ಆಶಾ ಹೆಗಡೆಯವರ ಸಂಕಲನ-ಮನಃಸಾಗರ

ಪುಸ್ತಕ ಸಂಗಾತಿ

ಮನಃಸಾಗರ

ಆಶಾ ಹೆಗಡೆ

ಕವನ ಸಂಕಲನ : ಮನಃಸಾಗರ.

ಲೇಖಕಿ : ಆಶಾ ಹೆಗಡೆ.

ಪ್ರಕಾಶನ:  ಪರ್ವ ಪ್ರಕಾಶನ.

ಪುಟಗಳು : 108. ಬೆಲೆ : ೧೧೦.ಕೃತಿ ಬೇಕಿದ್ದಲ್ಲಿ ಸಂಪರ್ಕ : ೯೫೩೫೬೪೫೨೩೦

.

ಈಚಗೆ ಕನ್ನಡಮ್ಮನ ಸೇವೆ ಮಾಡಲು ಸಾರಸ್ವತ ಲೋಕಕ್ಕೆ ಅದೆಷ್ಟೋ ಬರಹಗಾರರ ದಂಡೆ ಆಗಮಿಸುತ್ತಿದೆ.ಕನ್ನಡದ ಬಗೆಗೆ ಕವಿ ಕಾವ್ಯವನ್ನು ಸೃಷ್ಟಿಸುತ್ತಲೇ ಸಮಾಜಕ್ಕೊಂದು ಸುಭರಿತ ಸಂದೇಶವನ್ನು ಹೊತ್ತು ತರುತ್ತಿರುವದು ನಿಜಕ್ಕೂ ಶ್ಲಾಘನೀಯ.

ನಾ ಕಂಡಂತೆ ಸದಾ ಕಾವ್ಯಮಣಿಯನ್ನು ಪೋಣಿಸಿ ಹೆಣಿಯುವ ಸಂವೇದನಾಶೀಲ ಬರಹಗಾರ್ತಿ, ಸಾಮಾಜಿಕ ಬದಲಾವಣೆಗಾಗಿ ಸುಚಿಂತಕಿ, ಸಾಹಿತಿ, ಲೇಖಕಿ ಬೆಂಗಳೂರಿನ ಆಶಾ ಹೆಗಡೆ. ಇವರ ಚೊಚ್ಚಲ ಕವನ ಸಂಕಲನ ” ಮನಃಸಾಗರ “.ಕೃತಿಯ ಶೀರ್ಷಿಕೆಯೇ ಅದ್ಭುತ ಅಲ್ವಾ..?  ಸಾಗರದಷ್ಟು ಅಸ್ಮಿತೆಯನ್ನು ಮನಸ್ಸಿನ ಆಳ ಅಗಲದಲ್ಲಿ ಸಮೀಕರಿಸಿ ಕವಿತೆಗಳ ಗುಚ್ಛವನ್ನೇ ಓದುಗ ದೊರೆಗಳಿಗೆ ನೀಡಿರುವದು ಖುಷಿಯ ಸಂಗತಿ. ಈ ಕೃತಿ ಕೇವಲ ಏಕಮುಖವಾಗಿ ಬಿಂಬಿತವಾಗಿಲ್ಲ, ಹಲವಾರು ಮುಖೇನದಲ್ಲಿ ತನ್ನ ವಾಸ್ತವಿಕೆತೆ, ಕಾಲ್ಪನಿಕತೆ ವಿಭಿನ್ನವಾದ ವಿಷಯ ವಸ್ತುವಿನ ಆವಿಸ್ಕಾರದಲ್ಲಿ ಒಳಗೊಂಡಿದೆ. ಆಶಾ ಹೆಗಡೆ ಅವರಿಗೆ ಮೊದಲು ಕೃತಿ ಎಂದು ಕಾಣಿಸಿದರು ನಮ್ಮಂಥ ಓದುಗರಿಗೆ ಅನುಭವಗಳಿಂದ ಅದೆಷ್ಟೋ ಕೃತಿಗಳು ಬರೆದಿರಬಹುದು ಎಂಬ ಊಹೆ ನಮ್ಮನ್ನು ಕಾಡದೆ ಬಿಡದು.ಕವನ, ಕವಿತೆಯ ಸಾಲುಗಳು ಮನೋಜ್ಞ ಸಾರವನ್ನು ಎತ್ತಿ ಹೇಳುತ್ತಿವೆ. ಮನಸೆಂಬ ಸಾಗರದಲ್ಲಿ ಹೊಳೆಯುವ ಚಿಂತನೆಗಳಿಗೆ ಪದಗಳ ಸರಮಾಲೆ ಪೋಣಿಸಿ ಇಲ್ಲಿ ಕವಿತೆಗಳು ಸಾರ್ಥಕವೆನಿಸಿವೆ. ಭಾವನೆಗಳು ಬದುಕನ್ನು ತಬ್ಬಿ ಹಿಡಿದಿರುವ ಸಂದರ್ಭದಲ್ಲಿ ನಡೆಯುವ ಅಸಂಖ್ಯಾತ ಭಾವ ಸಂವಾದಗಳಿಗೆ ಅಕ್ಷರಗಳ ರೂಪ ಕೊಟ್ಟ ಮನಃಸಾಗರ ಸಾಗರದ ಚೆಲುವನ್ನು ಘನೀರ್ಭವಿಸಿಕೊಂಡಿದೆ.

ಈರ್ಷೆ ಕುಣಿಯುವ ಕಣ್ಣಿಂದ ಜಾರಿ/ ಮುಖವಾಡದ ಚಹರೆಯೊಳ ಗಿಂದ ಉದುರಿ/ ಕಪಟ ನಗು ವೊಂದರಿಂದ ನೆಗೆದು / ಅನೈತಿಕತೆಯ ಹಾದಿಯಿಂದ ದೂರ ದೂರ ಓಡಿ ಸತ್ಯ ಕಾಣೆಯಾಗಿದೆ “

ಕಾಣೆಯಾದ ಸತ್ಯದ ಹುಡುಕಾಟ ಸುಲಭ ಇಲ್ಲ ಎಂದರಿತರು ಹುಡುಕಾಟದ ತೀವ್ರತೆ ಕವಿತೆಯಲ್ಲಿ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಕವಿತೆಗಳು  ಆದರೂ ಸುಳ್ಳಿನ ಮುಖವಾಡಗಳನ್ನು ಅಲ್ಲಗಳೆಯಲಿ ಎಂಬ ಆಶಾವಾದ ಆಶಾರವರ ಕವಿತೆಗಳಲ್ಲಿ ಇವೆ. 

 ಹೃದಯದ ಪಿಸುಮಾತಿಗೆ ಗಟ್ಟಿ ಧ್ವನಿಯನ್ನು ಕೊಡುವುದರಲ್ಲಿ ಮನಃಸಾಗರದ ಕವಿತೆಗಳು ಓದುಗರ ಮನಸ್ಸನ್ನು ಗೆದ್ದಿವೆ. 

ಆಶಾವಾದದ ಅವಳ ಕನಸು/ ಜೇಡನ ಬಲೆ, ಅಡುಗೆ ಒಲೆ/ ಖಾಲಿ ಆಗುತ್ತಿರುವ ಉಪ್ಪು/ ಸೋಯಿಸದೆ ಬಿಟ್ಟ ಸೊಪ್ಪು/ ಎಂಬ ನೆಪದಿಂದ ಬಗ್ಗುತಿಲ್ಲ / ಸಾಧನೆಯ ಹಾದಿಯಲ್ಲಿ ಇರುವ ಶಕ್ತ ಮನಸು/ ಹೀಗೆ ಸಾಗುವ ಹಾಡು ಕವಿತೆಗು ಕನಸಿಗೂ ಸೇತುವೆಯಾಗಿ ಇದೆ.

ಕವಿತೆ ಎಂಬುದು ಬರಿ ಪದಕ್ಕೆ ಪದ ಸೇರಿಸುವ ಆಟವಲ್ಲ ಎಂಬುದಾಗಿ ಅರಹುತ್ತ ಇದರ ಒಡನಾಟದಿಂದ ಆದ ಶಕ್ತ ಮನಸನ್ನು ಅರಹುತ್ತಾರೆ ಕವಯತ್ರಿ. ಸಮಾಜಮುಖಿಯಾದ ಇಲ್ಲಿನ ಸಾಲುಗಳು ಓದುಗರನ್ನು ಪ್ರಭಾವಿಸುವ ಪರಿ ಅಭೂತಪೂರ್ವ ಸ್ವಗತಿಸಿವೆ. ನಗುವ ನಕ್ಷತ್ರಗಳು ಕವಿತೆಯಲ್ಲಿ ಮುಸಿನಗುತ, ಪಿಸುಗುಡುತ ಮಗ್ಗಲು ಬದಲಿಸುವ ಮನಕೆ ನಾಳೆಗಳ ಹುರುಪು.., ಹೀಗೆನ್ನುತ ನಗುತ್ತಿರುವ ನಕ್ಷತ್ರಗಳು ಪರಿಸ್ಥಿತಿಯಲ್ಲ ಮನಸ್ಥಿತಿ ಎನ್ನುತ್ತಾರೆ. ನಮ್ಮ ಸಮಾಜದ ವೈರುಧ್ಯಗಳು, ಇಲ್ಲಿನ ವ್ಯಾಪಕ ಬದಲಾವಣೆಗಳು ಕವಿತೆಗಳಲ್ಲಿ ಸಶಕ್ತವಾಗಿ ಹೊರಹೊಮ್ಮಿದೆ. ಬಂಧಿಸದಿರಿ, ಕತ್ತಲಾದಂತೆ, ಬುನಾದಿ, ಕೊನೆಗುಳಿದದ್ದು, ಆತ್ಮದ ಸ್ವಗತ, ಮನಗಮ್ಯ, ಇನ್ನಾದರೂ ಎಚ್ಚತ್ತುಕೊಳ್ಳೋಣ ಎನ್ನುವ ಮತ್ತು ಸಂದೇಹವಲ್ಲದ ಸಾರ್ಥಕ ಬದುಕಿನ ಧನಾತ್ಮಕ ಚಿಂತನೆಗಳು ಅಡಕವಾಗಿವೆ. ಹೀಗೆ ಅನೇಕ ಮುಂತಾದ ಕವಿತೆಗಳು, ಕವಯತ್ರಿ ವ್ಯವಸ್ಥೆಯ ವಿರುದ್ಧ  ಸಿಡಿದೇಳುವ ಕುರುಹುಗಳು. ಸಮಾಜದ ಓರೆಕೋರೆಗಳನ್ನು ಪ್ರಕಟಿಸುವವರೆ ನಿಜವಾದ ಬರಹಗಾರರು ತಾನೇ..? ಅಂಕುಡೊಂಕುಗಳನ್ನು ತಿದ್ದಿ ತೀಡುವರೇ ನೈತಿಕತೆಯನ್ನೊತ್ತ ಮೇರು ಬರಹಗಾರರಲ್ಲವೇ..??

       ಬದುಕು ಹೀಗೆಯೇ ಇರಬೇಕೆಂದು ನಿರ್ಧರಿಸಿದ ಶರ ಪರಿಗಳು.., ಪರಮಾವಧಿ ಕವಿತೆಯ ಈ ಸಾಲು ಬದುಕಿನ ನಿಗೂಢತೆಗೆ ತಕ್ಕ ಉತ್ತರ ದಂತಿದೆ.ಕೊನೆಗೊಂದು ದಿನ ಆವರಿಸಿಕೊಳ್ಳುವ ಶೂನ್ಯ ಭಾವವನ್ನು ಹೊಡೆದೋಡಿಸುವ ಪರಿ ಅನನ್ಯವಾಗಿದೆ. ಹೀಗೆ ಅಂತರಂಗದಿಂದ ಜನಿಸಿದ ಇಲ್ಲಿನ ಕವಿತೆಗಳು ಆಶಾ ಅವರಿಗೆ ಮೀಟು ಗೋಲು ಆದರೆ ಅನುಭವಿಸುವ ನಾವುಗಳಿಗೆ ನಾದಸ್ವರಗಳು. ಪ್ರತಿ ಕವಿತೆಯ ಹೂರಣದ ಆಯ್ಕೆ ವಿಶೇಷವಾದ್ದರಿಂದ ಕವಿತೆಗಳು ಹೊಸತನದಿಂದ ಕೂಡಿದೆ. ಇದು ಸುಮುಧರ ಭಾವನೆಗಳ ಗುಚ್ಛ. ಕಾವ್ಯವೆಂದರೆ ಹೀಗೆ ಸಶಕ್ತ ಪ್ರಕಾರವಾಗಿ ಅದರಲ್ಲೂ ಕವಯತ್ರಿಯರಿಗೆ ಭಾವದೊಂದಿಗೆ ಅನುಸಂಧಾನ ಮಾಡುವ ಪ್ರಕಾರ ಎಂದರೆ ಪ್ರಾಯಶಃ ತಪ್ಪಲ್ಲ. ಯಾಕೆಂದರೆ..? ಮಹಿಳೆಯ ಪ್ರಪಂಚದ ಹೊರನೋಟಕ್ಕೆ (ಹ)ಅರಿವಾದಂತಲ್ಲ ಅದರಲ್ಲಿ ಬೇರೇನೋ ನಿಗೂಢತೆ ಅಡಕವಾಗಿದೇ ಎಂಬ ಲೆಕ್ಕಾಚಾರದಲ್ಲಿ ಪ್ರಬುದ್ಧತೆ ಉತ್ಪತ್ತಿಯಾಗುತ್ತದೆ. ಅದಕ್ಕಾಗಿ ಕವಿತೆ ಅತ್ಯುತ್ತಮ ಮಾಧ್ಯಮ ಎಂಬ ಅಭಿಮತಕ್ಕೆ ಬರಬಹುದು. ಹೀಗಾಗಿ ಆಶಾ ಅವರು ಇದನ್ನೇ ಆರಿಸಿಕೊಂಡು ಓದುಗರ ಮನಸ್ಸನ್ನು ಸಂಪುರ್ಣವಾಗಿ ಗೆದ್ದಿದ್ದಾರೆ ಎಂಬ ಇಂಗಿತ ನನ್ನದಾಗಿದೆ.

       ಹೀಗೆ ತನ್ನ ಸುತ್ತಮುತ್ತಲಿನ ವಾತಾವರಣಕ್ಕೂ ತಕ್ಕುದಾಗಿಯೇ ಸ್ಪಂದಿಸುತ್ತ, ಸೂಕ್ಷ್ಮವಾಗಿ ವಿಶಿಷ್ಟ ರೀತಿಯಲ್ಲಿ ಅವಲೋಕಿಸುತ್ತ ಕವಿತೆಯ ಕೈ ಹಿಡಿದ ಆಶಾರವರನ್ನು ಕವಿತೆಯು ಕೈಬಿಡಲೊಳ್ಳದು ಎಂಬುದು ನಮಗೂ ದಿಟವಾಗುತ್ತದೆ. ಇದೀಗ ೨೦೨೨ ರಲ್ಲಿ ಈ ಪ್ರಥಮ ಮುದ್ರಣವಾಗಿ ತನ್ನ ಸ್ವಂತ ಪರ್ವ ಪುಸ್ತಕ ಪ್ರಕಾಶನದಿಂದ ಲೋಕಾರ್ಪಣೆಗೊಂಡ ಆಶಾರವರ ಕೃತಿಗೆ ಲೋಕ ಮನ್ನಣೆ ಸಿಗಲಿ, ಈ ನಾಡು ಕಂಡ ಎಣಿಕೆಗೆ ಸಿಗದ ಬರಹಗಾರರ ಸಾಲಿನಲ್ಲಿ ಸದೃಢವಾಗಿ ಗಟ್ಟಿಗಿತ್ತಿಯಂತೇ ನಿಲ್ಲಲಿ.ಓದುಗರ ಮನೆ, ಮನವನ್ನು ಸೇರಲಿ.ಇನ್ನು ಹೆಚ್ಚೆಚ್ಚು ಕೃತಿಗಳು ಧಾವಿಸಲಿ ಎಂಬ ವೈಚಾರಿಕ ನೆಲೆಯಲ್ಲಿ ಆಶಾ ಹೆಗಡೆ ಅವರನ್ನು ನಾವೆಲ್ಲರೂ ನಿಷ್ಕಲ್ಮಶವಾಗಿ ಹಾರೈಸೋಣ. 


ಸಂಗೀತಾರವಿರಾಜ್

One thought on “ಆಶಾ ಹೆಗಡೆಯವರ ಸಂಕಲನ-ಮನಃಸಾಗರ

Leave a Reply

Back To Top