ಅಂಕಣ ಸಂಗಾತಿ

ಸಕಾಲ

ಎಲ್ಲ‌ ಸದ್ಗುಣಗಳ ಮೂಲವಿದು.

ಎಲ್ಲೋ ಹುಡುಕಿದೆ ಇಲ್ಲದ ದೇವರ

ಕಲ್ಲು ಮಣ್ಣುಗಳ ಗುಡಿಯೊಳಗೆ

ಇಲ್ಲೇ ಇರುವ ಪ್ರೀತಿ ಸ್ನೇಹಗಳ

ಗುರುತಿಸದಾದೆನು ನಮ್ಮೊಳಗೆ

                            ಡಾ.ಜಿ.ಎಸ್ ಶಿವರುದ್ರಪ್ಪರವರು

ರಚಿತ ಹಾಡು ಮೆಲುದನಿಯಲ್ಲಿ ಎನ್ನೆದೆಯ ತಿವಿದಷ್ಟು

ಒಳಂತರಂಗ ಕಳವಳದ ಮಾಯೆಯಲಿ ತೇಲಿದ್ದುಂಟು.

ಮನುಷ್ಯ ಸಂಘ ಜೀವಿ. ಸಂಘಗಳು ಪಾರಂಪರಿಕ ಬದುಕನ್ನು ವರ್ಗಾಯಿಸಿಕೊಂಡು ಬದುಕುತ್ತಿರುವ ಕಾಲಘಟ್ಟದಲ್ಲಿ‌ ಪರಸ್ಪರ ಸಹಕರಿಸಿ ಜೀವನ ನಡೆಸುವ ಮೂಲಕ ಉಪಕಾರಕ್ಕೆ ಪ್ರತಿ ಉಪಕಾರ ಅಥವಾ ಕೃತಜ್ಞತಾಭಾವ ವ್ಯಕ್ತಪಡಿಸುವುದು ಸಹಜ ಪ್ರಕ್ರಿಯೆ.

ನಾಚಿಕೆ ಮುಳ್ಳಿಗಿಂತ ಉದಾಹರಣೆಗೆ ಬೇಡ.ಕಷ್ಟದ ಸಮಯದಲ್ಲಿ ಅಥವಾ ನಮಗೆ ಅಗತ್ಯವಿದ್ದ ಸಮಯದಲ್ಲಿ ಯಾರಾದರೂ ಸಹಾಯಹಸ್ತ ಚಾಚಿದರೆ ನಾವು ಮುಕ್ತವಾಗಿ ‘ನಿಮ್ಮ ಉಪಕಾರವನ್ನು ನಾವು ಮರೆಯುವುದಿಲ್ಲ’ ಎನ್ನುತ್ತೇವೆ. ಆದರೆ ಇದು ಸರ್ವ ಮಾನ್ಯ ಹೇಳಿಕೆಯೇ ಹೊರತು ವಾಸ್ತವವಲ್ಲ. ಕೆಲವರು ಅದು ಉಪಕಾರ ಅಲ್ಲ ‘ಸೇವೆ’ ಎಂದು ವ್ಯಾಖ್ಯಾನ ಮಾಡುತ್ತಾರೆ. ಕೆಲವರು ‘ಅವರ ಕರ್ತವ್ಯ ಅವರು ಮಾಡಿದರು, ಅದಕ್ಕೆ ವಿಶೇಷ ಸ್ಮರಣೆ ಏಕೆ’ ಎಂದು ಪ್ರಶ್ನಿಸುತ್ತಾರೆ.

ಪರೋಪಕಾರ ಪುಣ್ಯಾಯ

ಪಾಪಾಯ ಪರಪೀಡನಂ

ಎಂದ ವ್ಯಾಸರೇ ಈ ‘ಉಪಕಾರ’ ಭಾವಕ್ಕೆ ಉಪ್ಪುಕಾರ ಹಚ್ಚಿ ವರ್ಣಿಸಿದ್ದಾರೆ.

ಉಪಕಾರಗಳನ್ನು ಜ್ಞಾಪಿಸುವುದರ ಬದಲಿಗೆ ‘ಹೊಲಿ ನಿನ್ನ ತುಟಿಗಳನು’ ಎಂದು ಡಿ.ವಿ.ಜಿ. ಶಬ್ದಸೂಜಿಯಿಂದ ನಾಲಗೆಯನ್ನು ಬಂದ್ ಮಾಡಲು ಹೊರಟಿದ್ದಾರೆ.

ಯಾರಿಗೆ ತಾನೇ ಏಕೆ ಉಪಕಾರ ಮಾಡಬೇಕು. ನದಿ ಸುಮ್ಮನೆ ಹರಿಯುತ್ತದೆ ಅಷ್ಟೆ. ಅದರಿಂದ ಹೊಲ ಗದ್ದೆಗಳಲ್ಲಿ ಫಸಲು ಬಂದು ಜನಕ್ಕೆ ನೀರಿನ ತೊಂದರೆ ತಪ್ಪುವುದು ಒಂದು ಅನುಷಂಗಿಕ ಕಾರ್ಯ ಸ್ಥಿತಿ ಅಷ್ಟೆ. ನದಿಗೆ ಅದು ಗೊತ್ತೇ ಇಲ್ಲ. ಆ ನದಿಯ ಪಾತ್ರದ ಜಮೀನುಗಳೂ ನದಿಗೆ ವಂದನೆ ಹೇಳುವುದಿಲ್ಲ. ಜೇಡರ ದಾಸಿಮಯ್ಯನ ದೃಷ್ಟಿಯಲ್ಲಿ ಇವೆಲ್ಲ ದೇವರ ದಯೆ.

ಇಷ್ಟೊಂದು ವಿಚಿತ್ರವಾಗಿದೆ ಕೃತಜ್ಞತೆ, ಉಪಕಾರ.ಇದರ ಪ್ರಭಾವ ಎಲ್ಲರ ಬದುಕಲ್ಲಿ ಒಂದಲ್ಲ ಒಂದು ಸಮಯ ದಲ್ಲಿ ಹಾದುಹೋಗಿದ್ದಂತು ಸತ್ಯ. ನೆನಪಿಸುವುದು ಒಮ್ಮೊಮ್ಮೆ ನಾಟಕೀಯವಾಗಿ ಬದಲಾದರೂ ಅದೇನೆ ದಿಟವೆಂದು ನಂಬಿಸಿ ಕತ್ತುಕೊಯ್ಯುವ ನಯವಂಚಕರ ನಡುವೆ ಉಪಕಾರ ಕಂಗಾಲಾಗಿ ನಿಂತಿದೆ. ಹಾಗಿದ್ದ ಮೇಲೆ ಜೀವನದಲ್ಲಿ ನೀವು ಯಾವ ವಿಷಯಕ್ಕಾಗಿ ಅತ್ಯಂತ ಕೃತಜ್ಞರಾಗಿದ್ದೀರಿ? ನೀವು ಯಾವಾಗೆಲ್ಲಾ ಕೃತಜ್ಞತಾ ಭಾವವನ್ನು ಅನುಭವಿಸಿದ್ದಿರಿ ಅಷ್ಟು ಸುಲಭವಾಗಿ ಕೃತಜ್ಞತೆಯನ್ನು ನೀವು ವ್ಯಕ್ತಪಡಿ ಸಬಲ್ಲಿರಾ? ಮಾನವ ಇತಿಹಾಸದುದ್ದಕ್ಕೂ, ಜಗತ್ತಿನ ಎಲ್ಲಾ ಸಂಸ್ಕೃತಿಯಲ್ಲೂ ಕೃತಜ್ಞತೆಗೆ ಮಹತ್ವದ ಸ್ಥಾನವಿರುವುದರಿಂದ, ಪಾಸಿಟಿವ್ ಸೈಕಾಲಜಿಯಂತಹ ಹೊಸ ಕ್ಷೇತ್ರದಲ್ಲಿಯೂ ಇದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ.

ಭಾವನಾತ್ಮಕ ಸಂಬಂಧವನ್ನು ಹೊಂದಿರುವ ನಾವುಗಳು ಪ್ರತಿಯೊಂದು ವಿಷಯದಲ್ಲೂ ಉಪಕಾರದ ನೆನಪನ್ನು ನೂರಕ್ಕೆ ನೂರರಷ್ಟು ಒಪ್ಪದೇ,ಬೇರೆ ವಿಧಿಯಿಲ್ಲ.ಯಾಕೆಂದರೆ. ಸುಮಾರು 1200 ವರ್ಷಗಳಷ್ಟು ಹಳೆಯದಾದ ಹಿಂದು ಕವಿ ಹಾಗೂ ತತ್ವಜ್ಞಾನಿಯೊಬ್ಬರು ರಚಿಸಿದ ತಮಿಳು ಗ್ರಂಥ, ‘ಕುರಳ್’ನಲ್ಲಿ ನಿತ್ಯ ಜೀವನದಲ್ಲಿ ಮಹತ್ವದ ಕುರಿತು ಈ ರೀತಿ ಹೇಳಲಾಗಿದೆ “ಬೇರೆಲ್ಲಾ ರೀತಿಯ ಪಾಪಗಳಿಂದ ಮುಕ್ತಿ ಪಡೆದವರು ಇದ್ದಾರೆ. ಆದರೆ, ಕೃತಘ್ನತೆಯ ಪಾಪದಿಂದ ಮುಕ್ತರಾದವರು ಯಾರೂ ಇಲ್ಲ.ಅಂದರೆ ಕೃತಜ್ಞತೆಯೆಂಬ ಪದ ಅಷ್ಟೊಂದು ಮಹತ್ವ ಹೊಂದಿರುವಂತಹುದು.

ಸಕಾರಾತ್ಮಕ ಸೈಕಾಲಜಿ ತಜ್ಞರು ಕೃತಜ್ಞತೆಯನ್ನು ಯಾವ ರೀತಿ ವ್ಯಾಖ್ಯಾನಿಸುತ್ತಾರೆಂದರೆ, ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಮಾಡಿರುವ ಡಾ. ರಾಬರ್ಟ್ ಎಮ್ಮಾನ್ಸ್ ಅವರ ಪ್ರಕಾರ, “ಕೃತಜ್ಞತೆಯು ಯಾವುದೇ ಕೊಡುಗೆಗಳಿಗೆ ನೀಡುವ ಭಾವನಾತ್ಮಕ ಪ್ರತಿಕ್ರಿಯೆ. ಇನ್ನೊಬ್ಬರ ಪರೋಪಕಾರದ ಕ್ರಿಯೆಯಿಂದ ಪ್ರಯೋಜನ ಪಡೆದವರಲ್ಲಿ ಉಂಟಾಗುವ ಭಾವನೆ. ”ಸನಾತನ ಗ್ರೀಕ್ ತತ್ವಜ್ಞಾನಿಯಾದ ಸಿಸೆರೋನು, “ಕೃತಜ್ಞತೆಯು ಅತ್ಯಂತ ಶ್ರೇಷ್ಟವಾದ ಸದ್ಗುಣ ಮಾತ್ರವಲ್ಲದೇ, ಎಲ್ಲಾ ಸದ್ಗುಣಗಳ ಮೂಲವಾಗಿದೆ,” ಎಂದಿದ್ದಾನೆ.

ಮನಃಶಾಸ್ತ್ರದಲ್ಲಿ ಈ ವಿಷಯದ ಬಗ್ಗೆ ಅತೀ ಕಡಿಮೆ ತಿಳಿಸಲಾಗಿದ್ದು.ಇದಕ್ಕೆ ಇಂದು ಅಪವಾದವೆಂದರೆ, ಅಬ್ರಹಾಂ ಮಾಸ್ಲೊವ್. 20ನೆಯ ಶತಮಾನದ ಮಧ್ಯಭಾಗದಲ್ಲಿ ಆತನು ಮಹಿಳೆ ಮತ್ತು ಪುರುಷರ ಮೇಲೆ ನಡೆಸಿದ ಅಧ್ಯಯನಗಳಿಂದಾಗಿ, ಕೃತಜ್ಞತೆ ಯನ್ನು ಸುಲಭವಾಗಿ ಅನುಭವಿಸುವ ಮತ್ತು ವ್ಯಕ್ತಪಡಿಸುವ ಸಾಮರ್ಥ್ಯವು ಮಾನಸಿಕ ಆರೋಗ್ಯಕ್ಕೆ ಬಹಳ ಪ್ರಮುಖವಾದ ಅಂಶವಾಗಿದೆ ಮತ್ತು ಆ ರೀತಿ ಮಾಡಲು ಅಸಮರ್ಥರಾದವರಿಗೆ ಆ ಗುಣಗಳನ್ನು ಬೆಳೆಸಿಕೊಳ್ಳಲು ತಿಳಿಸಬೇಕು.ಜೀವನದ ಖುಷಿಯ ಕ್ಷಣಗಳನ್ನು ನೆನೆಸಿಕೊಳ್ಳುವ ಮತ್ತು ಭೂಮಿಯ ಮೇಲೆ ನಮಗಿರುವ ಸಮಯ ಅತಿ ಕಡಿಮೆ ಎಂದು ಅರಿಯುವ ಮೂಲಕ ಕೃತಜ್ಞತೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು.ಅದು ಅಷ್ಟು ಸುಲಭವಲ್ಲ.

ಪರೋಪಕಾರವನ್ನು ಸ್ಮರಿಸುವ ವ್ಯಕ್ತಿಗಳು ನಿತ್ಯ ಜೀವನದಲ್ಲಿ ಮಾನಸಿಕವಾಗಿ ಹಲವಾರು ಲಾಭಗಳನ್ನು ಪಡೆಯುತ್ತಾರೆ. ಸಂತೋಷ, ಆಶಾವಾದಿತ್ವ, ಜೀವನೋತ್ಸಾಹ, ಉಳಿದವರೊಂದಿಗೆ ಆತ್ಮೀಯ ಸಂಬಂಧ, ಉಳಿದ ಜೀವಿಗಳೊಂದಿಗೂ ನಮಗಿರುವ ಸಂಬಂಧದ ಅರಿವು ಮತ್ತು ಪ್ರಾಪಂಚಿಕ ವಸ್ತುಗಳೆಡೆಗೆ ಕಡಿಮೆ ಆಸಕ್ತಿ ಮುಂತಾದ ಗುಣಗಳು ಬೆಳೆದು ಅವರ ವೈಯಕ್ತಿಕ ಆರೋಗ್ಯವು ಉತ್ತಮವಾಗಿರುತ್ತದೆ. ಕೃತಜ್ಞತೆಯು ಅಸೂಯೆಯ ಭಾವವನ್ನು ಕಡಿಮೆ ಮಾಡುತ್ತದೆ.

ಏನೆಲ್ಲ ವಿಚಾರ ಮಾಡಿದ್ರೂ,ಈ ಕೃತಜ್ಞತೆ, ಉಪಕಾರ ಸ್ಮರಣೆ ಕೇವಲ ಸ್ವಾರ್ಥದ ಮೂಲ ಅಸ್ತ್ರವಾಗಿ ಬಿಂಬಿತವಾಗಿದೆ‌.ಮನುಷ್ಯ ಸಂಬಂಧಗಳು ಜೀವನ ಬೆಸೆಯುವ ಭಾಗವಾಗದೇ ಜೀವನವನ್ನು ಅಡ್ಡದಾರಿಗೆ ತಳ್ಳುವ ಸ್ಥಿತಿ ನಿರ್ಮಾಣವಾಗಲು ಈ ಉಪಕರಾದ ಮಜಲುಗಳು ತೆರೆದು ಕೊಂಡಿರುವುದು ಆಶ್ಚರ್ಯವಾದರೂ ಸತ್ಯ.ಹಾಗಾದರೆ ವಿವಾಹದಂತಹ ಸಂಬಂಧಗಳಲ್ಲಿ ಕೃತಜ್ಞತೆಯ ಪಾತ್ರವೇನು? ಹೆಚ್ಚಿನ ಸಂಶೋಧನೆಗಳ ಪ್ರಕಾರ ಪರಸ್ಪರ ಕೃತಜ್ಞತೆಯ ಭಾವವಿರುವ ದಂಪತಿಗಳಲ್ಲಿ ಸಂಘರ್ಷವು ಕಡಿಮೆ ಇರುತ್ತದೆ. ಈ ಅಧ್ಯಯನವು ಸರಿಯಾಗಿದೆ: ಏಕೆಂದರೆ, ನಿಮ್ಮ ಜೀವನದ ಅತೀ ಪ್ರಮುಖ ವ್ಯಕ್ತಿಯೆಡೆಗೆ  ಕೃತಜ್ಞತೆಯಂತಹ ಧನಾತ್ಮಕ ಭಾವನೆಯನ್ನು ಹೊಂದಿದ್ದರೆ ಸಹಜವಾಗಿಯೇ ಅಲ್ಲಿ ಕೋಪ ಮತ್ತು ನಿರಾಸೆಯಂತಹ ಋಣಾತ್ಮಕ ಅಂಶಗಳಿಗೆ ಜಾಗವಿರುವುದಿಲ್ಲ.

ಚಾಪೆಲ್ ಹಿಲ್‍ನ ನಾರ್ಥ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಡಾ. ಸಾರಾ ಅಲ್ಗೆಯವರ ಅಧ್ಯಯನದ ಪ್ರಕಾರ, ರೋಮ್ಯಾಂಟಿಕ್ ಪಾರ್ಟನರ್ ಬಗೆಗಿರುವ ಕೃತಜ್ಞತಾ ಭಾವವು ಸಂಬಂಧಗಳಿಗೆ ಟಾನಿಕ್ಕಿನಂತೆ ಕಾರ್ಯನಿರ್ವಹಿಸುತ್ತದೆ. ದೈನಂದಿನ ಜೀವನದ ಕೆಲವು ಸರಳ ಕಾರ್ಯಗಳು ಈ ಭಾವನೆಯನ್ನು ಉಕ್ಕಿಸಿದರೆ ಅದರಿಂದ ಮಧುರ ಭಾವಗಳು ಉಂಟಾಗುತ್ತವೆ, ಆದ್ದರಿಂದಲೇ ವೈವಾಹಿಕ ಹಾಗೂ ಕೌಟುಂಬಿಕ ವಿಷಯಗಳ ತಜ್ಞರು, ಸಂಬಂಧವು ಗಟ್ಟಿಯಾಗಲು ನಾವು ಪ್ರತಿ ದಿನವು ಪ್ರೀತಿಪಾತ್ರರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಅಗತ್ಯವೆಂದು ಸಲಹೆ ಮಾಡುತ್ತಾರೆ.

ಜೀವನದಲ್ಲಿ ನೀವು ಹೆಚ್ಚು ಹೆಚ್ಚು ಕೃತಜ್ಞತೆಯ ಭಾವವನ್ನು ಬೆಳೆಸಿಕೊಂಡಂತೆ, ನಿತ್ಯ ಜೀವನದ ಸಂತೋಷ ಮತ್ತು ಆರೋಗ್ಯ ವೃದ್ಧಿಸುತ್ತದೆ. ಸಂಕಲ್ಪ ಮಾಡುವುದರಿಂದ ಅದರಂತೆ ನಡೆದುಕೊಳ್ಳುವ ಸಂಭವನೀಯತೆಯು ಅಧಿಕವಾಗುತ್ತದೆ. ಆದ್ದರಿಂದ, ನೀವು ನಿಮ್ಮ ಕೃತಜ್ಞತಾ ಪ್ರತಿಜ್ಞೆಯನ್ನು ‘ನಾನು ಪ್ರತಿದಿನವೂ ಉಪಕಾರ ಸ್ಮರಣೆಯನ್ನು ಮಾಡುತ್ತೇನೆ’ ಎಂದು ಬರೆದು ನಿಮಗೆ ಸುಲಭವಾಗಿ ಕಾಣುವ ಜಾಗದಲ್ಲಿ ಅಂಟಿಸಿ.ಅದು ಸುಲಭವಲ್ಲವೆಂದು ಗೊತ್ತಿದ್ದರೂ ಪ್ರಯತ್ನ ಪಡುವುದರಲ್ಲಿ ತಪ್ಪಿಲ್ಲ. ಅನಾಯಾಸವಾಗಿ ಸಿಗುವ ಸುಖವೇ ಶಾಶ್ವತವೆಂದು ಅದರ ದುರುಪಯೋಗ ಪಡಿಸಿಕೊಳ್ಳುವ ವಿಕೃತ ಮನಸುಗಳಿಗೆ ಕೃತಜ್ಞತೆಯ ಭಾವ ಯಾವತ್ತಿದ್ದರೂ ಅದು ಕೇವಲ ಸ್ವಾರ್ಥದ ಮೆಟ್ಟಿಲು…ಇನ್ನಾದರೂ ಅರ್ಥ ಅನರ್ಥವಾಗದಂತೆ ಬದುಕಿದಲ್ಲಿ, ಜೀವನಕ್ಕೊಂದು ಬೆಲೆ..


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ

6 thoughts on “

Leave a Reply

Back To Top