ಅಂಕಣ ಸಂಗಾತಿ

ಗಜಲ್ ಲೋಕ

ನೂರ್ ಅಹಮದ್ ಅವರ ಗಜಲ್ ಗಳಲ್ಲಿ

ನೂರ್ ಹುಡುಕುತ್ತ…

ನೂರ್ ಅಹಮದ್ ಅವರ ಗಜಲ್ ಗಳಲ್ಲಿ ನೂರ್ ಹುಡುಕುತ್ತ…

ಗಜಲ್ ಗಂಗೋತ್ರಿಯ ಉಗಮ ಸ್ಥಾನವೆ ನಮ್ಮ ಹೃದಯ. ರಸಿಕರ ತನು-ಮನವನ್ನು ಸಂತೈಸುತ್ತ ಇಡೀ ಲೋಕವನ್ನೇ ವ್ಯಾಪಿಸಿದೆ… ಇಂಥಹ ಗಜಲ್ ಕುರಿತು ಮಾತನಾಡುತಿದ್ದರೆ ಚಾಂದನಿ ರಾತ್ರಿಯ ಫೀಲ್ ಆಗುತ್ತೆ…!! ಆ ಅನುಭಾವದ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಖುಷಿಯೆನಿಸುತ್ತಿದೆ. ಕರುನಾಡಿನ ಅಸಂಖ್ಯಾತ ಸುಖನವರ್ ರಲ್ಲಿ ಒಬ್ಬರ ಪರಿಚಯದೊಂದಿಗೆ ನಿಮ್ಮ ಮುಂದೆ ಬರುತ್ತಿದ್ದೇನೆ. ಪ್ರೀತಿಯಿಂದ ನೀವೆಲ್ಲರೂ ಗಜಲ್ ಚಾಂದನಿಯನ್ನು ಸ್ವಾಗತಿಸುವಿರೆಂಬ ಭಾವನೆಯೊಂದಿಗೆ ನನ್ನ ಕಲಮ್ ಗೆ ಚಾಲ್ತಿ ನೀಡುವೆ…!!

ಉದ್ಯಾನ ಕೇವಲ ಹೂವುಗಳಿಂದಲ್ಲ, ಮುಳ್ಳುಗಳಿಂದಲೂ ಶೋಭಿಸುತ್ತದೆ

ಬದುಕಲು ಈ ಸಂಸಾರದಲ್ಲಿ ದುಃಖವೂ ಬೇಕಾಗುತ್ತದೆ”

 –ಸಭಾ ಅಫಘಾನಿ

           ಈ ಸಂಸಾರ ಅಸಂಖ್ಯಾತ ಜೀವಸಂಕುಲಗಳಿಂದ ಮುಪ್ಪರಿಗೊಂಡಿದೆ. ಮನುಷ್ಯನ ಮನಸ್ಸು ಮಣ್ಣಿನಷ್ಟೇ ಗೂಢ ಶೀಲತೆಯನ್ನೂ, ಆರೈಕೆಯ ಹೊಣೆಗಾರಿಕೆಯನ್ನೂ ಮತ್ತು ಕ್ರಿಯಾತನ್ಮಯಗುಣವನ್ನು ಹೊಂದಿದೆ. ಇಂಥಹ ಮನುಷ್ಯನ ಭಾವ-ಬೌದ್ಧಿಕತೆಯ ಸಂಗಮದಿಂದ ಹೆಜ್ಜೆ ಹೆಜ್ಜೆಗೂ ಪ್ರಕೃತಿಯ ನಿಗೂಢತೆಗಳು ಅನಾವರಣಗೊಳ್ಳುತ್ತಿವೆ. ಅವನ ಸಂಶೋಧನಾತ್ಮಕ ಮನೋಲಹರಿ ಜಾಗೃತಗೊಂಡಷ್ಟು ಹೊಸ ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತವೆ. ಅನ್ವೇಷಣೆಯ ತೂಗುಮಂಚವನ್ನು ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಬಹುದು. ಶೋಧನೆಯ ಫಲಿತಾಂಶಗಳಲ್ಲಿ ಹೊಸ ಆವಿಷ್ಕಾರದಿಂದ ಪಡೆದ ರೂಪ ಹಾಗೂ ಇರುವಿಕೆಯ ತಿಕ್ಕಾಟದಲ್ಲಿ ರೂಪುಗೊಂಡ ಕ್ರಿಯಾತ್ಮಕ ಮುಖಗಳು ಮುಖ್ಯವಾಗುತ್ತವೆ. ಪಾಲೀನ್ ಯಂಗ್ ರವರ “Though today is different from yesterday, it was shaped by yesterday. Today and yesterday will probably influence tomorrow” ಎಂಬ ಹೇಳಿಕೆ ಪರಿವರ್ತನೆಯ ನೆಲೆಯನ್ನು ಸಾರುತ್ತದೆ. ಈ ದಿಸೆಯಲ್ಲಿ ಗಮನಿಸಿದಾಗ ಜಾಗತಿಕ ಸಾಹಿತ್ಯ ಪರಂಪರೆಯು ಪ್ರತಿ ಪ್ರಾದೇಶಿಕ, ರಾಜ್ಯ ಮತ್ತು ರಾಷ್ಟ್ರೀಯ ಸಾರಸ್ವತ ಲೋಕಕ್ಕೆ ಋಣಿಯಾಗಿದೆ! ಇಲ್ಲಿ ಅಕ್ಷರಲೋಕವೆಂದರೆ ಬೆಚ್ಚಗಿನ ಭಾವಗಳ ಶಿಥಿಲಿಕರಣವಲ್ಲ, ಹೆಪ್ಪುಗಟ್ಟಿದ ಮನಸ್ಸಿನ ಹರಿವೂ ಅಲ್ಲ; ಸದಾ ನವನವೀನ ಅಸ್ಮಿತೆಯ ಹುಡುಕಾಟವಾಗಿದೆ. ಭಾಷೆಯು ಮನುಷ್ಯನ ಶೋಧವಾಗಿರುವಂತೆ ಕಾವ್ಯವೂ ಒಂದು ಮಹಾಶೋಧವೇ ಆಗಿದೆ. ಆ ಶೋಧದ ಫಲಶೃತಿಯೆಂಬಂತೆ ಪ್ರತಿ ಭಾಷೆಯಲ್ಲೂ ಕಾವ್ಯ ಪ್ರಕಾರವನ್ನು ಗುರುತಿಸಲು ಸಾಧ್ಯವಾಗಿದೆ. ಭಾವ ಒಂದೇಯಾಗಿದ್ದರೂ ಭಾಷೆಯ ನೆಲೆಯಲ್ಲಿ ಕಾವ್ಯದ ಛಂದಸ್ಸು ವೈವಿಧ್ಯಮಯವಾಗಿದೆ. ಈ ನಿಟ್ಟಿನಲ್ಲಿ ಗಮನ ಹರಿಸಿದಾಗ ಉರ್ದು ಕಾವ್ಯದ ಅನಭಿಷಿಕ್ತ ರಾಣಿ, ವಿಶ್ವವ್ಯಾಪಿ ತನ್ನ ಚಾಹತ್ ಅನ್ನು ಪಸರಿಸುವ ‘ಗಜಲ್’ ಕಾವ್ಯ ರೂಪ ನಮ್ಮ ಕಣ್ಣ ಮುಂದೆ ಬರುತ್ತದೆ. ಹಲವು ಸಾಹಿತ್ಯ ಅಭ್ಯಾಸಿಗಳ ಹುಡುಕಾಟ, ಅನ್ವೇಷಣೆಯ ಫಲವಾಗಿ ‘ಗಜಲ್’ ತನ್ನ ಮಹಲ್ ಅನ್ನು ಸಹೃದಯ ಓದುಗರ ಹೃದಯದಲ್ಲಿ ನಿರ್ಮಿಸಿದೆ. ಅಂತಹ ಹಲವಾರು ಶೋಧಮತಿ ಗಜಲ್ ಗೋ ಪಡೆ ಕನ್ನಡದಲ್ಲಿದೆ. ಅವರುಗಳಲ್ಲಿ ಶ್ರೀ ನೂರ್ ಅಹಮದ್ ನಾಗನೂರ ಅವರೂ ಒಬ್ಬರು.

      ನೂರ್ ಅಹ್ಮದ್ ನಾಗನೂರ ಅವರು ಹಸನಸಾಬ ಮತ್ತು ಬಸೀರಾಬಿ ದಂಪತಿಗಳ ಕಿರಿಯ ಮಗನಾಗಿ ಹಾವೇರಿ ಜಿಲ್ಲೆಯ ಬ್ಯಾಡಗಿ ನಗರದಲ್ಲಿ ೧೯೮೫ ರ ಮೇ ೨೪ರಂದು ಜನಿಸಿದ್ದಾರೆ. ತಮ್ಮ ಹುಟ್ಟುರಾದ ಬ್ಯಾಡಗಿಯಲ್ಲಿ ಪ್ರಾಥಮಿಕ ಹಂತದಿಂದ ಪದವಿವರೆಗೆ ವಿದ್ಯಾಭ್ಯಾಸ ಮುಗಿಸಿ, ದೂರಶಿಕ್ಷಣದ ಮೂಲಕ ಎಂ.ಎ ಆಂಗ್ಲ ಸ್ನಾತಕೋತ್ತರ ಪದವಿಯ ನಂತರ ಕೋಲಾರದ ಮುಳಬಾಗಿಲಲ್ಲಿ ಬಿ.ಎಡ್. ಪೂರೈಸಿರುವ ಇವರು ವೃತ್ತಿಯಿಂದ ಶಿಕ್ಷಕರಾಗಿದ್ದು ಪ್ರಸ್ತುತ ಗದುಗಿನ ಶಾಸ್ತ್ರೀಜಿ ಪ್ರೌಢಶಾಲೆಯಲ್ಲಿ ಆಂಗ್ಲ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಪ್ರವೃತ್ತಿಯಿಂದ ಸಾಹಿತ್ಯದ ಆರಾಧಕರಾಗಿದ್ದಾರೆ. ಗಜಲ್, ಶಾಯರಿ, ರುಬಾಯಿ, ಕವಿತೆ, ಕಥೆ, ಚುಟುಕು, ಹನಿಗವನ, ಅನುವಾದದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ಶ್ರೀಯುತರು ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಗಳೊಂದಿಗೆ ಮಾತೃಭಾಷೆ ಉರ್ದು, ಪರ್ಷಿಯನ್ ಭಾಷೆಗಳಲ್ಲೂ ಹಿಡಿತ ಸಾಧಿಸಿ ‘ನೂರ್-ಏ-ತಬಸ್ಸುಮ್’, ‘ಕಣ್ಣೆಂಜಲ ಕನ್ನಡಿ’, ಹಾಗೂ ‘ಗಾಲಿಬ್ ನಿನಗೊಂದು ಸಲಾಂ’, (ಸಂಪಾದಿತ) ಎನ್ನುವ ಗಜಲ್ ಸಂಕಲನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇದರೊಂದಿಗೆ ‘ಅಕಿ ನೆನಪಿನ್ಯಾಗ’, ಎಂಬ ಶಾಯರಿ ಸಂಕಲನವು ಮುದ್ರಣದಲ್ಲಿದೆ. ಇವರ ಬಹಳಷ್ಟು ಗಜಲ್ ಗಳು, ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿರುವ ಇವರಿಗೆ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ.

     ಗಜಲ್ ಚಾಂದನಿಯನ್ನು ಒಲಿಸಿಕೊಳ್ಳುವುದು ಒಂದು ದೀರ್ಘ ಕ್ರಿಯೆ, ಒಂದು ತಪಸ್ಸು. ಗಜಲ್ ಎಂಬುದೊಂದು ಉರ್ದು ಅದಬ್ ನ ಕೋಹಿನೂರ್. ಇದೊಂದು ಬೆಳಕಿನ ಮಲೆ! ಇದು ಒಂದು ವಿಶಿಷ್ಟ ಹಾಗೂ ಛಂದೋಬದ್ಧ ಕಾವ್ಯ ಪ್ರಕಾರ. ಗಜಲ್ ಗೋಯಿಯಲ್ಲಿ ಭಾಷೆಯನ್ನು ಒಲಿಸಿಕೊಳ್ಳುವುದು, ಒಲಿಸಿಕೊಂಡ ಭಾಷೆಯಲ್ಲಿ ಬಲಿತ ಭಾವನೆಗಳಿಗೆ ರೂಪ ನೀಡುವುದು ದೊಡ್ಡ ಕೆಲಸ. ಭಾಷೆ ಒಲಿಯದೇ ಭಾವ ಒಲಿಯಲಾರದು. ಕಾರಣ, ಛಂದಸ್ಸು ಗಜಲ್ ನ ಅನಿವಾರ್ಯ ಭಾಗವಾಗಿರುವುದರಿಂದ ಇಲ್ಲಿ ಮೃದು, ಮೆದು, ಲಯಬದ್ಧ, ತಾಳಬದ್ಧ ಭಾಷೆಯ ಅಗತ್ಯವಿದೆ. ಯೋಗ್ಯ ರೂಪಕ, ಪ್ರತಿಮೆ, ಸಂಕೇತಗಳೆ ಗಜಲ್ ನ ಜೀವಾಳ. ಕಡಿಮೆ ಶಬ್ದಗಳಲ್ಲಿ ಹೆಚ್ಚಿನದನ್ನು ಹೇಳುವ ಸವಾಲ್ ಇದರಿಂದ ಮಕಮ್ಮಲ್ ಆಗುತ್ತದೆ. ನೂರ್ ಅಹಮದ್ ನಾಗನೂರ ಅವರ ಗಜಲ್ ಗಳು ಬದುಕಿನ ಸತ್ಯಗಳ ಕುರಿತು ಕಾವ್ಯಾತ್ಮಕವಾಗಿ ಚರ್ಚಿಸುತ್ತವೆ. ಇವರು ಬಳಸುವ ತಖಲ್ಲುಸ್ ನಾಮ ‘ನೂರ್’ ಗಜಲ್ ಗಳಿಗೆ, ವಿಶೇಷವಾಗಿ ಮಕ್ತಾಗಳಿಗೆ ಬಹು ಆಯಾಮಗಳನ್ನು, ಹೊಸ ಸಾಧ್ಯತೆಗಳನ್ನು ಒದಗಿಸುತ್ತವೆ. ನಾಡಾಭಿಮಾನ, ದೇಶಪ್ರೇಮ, ಕನ್ನಡಾಭಿಮಾನ, ಪ್ರೀತಿ, ಪ್ರೇಮ, ಪ್ರಣಯ, ವಿರಹ, ಅನುರಾಗದ ಆತ್ಮಾನುಸಂಧಾನ, ಸಾಮಾಜಿಕ ತುಡಿತ, ವಿಶ್ವಮಾನವತೆಯ ದೂರದೃಷ್ಟಿ, ಅಲೌಕಿಕತೆ, ಜೀವನದ ಸಂಘರ್ಷ, ಪ್ರಸ್ತುತ ದಿನಮಾನಗಳ ಚಿತ್ರಣ… ಮುಂತಾದವುಗಳು ಶ್ರೀಯುತರ ಗಜಲ್ ಗಳಲ್ಲಿ ಅಪ್ಯಾಯಮಾನವಾಗಿ ಹೆಪ್ಪುಗಟ್ಟಿವೆ. ಗಜಲ್ ನ ಕೆಲ ಅಶಅರ್ ಮೂಲಕ ಇವರ ವಿಚಾರಧಾರೆಯನ್ನು ಅರಿಯಲು ಪ್ರಯತ್ನಿಸೋಣ.

         ಜೀವ ಎಂದರೆ ಎಲ್ಲರಿಗೂ ಅನುಪಮವೇ.‌ ತಮ್ಮದೆಯಾದ ಒಂದು ಕಾನ್ಸೆಪ್ಟ್ ಹೊಂದಿರುತ್ತಾರೆ. ಹೆಚ್ಚಿನ ಜನ ಯಾವುದನ್ನೂ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಅಂತರದಲ್ಲಿ ಕಳೆದುಕೊಂಡ ವಸ್ತು, ಗೆಲುವು, ಸಂಬಂಧಗಳನ್ನು ಪಡೆಯಲು ಪುನಃ ಪುನಃ ಪ್ರಯತ್ನಿಸುತ್ತಿರುತ್ತಾರೆ. ಅದು ದೊರಕಿದಾಗ ಆಗುವ ಸಂತೋಷ, ಸಂಭ್ರಮದ ಮೇಲೆ ಗಜಲ್ ಗೋ ಅವರು ಬೆಳಕು ಚೆಲ್ಲಿದ್ದಾರೆ. ಇದರೊಂದಿಗೆ ಅಳು-ನಗುವಿನ ಏಣಿಯಾಟದಲ್ಲಿ ನಗುವಿನ ನಂತರ ಬರುವ ಅಳು ತುಂಬಾ ಕ್ರೂರವಾಗಿದ್ದರೆ, ಕಂಬನಿಯ ನಂತರದ ನಗು ಮೈ-ಮನವನ್ನು ಉಲ್ಲಾಸದಲ್ಲಿಡುತ್ತದೆ ಎಂಬ ಸೂಕ್ತಿಯ ಛಾಯೆ ಈ ಕೆಳಗಿನ ಷೇರ್ ನ ಮಿಸ್ರಾ-ಎ-ಸಾನಿಯಲ್ಲಿ ಗುರುತಿಸಬಹುದು. ಈ ಷೇರ್ ಬದುಕಿನ ದಾಸ್ತಾನನ್ನು ತೆರೆದಿಡುತ್ತ, ಆನಂದದ ಬುಗ್ಗೆ ಇರುವ ತಾಣವನ್ನು ನಮ್ಮಲ್ಲಿಯೆ ಇದೆ ಎಂಬುದನ್ನು ದೃಢಪಡಿಸುತ್ತದೆ.

ಕಳೆದುಕೊಂಡಿದ್ದನ್ನು ಪಡೆಯುವುದರಲ್ಲಿ ಸುಖವೇ ಬೇರೆಯಾಗಿದೆ

ಅತ್ತು ಹಗುರವಾಗಿ ನಗು ಪಡೆಯುವುದರಲ್ಲಿ ಮಜವೇ ಬೇರೆಯಾಗಿದೆ”

      ಹಗಲು-ಇರುಳು ಸೃಷ್ಟಿಯ ಅವಳಿ-ಜವಳಿ ಮಕ್ಕಳು.‌ ಒಂದನ್ನು ಹೊರತುಪಡಿಸಿ ಮತ್ತೊಂದು ಇಲ್ಲ. ಪ್ರಕೃತಿಯಲ್ಲಿ ಅವುಗಳಿಗೊಂದು ಕ್ರಮಬದ್ಧವಾದ ಟೈಮ್ ಇದೆ. ಯಾವಾಗ ಬೇಕು ಆವಾಗ ಬೆಳಕಾಗುವುದಿಲ್ಲ, ಕತ್ತಲೂ ಆಗುವುದಿಲ್ಲ. ಆದರೆ… ಆದರೆ ಪ್ರೇಮಿಗಳ ಪ್ರೇಮಲೋಕವು ಇದಕ್ಕಿಂತ ಭಿನ್ನವಾಗಿರುತ್ತದೆ!! ಪ್ರೇಮಿಗಳು ಜೊತೆ ಜೊತೆಗೆ ಹೆಜ್ಜೆ ಹಾಕುತಿದ್ದರೆ ಅವರ ಪ್ರೀತಿಯೆ ನೇಸರನ ರೂಪವನ್ನು ಪಡೆಯುತ್ತದೆ. ಪ್ರೀತಿಸುವ ಜೀವಗಳು ರುಕ್ಸದ್ ಆದರೆ ಅವರಿಗೆ ಇಡೀ ಭೂಮಂಡಲವೆ ಕತ್ತಲೆಯ ಕೂಪವಾಗಿ ಪರಿಣಮಿಸುತ್ತದೆ. ಈ ವಿಚಾರವನ್ನು ಸುಖನವರ್ ನೂರ್ ಅಹಮದ್ ನಾಗನೂರ ಅವರು ತುಂಬಾ ಸರಳವಾಗಿ, ಸುಲಭವಾಗಿ ಎಲ್ಲರಿಗೂ ಮನದಟ್ಟಾಗುವಂತೆ ನಿರೂಪಣೆ ಮಾಡಿದ್ದಾರೆ. ಹೂವು ಅರಳುವುದು-ಬಾಡುವುದು ಎರಡೂ ಪ್ರೀತಿಯ ಉಪಸ್ಥಿತಿ-ಅನುಪಸ್ಥಿತಿಯಿಂದಲೆ ಎಂಬುದನ್ನು ಸಾಕ್ಷಿಕರಿಸಿದ್ದಾರೆ.

ಹಗಲಿನಲ್ಲಿ ಸಂಜೆಯಾಗಿದೆ ನೀನಿಲ್ಲದ ಹೊತ್ತಿನಲ್ಲಿ

ಅರಳಿದ ಮೊಗ್ಗು ಬಾಡಿಹೋಗಿದೆ ನೀನಿಲ್ಲದ ಹೊತ್ತಿನಲ್ಲಿ”

      ವಿದೇಶಿ ಕಾವ್ಯ ರಖಪವಾದ ‘ಗಜಲ್’ ಇಂದು ಭಾರತೀಯ ನೆಲದಲ್ಲಿ ಬೇರು ಬಿಟ್ಟು ವಿಶಾಲವಾಗಿ ಹಬ್ಬಿದೆ. ಹೆಚ್ಚು ಕಡಿಮೆ ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿಯೂ ಗಜಲ್ ನೆಲೆಗೊಳ್ಳುತ್ತಿದೆ. ಇದು ಭಾರತೀಯತೆಯನ್ನು ಮೈಗೂಡಿಸಿಕೊಂಡಂತೆ ಕನ್ನಡತನವನ್ನು ಮೈಗೂಡಿಸಿಕೊಳ್ಳುತ್ತಿದೆ. ಇಲ್ಲಿ ಸಂಸ್ಕೃತಿಯ ವಾಹಕರಾದ ಗಜಲ್ ಗೋ ಅವರ ಪಾತ್ರ ಅನನ್ಯ ಮತ್ತು ಅನುಪಮ. ಕನ್ನಡದಲ್ಲದ, ಕನ್ನಡಿಗರ ಹೃದಯವನ್ನು ಗೆದ್ದ ಈ ಹೃದಯ ಹಿಂಡುವ ಸಾಹಿತ್ಯ ನೋವುಂಡ ಮನಸ್ಸುಗಳಿಗೆ ಸಾಂತ್ವನ ನೀಡುವ ಸಂಜೀವಿನಿ ಗಜಲ್ ಗೋ ಶ್ರೀ ನೂರ್ ಅಹಮದ್ ನಾಗನೂರ ಅವರ ಕಲಮ್ ನಿಂದ ಇನ್ನೂ ಹೆಚ್ಚು ಹೆಚ್ಚು ರೂಪುಗೊಳ್ಳಲಿ ಎಂದು ಶುಭ ಹಾರೈಸುತ್ತೇನೆ.

ಸತ್ಯವನ್ನು ಅರ್ಥಮಾಡಿಕೊಳ್ಳಲು ರಾಜಕೀಯ ನಮಗೆ ಅವಕಾಶವೇ ನೀಡುವುದಿಲ್ಲ

ಒಮ್ಮೆ ಗುರುತು ಸಿಗುವುದಿಲ್ಲ ಮತ್ತೊಮ್ಮೆ ಕನ್ನಡಿ ಸಿಗುವುದಿಲ್ಲ”

ಅನಾಮಿಕ

ಗಜಲ್ ಗುಲ್ಜಾರ್ ನ ಮೇಹಫಿಲ್ ನಲ್ಲಿ ಮಲ್ಲಿಗೆ ದಣಿವೆಂಬುದೆ ಇಲ್ಲ. ಅಶಅರ್ ನ ದಳಗಳ ಸ್ವಾದ ಜಗತ್ತನ್ನು ತಣಿಸುತ್ತಿದೆ.‌ ಆದರೆ ವಕ್ತ್ ಮಾತ್ರ ಕಾಲಕಾಲಕ್ಕೆ ಅಲ್ಪವಿರಾಮ ಹಾಕುತ್ತಲೆ ಇರುತ್ತದೆ ಅಲ್ಲವೇ… ಸೋ… ಗಡಿಯಾರದ ಮುಳ್ಳುಗಳನ್ನು ಗೌರವಿಸುತ್ತ ಇಲ್ಲಿಂದ ನಿರ್ಗಮಿಸುತ್ತಿರುವೆ. ಮತ್ತೆ ಮುಂದಿನ ಗುರುವಾರ ತಮ್ಮ ಭೇಟಿಗಾಗಿ ಸುಖನವರ್ ಒಬ್ಬರ ದಾಸ್ತಾನ್ ನೊಂದಿಗೆ ಬರುತ್ತೇನೆ. ಅಲ್ಲಿಯವರೆಗೆ ಅಲ್ವಿದಾ ದೋಸ್ತೋ..


ರತ್ನರಾಯಮಲ್ಲ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top