ಗಡಿ ಮೀರಿದ್ದು.ಸ್ಮಿತಾಭಟ್ ಕವಿತೆ

ಕಾವ್ಯ ಸಂಗಾತಿ

ಗಡಿ ಮೀರಿದ್ದು.

ಸ್ಮಿತಾಭಟ್

ಒಲವಿಗೆ ಕಸಿ ಮಾಡುವ ಯೋಜನೆ ಕೈಗೊಳ್ಳಬಾರದು
ನೆಲದ ಕಾವಿನಲಿ ಒಡೆದ ಮೊಳಕೆ ಚಿವುಟಬಾರದು
ಬೆಳಕಿನ ಗೆರೆ ಹಿಡಿದು ಸಾಗಿ
ಮತ್ತೆ ನೆಲಕ್ಕೆ ಅಪ್ಪಳಿಸುವ ಬಿಂದು
ಅಲ್ಲಿ ಕೈ ಗೊಂಡಿದ್ದು ಏನು
ಒಂದು ಭರವಸೆ ಮತ್ತು ಪ್ರೀತಿ
ನಂಬಿ ಕಾಯುವ ಬುವಿ,ಬಾನು
ಎಲ್ಲವೂ ಗಡಿ ಮೀರಿದ್ದು

ಗಡಿ ಗೆರೆಗಳನೇ ಬದುಕಾಗಿಸಿಕೊಂಡ
ಮನುಷ್ಯ ಸ್ವಾರ್ಥಕ್ಕಷ್ಟೆ ಸೀಮಿತ
ಯುಗಗಳೇ ಕಳೆದಿವೆ
ಪ್ರೇಮದ ಸರಹದ್ದು ದಾಟಿ.
ಬರೀ ಭ್ರಮೆಗಳಲೇ ಬದುಕು
ಹಾಸಿಕೊಳ್ಳಲಾಗದು.
ಆಗೀಗ ಆತು ಕೊಳ್ಳಲಾದಾರೂ
ನಂಬಿಕೆಗಳು ಬೇಕು.
ಭಾವಗಳ ಬದಿಗೊತ್ತಿ,
ಕಳಚಿ ಕೊಳ್ಳುವ ಪೊರೆ
ಹಾವು, ಚಿಟ್ಟೆ ಏನು ಬೇಕಾದರೂ
ಆಗಬಹುದು.

ಪ್ರತೀ ಗಡಿಗೂ ಫಲಕಗಳ ಕೆತ್ತುತ್ತಾರೆ
ಹೆಜ್ಜೆ ಇಟ್ಟಲೆಲ್ಲ ಗಡಿ ದಾಟಿದ ಭಾವ
ಆಗಸವನ್ನಷ್ಟೇ ನೋಡ ಬಯಸುವ ನಾನು
ಒಸರುತ್ತದೆ ಹೆಬ್ಬೆರಳು ಕಗ್ಗಲ್ಲು ತಾಕಿ
ಒಲವಿಗೆ ಗಡಿ ಗೆರೆಗಳಿಲ್ಲ
ಮುಕ್ತಾಯ ಆರಂಭಗಳಿಲ್ಲ
ಸ್ವಾಗತ ಬೀಳ್ಕೊಡುಗೆಗಳೂ ಇಲ್ಲ
ನೆಲದ ಹಂಗು ತೊರೆದ ಹಕ್ಕಿ ಸದಾ ಸುಖಿ.


ಸ್ಮಿತಾಭಟ್

2 thoughts on “ಗಡಿ ಮೀರಿದ್ದು.ಸ್ಮಿತಾಭಟ್ ಕವಿತೆ

Leave a Reply

Back To Top