ಕಾವ್ಯಯಾನ
ಕತ್ತಲೆಯಿಂದ ಬೆಳಕಿನೆಡೆ
ರಾಘವೇಂದ್ರ ಮಂಗಳೂರು
ಮ್ಯೂಸಿಕಲ್ ನೈಟ್ ಎಲ್ಲಿದೆಯೋ ಎಷ್ಟು ದೂರದಲ್ಲಿದೆಯೋ ಮತ್ತು ಯಾವಾಗ ಮುಗಿಯುತ್ತೋ ಗೊತ್ತಿಲ್ಲ… ಪ್ರೋಗ್ರಾಮ್ ಮುಗಿದ ಮೇಲೆ ಗಿರೀಶ್ ಮನೆಗೆ ಬರುತ್ತಾನೋ ಅಥವಾ ಸ್ನೇಹಿತರೊಂದಿಗೆ ಸಿನಿಮಾಕ್ಕೆ ಹೋಗುತ್ತಾನೋ ಒಂದೂ ಗೊತ್ತಾಗುತ್ತಿಲ್ಲ….ಮನೆಗೆ ಬರೋ ಸ್ನೇಹಿತರು ಮೇಲ್ನೋಟಕ್ಕೆ ಎಲ್ಲರೂ ಒಳ್ಳೆಯವರ ಥರಾನೇ ಕಾಣ್ತಾರೆ…ಆದರೆ ಕಣ್ಣಿಗೆ ಕಾಣದ್ದು ನಂಬೋದಾದರೂ ಹೇಗೆ? ಕಾಲೇಜಿನಲ್ಲಿ ಅದೆಂತಹ ಹುಡುಗ – ಹುಡುಗಿಯರ ಜೊತೆ ಗೆಳೆತನ ಮಾಡುತ್ತಿದ್ದಾನೋ ಏನೋ? ಈಗ ಇಷ್ಟು ಹೊತ್ತಾದರೂ ಮನೆಗೆ ಬಂದಿಲ್ಲ… ಎಲ್ಲಿಗೆ ಹೋಗಿದ್ದಾನೋ ಒಂದೂ ಗೊತ್ತಾಗ್ತಿಲ್ಲ.. ಅಲ್ಲದೇ ಒಂದು ಫೋನ್ ಸಹಾ ಮಾಡಿಲ್ಲ…..
“ಮಕ್ಕಳ ಮೇಲೆ ಭರವಸೆ ಇಡಬೇಕು… ಆದರೆ ಸದಾ ನೀನು ಅವನನ್ನು ಅನುಮಾನದ ದೃಷ್ಟಿಯಿಂದ ನೋಡಿದರೆ… ಅದನ್ನು ಅನುಮಾನದ ಬದಲು ಅವಮಾನವಾಗಿ ಭಾವಿಸ್ತಾನೆ. ಅವನಿಗೆ ಸ್ವಲ್ಪ ಸ್ವಾತಂತ್ರ್ಯ ಕೊಡು…” ಎಂದು ಮಗನ ಯಾವತ್ತೂ ಬೆಂಬಲಕ್ಕೆ ನಿಲ್ಲುತ್ತಾನೆ ತಂದೆ ಹರೀಶ್.
ಆದರೆ ಮಗನಿಗೆ ಎಷ್ಟು ಸ್ವಾತಂತ್ರ್ಯ ಕೊಡಬೇಕು ಎಂದು ನನಗೆ ಗೊತ್ತಿಲ್ವೆ?
ನಾನೇನು ಅವಿದ್ಯಾವಂತಳೇ….ಸರ್ಕಾರಿ ಶಾಲೆಯಲ್ಲಿ ಸಹಾಯಕ ಶಿಕ್ಷಕಿ ಆಗಿ ಕೆಲಸ ಮಾಡುತ್ತಿಲ್ಲವೇ? ಅಲ್ಲದೇ ಈ ಟೀನೆಜ್ ವಯಸಿನಲ್ಲಿ ಯಾವುದಾದರು ದುಶ್ಚಟಕ್ಕೆ ಜೋತು ಬಿದ್ದರೆ ಗತಿ ಎನು?…ತಂದೆಗೆ ಇವ್ಯಾವು ಬೇಗ ಕಂಡು ಬರುವುದಿಲ್ಲ… ಆದರೆ ತಾಯಿಯಾದ ನನಗೆ…….
ಸೆಲ್ ಫೋನ್ ನಿಂದ ಬೀಪ್ ಎಂದು ಬಂದ ಶಬ್ದ ಕೇಳಿ ಟೈಂ ನೋಡಿದೆ. ರಾತ್ರಿ ಎರಡು ಘಂಟೆ ದಾಟಿತ್ತು….
ಗಿರೀಶ್ ಇನ್ನೂ ಬಂದಿಲ್ಲ. ತಡ ಆಗುತ್ತೆ ಅಂತ ಒಂದು ಮಾತಾದರು ಹೇಳಬಾರದೆ? ಅವನು ಬರೋವರಿಗೂ ನಾನು ನಿದ್ದೆ ಮಾಡಲ್ಲ ಎಂದು ಅವನಿಗೆ ಗೊತ್ತಿಲ್ವೆನು? ಚಿಕ್ಕವನಿದ್ದಾಗ ಸದಾ ನನ್ನ ಸುತ್ತ ತಿರುಗುತ್ತಿದ್ದ ಗಿರೀಶ್ ಸ್ವಲ್ಪ ದೊಡ್ಡವನಾದ ಕೂಡಲೇ ಅವನಲ್ಲಿ ಏನು ಈ ಬದಲಾವಣೆ… ಅರ್ಥವಾಗ್ತಿಲ್ಲ.
ಹೀಗೆಂದು ಮನಸಿನಲ್ಲಿ ನೂರೆಂಟು ಆಲೋಚನೆಗಳು….ನಿದ್ದೆ ಅಂತೂ ದೂರ ದೂರ….
10ನೇ ಕ್ಲಾಸ್ ನಲ್ಲಿ ಇದ್ದಾಗಲೇ ‘ಯಾಪಲ್’ ಫೋನ್ ಬೇಕೆಂದು ಹಠ ಮಾಡಿ ಕೊಡಿಸಿಕೊಂಡ. ಪಿ ಯು ಸಿ ಬರ್ತಿದ್ದ ಹಾಗೇ ‘ರಾಯಲ್ ಏನ್ ಫೀಲ್ಡ್’ ಬೇಕೆಂದು ರೊಳ್ಳೆ ಶುರುವಿಟ್ಟುಕೊಂಡ. ಬೈಕ್ ಡ್ರೈವಿಂಗ್ ಎಂದರೆ ಭಯಬೀಳುವ ಹರೀಶ್ ಮಗನ ಕೋರಿಕೆಗೆ ಬ್ರೇಕ್ ಹಾಕುವದಕ್ಕೆ ಬಹಳ ಪ್ರಯತ್ನ ಪಟ್ಟ. ಆದರೆ ಕೊನೆಗೂ ಸೋತು ಅಸ್ತು ಎಂದ. ಆದರೆ ಮತ್ತೊಂದು ವರ್ಷ ಕಳೆಯುವದರಲ್ಲಿ ಈ ಬಾರಿ ಕಾರ್ ಗೆ ಟೆಂಡರ್ ಹಾಕಿದ ಗಿರೀಶ್. ಈಗ ನಮ್ಮ ಕುಟುಂಬಕ್ಕೆ ಕಾರ್ ಬೇಕು… ನನಗಲ್ಲ ಎಂದು ಗಿರೀಶ್ ಹೊಸ ವರಸೆಯ ಕುಂಟು ನೆಪ ಶುರು ಮಾಡಿದ …” ಕಾರ್ ಖರೀದಿ ಮಾಡೋ ಸಾಮರ್ಥ್ಯ ಸದ್ಯ ಇಲ್ಲ, ಮುಂದೆ ನೋಡೋಣ “ಎಂದು ದಾಟಿಸಲೆತ್ನಿಸಿದ ಹರೀಶ್. ಆದರೆ ಗಿರೀಶ್ ಜಗ್ಗಲಿಲ್ಲ. ಹಠ ಬಿಡಲಿಲ್ಲ. ಕೊನೆಗೆ ಮಗ ಏನಾದರೂ ಅನಾಹುತ ಮಾಡಿಕೊಂಡರೆ ಕಷ್ಟ ಎಂದು ಹೆದರಿ ಹರೀಶ್ ರಾಜಿಗೆ ಬಂದು ಕಾರ್ ಕೊಡಿಸಿದ.
ಹದಿನೈದು ಇಪ್ಪತ್ತು ದಿನಗಳಲ್ಲಿ ಕಾರ್ ಚೆನ್ನಾಗಿ ಡ್ರೈವ್ ಮಾಡಲು ಕಲಿತ ಗಿರೀಶ್. ಡ್ರೈವರ್ ಸೀಟಿನಲ್ಲಿ ಕುಳಿತ ಗಿರೀಶ್ ನನ್ನು ನೋಡುವುದೇ ಒಂದು ಸಂಭ್ರಮ ತಾಯಿಯಾದ ನನಗೆ. ಆದರೆ ಕಾರನ್ನು ತುಂಬಾ ಸ್ಪೀಡ್ ನಲ್ಲಿ ಮಗ ಓಡಿಸಿದರೆ ಹೇಗೆ?
ನಾಳೆ ಏನಾದರೂ ಅನಾಹುತ ಆದರೆ ಗತಿ ಎನು?… ಹೀಗೆ ಏನೇನೋ ಆಲೋಚನೆಗಳು…
ನೀರವ ರಾತ್ರಿಯಲ್ಲಿ ಹೊರಗೆ ನಾಯಿಗಳು ಬೊಗಳುವ ಶಬ್ದ… ಆಲೋಚನೆಗಳ ಸರಮಾಲೆಯಿಂದ ಹೊರ ಬರಲು ಟಿ ವಿ ಆನ್ ಮಾಡಿದೆ.
ಆಗ ಟಿ ವಿ ಯಲ್ಲಿ ಬರುತಿದ್ದ ಬ್ರೇಕಿಂಗ್ ನ್ಯೂಸ್ ನೋಡಿ ಮೈಯೆಲ್ಲಾ ಬೆವರಿತು…
ಹೆಚ್ಚು ಕಡಿಮೆ ಅದೇ ಸುದ್ದಿ ಎಲ್ಲಾ ನ್ಯೂಸ್ ಚಾನೆಲ್ ಗಳಲ್ಲಿ . ಆಕ್ಸಿಡೆಂಟ್ ನಲ್ಲಿ ಗಾಯಗೊಂಡ ಆ ಸೆಲೆಬ್ರಿಟಿ ಮಗ ಗಿರೀಶ್ ಗಿಂತ ಒಂದು ವರ್ಷ ಸೀನಿಯರ್ ಕಾಲೇಜಿನಲ್ಲಿ. ಆದರೆ ಆಕ್ಸಿಡೆಂಟ್ ಅದ ಕಾರಿನಲ್ಲಿ ನನ್ನ ಮಗ ಸಹ ಇದ್ದಾನೆಯೇ? ಗೊತ್ತಾಗ್ತಿಲ್ಲ…..
ಅಷ್ಟರಲ್ಲಿ ಫೋನ್ ಶಬ್ದ ಮಾಡಿತು…
ಗಿರೀಶ್ ಮಾಡಿರಬಹುದೇನೋ ಎನ್ನುತ್ತಾ ಹೆದರುತ್ತಲೇ ರಿಸೀವರ್ ಎತ್ತಿದೆ. ಫೋನ್ ಪೊಲೀಸ್ ಸ್ಟೇಷನ್ ನಿಂದ ಎಂದ ಕೂಡಲೇ ಕಾಲುಗಳು ನಡುಗಲು ಶುರುವಾದವು.. ಗಿರೀಶ್ ಎಂಬ ನಿಮ್ಮ ಮಗನನ್ನು ಕುಡಿದು ಸ್ಪೀಡ್ ಆಗಿ ಕಾರ್ ನಡೆಸಿದ್ದಕ್ಕಾಗಿ ಅರೆಸ್ಟ್ ಮಾಡಿ ನಮ್ಮ ಸ್ಟೇಷನ್ ನಲ್ಲಿ ಇರಿಸಿದ್ದೇವೆ ಎಂದು ಫೋನ್ ನಲ್ಲಿ ಹೇಳಿದ್ದು ಕೇಳಿ ಗರ ಬಡಿದಂತಾಯ್ತು… ಆದರೂ ಗಿರೀಶ್ ಜೀವಂತವಾಗಿದ್ದಾನೆಂಬ ಸುದ್ದಿ ಎಲ್ಲೋ ಮನದ ಮೂಲೆಯೊಳಗೆ ಕೊಂಚ ನೆಮ್ಮದಿ ನೀಡಿತು…
ಗಾಢ ನಿದ್ರೆಯಲ್ಲಿದ್ದ ಹರೀಶ್ ನನ್ನು ಎಬ್ಬಿಸಿ ವಿಷಯ ತಿಳಿಸಿದೆ. ಮಗನ ವಿಷಯಕ್ಕಾಗಿ ಬ್ಯಾಂಕ್ ಮ್ಯಾನೇಜರ್ ಅದ ಹರೀಶ್ ಪೊಲೀಸ್ ಸ್ಟೇಷನ್ ಹತ್ತದೆ ಈಗ ಬೇರೆ ದಾರಿ ಇರಲಿಲ್ಲ.
ಇಂತಹ ಸೆಲೆಬ್ರಿಟಿ ಮಗ ಇರುವ ಕಾರನ್ನು ಒಬ್ಬ ಯುವಕ ಬಹಳ ಸ್ಪೀಡ್ ನಿಂದ ಓಡಿಸುತ್ತ ರಸ್ತೆ ಬದಿಯ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ
ಕಾರಿನಲ್ಲಿ ಇರುವ ಸೆಲೆಬ್ರಿಟಿ ಮಗ ಸೇರಿ ಇಬ್ಬರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಇನ್ನು ಉಳಿದ ಇಬ್ಬರು ಸ್ನೇಹಿತರಿಗೆ ಸಣ್ಣ ಪುಟ್ಟ ಗಾಯಗಳಾದ ಕಾರಣ ಎಲ್ಲರನ್ನೂ ಹತ್ತಿರದ ಮಣಿಪಾಲ್ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದಾರೆ. ಕಾರ್ ನಡೆಸುತಿದ್ದ ಯುವಕ ಅಲ್ಕೋಹಾಲ್ ಕುಡಿದಿದ್ದ ಎಂದು ತಿಳಿದು ಬಂದಿದೆ. ಮತ್ತು ಪೊಲೀಸರು ಕೂಡ ಅದನ್ನೇ ಧೃಡಪಡಿಸಿದ್ದಾರೆ…
ಆಯ್ತು ಎಂದು ತನ್ನ ಲಾಯರ್ ಸ್ನೇಹಿತ ಪ್ರಸಾದ್ ನನ್ನು ಕರೆದುಕೊಂಡು ಪೊಲೀಸ್ ಸ್ಟೇಷನ್ ಗೆ ಹೋಗಿ ಬರ್ತೇನೆ… ನೀನು ಗಾಬರಿ ಆಗಬೇಡ ಎಂದು ನನಗೆ ಸಮಾಧಾನ ಮಾಡಿ ಅವಸರದಿಂದ ಹೊರಟನು ಹರೀಶ್…
ಗಂಡ ಹೋದ ಮೇಲೆ ಸುಮ್ಮನೆ ಹಾಲಿನಲ್ಲಿನ ಸೋಫಾದಲ್ಲಿ ಒರಗಿದೆ…ಆದರೆ ಬೇಡವೆಂದರೂ ಕೆಲವು ಹಳೆಯ ನೆನಪುಗಳು ಕಣ್ಮುಂದೆ ಸುಳಿದವು….
ನನಗೆ ಎರಡು ಬಾರಿ ಅಬಾರ್ಷನ್ ಅದ ಮೇಲೆ ಹುಟ್ಟಿದ ಮುದ್ದು ಮಗ ಗಿರೀಶ್….ಹೀಗಾಗಿ ಅವನ ಮೇಲೆಯೇ ನನ್ನ ಜೀವ…ನನ್ನ ಗಂಡನಿಗೂ ಅಷ್ಟೇ ಗಿರೀಶ್ ಎಂದರೆ ಪಂಚ ಪ್ರಾಣ!
ಪಿ ಯು ಸಿ ಬರೋವರೆಗೆ ಪ್ರತಿ ನಿತ್ಯ ಕಾಲೇಜಿನಲ್ಲಿ ನಡೆಯುವ ಎಲ್ಲ ವಿಷಯಗಳನ್ನು ಚಾಚು ತಪ್ಪದೇ ವರದಿ ಒಪ್ಪಿಸುತ್ತಿದ್ದ. ಸ್ನೇಹಿತರ ಬಗ್ಗೆಯೂ ಏನನ್ನೂ ಮುಚ್ಚಿಡದೆ ಎಲ್ಲವನ್ನೂ ಹೇಳುತ್ತಿದ್ದ. ತನಗೆ ಮುಖ್ಯ ಎನಿಸಿದ ವಿಷಯ – ಸಮಸ್ಯೆಗಳ ಬಗ್ಗೆ ನನ್ನ ಅಭಿಪ್ರಾಯವನ್ನು ಕೇಳುತ್ತಿದ್ದ… ಅವನ ತಂದೆಯಾದ ಹರೀಶ್ ಸಲಹೆ ಸೂಚನೆಗಳಿಗೆ ಬೆಲೆ ಕೊಡುತ್ತಿದ್ದ…
ಆದರೆ ನಿಧಾನವಾಗಿ ಗಿರೀಶ್ ನಲ್ಲಿ ಬದಲಾವಣೆ ಕಾಣತೊಡಗಿತು… ಆದರೂ ಮಕ್ಕಳು ಯುವಕರಾಗಿ ಬದಲಾಗುವ ಸಮಯದಲ್ಲಿ ಇದೆಲ್ಲಾ ಸಾಮಾನ್ಯ ಎಂದು ನಾನು ಭಾವಿಸಿದೆ…
ಅಷ್ಟು ಪಟ್ಟಾಗಿ ಕೂತು ಓದದಿದ್ದರೂ ಕ್ರಿಕೆಟ್, ಸಿನಿಮಾ, ಸ್ನೇಹಿತರು, ಮ್ಯೂಸಿಕ್ ನೈಟ್ ಎನ್ನುತ್ತಾ ಸಿ ಈ ಟಿ ಯಲ್ಲಿ ಉತ್ತಮ ರಾಂಕ್ ಪಡೆದಿದ್ದು ನೋಡಿ ನನಗಂತೂ ಸಂತೋಷವಾಯಿತು. ಇನ್ನು ಸ್ವಲ್ಪ ಕಷ್ಟ ಪಟ್ಟಿದ್ದರೆ ಇನ್ನೂ ಹೆಚ್ಚಿನ ರಾಂಕ್ ಸಿಗುತ್ತಿತ್ತು ಎಂದು ನಾನು ಹೇಳಿದಾಗ ಸುಮ್ಮನೆ ಬುದ್ಧನಂತೆ ನಕ್ಕು ಬಿಡುತ್ತಿದ್ದ…
ಇಂಜಿನಿಯರಿಂಗ್ ಸೇರಿದ ಬಳಿಕ ಮತ್ತಷ್ಟು ಬದಲಾದ ಗಿರೀಶ್… ಅವನ ಹೊಸ ಗೆಳೆಯರು, ಗೆಳತಿಯರು ಅವರೊಂದಿಗಿನ ಸ್ನೇಹ, ತಿರುಗಾಟ ಮತ್ತೇನು ಸಮಸ್ಯೆ ತಂದಿಡುತ್ತದೋ ಎಂಬ ಆತಂಕ ಯಾವಾಗಲೂ ನನ್ನನ್ನು ಕಾಡುತ್ತಲೇ ಇತ್ತು… ಹರೀಶ್ ಹೊರಗೆ ಹೇಳದಿದ್ದರೂ ಆತನಿಗೂ ಇದರ ಬಗ್ಗೆ ಭಯ ಇತ್ತು…
ಗಿರೀಶ್ ಮೇಲೆ ಒಂದು ಕಣ್ಣು ತಾನು ಇಟ್ಟರೂ, ಯಾರ ಜೊತೆ ಸ್ನೇಹ ಮಾಡ್ತಿದ್ದಾನೋ, ಯಾರೊಂದಿಗೆ ತಿರುಗುತ್ತಿದ್ದಾನೋ, ಕಾಲೇಜಿನಲ್ಲಿ ಅವನ ನಡತೆ ಹೇಗಿದೆಯೋ…. ಪಬ್, ಬಾರ್, ಡ್ರಗ್ಸ್ ಅಂತ ಕೆಟ್ಟ ಅಭ್ಯಾಸದ ಜೊತೆಗೆ ಹುಡುಗಿಯರೊಂದಿಗೆ ಸ್ನೇಹ ಬೆಳೆಸಿ ಪ್ರೀತಿ – ಪ್ರೇಮ ಎಂದು ಪಾರ್ಕ್ ಗಳ ಸುತ್ತು ತಿರುಗುತ್ತಾ ಕಾಲಾಹರಣ ಮಾಡುತ್ತಿದ್ದಾನೇನೋ ಎಂದು ಆಗಾಗ್ಗೆ ಅನಿಸುತಿತ್ತು ಹರೀಶ್ ಗೆ.
ಆದರೆ ನೇರವಾಗಿ ಗಿರೀಶ್ ನನ್ನು ಕೇಳಿದರೆ ಚೆನ್ನಾಗಿರುವದಿಲ್ಲ ಎಂದು
ಅನಿಸಿ ಹರೀಶ್ ನನ್ನೊಂದಿಗೆ ಈ ವಿಷಯಗಳನ್ನೆಲ್ಲ ಹಂಚಿಕೊಳ್ಳುತಿದ್ದ…….
ಹೀಗೆ ನೂರೆಂಟು ಆಲೋಚನೆಗಳು ತಲೆಯಲ್ಲಿ ಹೊಕ್ಕು ಗಜಿಬಿಜಿ ಮಾಡುತ್ತಿದ್ದವು. ಅದರಿಂದ ಬೇಗ ಹೊರ ಬರಬೇಕೆಂದು ಹರೀಶ್ ಗೆ ಫೋನ್ ಮಾಡಿದೆ, ಗಿರೀಶ್ ಗೆ ಏನಾಯಿತೆಂದು ಕೇಳಿದೆ. ಆಮೇಲೆ ಫೋನ್ ಮಾಡ್ತೀನಿ ಎಂದು ಕಟ್ ಮಾಡಿದ.
ಬೆಳಿಗ್ಗೆ ಆರು ಘಂಟೆ ಸುಮಾರಿಗೆ ಹರೀಶ್, ಪ್ರಸಾದ್ ಹಾಗೂ ಗಿರೀಶ್ ಜೊತೆಯಾಗಿ ಬಂದದ್ದು ನೋಡಿ ಮನಸ್ಸಿಗೆ ಸಮಾಧಾನವಾಯಿತು. ನನ್ನತ್ತ ನೋಡುವ ಧೈರ್ಯ ಸಾಲದೆ ಗಿರೀಶ್ ತನ್ನ ಬೆಡ್ ರೂಮ್ ಸೇರಿದ. ಈಗ ಹರೀಶ್ ಮತ್ತು ಲಾಯರ್ ಪ್ರಸಾದ್ ಹಾಲಿನಲ್ಲಿ ಕೂತರು. ಇಬ್ಬರ ಮುಖದಲ್ಲೂ ಪ್ರೇತ ಕಳೆ….
ನಾನೇ ನುಡಿದೆ . ” ಮೊದಲು ಮುಖ ತೊಳೆದುಕೊಂಡು ಇಬ್ಬರೂ ಬಿಸಿ ಬಿಸಿ ಕಾಫಿ ಕುಡಿಯಿರಿ.. ನಂತರ ಮಾತನಾಡುವಿರಂತೆ “.
ಕಾಫಿ ಕುಡಿದ ಸ್ವಲ್ಪ ಹೊತ್ತು ಅದ ಮೇಲೆ “ಗಿರೀಶ್ ಮೇಲೆ ಕೇಸ್ ಏನೂ ಹಾಕಿಲ್ಲ. ಸ್ನೇಹಿತ ಲಾಯರ್ ಪ್ರಸಾದ್ ಸ್ಟೇಷನ್ ಗೆ ನಂಜೊತೆ ಬರದಿದ್ದರೆ ನಾವಿಬ್ಬರು ಅದೇ ಅಪ್ಪ -ಮಗ ಮನೆಗೆ ಬರುವುದು ತುಂಬಾ ಕಷ್ಟವಿತ್ತು…” ಎಂದ ಭಾರವಾದ ಸ್ವರದಿಂದ ಹರೀಶ್
“ಅಸಲು ನಡೆದ ಘಟನೆ ಆದರೂ ಏನು?” ಎಂದು ಕುತೂಹಲದಿಂದ ಪ್ರಶ್ನಿಸಿದೆ ಹರೀಶ್ ನನ್ನು.
“ಮ್ಯೂಸಿಕಲ್ ನೈಟ್ ಮುಗಿಯುವ ಮುನ್ನವೇ ಗಿರೀಶ್ ಮತ್ತು ಅವನ ಸ್ನೇಹಿತರು ಸೇರಿ ಅವರಲ್ಲಿನ ಒಬ್ಬನ ರೂಮಿಗೆ ಹೋಗಿ ಮದ್ಯೆ ಸೇವನೆ ಮಾಡಿದ್ದಾರೆ. ನಂತರ ರೋಡ್ ಮೇಲೆ ಕಾರ್ ನಡೆಸುತ್ತಾ ಅಲ್ಲಿ ಇಲ್ಲಿ ಸುತ್ತಾಡಿದ್ದಾರೆ. ಇಷ್ಟರಲ್ಲಿ ಹುಡುಗಿಯರಿದ್ದ ಕಾರ್ ಇವರನ್ನು ಓವರ್ ಟೇಕ್ ಮಾಡಿ ಮುಂದೆ ಹೋಗಿದೆ. ಅದನ್ನು ನೋಡಿ ಕಾರ್ ನಲ್ಲಿದ್ದ ಗೆಳೆಯರೆಲ್ಲ ಸೇರಿ ಡ್ರೈವ್ ಮಾಡುತ್ತಿದ್ದ ಗಿರೀಶ್ ನನ್ನು ಆ ಕಾರನ್ನು ಹಿಂಬಾಲಿಸಿ ಓವರ್ ಟೇಕ್ ಮಾಡಲು ಒತ್ತಾಯಿಸಿದ್ದಾರೆ. ಮೊದಲೇ ಕುಡಿತದ ನಶೆ ಜೊತೆಗೆ ಹದಿ ಹರೆಯದ ವಯಸ್ಸು… ಇನ್ನು ಕೇಳಬೇಕೇ?…. ಕಾರ್ ಬ್ರೇಕ್ ಮೇಲಿಟ್ಟ ಕಾಲನ್ನು ಮರೆತು ಕ್ಲಚ್ ಮೇಲೆ ಇಟ್ಟು ಬಲವಾಗಿ ಒತ್ತಿದ… ಅಷ್ಟೇ…. ಎದುರಿಗೆ ಬರುತಿದ್ದ ಅವನಷ್ಟೇ ವಯಸ್ಸಿನ ಯುವಕ ಅವನೂ ಕುಡಿದು ಓಡಿಸುತ್ತಿದ್ದ ಬೈಕ್ ಗೆ ಎದುರಿನಿಂದ ಢಿಕ್ಕಿ ಹೊಡೆದ. ಆ ರಭಸಕ್ಕೆ ಎರಡೂ ವೆಹಿಕಲ್ ಗಳು ಡಿವೈಡರ್ ಮೇಲೆ ದಾಳಿ ಮಾಡಿ ಗಕ್ಕನೆ ನಿಂತವು. ಕಾರಿನಲ್ಲಿದ್ದವರಿಗಾಗಲಿ ಅಥವಾ ಬೈಕ್ ರೈಡರ್ ಗಾಗಲಿ ಹೆಚ್ಚು ಪೆಟ್ಟು ಬೀಳದಿದ್ದರೂ ಎರಡೂ ವೆಹಿಕಲ್ ಗಳು ಸಂಪೂರ್ಣವಾಗಿ ಡ್ಯಾಮೇಜ್ ಆದವು.
ಆಫಘಾತ ನಡೆದ ದಾರಿಯಲ್ಲೇ ಬರುತಿದ್ದ ನೈಟ್ ಪೆಟ್ರೋಲಿಂಗ್ ಟೀಂ ಬಂದು ಎಲ್ಲರನ್ನೂ ಕೂಡಲೇ ಸ್ಟೇಷನ್ ಗೆ ಕರೆದೋಯ್ದರು…
ಪ್ರಸಾದ್ ಗಿದ್ದ ಪೊಲೀಸ್ ಜೊತೆಗಿನ ಕನೆಕ್ಷನ್ ಹಾಗೂ ಹರೀಶ್ ನ ಬ್ಯಾಂಕ್ ಮ್ಯಾನೇಜರ್ ಎನ್ನುವ ಉನ್ನತ ಹುದ್ದೆಗೆ ಬೆಲೆ ಕೊಟ್ಟು ಕೇಸ್ ಮಾಡದೇ ಮೊದಲ ಅಪರಾಧ ಎಂದು ಪರಿಗಣಿಸಿ ಮುಚ್ಚಳಿಕೆ ಬರೆಸಿಕೊಂಡು ಗಿರೀಶ್ ಹಾಗೂ ಅವನ ಸ್ನೇಹಿತರನ್ನು ಬಿಟ್ಟರು. ಬೈಕ್ ರಿಪೇರಿ ಖರ್ಚುನ್ನು ತಾವೇ ವಹಿಸುವದಾಗಿ ಪ್ರಾಮಿಸ್ ಮಾಡಿ ಸ್ಟೇಷನ್ ನಿಂದ ಹೊರ ಬಂದರು ಗಿರೀಶ್ ಮತ್ತು ಅವನ ಗೆಳೆಯರ ಬಳಗ…
ನನಗೆ ಹಾಗೂ ಹರೀಶ್ ಗೆ ಮಗ ಕೊಟ್ಟ ಮರ್ಮಾಘಾತವನ್ನು ಸಹಿಸಿಕೊಳ್ಳಲಾ ಗುತ್ತಿಲ್ಲ…. ನಮಗೇ ಏಕೆ ಹೀಗೆ? ಉದ್ಯೋಗ ದಂಪತಿಗಳಾದ ನಾವು ಬೇರೆಯರಿಗಿಂತ ಹೆಚ್ಚು ಪ್ರೀತಿ ಮಗನಿಗೆ ತೋರಿದೆವಾ?… ನಮ್ಮ ಆರ್ಥಿಕ ಸ್ಥಿತಿಗತಿ ನೋಡಿ ಗಿರೀಶ್ ಹಾದಿ ತಪ್ಪಿದನಾ?… ಒಬ್ಬನೇ ಮಗ ಎಂದು ಹೆಚ್ಚು ಮುದ್ದು ಮಾಡಿ ಬೆಳೆಸಿದೆವಾ?…
ನಾವು ಮಗನನ್ನು ಎಲ್ಲರಂತೆ ಸರಿಯಾದ ದಾರಿಯಲ್ಲಿ ಬೆಳೆಸಲು ನಮ್ಮಿಂದ ಆಗಲಿಲ್ಲವೇ? ಮಗನಿಗೆ ಕೊಟ್ಟ ಹೆಚ್ಚಿನ ಸ್ವಾತಂತ್ರ್ಯ ಅವನು ದಾರಿ ತಪ್ಪಲು ಕಾರಣವಾಯಿತೇ?… ಹೀಗೆ ಹಲವು ಹತ್ತು ಆಲೋಚನೆಗಳು ದಿನ ನಿತ್ಯ ಕಾಡತೊಡಗಿದವು….
ಅಪ್ಪ – ಅಮ್ಮ ಏನೂ ಬಾಯಿ ಬಿಟ್ಟು ಕೇಳದಿದ್ದರೂ ಗಿರೀಶ್ ಗೆ ತಾನು ಮಾಡಿದ್ದು ತಪ್ಪು ಕೆಲಸ ಎಂದು ಮನದಟ್ಟಾಯಿತು. ಪೊಲೀಸ್ ಸ್ಟೇಷನ್ ನಲ್ಲಿ ನಡೆದ ಘಟನೆ ಅವನ ಆಲೋಚನೆಯ ದಿಕ್ಕನ್ನು ಪೂರ್ತಿಯಾಗಿ ಬದಲಾಯಿಸಿತು. ಅಲ್ಲಿ ಕಳ್ಳತನ ಅಪರಾಧ ಮಾಡಿದವರನ್ನು ವಿಚಾರಿಸುವ ನೆಪದಲ್ಲಿ ಮನಸೋ ಇಚ್ಛೆ ಹೊಡೆದು ಬಾಯಿ ಬಿಡಿಸುತ್ತಿರುವ ರೀತಿ ನೋಡಿ ಭಯಭೀತನಾದ ಗಿರೀಶ್. ಅಲ್ಲದೇ ಅಲ್ಲಿನ ಪೊಲೀಸ್ ಭಾಷೆ ಕೂಡ ಪರಿಚಯವಾಯ್ತು. ಅಪ್ಪ ಮತ್ತು ಲಾಯರ್ ಪ್ರಸಾದ್ ಅಂಕಲ್ ಬರುವುದು ಸ್ವಲ್ಪ ತಡವಾಗಿದ್ದರೆ ತಾನೂ ಪೊಲೀಸ್ ಒದೆ ತಿನ್ನಬೇಕಾಗಿತ್ತು. ಎಲ್ಲ ಗೆಳೆಯರು ಈಗ ಈ ಘಟನೆಯಿಂದ ಉತ್ತಮ ಪಾಠ ಕಲಿತಿದ್ದರು. ಅಲ್ಲದೇ ಎಲ್ಲರಿಂದ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡರು. ಪೊಲೀಸ್ ಅಧಿಕಾರಿ ಜಗದೀಶ್ ಗೌಡ ತನ್ನನ್ನು ಬಿಡುವ ಮುಂಚೆ ಕೌನ್ಸಿಲಿಂಗ್ ಮಾಡಿ ಹೇಳಿದರು ” ನಿನ್ನ ತಂದೆ ಮತ್ತು ಆ ಲಾಯರ್ ನಿಂದ ಇಂದು ಬಚಾವಾದೆ. ಇದು ಮೊದಲ ಅಪರಾಧವಾದ್ದರಿಂದ ಎಚ್ಚರಿಕೆ ಕೊಟ್ಟು ಬಿಡಲಾಗಿದೆ. ಇನ್ನೊಂದು ಬಾರಿ ಇದೇ ಪುನರಾವರ್ತನೆ ಆದರೆ ಬೂಟು ಕಾಲಿಂದ ಒದ್ದು ಒಳಗೆ ಹಾಕ್ತೇನೆ.. ನೆನಪಿಟ್ಟುಕೋ” ಎಂದು ವಾರ್ನಿಂಗ್ ನೀಡಿ ಹೊರಗೆ ಬಿಟ್ಟರು.
ತನಗೆ ಬೇಕಾದಾಗ ಹಣ ಕೊಟ್ಟು ತಾನು ಎನು ಕೇಳಿದರೂ ಎಲ್ಲವನ್ನು ಮಗನ ಮೇಲಿನ ಪ್ರೀತಿಯಿಂದ ಕೊಡಿಸಿದರು. ತಾನು ಅಷ್ಟು ಬುದ್ಧಿವಂತ ಆಗದಿದ್ದರೂ ಅಪ್ಪ – ಅಮ್ಮ ಬೇಸರಿಸಿಕೊಳ್ಳದೆ ಚೆನ್ನಾಗಿ ಓದು ಎಂದೇ ಯಾವಾಗಲು ಹೇಳುತ್ತಿದ್ದಾರೆ. ಆದರೆ ತಾನು ಮಾಡಿದ್ದಾದರು ಎನು? ಅವರ ಇಷ್ಟಕ್ಕೆ ವಿರುದ್ಧವಾಗಿ ಕೆಟ್ಟ ಅಭ್ಯಾಸಗಳನ್ನು ಕಲಿತು ಜೀವನ ನಾಶ ಮಾಡಿಕೊಳ್ಳುತ್ತಿರುವೆ… ಈಗಿನ ಸ್ನೇಹಿತರನ್ನು ಬಿಟ್ಟು ಹೊಸ ಗೆಳೆಯರ ಗುಂಪನ್ನು ಸೇರಬೇಕು. ಇಲ್ಲಿಯವರೆಗೆ ನಡೆದ್ದಿದ್ದನ್ನು ಕೆಟ್ಟ ಕನಸು ಎಂದು ಭಾವಿಸಿ ಹೊಸ ಲೋಕವನ್ನು ನೋಡಬೇಕು….. ಇನ್ನು ಮುಂದೆ ತನ್ನಿಂದ ಮತ್ತು ತನ್ನಂಥವರಿಂದ ಸಮಾಜಕ್ಕೆ ಉಪಯೋಗ ಆಗುವ ಕೆಲಸ ಮಾಡಬೇಕು ಅಷ್ಟೇ……ಹಳೆಯ ಕೆಟ್ಟ ಗಿರೀಶ್ ಸ್ಥಾನದಲ್ಲಿ ಹೊಸ ಭರವಸೆಯ ಯುವಕ ಗಿರೀಶ್ ಆಗಿ ಎಲ್ಲರಿಂದ ಭೇಷ್ ಎನಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಪ್ರತಿಜ್ಞೆ ಮಾಡಿಕೊಂಡ ಮನಸಿನಲ್ಲೇ….
ಈಗ ಗಿರೀಶ್ ನೇತೃತ್ವದ ಗುಂಪು ವೇಳೆ ಸಿಕ್ಕಾಗ ದಲಿತರ, ಹಿಂದುಳಿದವರ ಹಾಸ್ಟೆಲ್ ಗಳಿಗೆ ಹೋಗಿ ಉಚಿತ ಟ್ಯೂಷನ್ ಹೇಳಲು ಶುರು ಮಾಡಿದರು. ಅಲ್ಲದೇ ಇನ್ನಿತರ ಬಡ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳುತ್ತಾ ಅವರಿಗೆ ಬೇಕಾದ ಪುಸ್ತಕಗಳು ಬ್ಯಾಗ್ ಗಳನ್ನು ಹಂಚುತ್ತಿದ್ದರು. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಯುವಕ – ಯುವತಿಯರಿಗೆ ಮಾರ್ಗದರ್ಶನ ಮಾಡುತ್ತಿದ್ದರು.
ಅವುಗಳಿಗೆ ಬೇಕಾದ ಹಣವನ್ನು ತಮ್ಮ ಪಾಕೆಟ್ ಮನಿಯಿಂದ ಖರ್ಚು ಮಾಡುತಿದ್ದರು. ಮೊದಲ ಬಾರಿ ಹಣ ಪಡೆಯುವ ಅನುಭವಕ್ಕಿಂತ ಕೊಡುವದರಲ್ಲಿನ ಸಂತೋಷ – ಸಂತೃಪ್ತಿ ಗೊತ್ತಾಗಿ ಮನಸಿಗೆ ಮುದ ನೀಡಿತು. ಯುವಕರು ಸರಿಯಾದ ದಾರಿಯಲ್ಲಿ ಸಾಗಿದರೆ ದೇಶ ಸುಭಿಕ್ಷೆ ಆಗುವದರಲ್ಲಿ ಸಂದೇಹವೇ ಇಲ್ಲ ಎನ್ನುವ ರೀತಿ ಅವರಲ್ಲಿ ಗಮನಾರ್ಹ ಬದಲಾವಣೆಗಳಾದವು…
ಮಗನ ಪ್ರವರ್ತನೆಯಲ್ಲಿ ಕೊಂಚ ಬದಲಾವಣೆ ಮೇಲ್ನೋಟಕ್ಕೆ ಕಂಡರೂ ನನಗಿನ್ನೂ ಗಿರೀಶ್ ಮೇಲೆ ಸಂಪೂರ್ಣ ಭರವಸೆ ಬಂದಿರಲಿಲ್ಲ …. ಅಲ್ಲದೇ ಆಗಾಗ್ಗೆ ಗಿರೀಶ್ ನಂತಹ ಯುವಕರು ಕುಡಿತಕ್ಕೆ ದಾಸರಾಗಿ ವಾಹನಗಳನ್ನು ಸ್ಪೀಡ್ ಆಗಿ ಒಡಿಸಿ ಎಲ್ಲಿ ತಮ್ಮ ಮತ್ತು ಇತರರ ಜೀವಕ್ಕೆ ಅಪಾಯ ಒಡ್ದುತ್ತಾರೋ ಎನ್ನುವ ಭಯ ಮಾತ್ರ ನನ್ನ ಮನಸಿನಿಂದ ಹೋಗಲಿಲ್ಲ…
ಒಂದು ದಿನ ಅಮ್ಮ ಅಪ್ಪನನ್ನು ಒಪ್ಪಿಸಿ ಏನೂ ವಿವರಣೆ ಕೇಳಬಾರದು ಎಂದು ಕಂಡೀಶನ್ ಹಾಕಿ ಒಂದು ಸೋಶಿಯಲ್ ವೆಲ್ಫೇರ್ ರೆಸಿಡೆನ್ಸಿಯಲ್ ಕಾಲೇಜಿಗೆ ಕರೆದುಕೊಂಡು ಹೋದ ಗಿರೀಶ್. ಅಲ್ಲಿಗೆ ಆಗಲೇ ಅವನ ಗೆಳೆಯರು ಮತ್ತು ಕುಟುಂಬ ಸದಸ್ಯರು ಬಂದಿದ್ದರು. ಎಲ್ಲಿ ನೋಡಿದರೂ ಹಬ್ಬದ ವಾತಾವರಣ. ಸ್ಥಳೀಯ ಪೊಲೀಸ್ ಅಧಿಕಾರಿ ಜಗದೀಶ್ ಗೌಡ, ತಹಸೀಲ್ದಾರ್ ಆನಂದ್ ರಾವ್ ಹಾಗೂ ಶಾಸಕ ಮಲ್ಲೇಶಪ್ಪ ಇತರರು ವೇದಿಕೆಗೆ ಬಂದ ಕೂಡಲೇ ಸಭೆ ಆರಂಭವಾಯಿತು. ಮೊದಲು ತಹಸೀಲ್ದಾರ್ ಆನಂದ್ ರಾವ್ ಮಾತನಾಡಿ ” ಗಿರೀಶ್ ನೇತೃತ್ವದಲ್ಲಿ ಬಡ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಸಿ ಈ ಟಿ ಕೋಚಿಂಗ್ ಕೊಟ್ಟ ಕಾರಣದಿಂದಾಗಿ ಹಲವು ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಸಾಧ್ಯವಾಯಿತು” ಎಂದು ಕೊಂಡಾಡಿದರು. ನಂತರ ಶಾಸಕರು ಮಲ್ಲೇಶಪ್ಪ ಮಾತನಾಡುತ್ತ ” ” ಗಿರೀಶ್ ನಂತಹ ಯುವಕ ತಾನು ಸಾಧನೆ ಮಾಡಿ ಉಳಿದ ಯುವಕರಿಗೆ ಮಾರ್ಗದರ್ಶಕನಾಗಿ ಯುವ ಜನಾಂಗಕ್ಕೆ ಸ್ಫೂರ್ತಿ ತುಂಬಿದ. ಅಲ್ಲದೇ ಹೆತ್ತವರು ಹೆಮ್ಮೆ ಪಡುವಂತಹ ಸಾಧನೆ ತೋರಿದ್ದಾನೆ. ಅವನು ಇತರ ಸ್ನೇಹಿತರೊಂದಿಗೆ ಹುಟ್ಟು ಹಾಕಿದ ಈ
‘ ಪ್ರೇರಣೆ ‘ ಸಂಸ್ಥೆ ಹೆಮ್ಮರವಾಗಿ ಬೆಳೆಯಲಿ ಜೊತೆಗೆ ಇತರ ಯುವಕರಿಗೆ ಮಾರ್ಗದರ್ಶನ ನೀಡಲೆಂದು ಹಾರೈಸುವೆ” ಎಂದು ಮಾತು ಮುಗಿಸಿದಾಗ ಸಭಿಕರಿಂದ ದೊಡ್ಡ ಕರತಾಡನ. ಕೊನೆಯದಾಗಿ ಪೊಲೀಸ್ ಅಧಿಕಾರಿ ಜಗದೀಶ್ ಗೌಡ ಮಾತನಾಡುತ್ತ ” ಹಲವು ಯುವಕರು ಗೊತ್ತಿಲ್ಲದೇ ಸಣ್ಣ ಪುಟ್ಟ ಅಪರಾಧಗಳನ್ನು ಮಾಡುತ್ತಾರೆ. ನಂತರ ಗಿರೀಶ್ ನಂತಹ ಕೆಲವೇ ಯುವಕರು ತಾವು ಮಾಡಿದ ತಪ್ಪು ತಿಳಿದುಕೊಂಡು ಸಮಾಜಕ್ಕೆ ಏನಾದರೂ ಉಪಯೋಗವಾಗುವಂತಹ ಕೆಲಸಕ್ಕೆ ಕೈ ಹಾಕುತ್ತಾರೆ. ಇನ್ನೊಂದು ಸಂತೋಷದ ಸಮಾಚಾರ ನಿಮ್ಮೊಂದಿಗೆ ಈ ವೇದಿಕೆಯಿಂದ ಹಂಚಿಕೊಳ್ಳಲು ನನಗೆ ಹೆಮ್ಮೆಯಾಗುತ್ತಿದೆ. ಅದು ಏನೆಂದರೆ ಗಿರೀಶ್ ಈಗ ಮಲ್ಟಿ ನ್ಯಾಷನಲ್ ಸಾಫ್ಟ್ವೇರ್ ಕಂಪನಿಗೆ ಸೆಲೆಕ್ಟ್ ಆಗಿದ್ದಾನೆ. ಅದಕ್ಕಾಗಿ ಗಿರೀಶ್ ನಿಗೆ ಹಾರ್ಧಿಕ ಅಭಿನಂದನೆಗಳು ” ಎಂದು ಹೇಳಿದಾಗ ಮತ್ತೊಮ್ಮೆ ದೀರ್ಘ ಕರತಾಡನ ಸಭಿಕರಿಂದ…
ನಂತರದ ಸನ್ಮಾನ ಕಾರ್ಯಕ್ರಮ… ಸಮಾಜಕ್ಕೆ ಅದರಲ್ಲೂ ಬಡ ಮಕ್ಕಳಿಗೆ ಕೋಚಿಂಗ್ ಕೊಡಿಸಿ ಅವರಿಗೆ ಒಳ್ಳೆಯ ಇಂಜಿನಿಯರಿಂಗ್ ಸೀಟು ದೊರಕಿಸಲು ಕಾರಣರಾದ ಯುವಕರ ಜೊತೆ ಅವರನ್ನು ಹೆತ್ತ ತಂದೆ ತಾಯಿಗಳಿಗೆ ಹೂ ಹಾರ ಹಾಕಿ ಶಾಲು ಹೊದಿಸಿ ಗೌರವಿಸಿ ಸನ್ಮಾನಿಸಿದರು ಶಾಸಕರು.
ಇಂತಹ ಅಪರೂಪ ಘಟ್ಟ ನನ್ನ ಜೀವನದಲ್ಲಿ ಬರುತ್ತದೆಂದು ಕನಸಿನಲ್ಲೂ ಊಹಿಸದ ನನಗೆ ಈಗ ಗಿರೀಶ್ ತಾಯಿ ಎಂದು ಎಲ್ಲರ ಮಧ್ಯೆ ‘ ಸ್ಟಾರ್ ‘ ಪಟ್ಟ ಕಟ್ಟಿದರು. ನನಗಂತೂ ಈಗ ಸ್ವರ್ಗ ಮೂರೇ ಗೇಣು! ನಾನು ಗಿರೀಶ್ ನ ಹಣೆಗೆ ಹೂ ಮುತ್ತನಿತ್ತು ಹರೀಶ್ ನತ್ತ ದೃಷ್ಟಿ ಹಾಯಿಸಿದಾಗ ಆತನ ಕಣ್ಣಿನಿಂದ ಆಶ್ರುಧಾರೆ ಮಗನಲ್ಲಿ ಅದ ಅಸಾಧಾರಣ ಪರಿವರ್ತನೆ ನೋಡಿ!
ಸಕಾರಾತ್ಮಕ ಸದೇಶ ನೀಡುವ ಒಳ್ಳೆಯ ಕಥೆ.
ಧನ್ಯವಾದಗಳು
Very nice Story, the second part of the story un expected & fantastic, good message to the society
Thank you Sir
Very nice story.Girish understanding his mistake acted positively and turning point is that he has recognized his mistake and turned as Society friendly. Very good story for youngsters.
Thank you Sir
ಹದಿ ವಯಸ್ಸು ಸ್ವತಂತ್ರ.ಸ್ವೇಚ್ಛೆ ಯಾಗಿ. ಅಡ್ಡ ದಾರಿ ಹಿಡಿಯುವುದು ಸಹಜ ಇವು ದುರಂತ ಕಾಣುವುದೇ ಹೆಚ್ಚು
ಆದರೆ ಇಲ್ಲಿ ಅಪಘಾತ ಪ್ರಕರಣ ಮನ ಪರಿವರ್ತನೆ. ಯಾಗಿ
ಸಮಾಜ ಸೇವಕರಾಗಿ ಬದಲಾಗುವುದು ಕಥೆ ಯ twist
ಪಾಲಕರ ಸನ್ಮಾನ ಹೃದಯ ಸ್ಪರ್ಶಿ
ಉತ್ತಮ ಕಥೆ
ಧನ್ಯವಾದಗಳು ಗೋಪಿನಾಥ್ ದಿನ್ನಿ ಅವರಿಗೆ
ಕತ್ತಲೆಯಿಂದ ಬೆಳಕಿನೆಡೆಗೆ ಕಥೆ ಪರಿವರ್ತನೆ ನಾವು ಬಯಸಿದರೆ ಸಾಧ್ಯ ಎನ್ನುವ ಸಂದೇಶವನ್ನು ಸಾರುವಂತಿದೆ. ನಾವಿರುವ ಪರಿಸರದ ಒಳಿತು ಕೆಡುಕುಗಳ ಬಗ್ಗೆ ವಿವೇಕ ಇರಬೇಕಾದ ಅನಿವಾರ್ಯತೆಯ ಧ್ವನಿ ಕಥೆಯಲ್ಲಿದೆ.
ಅಭಿನಂದನೆಗಳು
ಧನ್ಯವಾದಗಳು
ತುಂಬಾ ಉಪಯುಕ್ತ ಲೇಖನ. ಸರಳ ನಿರೂಪಣೆ. ಅಭಿನಂದನೆಗಳು
ಧನ್ಯವಾದಗಳು
The story shows the light and right path to our new generation
Thank you Sir
ಉತ್ತಮ ಸಂದೇಶವನ್ನು ಹೊತ್ತು ತಂದ ಉತ್ತಮ ಬರಹ.
ಧನ್ಯವಾದಗಳು
ದಾರಿಯಲ್ಲಿ ನಡೆದ ಅಪಘಾತ, ಸಹವಾಸದೋಷದಿಂದಾಗಿ ದಾರಿತಪ್ಪುತ್ತಿದ್ದ ಗಿರೀಶನನ್ನು ಬಯಲುಗೊಳಿಸಿತು. ಸ್ವಲ್ಪದರಲ್ಲಿ ಪೊಲೀಸರ ಒದೆ ತಪ್ಪಿಸಿಕೊಂಡು, ಸಮಾಜಬಾಂಧವನಾಗಿ ಪರಿವರ್ತನೆಗೊಂಡದ್ದು ಮನಮೆಚ್ಚುತ್ತದೆ. ಸಮಾಜಕ್ಕೊಂದು ಮಾರ್ಗದರ್ಶಿ ಕಥೆಯಾಗಿದೆ. ರಾಘವೇಂದ್ರ ಮಂಗಳೂರು ರವರ ಈ ಕತ್ತಲೆಯಿಂದ ಬೆಳಕಿನೆಡೆಗೆ ನವಯುವಕರಿಗೆ ಮಾರ್ಗದರ್ಶಿಯಾಗಿದೆ. ಅಭಿನಂದನೆಗಳು.
ಧನ್ಯವಾದಗಳು ಸಾರ್
ಎರಡು ಮಕ್ಕಳ ಆಬಾರ್ಶನ್ ಆದ ಮೇಲೆ ಅಪ್ಪ ಅಮ್ಮನಿಗೆ ಮಗನ ಮೇಲೆ ಪ್ರೀತಿ ಇರುವದು ಸಹಜ. ಮಗ ಯುವಕ ಆದಮೇಲೆ ಅಡ್ಡದಾರಿಗೆ ಹೋಗುವದು ಸ್ನೇಹಿತರ ಪ್ರಭಾವದಿಂದ ಆಗುವದು. ಅಂತಹ ಸಂದರ್ಭದಲ್ಲಿ ತಂದೆಗಿಂತಲೂ ತಾಯಿಗೆ ಕಾಳಜಿ ಆಗುವದನ್ನು ನಿರೂಪಣೆ ಚೆನ್ನಾಗಿ ಮೂಡಿಬಂದಿದೆ. ಕಾರ್ ಅಪಘಾತ ವಾಗಿ ತಂದೆ ಬ್ಯಾಂಕ್ ಮ್ಯಾನೇಜರ್ ಅವರ ಮಿತ್ರ ಲಾಯರ್ ಗಿರೀಶ್ ನಿಗೆ ಪೋಲಿಸ್ ರ ಒದೆತದಿಂದ ಬಚಾವ್ ಆದ. ಪರಿಸ್ಥಿತಿ ಅರ್ಥ ಮಾಡಿಕೂಂಡ ಗಿರೀಶ್ ಒಳ್ಳೆಯ ಕೆಲಸ ಮಾಡಿ ಎಲ್ಲರ ಪ್ರೀತಿಗೆ ಪಾತ್ರನಾದ.
‘ಕತ್ತಲೆಯಿಂದ ಬೆಳಕಿಗೆ’ ಕಥೆ ನನಗೆ ತುಂಬಾ ಹಿಡಿಸಿತು.
ಶುಭಾಶಯಗಳು.
ಧನ್ಯವಾದಗಳು ಸಾರ್ ತಮ್ಮ ಮೆಚ್ಚುಗೆಗೆ