ಕವಿತೆ
ಏನೆಂದು ಕರೆಯಲಿ
ಪ್ರೊ ರಾಜನಂದಾ ಘಾರ್ಗಿ
ಶಾಪಗ್ರಸ್ತ ಅಹಲ್ಯೆಯಂತೆ
ಸಾವಿರಾರು ವರ್ಷಗಳಿಂದ
ಕಲ್ಲಾಗಿದ್ದ ನನ್ನ ಸ್ಪರ್ಶಮಾತ್ರದಿಂದ
ಕರಗಿಸಿದ ರಾಮನೆನ್ನಲೇ?
ಸಾವಿರಾರು ಹೆಂಡಿರ ಗಂಡನಾಗಿಯೂ
ರಾಧೆಯವನಾಗಿಯೇ ಉಳಿದಂತೆ
ಎಲ್ಲರನ್ನೂ ಒತ್ತರಿಸಿ ನನಗಾಗಿ ಮಿಡಿದ
ಕಲಿಯುಗದ ಕೃಷ್ಣನೆನ್ನಲೇ?
ಸ್ವರ್ಗದ ಅಪ್ಸರೆಯನ್ನು ಧರೆಗಿಳಿಸಿ
ಮಾನವಳಾಗಿಸಿ ಹೃದಯ ತುಂಬಿ
ಉಡಿ ತುಂಬಿ ಬ್ರಹ್ಮರ್ಷಿ ಆಗಿ ಉಳಿದ
ಮಹಾತ್ಮ ವಿಶ್ವಾಮಿತ್ರನೆನ್ನಲೇ ?
ಮುಗ್ಧ ವಟುವಿನಂತೆ ಮುಗುಳ್ನಕ್ಕು
ಮನವ ಪ್ರವೇಶಿಸಿ ಅಗಾಧವಾಗಿ ಬೆಳೆದು
ನನ್ನ ಅಸ್ತಿತ್ವವನ್ನೇ ಪಾತಾಳಕ್ಕೆ ತುಳಿದ
ಬಹುರೂಪಿ ವಾಮನನೆನ್ನಲೇ ?
ಬಯಕೆಗಳ ರೂಪದಲ್ಲಿ ಮನವನ್ನು ಆವರಿಸುತ್ತ
ಸುತ್ತುತ್ತ ಉಸಿರುಗಟ್ಟಿಸುತ್ತಿರುವ ನಿನ್ನ ಕತ್ತರಿಸಿದಾಗ
ರಕ್ತ ಚಿಮ್ಮಿ ಹನಿಗೊಬ್ಬನಂತೆ ಹುಟ್ಟಿ ಬೆಳೆಯುತ್ತಿರುವ ರಕ್ತಬೀಜಾಸುರ ನೆನ್ನಲೇ ?