ಗುಂಡಿ ದೇವ!ರೂಪ ಮಂಜುನಾಥ-ಲಲಿತ ಪ್ರಬಂಧ

ಪ್ರಬಂಧ

ಗುಂಡಿ ದೇವ!

ರೂಪ ಮಂಜುನಾಥ

 “ದೇವಾ!ನನಗೀಗ ವೆಂಕಟೇಶ್ವರ ಸ್ವೀಟ್ ಮೀಟ್ ಸ್ಟಾಲಿನ ಮೈಸೂರುಪಾಕು ತಿನ್ನುವಂತಾಗಿದೆ”, ಅಂತ ಭಕ್ತಿಯೆನ್ನುವ ಪೇಮೆಂಟ್ ಹಾಕಿ, ಗುಂಡಿ ಒತ್ತಿ ಬೇಡಿಕೊಂಡರೇ ಸಾಕು.”ಕುಯ್ ಕುಯ್ “,ಅಂತ ಸದ್ದು ಮಾಡಿ,”ಭಕ್ತೆ ನಿನ್ನ ಭಕ್ತಿಗೆ ಮೆಚ್ಚಿದ್ದೇನೆ.ನಿನ್ನ ಅಭೀಷ್ಟವನ್ನು ಇನ್ನೂ ಮೂವತ್ತು ನಿಮಿಷಗಳಲ್ಲಿ ಪೂರೈಸುತ್ತೇನೆ”,ಎಂಬ ಸಂದೇಶ ಕಳಿಸಿ,ಕೆಲವೇ ನಿಮಿಷಗಳಲ್ಲಿ ಕಾಲಿಂಗ್ ಬೆಲ್ ನ ಗುಂಡಿ “ಢಣ್”,ಎಂದು ಒತ್ತಿದ ಸದ್ದಾಗುತ್ತದೆ.ಬಾಗಿಲು ತೆಗೆದರೆ,ಗುಂಡಿ ದೇವನ ದೂತ ವಿನಮ್ರನಾಗಿ ಮೈಸೂರುಪಾಕಿನ ಡಬ್ಬಿ ಹಿಡಿದು ನಿಂತಿರುತ್ತಾನೆ. ಇಂಥ ಅನುಕೂಲ ಅನುಭವಿಸುತ್ತಿರುವ ”ನಾನೇ ಭಾಗ್ಯವತೀ, ಇಂದು ನಾನೇ ಪುಣ್ಯವತೀ!” ಎಂದು ಹಾಡಿದರೆ ಅತಿಶಯೋಕ್ತಿಯೇನಲ್ಲ. ಯಾಕೆಂದರೆ, ಈ ಅನುಕೂಲ ನಮ್ಮಜ್ಜಿಯರಿಗೆ ಬೇಡ ಬಿಡಿ, ನಮ್ಮಮ್ಮನ ಕಾಲದಲ್ಲಿತ್ತೇ?ಅವರೇನೂ, ನಾನೂ ಕೂಡಾ ಚಿಕ್ಕವಳಿದ್ದಾಗ ಕನಸಿನಲ್ಲಿಯೂ ಊಹಿಸಿರಲಿಲ್ಲ.

      “ದೇವಾ!ಥಂಡಿಯೋ ಥಂಡಿ, ಕೆಲಸ ಮಾಡೋಕೆ ಮನ್‌ಸೇ ಇಲ್ಲ.ತರಕಾರಿ ಹೆಚ್ಚಲು ಬೋರು.ಎರಡು ಬ್ಯಾಗು ಹುಳಿಗೆ ಹೆಚ್ಚಿದ ತರಕಾರಿ,ಒಂದು ಬ್ಯಾಗು ಚಿಕ್ಕದಾಗಿ ಪಲ್ಯಕ್ಕೆ ಹೆಚ್ಚಿದ ತೊಂಡೇಕಾಯಿ,ಒಂದು ಕೇಜಿ ದೋಸೆ ಹಿಟ್ಟು,ಒಂದು ಪ್ಯಾಕೆಟ್ ಚಟ್ನಿ ಮಿಕ್ಸು,ಒಂದು ಬ್ಯಾಗು ತೆಂಗಿನ ತುರಿ ಪ್ರಸಾದಿಸು ತಂದೆ”,ಅಂತ ದೀನಳಾಗಿ ದಕ್ಷಿಣೆ ಹಾಕಿ ಗುಂಡಿ ಒತ್ತಿದರೇ ಸಾಕು, ಗುಂಡಿದೇವ ಕೆಲವು ಕ್ಷಣಗಳಲ್ಲೇ ದೊಡ್ಡ ಬುಟ್ಟಿಯಲ್ಲಿ ( ಬಿಗ್ ಬಾಸ್ಕೆಟ್) ನಲ್ಲಿ ನನ್ನ ಬೇಡಿಕೆಯೆಲ್ಲಾ ತುಂಬಿ,ನನ್ನ ಮನೆ ಬಾಗಿಲಿಗೇ ಪ್ರಸಾದಿಸುತ್ತಾನೆ.ಹೌದ್ರೀ, ಗುಂಡಿ ದೇವನ ಕೃಪಾಕಟಾಕ್ಷ ನೋಡಿ”ಇಂಥ ಆನಂದ ನಾ ತಾಳಲಾರೇ,ಒಂದು ಮಾತಲ್ಲೆ ನಾ ಹೇಳಲಾರೇ!”ಸತ್ಯ ಕಣ್ರೀ.

      ಇದೇನು ಓಬೀರಾಯನ ಕಾಲದ ಕತೆಯಲ್ಲ ಕಣ್ರೀ, ಕೇವಲ ಒಂದು ಇಪ್ಪತ್ತು ಮೂವತ್ತು ವರ್ಷಗಳಲ್ಲಿ ಊಹಿಸಲೂ ಸಾಧ್ಯವಾಗದ ಬದಲಾವಣೆಗಳನ್ನ ನಮ್ಮ ಬದುಕಿನಲ್ಲಿ ಕಾಣ್‌ತಿದ್ದೀವಿ.ಕರುಣೆ ತೋರಿಸಿ ಆ ಭಗವಂತ ಇನ್ನೊಂದಿಪ್ಪತ್ತು ವರ್ಷವೇನಾದ್ರೂ ಬದ್ಕೋದಕ್ಕೆ  ಪರ್ಮಿಷನ್ ಕೊಟ್ರೆ, ಅಷ್ಟೊತ್ತಿಗೆ ಈ ಅಸಾಧ್ಯ ಮಾನವ ಇನ್ನೇನು ಪ್ರಚಂಡ ಕೆಲಸಗಳನ್ನ ಸಾಧ್ಯ ಮಾಡ್ತಾನೋ,ಈ ಕಣ್ಣಲ್ಲಿ ನೋಡ್‌ಬಿಟ್ಟು,ಗಂಡೀಲಿ ಬಿದ್ದು  ರೈಟ್ ಅನ್ಬೋದು. ಅಷ್ಟೇ ನಮ್ ಕೈಲಿ ಮಾಡೋಕ್ಕಾಗೋದು.   

   ನಾವು ಚಿಕ್ಕವರಿದ್ದಾಗ ಅಡಗೂಲಜ್ಜಿಗಳು ಕತೆ ಹೇಳೋರು.ನಮ್ ಕಾಲ್ದಲ್ಲೀ…….ಅಂತ. ಈಗ, ನಾನೇನೂ ಇನ್ನೂ ಅಡಗೂಲಜ್ಜಿ ಆಗಿಲ್ಲ( ಹಂಗಂದುಕೊಂಡಿದ್ದೀನಿ)ಈಗ್ಲೇ ನಮ್ ಕಾಲ್ದಲ್ಲೀ…ಅಂದುಕೋತಾ ನಮ್ಮ ಗತಕಾಲವನ್ನ ನೆನೆಪಿಸಿಕೊಂಡು ಈಗ ಗುಂಡಿ ಒತ್ತುತ್ತಾ ಕೂರುವುದಾಗಿದೆ.

  ನನ್ನ ಮದುವೆ ಆದ ಮೇಲೂ, ಬೆಳಗ್ಗೆ ಎದ್ದ ಕೂಡಲೇ ಒಟ್ಟಿರುವ ಸೌದೆ, ಕಾಯಿಮಟ್ಟೆ,ನೀರೊಲೆಗೆ ತುಂಬಿ ಕಡ್ಡಿಗೀರಿ,”ಉಫ್……ಉಫ್……”ಅಂತ ಕುಕ್ಕರಗಾಲಲ್ಲಿ ಕೂತು ಜೋರಾಗಿ ಊದಿನ ಕೊಳವೆಯಲ್ಲಿ ಊದಬೇಕಿತ್ತು.ಅಲ್ಲಿ ನನ್ನ ಪ್ರಾಣಾಯಾಮ ಫಿನಿಶ್ ಆಗೋದು, ಹಂಡೆ ನೀರೂ ಕಾದಿರೋದು.ಟೂ ಇನ್ ಒನ್ ಜಾಬ್.ಜೊತೆಗೆ ಈ ಚಳಿಗಾಲದಲ್ಲಿ ನೀರೊಲೆಯ ಮುಂದೆ ಚಳಿಕಾಯಿಸುತ್ತಾ ಅನುಭವಿಸುವ ಸುಖ,ಸವಿದವರಿಗೇ ಗೊತ್ತು!ಈಗೇನಿಲ್ಲ, ಎದ್ದು ಗೀಸರ್ ಗುಂಡಿ ಒತ್ತಿ, ಅಷ್ಟೇ.ಅಯ್ಯೋ, ಈ ಗುಂಡಿಯಾದ್ರೂ ಶ್ರಮಪಟ್ಟು ಯಾಕ್ ಒತ್ಬೇಕು ಅಂತ ಇನ್ನು ಶಾರ್ಟ್‌ಕಟ್ ಹುಡುಕಿ, ಸೂರ್ಯ (ಸೋಲಾರ್ )ದೇವರಿಗೆ ಶರಣಾಗಿದ್ದಾನೆ ಈ ಮಾನವ.

   ನಮ್ ಹುಟ್ಟಿದ ಊರ್ ತಿಪಟೂರಲ್ಲಿ ಮೊದಲಿನಿಂದ್ಲೂ ನೀರಿಗ್ ದರಿದ್ರ.ಮನೆಮಂದಿಯೆಲ್ಲ ಸರದಿಯಲ್ಲಿ ಬೋರ್ವೆಲ್ ಒತ್ತಿ ನೀರು ತರಲೇಬೇಕಿತ್ತು.ಮನೆ ಹಿತ್ತಲಿನಲ್ಲಿ ಬಾವಿಯಲ್ಲಿ ನೀರೂ ಸೇದಬೇಕಿತ್ತು. ಹಾಗಾಗಿ ನೀರೂ ಸೇದಿ,ಬೋರ್ವೆಲ್ಲ್ ಒತ್ತಿ ಹಂಡೆ, ತೊಟ್ಟಿ, ಪಾತ್ರೆ ಪಗಡೆ ತುಂಬಿಸುವುದರೊಳಗೆ ದೇಹದ ವ್ಯಾಯಾಮವೂ ಸಖತ್ತಾಗಿ ಆಗೇ ಹೋಗುತ್ತಿತ್ತು.ಯಾರಿಗೂ ಎಕ್‌ಸ್‌ಕ್ಯೂಸ್ ಇಲ್ವೇ ಇಲ್ಲ.ನನ್ನ ಮದುವೆಯ ಚಪ್ಪರದ ದಿನವೂ ಬೋರ್‌ವೆಲ್‌ ಒತ್ತಿ ನೀರು ತುಂಬಿಸಿದ್ದೀನಿ. ಆದೇ ಈಗಿನ ಮಕ್ಕಳಿಗೆ ಮದುವೆ ನಿಶ್ಚಯವಾದ್ರೆ, ಅದೇನು ಸೆಲಿಬ್ರಿಟಿ ಟ್ರೀಟ್‌ಮೆಂಟೂ ಅಂತೀರೀ!ಬಿಡಿ, ನಮಗಾ ಭಾಗ್ಯ ಇರ್ಲಿಲ್ಲ.ನನ್ ತವರ್ನಲ್ಲಿನ ಅಣ್‌ತಮ್ಮಾಸ್, ಅತ್ತಿಗೆಯರು ನೀರಿಗಾಗಿ ಒದ್ದಾಡಬಾರದು.ಪಾಪ!ನನ್ ತವರು ಚೆನ್ನಾಗಿರ್ಲಿ,ಹಸಿರಿಂದ ಚಿಗುರಲೀಂತ ಈಗೊಂದು ಹತ್ತನ್ನೆರಡು ವರ್ಷಗಳ ಹಿಂದೆ ನಾವೇ ನಮ್ಮ ಹೇಮಾವತಿಯನ್ನು ಅಲ್ಲಿಗೆ ಕಳಿಸಿದಾಗಿಂದ, ಅಲ್ಲಿನ ನನ್ನ ಬಂಧುಗಳು ಈಗ ಸ್ವಲ್ಪ ಸುಖವಾಗಿದ್ದು ಸಿಹಿಯಾದ ನೀರು ಕುಡಿಯುತ್ತಿದ್ದಾರೆ.” ಹಾಲುಂಡ ತವರೀಗೆ ಏನೆಂದು ಹಾಡಲಿ, ಹೊಳೆದಂಡೇಲಿರುವ ಕರಕೀಯಾ ಕುಡಿ ಹಾಂಗ ಹಬ್ಬಾಲಿ ಅವರ ರಸಬಳ್ಳೀ”,ಅನ್ನುವ ಉದಾತ್ತ ಮನೋಭಾವದಿಂದ!ಈಗೇನಿಲ್ಲ, ಅಲ್ಲಿಯಾದರೂ ಸರಿ, ಇಲ್ಲಿಯಾದರೂ ಸರಿಯೇ, ಗುಂಡಿದೇವನನ್ನು ಒತ್ತಾಯಿಸಿದರೆ, ಎಲ್ಲರ ಮನೆಗಳ ಟ್ಯಾಂಕುಗಳಿಗೂ ಗಂಗೆಯನ್ನು ಹರಿಸಿ ನಮ್ಮನ್ನ ತಣ್ಣಗಿರಿಸುತ್ತಾನೆ.

     ನಮ್ಮತ್ತೆಯವರು, ನಾನು ಬಂದ ಮೇಲೆ ಮಿಕ್ಸರ್ ಇದ್ದರೂ ಕೂಡಾ ಗಸಗಸೆ ನುರಿಯುವುದಿಲ್ಲ,ಚಟ್ನಿ ರುಚಿಸುವುದಿಲ್ಲವೆಂದು ಒರಳು ಕಲ್ಲಿನಲ್ಲೇ ಗಂಧದಂತೆ ನನ್ನ ಕೈಯಿಂದ ತಿರುವಿಸುತ್ತಿದ್ದರು.ಕೈ ಆಡಿಸೀ ಆಡಿಸೀ,ಬೇಜಾನು ವ್ಯಾಯಾಮ ಆಗೇ ಹೋಗೋದು.ಆಗ,ಚಾಕರೀ ಮಾಡೀ ಮಾಡೀ ಇಂದಿಗೂ ಅಲರ್ಜಿಯಾಗಿ ರುಚಿ ಯಾರಿಗ್ ಬೇಕೂಂತ, ನಾನೂ ಗುಂಡಿ ಒತ್ತುವುದೇ! ಕಾಲಾಯ ತಸ್ಮೈ ನಮಃ!

      ಸೌದೇ ಒಲೆ, ಒರಳುಕಲ್ಲು, ನೀರು ಸೇದುವ ಹಗ್ಗ,ಸೀಮೆ ಎಣ್ಣೆ ದೀಪ, ಬೀಸಣಿಗೆ,ಇವುಗಳನ್ನೆಲ್ಲು ನಮ್ ಅಜ್ಜೀರು, ಅತ್ತೆಯವರುಗಳ ಜೊತೆಯಲ್ಲಿ ಅಟ್ಟಕ್ಕೆ  ಕಳಿಸಿ ಟಾಟಾ ಬೈಬೈ ಹೇಳಿ, ಸುಲಭವಾಗಿ ಗುಂಡಿ ಒತ್ತುತ್ತಲೇ ಬೇಕಾದ ಅನುಕೂಲಗಳನ್ನೆಲ್ಲಾ ಅನುಭವಿಸುತ್ತಿದ್ದೇವೆ.

       ಮಕ್ಕಳಿಗೀಗ ಮನೆಯೇ ಪಾಠ ಶಾಲೆ,ಆಟದ ಮೈದಾನ,ಮನರಂಜನೆಯ ಲೋಕ. ಗುಂಡಿದೇವನೇ ಈಗ ವಿದ್ಯೆ ಬುದ್ದಿ ನೀಡುವ ಡುಂಡಿರಾಜ!ಗುಂಡಿದೇವನ ಒತ್ತುತ್ತಲೇ ಬೇಕಾದ ಆಟೋಟ ಆಡಿಕೊಳ್ಳುವ ವ್ಯ(ಅ)ವಸ್ಥೆ!

ಗುಂಡಿ ಒತ್ತುತ್ತಲೇ ಬೇಜಾರು ಕಳೆಯುವ ಕರ್ಮಕಾಂಡ!ಗಂಡಿ ಒತ್ತುತ್ತಲೇ ಗುಂಡಗಾಗುತ್ತಿರುವ ಮಕ್ಕಳನ್ನ ಹೆಂಗಾದರೂ ಮಾಡಿ ಸಣ್ಣ ಮಾಡಬೇಕಾಗಿರುವುದು ಈಗ ಮಮ್ಮಿ ಡ್ಯಾಡಿಯವರಿಗಿರುವ ಮಂಡೆ ನೋವು.ಗುಂಡಿ ಒತ್ತಿ ಪಾಠಕ್ಕೆ ಕೂತ್ಕೊಳ್ರೋ,     ಅಂತ ಒಂದ್ ಕಡೆ ರಾಗ ತೆಗೆದ್ರೆ, ಗುಂಡಿ ಒತ್ತಿ ಹಾಳಾಗ್‌ಬೇಡ್ರೋ         ಅಂತ ಚಂಡಿ ಹಿಡಿದಂತೆ ಕೂತು ಆನ್ಲೈನ್ ಆಟಗಳನ್ನಾಡುವ ಹುಡುಗರನ್ನ ಇನ್ನೊಂದ್ ಕಡೆ ಬೇಡಿಕೊಳ್ಳುವ, ಗೋಗರೆಯಬೇಕಾದ ಪರಿಸ್ಥಿತಿ.

     ಒಂದು ಕಾಲಕ್ಕೆ( ಹಂಗಂದ್ರೆ ಕ್ರಿಸ್ತಪೂರ್ವ ಅಲ್ಲ ಕಣ್ರೀ) ಈಗ್ಗೆ ಮೂವತ್ತು ನಲವತ್ತು ವರ್ಷಗಳ ಹಿಂದೆ, ಎಂಥ ದೊಡ್ಡ ಭಾಗಾಕಾರ, ಗುಣಾಕಾರಗಳಾದರೂ ಚಕಚಕಾಂತ ಪೆನ್ನು ಪುಸ್ತಕ ಹಿಡಿದು ಲೆಕ್ಕಾಚಾರ ಹಾಕ್‌ತಿದ್‌ವಿ. ಅಂಗಡಿಗಳಲ್ಲಿ ಎಷ್ಟುದ್ದದ ಲೆಕ್ಕಾಚಾರ ಇದ್ದರೂ, ಸರಸರ ಕೂಡಿ ಮುಗಿಸುತ್ತಿದ್ದವರಿಗೆ, ಈ ಗುಂಡಿ ಒತ್ತುವ ಕ್ಯಾಲುಕುಲೇಟರ್ ಬಂದಾಗಿನಿಂದ ಯಾರಿಗೂ ತಲೆಯೇ ಓಡುವುದು ಕಡಿಮೆಯಾಗಿದೆ. ಎರಡು ಮೂರು ಸಂಖ್ಯೆಯ ಕೂಡು ಕಳೆಯುವಿಕೆಗೂ ಗುಂಡಿ ಒತ್ತುತ್ತೇವೆಯೇ ಹೊರತು ತಲೆ ಓಡಿಸುವ ಬಾಧೆ ಪಡುವುದ್ಯಾಕೇಂತ ಬಿಟ್ಟೇಬಿಟ್ಟಿದ್ದೇವೆ.

       ಅಂಗಡಿಯಲ್ಲಿ ಕೂತು ಸಂಪಾದನೆ ಮಾಡುವವರಿಗಿಂತಲೂ,ಈಗೀಗ ಗುಂಡಿ ಒತ್ತಿ ಸಂಪಾದನೆ ಮಾಡುವವರೇ ಹೆಚ್ಚು.ಗುಂಡಿರಾಜನನ್ನು ಒಲಿಸುವ ಸರಿಯಾದ ಬೀಜಮಂತ್ರಗಳನ್ನ ಜಪಿಸಿ,ಕಾಲ, ನಕ್ಷತ್ರ ನೋಡಿ,ಸರಿಯಾಗಿ ಒತ್ತಿ ಬೇಡಿಕೊಂಡೆವಾದರೆ,(ಅನ್ಲೈನ್ ಸ್ಟಾಕು ಶೇರು, ಆನ್ಲೈನ್ ಬುಲಿಯನ್ ಟ್ರೇಡಿಂಗ್)ಗುಂಡಿರಾಜ ಪ್ರಸನ್ನನಾಗಿ “ಧನಕನಕಾ”ದಿಗಳ ಮಳೆಯನ್ನೇ ಹರಿಸಿ ಕರುಣಿಸುತ್ತಾನೆ.ಅವನನ್ನು ಒಲಿಸಿಕೊಳ್ಳುವ ಕಲೆ ಗೊತ್ತಿರಬೇಕು. ಅಷ್ಟೆ.ದಂಡಿಯಾಗಿ ಕತ್ತೆ ಚಾಕರಿ ಮಾಡಿ ಗಳಿಸುವುದಕಿಂತಲೂ, ಸರಿಯಾಗಿ ಮಂಡೆ ಉಪಯೋಗಿಸಿ ಗುಂಡಿದೇವನ ಒತ್ತಿ, ಹಣದ ಮಳೆ ಕರೆಸುವುದೇ ಲೇಸೆಂದಳು ನನ್ನೊಳಗಿರುವ ಅರ್ಥಜ್ಞೆ!

      ಒಂದು ಕಾಲಕ್ಕೆ ಬಂಡಿ ಓಡಿಸಬೇಕಾದರೆ, ಕ್ಲಚ್ಚು, ಬ್ರೇಕೂ, ಸ್ಟೇರಿಂಗು,ಗೇರೂ ಅಂತ ಕೈಕಾಲು ಆಡಿಸುತ್ತಲೇ ಇರಬೇಕಾಗುತ್ತಿತ್ತು.ಒಂದೆರಡು ಗಂಟೆ ಬಂಡಿಯನ್ನು ಚಲಾಯಿಸಿದರೇ ಸಾಕಷ್ಟು ವ್ಯಾಯಾಮವಾಗುತ್ತಿತ್ತು.

ಈಗ ಈ ಗುಂಡಿದೇವನ ಮಹಿಮೆಯಿಂದ ಪ್ರಯಾಣ ಸುಲಭವೋ ಸುಲಭ.ಇನ್ನು ಸೆಲ್‌ಫ್‌ ಡ್ರೈವಿಂಗ್ ಬಂಡಿಗಳು ಬೀದಿಗೆ ಸಧ್ಯದಲ್ಲೇ ಬಂದಿಳಿಯುವ ಕಾಲ.ಆಗ ಸೀಟುಗಳನ್ನಲಂಕರಿಸಿ ಡೆಸ್ಟಿನೇಷನ್ ಮಂತ್ರ ಜಪಿಸಿ ಗುಂಡಿ ದೇವನನ್ನ ಒತ್ತಿದರೆ,ಸೇರಬೇಕಾದ ಕಡೆಗೆ ಗುಂಡಿ ದೇವನೇ ಸೇರಿಸಿ ಗತಿ ಕಾಣಿಸುತ್ತಾನೆ.

     ಇನ್ನು ಈ ಗುಂಡಿಯನ್ನು  ಕೂತಲ್ಲಿಯೇ ಒತ್ತೀಒತ್ತಿಯೇ ಮೈಯೆಲ್ಲಾ ಜಡ್ಡುಹಿಡಿದ ಹಾಗಾದಾಗ,ಆ ಜಡ್ಡು ಹಿಡಿದ ಚಂಡಿಯನ್ನು ಬಿಡಿಸಲು,ಜಿಮ್ಮುಗಳಲ್ಲಿಯೂ ಗುಂಡಿ ಒತ್ತಿ ರನ್ನಿಂಗ್ ಮೆಷೀನು,ಟ್ರೆಡ್ ಮಿಲ್,ಮುಂತಾದವುಗಳನ್ನ ಬಳಸಿ ವರ್ಕೌಟು ಮಾಡುವವರಿಗೇನೂ ಕಮ್ಮಿ ಇಲ್ಲ.

ಹಾಗೇ, ತಮ್ಮ ಗುಂಡಗಿನ ಟಮ್ಮಿಯನ್ನು ಕರಗಿಸಲು ಪಾರ್ಕು,ವಾಕ್ ಪಾತೂ ಅಂತ ರೌಂಡು ಹೊಡೆದೂ ಹೊಡೆದೂ ಮನೆಗೆ ಹೋಗುವಾಗ ದಾರಿಯಲ್ಲಿ ಬೆಳಗ್ಗೆಯಾದರೆ ಫುಟ್‌ಪಾತ್ ನಿಂದ ಹಿಡಿದು ಎಂ ಟಿ ಆರ್ ವರೆಗೂ ಅವರವರ ಕೆಪಾಸಿಟಿಗೆ ಸರಿಯಾಗಿ ತಿಂಡಿ ತಿಂದು, ಸಂಜೆ ರೌಂಡಿಗೆ ಹೋದರೆ ಪಾನೀಪೂರಿ ಮಸಾಲೆಪೂರಿ ತಿಂದು ತಮ್ಮ ತೂಕ, ಹಾಗು ಟಮ್ಮಿಗೆ ಯಾವ ದ್ರೋಹವೂ ಮಾಡದೆ ನ್ಯಾಯ ಒದಗಿಸುವವರಿಗೇನೂ ಕಮ್ಮಿಇಲ್ಲ. ಯಥಾಪ್ರಕಾರ ವೈದ್ಯರಲ್ಲಿಗೆ ರೋಟನ್ ಚೆಕಪ್‌ಗೆ ಹೋದಾಗ,”ಯಾಕ್ರೀ…….. ಇನ್ನೂ ತೂಕ ಕಮ್ಮಿಯಾಗಿಲ್ಲ, ಬಿಪಿ ಶುಗರ್ ಕೂಡಾ ಹೆಚ್ಚೇ ಇದೆ. ವಾಕಿಂಗ್ ಹೋಗ್ತಿಲ್ವಾ”,ಅಂದ್ರೆ,”  ಇಲ್ಲ, ಡಾಕ್ಟ್ರೇ ನೀವೇಳಿದಂತೆ ಮುಂಜಾನೆ ಸಂಜೆ ಎರಡೂ ಹೊತ್ತು ರೌಂಡು ಹೋಡೀತೀನಿ., ಆದ್ರೂ ಅದ್ಯಾಕೋ……”ಅಂತ ಅರ್ಧಸತ್ಯ ಹೇಳಿ ಅಮಾಯಕರಂತೆ ಪೋಸು ಕೊಟ್ಟು, ಡಾಕ್ಟರರಿಗೇ ಅವರ ಟ್ರೀಟ್‌ಮೆಂಟಿನ ಬಗ್ಗೆ ಅನುಮಾನ ಹುಟ್ಟಬೇಕು. ಹಾಗೆ ಮಾಡುವ ಕಲಾಕಾರರಿಗೇನೂ ನಮ್ಮ ದುಂಡಗಿರುವ ಲೋಕದಲ್ಲಿ ಕಮ್ಮಿಇಲ್ಲ.

        ಇನ್ನು, ರೋಗಿಗಳಾದರೆ, ಔಷಧ, ಮಾತ್ರೆ ಬೇಕೆಂದರೂ, ಗುಂಡಿ ದೇವನನ್ನ ಒತ್ತಿ ಬೇಡಿಕೊಂಡರೆ,ಧನ್ವಂತರೀ ಪ್ರಸಾದವನ್ನು( ಆನ್ಲೈನ್ ಮೆಡಿಸಿನ್)ಮನೆಗೇ ಕಳಿಸಿಕೊಡುವ ವ್ಯವಸ್ಥೆಯೂ ಮಾಡಿಬಿಡುತ್ತಾನೆ ನಮ್ಮ ಗುಂಡಿದೇವ.

    ಎನ್ರೀ ಈ ಗುಂಡಿಗಳ ಮಹಿಮೆ!ದುಡಿಮೆ ಮಾಡಲೂ, ಗುಂಡಿ ಒತ್ತುವುದೇ, ಖರ್ಚು ಮಾಡಲೂ ಗಂಡಿ ಒತ್ತುವುದೇ!ತಿನ್ನಲೂ ಗುಂಡಿ ಒತ್ತುವದೇ,ಮಾರಲೂ ಗುಂಡಿ ಒತ್ತುವುದೇ.ವಿದ್ಯೆ ಗಳಿಸಲೂ ಗುಂಡಿ ಒತ್ತುವುದೇ, ವಿದ್ಯೆ ನೈವೇದ್ಯವಾಗಲೂ ಗಂಡಿ ಒತ್ತುವುದೇ!ವಧುವರಾನ್ವೇಷನೆಗೂ ಗಂಡಿ ಒತ್ತುವುದೇ,ವಿಚ್ಛೇದನಕ್ಕೂ ಗುಂಡಿ ದೇವನೇ ಮುಖ್ಯ ಕಾರಣನಾಗಿದ್ದಾನೆ.ಈಗ ಗುಂಡಿ ಒತ್ತಿ( ಆನ್ಲೈನ್)ಮದುವೆಯಾಗಿ  ಗಂಡ ಹೆಂಡತಿಯರಾಗಲೂ ಹೈಕೋರ್ಟು ಅನುಮತಿ ನೀಡಿದೆ. ಒಟ್ಟಿನಲ್ಲಿ ಸಕಲ ಕಾರ್ಯ ಕಾರಣ, ನಮ್ಮ ಗುಂಡಿದೇವಣ್ಣ.ಆದ್ರೂ, ಗುಂಡಿ ಒತ್ತಿದರೆ ಮಕ್ಕಳಾಗುಂತದ್ದೊಂದು ಕಂಡುಹಿಡುದ್ರೆ,ಜೀವ್ನ ಇನ್ನೂ ಈಸಿಯೋ ಈಸಿ.ಈಗ್ನ ಹೆಣ್ಮಕ್ಕಳ್ ಹೆರ್ಗೆ ಬೇನೇನೂ ಪಡ್ದಂಗೆ,ಹೊಟ್ಟೇನೂ ದುಂಡುದುಂಡಾಗಿ,ಮುಂದಕ್ಕೆ ಹೆತ್ ಮೇಲೆ  ಜೋತು ಬೀಳದಂಗೆ,ಅವ್ರ ಸೌಂದರ್ಯ, ಶೇಪು ಕೊನೆಗಂಟ್ಲೂ ಕಾಪಾಡ್ಕೋಬೋದು. ಯಾರಾದ್ರೂ ಬುದ್ವಂತ್ರು ಈ ಕೆಲ್ಸ ಮಾಡಕ್ಕೆ ಮುಂದ್ ಬಂದ್ ಜೀವ್ನಾನ ಇನ್ನು ಈಸಿ ಮಾಡ್ಕೊಟ್ರೆ, ಅಷ್ಟ್ ಸಾಕು!

      ತ್ರೇತಾಯುಗದಲ್ಲಿ ಶ್ರೀಕೃಷ್ಣ ಪರಮಾತ್ಮ ತನ್ನ ವಿರಾಟ್ ಸ್ವರೂಪದಿಂದ ಪಾರ್ಥನಿಗೆ  ವಿಶ್ವರೂಪ ತೋರಿಸಿದಂತೆ,ಈ ನಮ್ಮ ಗುಂಡಿ ದೇವ, ಗುಂಡಿ ಒತ್ತವುದ, ಮಾತ್ರದಿಂದಲೇ ಜೀವನವನ್ನು ಅಪಾರ್ಥ ಮಾಡಿಕೊಂಡ ನಮ್ಮಂಥವರಿಗೆ ವಿಶ್ವರೂಪ ತೋರಿಸಿ ಮಾರ್ಗದರ್ಶಕರಾಗಿರುವುದಂತೂ ನನ್ನ ಭಾವನೆಯಲ್ಲಿ ನಿಜ.ಗೀತಾಚಾರ್ಯರು ಅರ್ಜುನನಿಗೆ ಹದಿನೆಂಟು ಅಧ್ಯಾಯಗಳಲ್ಲಿ ಬೋಧಿಸಿದರೆ, ನಮ್ಮ ಗುಂಡಿ ದೇವರು ಲೆಕ್ಕವಿಲ್ಲದಷ್ಟು ಅಧ್ಯಾಯಗಳಲ್ಲಿ ಬೋಧಿಸುತ್ತಾರೆ.ಈಗ ಸುಮ್ಮನೆ ಉದಾಹರಣೆಗೆ ಗೀತೆಯನ್ನೇ ತೆಗೆದುಕೊಂಡು ಹೇಳುವುದಾದರೆ,ಅಲ್ಲಿ ಮೊದಲನೆಯ ಅಧ್ಯಾಯ” ಅರ್ಜುನ ವಿಷಾದ ಯೋಗ”,ಅರ್ಜುನನಿಗೆ ಯುದ್ದ ಮಾಡಲು ಇಷ್ಟವಿಲ್ಲದೆ ದಿಕ್ಕು ಕಾಣದೆ ಧೃತಿಗೆಟ್ಟಿರುತ್ತಾನೆ. ಅದೇ ರೀತಿಯಲ್ಲಿ ನಮಗೂ ಜೀವನದಲ್ಲಿ ಖಿನ್ನತೆಯಿಂದ ದಾರಿಕಾಣದಾದಾಗ, ಗುಂಡಿ ಒತ್ತಿದರೆ ಸಾಕು, ಕಲಿಯುಗದ ಸಹಸ್ರಾರು ಆಚಾರ್ಯರು, ಪ್ರಾಚಾರ್ಯರು, ನಮಗೆ ದಿಕ್ಕುತೋರಲು ಸರದಿಯಲ್ಲಿ ಕಾಯುತ್ತಿರುತ್ತಾರೆ.ಮೋಟಿವೇಷನಲ್ ,ಇನ್‌ಸ್‌ಪಿರೇಷನಲ್ ಸ್ಪೀಕರುಗಳು, ನಿಮಗೆ ಯಾವ ಭಾಷೆಯಲ್ಲಿ, ಎಷ್ಟು ಸಮಯಕ್ಕೆ, ಎಷ್ಟು ವಿಚಾರ ಬೇಕೋ ಅಷ್ಟೂ ಒದಗಿಸಿ ಜ್ಞಾನೋದಯ ಮಾಡಿಸುತ್ತಾರೆ.ಹಾಗೇ ಯಾರಿಗೆ ಯಾವ ವಿಷಯಾಸಕ್ತಿ ಇರುವುದೋ,ರೆಕ್ರಿಯೇಶನ್, ನಾಲೆಡ್ಜ್, ಕುಕ್ಕಿಂಗ್,ಆರ್ಟ್,ಇತ್ಯಾದಿ ಇತ್ಯಾದಿ………

ಎಲ್ಲದಕ್ಕೂ ಗುಂಡಿದೇವ ಮಾರ್ಗದರ್ಶಕನಾಗಿದ್ದಾನೆ.

    ಇನ್ನು ನಮ್ಮ ಗುಂಡಿ ದೇವನ ಪುರಾಣ ಏನು ಹೇಳೋಣ?ಹಲವಾರು ರಾಜಕಾರಣಿಗಳ ಅನಾಚಾರ,ದುಷ್ಕೃತ್ಯಗಳನ್ನ ಬೀದಿಗಳೆದು ಸಾರ್ವಜನಿಕವಾಗಿ ಅವರ ಮರ್ಯಾದೆಯನ್ನ ಹರಾಜಿಗೆ ಹಾಕುತ್ತಾನೆ ನಮ್ಮ ಗುಂಡಿ ದೇವ. ಅವರೇನು ಅದಕ್ಕೆಲ್ಲಾ ಹೆದರಿ ಕೂರುವರಲ್ಲ ಬಿಡಿ. ಆ ಭಂಡತನದ ಬಾಳು ಬಾಳಲು ನಿರ್ಧಾರ ಮಾಡಿಯೇ ಕಣಕ್ಕಿಳಿದಿರುತ್ತಾರೆ.

  ಇನ್ನು ಈ ಗುಂಡಿಗಳು ನಮ್ಮ ಜೀವನದಲ್ಲಿ ಅದೆಷ್ಟು ಹಾಸುಹೊಕ್ಕಿದೆಯೆಂದರೆ,ಮಿಕ್ಸಿ, ಫ್ಯಾನು,ಫೋನು, ಲೈಟು,ಟಾರ್ಚು ಇವುಗಳ ಯಾವ ಗುಂಡಿಗಳು ಕೆಲಸ ಮಾಡದಿದ್ದರೂ ಕೈಕಾಲು ಆಡದೇ ನಿಂತಂತಾಗುತ್ತದೆ.

ಗುಂಡಿ ಒತ್ತಿದರೆ ಸಾಕು,ಕಸ, ಮುಸುರೆ, ಬಟ್ಟೆ, ನೆಲ ಎಲ್ಲವೂ ಸ್ವಚ್ಛವಾಗುವ ಸಮಯ ಬಂದಿರುವುದರಿಂದ ಕಸಮುಸುರೆ ಮಾಡಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದ ಬೇಜಾನು  ಮನಿಯಮ್ಮನವರುಗಳ ದುಡಿಮೆಗೀಗ ಗಂಡಾಂತರವೇ ಕಾದಿದೆ.

ಶಾಲಾ ಮಕ್ಕಳಿಂದ ಹಿಡಿದು,ಆಫೀಸುಗಳಲ್ಲಿ, ವ್ಯವಹಾರಗಳಲ್ಲಿಯೂ, ಎಲ್ಲಾ ಲೆಕ್ಕಾಚಾರಗಳು, ಮಾಹಿತಿಗಳೂ ಈಗ ಗುಂಡಿ ಒತ್ತುತ್ತಲೇ ಕಂಪ್ಯೂಟರುಗಳಲ್ಲಿ ತುಂಬಿಸಿಕೊಳ್ಳುವುದರಿಂದ,ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್, ರಬ್ಬರ್, ಶಾರ್ಪ್ನರ್ ಇವುಗಳನ್ನೆಲ್ಲಾ ಉತ್ಪಾದಿಸುವ ಕಾರ್ಖಾನೆಗಳು ಈಗ ಅಲುಗಾಡುತ್ತಿವೆ. ಯಾವ ಘಳಿಗೆಯಲ್ಲಿ ನೆಲ ಕಚ್ಚಿ ಗೋವಿಂದನ ಪಾದ ಸೇರುತ್ತವೋ ಗೊತ್ತಿಲ್ಲ.

   ಈಗಂತೂ ಅಡಿಗೆ ಮಾಡುವ ರೋಬೋಗಳು ಬಂದು,ಅವುಗಳ ಗುಂಡಿ ಒತ್ತಿದರೂ ಸಾಕೂ,ನಳಪಾಕ ಇಳಿಸಿ, ಪಾಕಪ್ರವೀಣೆಯರನ್ನೂ ನಾಚಿಸುವಂತೆ, ತಳ ಹತ್ತಿಸದೇ,ಎಡವಟ್ಟು ಮಾಡದೆ,ಎಲ್ಲರ ಟಮ್ಮಿ ತುಂಬಿಸಲು ಕಾದು ಕುಳಿತಿವೆ.ಇವುಗಳೂ ಏನಾದರೂ ಜನಪ್ರಿಯವಾದರೆ, ಅಡುಗೆ ಮಾಡುವ ಕೆಲಸವೇ ಇಲ್ಲದೆ( ಈಗಲೇ ಮುಕ್ಕಾಲುವಭಾಗ ಕೆಲಸ ಇಲ್ಲ)ಆರಾಮಾಗಿ ಗುಂಡಿ ಒತ್ತುತ್ತಾ ಎಲ್ಲರ ಸಂಗಡ ಹರಟೆ ಹೊಡಿಯುತ್ತಾ, ರುಚಿರುಚಿಯಾಗಿ( ಇರುತ್ತೇಂತ ಅಂದ್ಕೊಂಡಿದ್ದೀನಿ)ಮಾಡಿ ಇಳಿಸುವ ಗುಂಡಿಪಾಕವನ್ನ ಚಪ್ಪರಿಸುತ್ತಾ ಕೂರಬಹುದು. ಅಬ್ಬಾ………. ಏನ್ ಲಕ್ಷೂರಿ  ಅಲ್‌ವಾ?

      ಈಗಿನ್ ಜನ‌ಗಳ ಮನಸ್ಥಿತಿ ಬಲೇ ಬದಲಾಗಿದೆ ಕಣ್ರೀ. ಯಾಕೇಂತೀರಾ? ಸೆಲ್ ಫೋನು ಹಿಡಿದು ಗುಂಡಿ ಒತ್ತುತ್ತಾ ಕೂತರೆಂದರೆ,ಊಟ,ತಿಂಡಿ ಕಡೆ ಗಮನವೂ ಇರೋಲ್ಲ. ಒಂದ್ ಕಡೆ, ಅದ್ ವಾಸಿ. ಏನ್ ಕೊಟ್ರೂ ತಪ್ ಹುಡುಕ್‌ದೆ ತೆಪ್ಪಗ್ ತಿಂದ್ ಹೋಗ್ತಾರೆ.ಹೆಂಡ್ತಿಗೆ ಗಂಡನ್ ಕಡೆ ಗಮನವಿಲ್ಲ, ಗಂಡನಿಗೆ ಹೆಂಡತಿಯ ಕಡೆ ಗಮನವಿಲ್ಲ. ಹೂನ್ರೀ, ಇತ್ತೀಚೆಗೆ ನಮ್ಮನೆಯಲ್ಲೂ ಫ್ರೀ ಟೈಮಿನಲ್ಲಿ ನಮ್ ನಮ್ ಪಾಡಿಗೆ ನಾವು ಗುಂಡಿ ಒತ್ತುತ್ತಾ ಇದ್ದು, ಒಬ್ಬರ ಸುದ್ದಿಗೆ ಒಬ್ಬರು ಹೋಗದೆ, ಜಗಳ, ಹಾರಾಟ, ಚೀರಾಟ ತುಂಬಾನೇ ಕಮ್ಮಿಯಾಗಿ,

ಪ್ರಶಾಂ…….ತವಾಗಿ ನಡ್ಕೊಂಡ್ ಹೋಗ್ತಾ………ಇದೆ.ಇದೊಂದು ಗುಂಡಿದೇವ ಕೊಟ್ಟ ವರದಾನ ತಾನೇ?

   ಇನ್ನು ಈಗಿನ ಜನರೇಶನ್ನುಗಳಿಗೆ ಎಲ್ಲವೂ ತಿಳಿದಿದೆಯೆಂಬ ಹಮ್ಮು ಬಹಳವೇ. ಹಾಗಾಗಿ, ಯಾರಿಗೂ ತಲೆತಗ್ಗಿಸುವ ಇರಾದೆ ಅವರಿಗಿರುವುದು ಈಗಂತೂ ದುರ್ಲಭ.ಅವರುಗಳು ಸದ್ದು ಮಾಡದೆ ತಲೆತಗ್ಗಿಸಿ ಕೂರಲು ಇರುವುದೊಂದೆ ಸಾಧನ, ಈ ಸೆಲ್ ಫೋನು.ಗುಂಡಿ ಒತ್ತುತ್ತಾ ತಲೆತಗ್ಗಿಸಿ ಕುಳಿತರೆಂದರೆ, ಲೋಕದ ಪರಿಜ್ಞಾನವೇ ಇರುವುದಿಲ್ಲ ಬಿಡಿ.ಸರ್ವರನ್ನೂ ತಲೆತಗ್ಗಿಸಿ ವಿಧೇಯರನ್ನಾಗಿ ಮಾಡುವ ಈ ಫೋನಿನೊಳಗೆ ಅಡಗಿರುವ ಗುಂಡಿ ದೇವರ ಮಹಾತ್ಮೆಗೆ ಶತಕೋಟಿ ಪ್ರಣಾಮಗಳು.

       ಲೋಕವೆಲ್ಲಾ ಈಗ ಗುಂಡಿಗಳನ್ನ  ಒತ್ತುವ ಕಾಯಕಕ್ಕೆ ಒಗ್ಗಿಹೋಗಿದೆ. ಆದರೂ ತೃಪ್ತಿಯಿಲ್ಲ. ಇನ್ನಷ್ಟು ಅನುಕೂಲಗಳನ್ನು ಮಾಡಿಕೊಳ್ಳುವ ಧಾವಂತದಲ್ಲಿ ಗುಂಡಿ ಒತ್ತುವ ಯಂತ್ರಗಳ ಆವಿಷ್ಕಾರ ಇನ್ನೂ ನಡೆಯುತ್ತಲೇ ಇವೆ.

      ಮೊನ್ನೆ ಏನಾಯ್ತೂಂದ್ರೆ, ಒಂದು ಮದುವೆ.ಧಾರೆ,ಬೆಳಗ್ಗೆ ಬೇಗನೇ ಇದ್ದುದರಿಂದ, ನಂತರದ ಶಾಸ್ತ್ರಗಳು ಬೇಗ ಮುಗಿದೇಹೋದವು. ಭೂಪಂಕ್ತಿ ಮುಗಿದ ನಂತರ ವಧೂವರರಿಬ್ಬರೂ ತಮ್ಮ ಫೋನುಗಳನ್ನು ಹಿಡಿದು, ಗುಂಡಿ ಒತ್ತುತ್ತಾ ತಮ್ಮತಮ್ಮ ಲೋಕದಲ್ಲಿದ್ದಾರೆ.ಅಬ್ಬಬ್ಬಾ…..ಈ ಗುಂಡಿದೇವನಲ್ಲಿ ಪ್ರೀತಿ ಪ್ರೇಮ ದಾಂಪತ್ಯವನ್ನೂ ಮೀರಿದ ಸಮ್ಮೋಹನಾ ಶಕ್ತಿಯಿದೆ!ಎಂದು ನನಗಾಗ ಅನಿಸದೇ ಇರಲಿಲ್ಲ.

      ಗುಂಡಿ ಒತ್ತಿ ರಾಕೆಟ್ಟು, ಕ್ಷಿಪಣಿಗಳನ್ನು ಅಂತರಿಕ್ಷಕ್ಕೇರಿಸಿ ಹಲವಾರು ಪ್ರಯೋಗಗಳನ್ನೂ ಪ್ರಯೋಜನಗಳನ್ನೂ ಪಡೆಯುತ್ತಿರುವ ಸಾಹಸೀ  ಈ ಮಾನವ. ಹಾಗೇ ಎಲ್ಲಿಂದಲೋ ಗುಂಡಿ ಒತ್ತಿ ಎಲ್ಲೋ ಅಣುಬಾಂಬುಗಳನ್ನು ಸಿಡಿಸಿ,ದೇಶಗಳನ್ನೇ ನಾಶ ಮಾಡುವ ಮನೆಹಾಳು ಸಂಶೋಧನೆಗಳನ್ನೂ ಮಾಡಿರುವ ಈ  ಮಾನವ ವೇಷದಲ್ಲಿರುವ ದಾನವ.

ಗುಂಡಿ ದೇವನ ಕರುಣೆ ಅಗಣಿತ,ಅಪರಿಮಿತ.ಏನೆಂದು ಹೊಗಳುವುದೋ, ಎಷ್ಟೂಂತ ಹೊಗಳುವುದೋ,ಅಷ್ಟೋತ್ತರ, ಸಹಸ್ರನಾಮ ಮಾಡಿದರೂ ಗುಂಡಿದೇವರ ಮಹಿಮೆಗೆ ಬಲು ಕಡಿಮೆಯೇ!

ನೀವು ಅವನನ್ನ ಯಾವ ರೀತಿ ಪೂಜಿಸಿದರೂ ಸರಿಯೆ,ಟೈಮ್ ಟೈಮಿಗೆ ಅವನ ಹುಂಡಿ ಭರ್ತಿ ಮಾಡೋ ಹುಂಡಿ ನಮ್‌ ಹತ್ರ  ಇದ್ರೆ ಸಾಕು ಕಣ್ರೀ ಅಷ್ಟೇ.”ಗುಂಡಿ ದೇವಾಯ ವಿದ್ಮಹೇ ಸರ್ವ ಕಾರ್ಯಾಯ ಧೀಮಹೀ! ತನ್ನೋ  ಹುಂಡಿ ಪ್ರಚೋದಯಾತ್!”(ಅಪಾರ್ಥವೇನಾದರೂ ಆಗುವಂತಿದ್ದರೆ ಯಾರಾದರೂ ದಯಮಾಡಿ ತಿಳಿಸಿ.)ನಮ್ಮ ಹುಂಡಿಯಲ್ಲೇನಾದರೂ ಬಂಡವಾಳ ಇಲ್ಲದಿದ್ದರೆ, ಯಾವ ಗುಂಡಿ ದೇವನೂ ಕಣ್ಣೆತ್ತಿಯೂ ನಮ್ಮ ಕಡೆ ನೋಡುವುದಿಲ್ಲ. ಕಾಂಚಾಣಂ ಕಾರ್ಯ ಸಿದ್ದಿ! ಇದು ಮಾತ್ರವೇ ಸರ್ವಕಾಲಕೂ ಸಲ್ಲುವ ಉಕ್ತಿ!

         ಕೆಲಸಮಯದಲ್ಲಿ ಗುಂಡಿ ಒತ್ತಿದರೇ,ಸಾಕು, ನಮ್ಮ ಎಲ್ಲ ಬೇಡಿಕೆಗಳನ್ನ ಪೂರೈಸುವ ರೋಬೋಗಳು ಬಂದು, ಯಾರಿಗೂ ಸಂಗಾತಿಗಳ ಅವಶ್ಯಕತೆಯೂ ಇಲ್ಲದ ಕಾಲ ದೂರವೇನಿಲ್ಲ.ಹೌದಲ್ವಾ?ಹೊಂದಿಕೊಂಡು ಹೋಗುವ ಸೈರಣೆ ಈಗಿನ ಪೀಳಿಗೆಯಲ್ಲಂತೂ ಬಹಳವೇ ಕಡಿಮೆಯಾಗಿದೆ.ಹಾಗಿದ್ದ ಮೇಲೆ ಒಂದಾಗಿದ್ದು ಕಚ್ಚಾಡುವುದಕ್ಕಿಂತ ನಮಗೆ ಹೊಂದಿಕೊಳ್ಳುವ ರೋಬೋಗಳ ಜೊತೆಗೆ ಜೀವಿಸುವುದೇ ಮುಂದೆ ಮನುಷ್ಯನಿಗಿರುವ ಅನಿವಾರ್ಯ ಮತ್ತು ಉಪಾಯ.ಮುಂದೆ ರೋಬೋ, ಮಾನವನ ಸಮ್ಮಿಲನದಿಂದ “ಸೂಪರ್ ಪವರ್ ರೋಬೋಮಾನವ”, ಸಂತತಿಯನ್ನು ನಿರೀಕ್ಷಿಸಿದರೂ ಆಶ್ಚರ್ರ್ಯವೇನಿಲ್ಲ.

          ಸೌದೆಒಲೆಯ ಕಾಲದಿಂದ, ಸೆನ್ಸಾರ್ಡ್ ಕುಕ್ಕಿಂಗ್ ವೇರ್ವರೆಗೂ ನಡೆದ ಪ್ರಯಾಣವನ್ನು ಹಂತಹಂತವಾಗಿ ನೋಡುತ್ತಾ ಬರುತ್ತಿರುವ ನಮ್ಮ ಪೀಳಿಗೆಯೇ ಪುಣ್ಯವಂತರು.ಇಂದಿನವರಿಗೆ, ಹಿಂದಿನ ದಿನಗಳಲ್ಲಿದ್ದ ಹಿತವಾದ ಆಪ್ಯಾಯತೆ ಕೂಡಿದ್ದ ಶ್ರಮವಾಗಲೀ, ಹಿಂದಿನವರಿಗೆ ಈ ದಿನಗಳಲ್ಲಿರುವ ಯಾಂತ್ರಗಳ ಆರಾಮ ಅನುಕೂಲಗಳ ಅನುಭವವಾಗಲೀ ಕಾಣುವ ಯೋಗವಿಲ್ಲ.

  ಒಂದೊಂದು ಗುಂಡಿ ಒತ್ತುವ ಯಂತ್ರಗಳ ಆವಿಷ್ಕಾರವಾದಂತೆಲ್ಲಾ ಚಿತ್ರವಿಚಿತ್ರವಾದ ರೋಗಗಳು ತಂಡೋಪತಂಡವಾಗಿ  ಬಂದು ನಮ್ಮನ್ನ ಮುತ್ತಿಕೊಳ್ಳುತ್ತಿವೆ. ಹೌದು, ಮನುಷ್ಯನ ದುಡಿಮೆ ಹೆಚ್ಚಿದಂತೆಲ್ಲಾ,ಅವನಿಗೆ ಸುಖ ಬೇಕು,ಈ ಸುಖದ ಅವಶ್ಯಕತೆಗಳನ್ನು ಪೂರೈಸಲು ಗುಂಡಿ ಒತ್ತುವ ಇನ್ನಷ್ಟು ಆವಿಷ್ಕಾರಗಳು ಕೃತಕ ಬುದ್ದಿವಂತಿಕೆಯ( artificial intelligence)ರಂಗದಲ್ಲಿ ನಡೆಯುತ್ತಲೇ ಇರುತ್ತವೆ.ಮನುಷ್ಯನು ತನ್ನ ಪ್ರಕಾಂಡ ಬುದ್ದಿಮತ್ತೆಯಿಂದ ತನ್ನಂತಹ ಮತ್ತೊಬ್ಬ ಮನುಷ್ಯನನ್ನ ಸೃಷ್ಟಿಸಿದರೂ ಆಶ್ಚರ್ಯವಿಲ್ಲ.

ಕೊನೆಯ ಪಂಚ್……

ಅಲ್ಲಾ ಈ ಗುಂಡಿ ದೇವನ ಪುರಾಣವೆಲ್ಲಾ ಇಳಿಸಿದ ಮೇಲೆ, ಯಾಕೋ ಈ ವಿಷ್ಯ ಮಂಡೇಲಿ ಪ್ರಶ್ನೆಯಾಗಿ ಮೂಡಿತು.ಹಾಗೇ ಕುತೂಹಲಕ್ಕೆ ಸುಮ್ಮನಿರಲಾರದೆ,ಗೂಗಲ್ ಗುರುಗಳನ್ನ, “ಮುಂದುಕ್ಕೆ ಮನುಷ್ಯನ್ ಜೊತೆಗೆ ರೋಬೋಟುದಳ ಮದುವೆ ಆಗುತ್ತಾ ಗುರುಗಳೇ”, ಅಂತ ಕೇಳ್ದೆ. ಅದ್ಕೆ ಅವ್ರು,”ರೂಪಮ್ಮಾ ನೀನಿನ್ನೂ ಯಾವ ಓಬಿರಾಯನ ಕಾಲ್‌ದಲ್ಲಿದ್ದೀಯಾ?ಈಗ್ ಆಗ್ಲೇ ಬೇರೆಯವರ ಮದ್ವೆಗಳನ್ನ ನೋಡಿಯೇ ನೊಂದು,  ಬೇಜಾರು  ಮಾಡಿಕೊಂಡಿರೋ  ಬೇಜಾನು ಜನರು ಗುಂಡಿ ಒತ್ತೋ ರೋಬೋಗಳಿಗೇ    ಗುಂಡಗಿನ ತಾಳಿ ಕಟ್ಟಿ ಸಂಸಾರ ನೆಡ್ಸ್‌ತಾ ಇದಾರೆ. ಬೇಕಾದ್ರೆ ನೋಡು”ಅಂತ   ಹೇಳಿ ಅವ್ರದೆಲ್ಲಾ ಚಿತ್ರಾನೂ ತೋರೇಬಿಟ್ರು.ಈಗಂತೂ,  ನಾನು ಗುಂಡಿ ದೇವರ  ವಿಶ್ವರೂಪವನ್ನು ಕಾಣದ ಅಡಗೂಲಜ್ಜೀ ಅಂತ, ಫಿಕ್ಸಾಗಿಬಿಟ್ಟೆ ಕಣ್ರೀ! ಈಗ ನನ್ಗೂ ಒಂದ್ ಯೋಚ್ನೆ ಬಂದು, ನನ್ ಮಗನ್ ಕರ್ದು ತಲೇಲಿ ಹುಳ ಬಿಟ್ಟಿದ್ದೀನಿ. “ನೋಡೋ,ನಿನ್ ಮಾತು,ನನ್ ಮಾತು ಕೇಳೋ ಗುಂಡಿ ಒತ್ತೋ ರೋಬೋನ    ಮದ್ವೆಯಾಗಿ ನೆಮ್ದಿಯಾಗಿರ್ತೀಯೋ, ಇಲ್ಲಾ ನಿನ್ನ, ಗುಂಡಗೆ ಗಿರಗಿಟ್ಲೆ ಆಡಿಸೋ ಗಂಡಾಗುಂಡಿಯ ಗರ್‌ತೀನ ಕಟ್ಕೊಂಡ್ ಪಾಪದ ಗಂಡನಾಗ್ತೀಯೋ,ನಿನಗ್ ಬಿಟ್ಟಿದ್ದು”, ಅಂತ.ನಿರ್ಧಾರ ಅವ್ನಿಗೆ ಬಿಟ್ಟಿದ್ದು ಕಣ್ರೀ.ನಮ್ ಕಾಲದಲ್ಲಂತೂ ಗಂಡಸರಿಗೆ ಈ ಆಪ್‌ಷನ್ ಇರ್ಲಿಲ್ಲ.


ರೂಪ ಮಂಜುನಾಥ

9 thoughts on “ಗುಂಡಿ ದೇವ!ರೂಪ ಮಂಜುನಾಥ-ಲಲಿತ ಪ್ರಬಂಧ

  1. ಗುಂಡಿ ದೇವನ ಮಹಿಮೆ ಅಪಾರ.ತುಂಬಾ ಚನ್ನಾಗಿದೆ ಲೇಖನ.

  2. ನಿತ್ಯ ಸತ್ಯ, ಸರಳ, ಸುಂದರ, ಸರಾಗವಾಗಿ ಓದಿಸಿಕೂಳ್ಳುವ ಪ್ರಬಂಧ, ಶುಭ ವಾಗಲಿ

    1. ನಾವೇ ಪುಣ್ಯವಂತರು ರೂಪ. ಹಿಂದೆ ಶ್ರಮದ ಕೆಲಸ, ಆರೋಗ್ಯ ಸಂತೃಪ್ತಿ ಕಂಡವರು ಇಂದು ಗುಂಡಿದೇವನ ಕೃಪೆಯಿಂದ ಅನಾರೋಗ್ಯ ಅತೃಪ್ತಿ ನೋಡುತ್ತಿರುವೆವು. ಎರಡು ತರಹದ ಜೀವನ ಕಂಡ ನಾವೇ ಭಾಗ್ಯವಂತರು ಅಲ್ಲವೇ.

Leave a Reply

Back To Top