಬೈದರೂ ಕೇಳಲಿಲ್ಲ. ನಮ್ಮಪ್ಪ ಅಂತೂ ನಮ್ಮ ಲೋಕಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲದಂತೆ ಇದ್ದವರು, ಹಂಗಾಗಿ ಅವರಿಂದಲೂ ಯಾವುದೇ ಆಕ್ಷೇಪಣೆ ಬರಲಿಲ್ಲ.ಅಂತೂ ನಾಯಿಮರಿ ನಾವೇ ಸಾಕೋದು ಅಂತ ಆಯಿತು.

ಪಮ್ಮಿ ನಾಯಿಯನ್ನು ಸಾಕದೆ ಹೋದ್ರೂ ಪರವಾಗಿಲ್ಲ ” ಚೋಟು” ಅಂತ ಹೆಸರಿಟ್ಟು ಬೇರೆ ಕಳಿಸಿದ್ದಳು. ನಾನೂ ಇರೋ ಕೆಲಸದ ಮಧ್ಯೆ ನಾಯಿಗೊಂದು ಹೆಸರು ಇಡಲಾಗದ ಸೋಮಾರಿತನದಿಂದಾಗಿ “ಏನೋ ಒಂದು ಹೆಸರು ಇರ್ಲಿ ಬಿಡು,” ಅಂತ ಸುಮ್ಮನಾದೆ. ಅಂತೂ ಚೋಟು ನಮ್ಮನೆ ಸದಸ್ಯನಾಗಿ ಹೋದ.

ಅವನು ಬಂದಾಗ ಇನ್ನೂ ಹತ್ತು ದಿನದ ಮರಿ.ಅದಕ್ಕೆ ಯಾವಾಗಲೂ ನಿದ್ದೆ ಹೊಡ್ಕೊಂಡೇ ಇರೋನು.ನನಗಂತೂ ಒಳ್ಳೆ ಎಳೆ ಮಗು ಸಾಕಲು ಹೊರಟ ಹಾಗೆ ಆಗಿ ಬಿಟ್ಟಿತು. ಅದೂ ಅಲ್ಲದೆ ನಾಯಿ ಸಾಕುವ ಬಗ್ಗೆ ಏನೇನೂ ಗೊತ್ತಿರಲಿಲ್ಲ.ಆಗೇನು ಈಗಿನಂತೆ ಗೂಗಲ್ ಗೀಗಲ್ ಅಂತ ಏನೂ ಇರ್ಲಿಲ್ಲ.ಏನಾದರೂ ವಿಷಯ ತಿಳಿದುಕೊಳ್ಳಬೇಕು ಅಂದ್ರೆ ನೆರೆ ಹೊರೆಯವರು, ಬಂಧು ಬಳಗ,ಗೆಳೆಯ ಗೆಳತಿಯರೇ ಗೂಗಲ್,ಫೇಸ್ ಬುಕ್, ಯೂ ಟ್ಯೂಬ್ ಮತ್ತೊಂದು ಎಲ್ಲಾ ಆಗಿದ್ದರು.ಅಂತೆಯೇ ನಾಯಿ ಸಾಕುವುದು ಹೇಗೆ ಅನ್ನೋದರ ಬಗ್ಗೆಯೇ ತಲೆಗೊಂದು ಸಲಹೆ ಸೂಚನೆ ಬಂದು ರಾಶಿ ಬಿದ್ದವು.ಅದರಲ್ಲಿ ಬಹುತೇಕರು ” ಜಾತಿ ನಾಯಿ ಮರಿಗೆ ಉಪ್ಪು,ಖಾರ,ಸಕ್ಕರೆ ಕೊಡಬೇಡಿ, ಬರೀ ಹಾಲು,ಸಪ್ಪೆ ಆಹಾರ ಕೊಡಿ,” ಎಂದದ್ದನ್ನ ನಾನು ಚಾಚೂ ತಪ್ಪದೆ ಪಾಲಿಸಿದೆ.ಮೊದಲ ಮೂರು ತಿಂಗಳು ಬರೀ ಹಾಲು ಕುಡಿದು ಬೆಳೆದ.ನಂತರ ಸಪ್ಪೆ ಹಾಲು ಅನ್ನ,ವಾರಕ್ಕೆ ಮೂರು ಮೊಟ್ಟೆ,ಭಾನುವಾರ ಭಾನುವಾರ ಚಿಕನ್ ಕೊಡಲು ಶುರು ಮಾಡಿದೆ.ಹಂಚಿ ಕಡ್ಡಿ ಹಿಡಿದು ಬೆದರಿಸಿ ಅದು ಟಾಯ್ಲೆಟ್ಗೆ ಹೊರಗೆ ಹೋಗುವ ಹಾಗೆ ಮಾಡಲು ಕಲಿಸುವಷ್ಟರಲ್ಲಿ ಸಾಕು ಸಾಕಾಯಿತು.ರೇಬೀಸ್ ನಿರೋಧಕ ಚುಚ್ಚುಮದ್ದು ಕೊಡಿಸಿ, ಅವನಿಗೇ ಅಂತ ಬೇರೆ ಸೋಪು ತಂದು ಮಗುವಿನ ಹಾಗೆ ಸಾಕಿದ್ದಾಯಿತು.ಆರೈಕೆ ಚೆನ್ನಾಯಿತು,ಹಾಗಾಗಿ ದುಮ್ಮು ದುಮ್ಮಗೆ ಮೈ ತುಂಬಾ ಹೊರೆ ಹೊರೆ ಕೂದಲು ಬೆಳೆಸಿಕೊಂಡು ನೋಡಲು ಕಣ್ಣಿಗೆ ಹಬ್ಬವಾಗಿ ಬೆಳೆದ.ಆದರೆ ಬೇರೆ ಯಾರನ್ನೂ ಹತ್ತಿರ ಸೇರಿಸದೆ ನನಗೇ ಚರ್ಮದ ಹಾಗೆ ಅಂಟಿಕೊಂಡು ಬಿಟ್ಟ.

ಅವನ ದಿನಾ ಬೆಳಿಗ್ಗೆಯ ವಾಕ್, ಸ್ನಾನ,ಊಟ ಉಪಚಾರ ಎಲ್ಲಾ ನಾನೇ ಮಾಡ್ಬೇಕಿತ್ತು.ಮನೆಯಲ್ಲಿ ಇದ್ದಾಗ ಕಟ್ಟಿ ಹಾಕಿಯೂ ಇರ್ತಾ ಇರ್ಲಿಲ್ಲ.ಹೊರಗೆ ಹೋಗುವಾಗ ಮಾತ್ರ ಒಂದು ಉದ್ದನೆ ಚೈನು.ನಾನು ಹೊರಗೆ ಎಲ್ಲಿಗೆ ಹೊರಟರೂ ಬಾಲದಂತೆ ಹಿಂದೆಯೇ ಬರೋನು.ಅಕ್ಕ ಪಕ್ಕದ ಮನೆಯವರು,ಗೆಳತಿಯರ ಮನೆ ಎಲ್ಲಾ ಕಡೆ ಚೋಟು ಸವಾರಿ ನನ್ನ ಜೊತೆ ಹೊರಡುತ್ತಿತ್ತು. ನಾನು ಕುಳಿತ ಕಡೆ ನನ್ನ ಪಕ್ಕ ಅಂಟು ಪುರ್ಲೆಯಂತೆ ಅವ್ನು. ನಾನು  ಏನಾದರೂ ಅವನ ಬಿಟ್ಟು ಹೊರಗೆ ಹೋಗಿ ಬಂದರೆ ನನ್ನ  ನೋಡಿದಾಕ್ಷಣ  ಮುನಿಸಿನ ಬೊಗಳು. ಅವನಿಗೆ ಖುಷಿ,ದುಃಖ,ಹಸಿವು,ಸಿಟ್ಟು ಏನೇ ಆದರೂ ಅವನ ಬೊಗಳುವಿಕೆಯಲ್ಲೇ ನನಗೆ ಗೊತ್ತಾಗಿ ಬಿಡುತ್ತಿತ್ತು.ನಾನು ಅಡುಗೆ ಮನೆಯಲ್ಲಿ ಈಳಿಗೆ ಮಣೆ ಮೇಲೆ ಕುಳಿತು ತರಕಾರಿ ಹೆಚ್ಚುತ್ತಿದ್ದರೆ ನನ್ನ ಬೆನ್ನ ಮೇಲೆ ಎರಡೂ ಮುಂಗಾಲು ಇಟ್ಟು ಹತ್ತಿ ಹಿಂದಿನಿಂದ ನನ್ನ ಕಿವಿ ನೆಕ್ಕಬೇಕು ಅವನು.ಎಷ್ಟು ಓಡಿಸಿದರೂ ಅವನು ಮತ್ತೆ ಮತ್ತೆ ನನ್ನ ಹಿಂದೆಯೇ.ಮನೆಯಲ್ಲಿ ಮಾಂಸದಡಿಗೆ ಮಾಡಿದ ದಿನವಂತೂ ಅಡಿಗೆ ಮನೆಯ ಬಾಗಿಲಲ್ಲೇ ನಾಲ್ಕೂ ಕಾಲು ಚಾಚಿ ನೆಲಕ್ಕೆ ಆಂಟಿ ಕುಳಿತು ಅಲ್ಲೇ ಸ್ಥಾಪಿತವಾಗಿ ಬಿಡುತ್ತಿದ್ದ.ಆಗಾಗ್ಗೆ ಮುದ್ದು ಮುದ್ದಾಗಿ ” ವೊವ್ ವೊವ್ ವೊವ್” ಎನ್ನುವ ನನ್ನನ್ನು ಓಲೈಸುವಂತ ನಯವಾದ ಬೊಗಳು ಬೇರೆ. ಅವನಿಗೆ ಅಂತ ಮಸಾಲೆಯಲ್ಲಿ ಬೆಂದ ಚೂರುಗಳನ್ನು ಖಾರ ಎಲ್ಲಾ ಹೋಗುವಂತೆ ತೊಳೆದು ಹಾಕಬೇಕಿತ್ತು. ಆ ದಿನ ತಿಂದ ಮೇಲೂ ಆತನ ಆಸೆ ಹೋಗುತ್ತಿರಲಿಲ್ಲ.ಮತ್ತೆ ಎರಡು ದಿನ ಏನು ಮಾಡಿದ್ರೂ ಹಾಲು ಅನ್ನ ತಿನ್ನದೆ ಮುಷ್ಕರ ಹೂಡುತ್ತಿದ್ದ.ಏನೋ ಒಂದು ಮೊಟ್ಟೆ ಬೇಯಿಸಿ ಹಾಕಿ ಸಂಭಾಳಿಸಬೇಕಿತ್ತು.

ಹಾಗೇ ಚೋಟು ಜೊತೆ ನಾನು ನನ್ನ ಜೊತೆ ಚೋಟು ಹೊಂದಿಕೊಂಡು,ಆಡಿಕೊಂಡು ದಿನಗಳು ಕಳೆಯುತ್ತಿದ್ದದ್ದೇ ಗೊತ್ತಾಗುತ್ತಿರಲಿಲ್ಲ.ಅವನಂತೂ ನನ್ನ ಬಳಿ ಒಂದು ನೊಣ ಕೂಡಾ ಬರಲು ಬಿಡ್ತಾ ಇರ್ಲಿಲ್ಲ. ನನ್ನಣ್ಣ ತಮ್ಮ ಏನಾದರೂ ನನ್ನನ್ನು ಬೈಯ್ಯುವ ಹಾಗೆ ಮಾಡಿದ್ರೂ ಸಾಕು ಕಚ್ಚಲೇ ಹೋಗ್ತಾ ಇದ್ದ.ಅವರಿಬ್ಬರಿಗೂ ಅವನನ್ನು ಹಾಗೆ ಗೋಳು ಹಾಕಿಕೊಳ್ಳುವುದೇ ಒಂದು ಆಟವಾಗಿ ಬಿಟ್ಟಿತ್ತು. ಅಂತೂ ಮನೆಯವರೆಲ್ಲರ ಮುದ್ದಿನ ಮರಿಯಾಗಿ ಬಿಟ್ಟ ಚೋಟು.

ಅಷ್ಟರಲ್ಲಿ ನನ್ನ ಮದುವೆ ನಿಶ್ಚಯವಾಯಿತು.  ಮದುವೆ ಸಮಯದಲ್ಲಿ ಒಂದು ವಾರ ಅವನನ್ನು ತಮ್ಮನ ಗೆಳೆಯರೊಬ್ಬರ ಮನೆ ಬಿಟ್ಟಿದ್ದೆವು.ಮದುವೆ ಮಾತುಕತೆ ಎಲ್ಲಾ ಬೆಂಗಳೂರಲ್ಲಿ ನಡೆದು, ಮದುವೆ ನಮ್ಮೂರಿನಲ್ಲಿ ಆದ್ದರಿಂದ ,ನಾನು ಮದುವೆ ಮಾಡಿಕೊಂಡು ಭದ್ರಾವತಿ ಮನೆಗೆ  ಬರುವವರೆಗೂ ಚೋಟು ನನ್ನ ಗಂಡನನ್ನು ನೋಡಿರಲೇ ಇಲ್ಲ.ಹಾಗಾಗಿ ನನ್ನ ಮದುವೆ ಬಳಿಕ ನಮ್ಮ ಮನೆಗೆ ನಾನು ನನ್ನ ಗಂಡನೊಟ್ಟಿಗೆ ಬಂದ ಬಳಿಕ ನನ್ನ ತಮ್ಮ ಗೆಳೆಯನ ಮನೆಯಿಂದ ಚೋಟುವನ್ನು ಮರಳಿ ಮನೆಗೆ ಕರೆದುಕೊಂಡು ಬಂದ. ಚೋಟುವಿಗೆ ನನ್ನ ಪಕ್ಕ ನನ್ನ ಗಂಡ ಕುಳಿತಿರುವುದು ನೋಡಿ ಅಚ್ಚರಿಯೋ ಅಚ್ಚರಿ.ಅವನಿಗೇನು ಅನ್ನಿಸಿತೋ ಏನೋ ಅವರನ್ನು ಕಂಡಾಗಲೆಲ್ಲಾ ಗರ್ಜಿಸಿ ಬೊಗಳಲು ಶುರು ಮಾಡಿಬಿಟ್ಟ.ಇವರಿಗೂ ಗಾಬರಿಯೋ ಗಾಬರಿ.”ಇದ್ಯಾಕೆ ನಿನ್ನ ನಾಯಿ ಹೀಗಾಡುತ್ತೆ,!”, ಅಂತ ಕೇಳಿದರೆ ನಾನೇನು ಹೇಳಲಿ!

   ನನ್ನ ಗಂಡ ಕಂಡರೆ ಸಾಕು ಬೊಗಳಿ ಬೊಗಳಿ ಇಡುತ್ತಿದ್ದ.ಅಪ್ಪಿ ತಪ್ಪಿ ಏನಾದರೂ ನನ್ನ ಪಕ್ಕ ಕುಳಿತು ಕೊಂಡು ಬಿಟ್ಟರೆ ಸಾಕು ಕಚ್ಚಕೇ ಹೋಗಿ ಬಿಡೋನು.ಇವರಂತೂ ” ನಿನ್ನ ನಾಯಿ ಕಟ್ಟಾಕೇ,ಇಲ್ಲದಿದ್ದರೆ ನಾನು ವಾಪಸ್ ನಮ್ಮೂರಿಗೆ ಹೋಗಿ ಬಿಡ್ತೀನಿ,” ಅಂತ ನನಗೆ ಧಮ್ಕಿ ಹಾಕಲು ಶುರು ಮಾಡಿದರು. ಅಂತೂ ಹೇಗೋ ಒಂದು ನಾಲ್ಕು ದಿನ ಕಳೆದ ಬಳಿಕ ನಾನು  ನನ್ನ ಗಂಡನ ಜೊತೆ ನನ್ನ ಹೊಸ ಸಂಸಾರ ಆರಂಭಿಸಲು ಹೋಗಲೇ ಬೇಕಾಗಿ ಬಂತು.

ನಮ್ಮಜ್ಜಿ ನನ್ನ ಮದುವೆಗೆ ಇನ್ನಾರು ತಿಂಗಳು ಇರುವಾಗಲೇ ತೀರಿಕೊಂಡಿದ್ದರು.ಹಾಗಾಗಿ ಆಗ ಮನೆಯಲ್ಲಿ ನಮ್ಮಪ್ಪ,ತಮ್ಮ ಮತ್ತು ಚೋಟು ಮಾತ್ರ ಉಳಿದುಕೊಂಡು ಬಿಟ್ಟರು.ನನ್ನ ದುಃಖ ಹೇಳತೀರದು.ಅಡಿಗೆ ಮಾಡಿ,ಮನೆ ನೋಡಿಕೊಳ್ಳುವವರು ಯಾರು? ಚೋಟು ನನ್ನ ಬಿಟ್ಟು ಇರಲಾರ, ಅವನಿಗ್ಯಾರು ದಿಕ್ಕು? ಅಂತೂ ಚೋಟುವನ್ನ ನಮ್ಮ ಜೊತೆ ಕರೆದುಕೊಂಡು ಹೋಗೋಣ ಅಂದ್ರೆ ನನ್ನ ಗಂಡ ಒಪ್ಪಲಿಲ್ಲ.ಅವರಿಗೂ ಅವನಿಗೂ ಆಗಿ ಬರ್ತಾ ಇರಲಿಲ್ಲ. ಅಂತೂ ಮನೆಯ ಭಾರವನ್ನೆಲ್ಲ ತಮ್ಮನ ಮೇಲೆ ಹೇರಿ,ಕಂಬನಿಗರೆಯುತ್ತಲೇ ಗಂಡನ ಮನೆ ಸೇರಿ ಹೊಸ ಬಾಳು ಆರಂಭಿಸಿದ್ದಾಯಿತು.

ಇತ್ತ ಚೋಟು ಒಬ್ಬಂಟಿಯಾಗಿ ಬಿಟ್ಟ.ದಿನವೂ ಬೆಳಿಗ್ಗೆ ಅವನನ್ನು ಟಾಯ್ಲೆಟ್ಗೆ ಎಂದು ಹೊರಗೆ ಕರೆದುಕೊಂಡು ಹೋದರೆ ನನ್ನ ತಮ್ಮನ ಕೈ ಜಗ್ಗಿಕೊಂಡು ನಾನು ಹೋಗುತ್ತಿದ್ದ ನಮ್ಮ ಅಕ್ಕ ಪಕ್ಕದ ಮನೆಗೆಲ್ಲಾ ಹೋಗಿ,ಅವರುಗಳ ಮನೆಯೊಳಗೆ ಒಂದೂ ರೂಂ ಬಿಡದಂತೆ ,ಜೊತೆಗೆ ಹಿತ್ತಲಿಗೂ ನುಗ್ಗಿ ನನ್ನನ್ನು ಹುಡುಕುತ್ತಿದ್ದ ನಂತೆ.ತಮ್ಮ ಫೋನ್ ಮಾಡಿ ನನಗೆ ಅದನ್ನೆಲ್ಲಾ ಹೇಳುವಾಗ ನನಗೆ ಮನಸ್ಸು ಭಾರವಾಗಿ ಹೋಗುತ್ತಿತ್ತು.

ಹಾಗೇ ಒಂದೆರಡು ತಿಂಗಳು ಕಳೆದ ಬಳಿಕ ಅಪ್ಪ ಸ್ವಯಂ ನಿವೃತ್ತಿ ಪಡೆದು ನಮ್ಮೂರಿಗೆ ತಮ್ಮ ಜಮೀನು ನೋಡಿಕೊಂಡು ಅಲ್ಲೇ ನೆಲೆ ನಿಲ್ಲಲು ತಮ್ಮನೊಟ್ಟಿಗೆ ಬಂದು ಸೇರಿದರು.ನನ್ನ ಗಂಡನ ಊರೂ ನಮ್ಮೂರಿಗೆ ಸಮೀಪದಲ್ಲೇ ಇದ್ದರಿಂದ ಅವರು ಬಂದು ಸೇರಿದ ವಾರದೊಳಗೆ ನಾನೂ ಊರಿಗೆ ಹೋದೆ.ನನ್ನನ್ನ ನೋಡಿದ ತಕ್ಷಣ ಚೋಟು ಕುಣಿದದ್ದು ಇಂದಿಗೂ ನನ್ನ ಕಣ್ಣಲ್ಲಿ ಕಟ್ಟಿದಂತಿದೆ.ನನ್ನ ಭುಜದವರೆಗು ಹಾರಿ ಹಾರಿ ನನ್ನ ಜೊತೆ ಜಗಳ ಮಾಡಿದ.ಸಿಟ್ಟಿನ ಬೊಗಳು,ಮುದ್ದಿನ ಬೊಗಳು ಎಲ್ಲಾ ಹೊರ ಬಂದವು.ನನ್ನ ಹಿಂದೆ ಮುಂದೆ ಎಲ್ಲಾ ಸುಳಿದು ಸುಳಿದು,ಕೈ ಕಾಲಿಗೆ ಸಿಕ್ಕಿ ಸಿಕ್ಕಿ ಮುದ್ದುಗರೆದು ಬಿಟ್ಟ .ನನ್ನ ಗಂಡ ಮಾತ್ರ ಅವನಿಂದ ಮಾರು ದೂರವೇ.ನಾನಂತೂ ಅವನನ್ನು ಎತ್ತಿಕೊಂಡವಳು ಎಲ್ಲಾ ಕಡೆಗೂ ಅವನನ್ನು ಹೊತ್ತು ತಿರುಗಿದೆ. ಅಂತೂ ರಾತ್ರಿ ನಮ್ಮ ಮಂಚದ ಕೆಳಗೇ,ಕಾಲು ಬುಡದಲ್ಲೇ ಮಲಗಲು ಬಂದವನನ್ನು ಹೇಗೋ ಪುಸಲಾಯಿಸಿ ಮಾಮೂಲಿನಂತೆ ಅವನ ಜಾಗದಲ್ಲೇ ಹೊರಗೆ ಕಟ್ಟಿ ಎಲ್ಲರೂ ಮಲಗಿಕೊಂಡೆವು.

ಆ ರಾತ್ರಿ ಬೆಳಗಿನ ಜಾವ ನಾನು ಗಾಢ ನಿದ್ದೆಯಲ್ಲಿದ್ದಾಗ, ಎಲ್ಲೋ ಕನಸಿನಲ್ಲಿ ಕರೆದಂತೆ ನನ್ನ ಗಂಡ,” ಸಮತಾ,ಸಮತಾ ಬೇಗ ಬಾರೆ,” ಎಂದು ಕರೆದಂತಾಯಿತು.ನಾನು ಅಂತೂ ಹೊರಳಿ ಮಲಗಿದೆ.ಆದರೆ ಆ ಕರೆ ಮರುಕಳಿಸುತ್ತಾ ರೋಧನೆಯ ರಾಗಕ್ಕೆ ತಿರುಗಿದಂತೆ ಭಾಸವಾದಾಗ ಎದ್ದು ಕುಳಿತೆ.ನೋಡಿದರೆ ಪಕ್ಕದಲ್ಲಿ ಇವರಿಲ್ಲ.ರೂಮಿನ, ಹೊರಗಡೆಯ ದೀಪಗಳೆಲ್ಲಾ ಉರಿಯುತ್ತಿವೆ.ಇವರು ಹಿತ್ತಲ ಕಡೆಯಿಂದ ಕರೆದ ಹಾಗೆ ಕೇಳಿಸುತ್ತಾ ಇದೆ.ತಕ್ಷಣ ಎದ್ದು ಓಡಿ ಹೋಗಿ ನೋಡಿದರೆ ಹಿತ್ತಲಿನಲ್ಲಿ ಕಟ್ಟಿ ಹಾಕಿದ್ದ ಚೋಟು ತನ್ನ ದಂತಪಂಕ್ತಿಯನ್ನೆಲ್ಲಾ ತೋರಿಸುತ್ತಾ ಇವರನ್ನು ಹಿತ್ತಲಿನಲ್ಲಿದ್ದ ಬಾತ್ರೂಮ್ ಗೆ ಹೋಗದಂತೆ ಅಡ್ಡ ಹಾಕಿಕೊಂಡು ಬಿಟ್ಟಿದ್ದಾನೆ.ಇವರು ನನ್ನ ನೋಡಿ ಸಿಟ್ಟಿನಿಂದ,”ಎಂಥಾ ನಿದ್ದೇನೆ ನಿಂದು,ಅರ್ಧ ಗಂಟೆಯಿಂದ ಕರಿತಾ ಇದೀನಿ ಬರ್ಬಾರ್ದ? ಈ ನಾಯಿ ಬೇರೆ ಅಡ್ಡ ಹಾಕ್ಕೊಂಡಿದೇ,ನಾನು ಬಾತ್ರೂಮ್ಗೆ ಹೋಗಬೇಕು. ಹಿಡ್ಕೊ ಅವನ್ನ ” ಅಂತ ಗರ್ಜಿಸಿದರು.ನಾನು ನಗು ತಡೆದುಕೊಂಡು,”ಏ ಚೋಟು ಬಾ ಇಲ್ಲಿ” ಅಂತ ಅವನ ಚೈನ್ ಜಗ್ಗಿ ಹಿಡಿದುಕೊಂಡರೂ ಹಲ್ಲು ಮಸೆಯುತ್ತಾ, ಬೊಗಳಿಕೊಂಡು ಇವರನ್ನು ಕಚ್ಚಲು ಹೋಗುತ್ತಿದ್ದ.ಹೇಗೋ ಇಬ್ಬರನ್ನೂ ಸಂಭಾಳಿಸುತ್ತಾ ಇರುವಾಗ,” ಏನಾಯ್ತು,” ಎಂದು ಕಣ್ಣುಜ್ಜುತ್ತ ಹೊರಗೆ ಬಂದ ನನ್ನ ತಮ್ಮ, ಸೀದಾ ಬಾತ್ರೂಂಗೆ ಹೋಗಿ ಕದ ಹಾಕಿಕೊಂಡ. ನಾನೂ ನನ್ನ ಗಂಡ ಮುಖ ಮುಖ ನೋಡಿಕೊಂಡೆವು.ನನ್ನ ಗಂಡನ ಮುಖ ಉರಿಯುತ್ತಾ ಕೆಂಪಾಗಿ ಹೋಯಿತು. ಅಂತೂ ಹೇಗೋ ನನ್ನ ತಮ್ಮ ಆಚೆ ಬಂದ ಬಳಿಕ ಚೋಟುವನ್ನು ದಾಟಿಕೊಂಡು ಬಾತ್ರೂಂಗೆ ಹೋಗಿ ಬಂದರು.ನಂತರ ಇಡೀ ದಿನ ನನ್ನ ಜೊತೆ ಮಾತಿಲ್ಲ ಕತೆಯಿಲ್ಲ.

ಊರಲ್ಲಿ ನನ್ನ ತಮ್ಮನಿಗೆ ಮನೆಯಲ್ಲಿ ಅಡುಗೆ ಮಾಡಿಕೊಂಡು,ಅಪ್ಪ ಮತ್ತು ಚೋಟುವನ್ನು ನೋಡಿಕೊಂಡು,ಜಮೀನನ್ನು ನಿಭಾಯಿಸಿಕೊಂಡು ಕೆಲಸ ವೋ ಕೆಲಸ.ನನಗಂತೂ ಅವನ ಕಷ್ಟನೋಡಿ ಎದೆಯಲ್ಲಿ ಬೆಂಕಿ ಹಾಕಿದ ಹಾಗಾಗುತ್ತಿತ್ತು.ಚೋಟುವನ್ನು ನಾವೇ ಕರೆದುಕೊಂಡು ಹೋದರೆ ಅವನಿಗೆ ಎಷ್ಟೋ ಸಹಾಯವಾಗುತ್ತೆ  ಎಂದುಕೊಂಡು ನನ್ನ ಗಂಡನ ಕೇಳಿದರೆ ಅವರು,” ನಿನಗೆ ನಾನು ಬೇಕೋ,ಅವನು ಬೇಕೋ,ಯೋಚ್ನೆ ಮಾಡು,” ಎಂದು ಬಿಟ್ಟರು.ಗಂಡನ ಮಾತು ಮೀರಲಾಗದೆ ಭಾರವಾದ ಮನಸ್ಸಿನಿಂದ ಹಿಂದಿರುಗಿದ್ದಾಯಿತು.

ನನ್ನ ತಮ್ಮನಿಗೆ ಕೆಲಸದ ಹೊರೆ ತಾಳಲಾಗದೆ ಚೋಟುವನ್ನು ಯಾರಿಗಾದರೂ ಸಾಕಲು ಕೊಟ್ಟು ಬಿಡೋಣ ಎಂದು ಹುಡುಕಲಾರಂಭಿಸಿದ.ಊರಲ್ಲಿ ಅಕ್ಕ ಪಕ್ಕದವರು,” ಸಂತು ನಾಯಿ ಹುಲಿ ಹುಲಿಯಂಗದೆ ಕಣ್ರೋ,ಒಂದ್ ಕಾಗೆನೂ ಮನೆ ಹತ್ರ ಸೇರ್ಸಕ್ಕಿಲ್ಲ,ಅಂತ ಒಂದ್ ನಾಯಿ ಮನೆಲೋ, ತೋಟ್ದಲ್ಲೊ ಇದ್ರೆ ಸಾಕು ಯಾವ್ ಕಳ್ ನನ್ಮಗನೂ ಹತ್ರ ಬರಕ್ಕಿಲ್ಲ,” ಅನ್ನೋರು.ಆದ್ರೆ “ನೀವೇ ಯಾರಾದ್ರೂ ಸಾಕ್ಕೊಳ್ಳಿ” ಅಂದ್ರೆ ಮಾತ್ರ,” ಅಯ್ಯೋ ನಿಮ್ ನಾಯೇನು ಉಳ್ದಿದ್ದು ಪಳ್ದಿದ್ದ ತಿಂತದ! ಅದುಕ್ಕೆ ಅಂತನೆ ದಿನುಕ್ ಅರ್ಧ ಲೀಟ್ರು ಹಾಲ್ಬೇಕು.ನಮ್ ಕೈಲಾಕ್ಕಿಲ್ಲ” ಅಂತ ಕೈಯಾಡಿಸಿ ಬಿಡೋರು. ಅಂತೂ ನನ್ನ ತಮ್ಮ ಬಿಡದೇ ಹುಡುಕಿದ ಮೇಲೆ ದೂರದ ಚಿಕ್ಕಮಗಳೂರಿನ ಯಾರೋ ಕಾಫೀ ಎಸ್ಟೇಟ್ ಮಾಲೀಕರು, ಇವನಿಗೆ ಯಾರೋ ಗೆಳೆಯರ ಮೂಲಕ ಪರಿಚಯವಾದವರು,ತಮ್ಮ ಮನೆಗೆ ಸಾಕಲು ಕರೆದುಕೊಂಡು ಹೋದರು.ನನ್ನ ತಮ್ಮ ಫೋನ್ ಮಾಡಿ ಹೇಳಿದಾಗ,” ಏನೋ ಒಂದು ಒಳ್ಳೇ ಮನೆ ಸಿಕ್ತಲ್ಲಾ ಬಿಡು ,” ಅಂತ ಸಮಾಧಾನವಾದರೂ ಮತ್ತೆ ಚೋಟು ನೋಡಲು ಸಿಗೊಲ್ಲವಲ್ಲ ಅಂತ ಬೇಸರವೂ ಆಯಿತು. ಅಂತೂ ಕಾಲ ಕಳೆದಂತೆ ಚೋಟುವೂ ನೆನಪಿನಲ್ಲಿ ಮಸುಕಾಗುತ್ತಾ ಹೋದ. ಅವನನ್ನ ಈ ಎರಡು ಅಮ್ಮ ಮಗ ನಾಯಿಗಳು ನೆನಪು ಮಾಡಿದವು.ನನ್ನ ಮದುವೆ ಆಲ್ಬಂನಲ್ಲಿ ನನ್ನ ಜೊತೆ ಅವನು ಗಂಭೀರವಾಗಿ ಕುಳಿತು ತೆಗೆಸಿಕೊಂಡಿರುವ ಒಂದೆರಡು ಫೋಟೋ ಇವೆ.ಅದನ್ನು ನೋಡಿದಾಗಲೆಲ್ಲ ನನ್ನ ಇಬ್ಬರೂ ಮಕ್ಕಳಿಗೆ ಹೊಟ್ಟೆಯುರಿಯೋ ಉರಿ.”  ನಮಗೂ ಒಂದು ನಾಯಿ ಕೊಡಿಸು, ನಾವೂ ಅದರೊಟ್ಟಿಗೆ ಆಟ ಆಡಿಕೊಂಡು ಖುಷಿ ಪಡ್ತಿವಿ,” ಅಂತ ಚಿಕ್ಕವರಿದ್ದಾಗ ತುಂಬಾ ಕಾಡಿಸಿದ್ದರು.ಆದರೆ ನನಗೇಕೋ ಕೊಡಿಸಲು ಮನಸಾಗಲೇ ಇಲ್ಲ.


9 thoughts on “ ನನ್ನ ಮುದ್ದಿನ ಚೋಟು… ಆರ್,ಸಮತಾ ಲಹರಿ

Leave a Reply

Back To Top