ಕಾವ್ಯ ಸಂಗಾತಿ
ಕುಸುಮ ಮಂಜುನಾಥ
ಲಂಕೆಯ ಬೆಂಕಿ
ಹೊತ್ತಿ ಉರಿದಿದೆ ಲಂಕೆ
ಬೆಂಕಿ ಕೆನ್ನಾಲಿಗೆಯಲಿ
ದಂಗೆ ಎದ್ದಿಹರು ಜನರು ಬೇಸತ್ತು…
ಹಸಿದ ಕಂದಗೆ ಅನ್ನವು ಗತಿಯಿಲ್ಲ
ಗಂಜಿ ಕಾಯಿಸಲು ಅನಿಲವಿಲ್ಲ
ಇಲ್ಲಗಳ ನಡುವೆ ಬದುಕುವವರ
ಬವಣಿಗಳ ಕೇಳುವವರಿಲ್ಲ..
ಶಾಲೆ ನಡೆಸಲು ಹಣವಿಲ್ಲ
ಆಸ್ಪತ್ರೆಯಲಿ ಔಷಧಿ ಇಲ್ಲ
ಎಲ್ಲ ಸೇವೆಗಳು ಕದವ ಮುಚ್ಚಿವೆಯಲ್ಲ
ಅರಸೊತ್ತಿಗೆಯದು ದುಂದು ವೆಚ್ಚದಿ ಭೋಗಲಾಲಸೆಯಲಿ ಮೈ ಮರೆತಿರೆ…
ಲಂಕೆಯ ಅಂದ ಚಂದವ ನೋಡಲು
ಜನರು ಬರುತಿಲ್ಲ ಹಾಳಾಯ್ತು ದಿನದ ದುಡಿಮೆಯೆಲ್ಲ
ಬಹುತ್ವವದು ಒಡೆದಿತ್ತು..
ಇವ ಸಿಂಹಿಳಿ ಇವ ತಮಿಳಿನವ ಇವ ಮುಸಲ್ಮಾನನೆಂದು
ಬೇಯಿಸಿಕೊಂಡಿತು ಬೆಳೆಯನು..
ಗದ್ದುಗೆಯ ನೇರಲೆಂದು.
ಭರವಸೆಯ ತಂಗಾಳಿ ಇಲ್ಲ
ಸುಡುವ ಬೆಂಕಿಗಳೇ ಎಲ್ಲಾ
ಬೇಸತ್ತಜನ ಕಂಗಾಲಾಗಿ ನೋಡುತಿಹರಲ್ಲಾ!!
ಬೆಂಕಿಯನಾರಿಸುವ ನಾಯಕನ ಉದಯವಾಗಲೀ
ಜನಮಾನಸದಲಿ ನೆಮ್ಮದಿ ಮರುಕಳಿಸಲಿ;
=================