ಶಬ್ದ ನಿಶ್ಯಬ್ದಗಳ ನಡುವೆ-ಮಮತಾ ಶಂಕರ್

ಕಾವ್ಯ ಸಂಗಾತಿ

ಶಬ್ದ ನಿಶ್ಯಬ್ದಗಳ ನಡುವೆ

ಮಮತಾ ಶಂಕರ್

ಗೌಜು ಗದ್ದಲದ ಬೀದಿ ಬಿಕೋ ಎನ್ನುತ್ತಿದೆ
ಅಂಥದ್ದೇನೂ ನಡೆಯಲಿಲ್ಲ ಅಲ್ಲಿ…
ಒಂದಷ್ಟು ದಿನದ ಮುಂಚೆ ಯಾರು ಯಾರಿಗೋ
ಏನೇನೋ ವಿಚಾರ ಹೊಳೆಯಿತು
ಮೀಸೆ ಚಿಗುರು ಕಣ್ತೆರೆಯಿತು
ಮಾಂಸಖಂಡಗಳು ಉಬ್ಬಿದವು
ಸಮುದ್ರದ ಮೇಲೆ ವಿನಾಶದ ಅಲೆಯ ಹೊಯ್ದಾಟ
ಬುದ್ದಿಗೆ ಕೇಡುಗಾಲ ಅಷ್ಟೇ

ಒಂದಷ್ಟು ಮಾತುಗಳು ಗಾಳಿಯಲಿ
ಆಮೇಲೆ ಅಷ್ಟೇನಿಲ್ಲ
ಹರಿತ ಹತಾರಗಳು ಫಳಫಳಿಸಿದವು
ಜೀವ ಯಾರದ್ದೋ ತಾನೇ….?
ನಿಶ್ಯಬ್ದ ವಾಯ್ತು ಅಷ್ಟೇ
ಆಗ ಜಗದಲ್ಲಿ ಪಿನ್ ಡ್ರಾಪ್ ಸೈಲೆನ್ಸ್
ಸೃಷ್ಟಿಯ ಎಲ್ಲವೂ ಮೂಕವೇನೋ ಎಂಬಷ್ಟು ಅಚ್ಚರಿ
ಕೆಂಬಣ್ಣದ ಮಣ್ಣು ಸೊಕ್ಕಿನಿಂದ
ಧೂಳೆಬಿಸಿದ್ದು ಅಷ್ಟೇ

ಈಗ ಮಾತುಗಳಿಗೆ ಬಾಯಿಲ್ಲ
ಗಾಳಿಗೂ ದಿಕ್ಕಿಲ್ಲ
ಚಿಟ್ಟೆಗಳ ರೆಕ್ಕೆಯಲ್ಲಿ ಬಣ್ಣಗಳೂ ಇಲ್ಲ
ಮೌನ ಹೊದ್ದು ಮಲಗಿರುವ ಬೀದಿಯಲಿ
ಅದೊಂದು ಮನೆಯಲ್ಲಿ ಒಲೆ ಹಚ್ಚುವುದು ಮರೆತು ದೀಪ ನಿಟ್ಟುಸಿರಲಿ ಬಿಕ್ಕುಗಳ ಅಡಗಿಸುತ್ತಾ ಉರಿಯುತಿದೆ…..

ಶಬ್ದ ನಿಶ್ಯಬ್ದಗಳ ನಡುವೆ
ಬಾಗಿಲಾಚೆ ಗಸ್ತು ತಿರುಗುವ ಸಾವಿಗೆ
ಒಳಬರಲು ಭಯವೋ ಕರುಣೆಯೋ
ಶಿವನೇ ಬಲ್ಲ


ಮಮತಾ ಶಂಕರ್

10 thoughts on “ಶಬ್ದ ನಿಶ್ಯಬ್ದಗಳ ನಡುವೆ-ಮಮತಾ ಶಂಕರ್

  1. ತುಂಬಾ ಧ್ವನಿಪೂರ್ಣ ಕವಿತೆ. ಸರಳ ಸಾಲುಗಳು ಆಳಕ್ಕಿಳಿಯುವುದು ಹೀಗೆಯೇ. ತುಂಬಾ ಇಷ್ಟವಾಯಿತು ಮಮತಾ ಅವರೇ.

Leave a Reply

Back To Top