ಕಾವ್ಯ ಸಂಗಾತಿ

ಹೈ.ತೋ.ಮತ್ತು ಅರುಣಾ ನರೇಂದ್ರ

ಗಜಲ್ ಜುಗಲ್- ಬಂದಿ

ನೀ ಬಂದು ಸಂಜೆ ಮುಂಜಾವುಗಳ ಕಳೆದಿಯಂತೆ ಖಬರನ್ನೇಕೆ ಕಳಿಸಲಿಲ್ಲ
ಊರ ಓಣಿಗಳಲ್ಲಿ ಮಾತು ತೊಟ್ಟು ಮೆರೆದಿಯಂತೆ ಖಬರನ್ನೇಕೆ ಕಳಿಸಲಿಲ್ಲ

ಇಂದ್ರಚಾಪ ಬಣ್ಣದ ಚಿತ್ತಾರವ ಹೊತ್ತು ಮೆರೆದವನೇ ನನ್ನನ್ನೊಮ್ಮೆ ಆಲಿಸು
ನೆಲದೆದೆಯ ಹಾಡಾಗಿ ಜಗದಗಲ ಹಬ್ಬಿದಿಯಂತೆ ಖಬರನ್ನೇಕೆ ಕಳಿಸಲಿಲ್ಲ

ಮೌನತಟ್ಟಿ ವೇದನೆಯ ಹರಿವಿನೊಂದಿಗೆ ಹಾರಿ ಹೋದವನು ನೀನಲ್ಲವೇ
ಕರುಳ ಕಳವಳವ ಕಿವಿಯಾಗಿ ಆಲಿಸಿದಿಯಂತೆ ಖಬರನ್ನೇಕೆ ಕಳಿಸಲಿಲ್ಲ

ಅನಾಮಿಕರ ಕೊರಳ ಬಿಕ್ಕುಗಳಿಗೆ ಭಾವ ಬೆಸೆದು ಬದುಕಿದ್ದು ಸಾಕೀಗ
ಸಖ್ಯದ ಹಂಬಲಕ್ಕಾಗಿ ತವಕಿಸಿ ತಿರುಗಿದಿಯಂತೆ ಖಬರನ್ನೇಕೆ ಕಳಿಸಲಿಲ್ಲ.

ಛಿದ್ರಗೊಂಡ ಹೃದಯ ವೇದನೆಗೆ ಪದಗಳ ಕಟ್ಟಿ ಹಾಡಿದೆಯಲ್ಲ ಹೈ.ತೋ
ವಿರಹದ ಹುಣ್ಣು ಒಡೆದು ನರಳಿದಿಯಂತೆ ಖಬರನ್ನೇಕೆ ಕಳಿಸಲಿಲ್ಲ.

***

ಹೈ.ತೋ.

ಮುಗಿಲೆದೆಗೆ ಮುತ್ತಿಕ್ಕಿ ಕಾಮನಬಿಲ್ಲು ಬರೆದಿಯಂತೆ ಖಬರನ್ನೇಕೆ ಕಳಿಸಲಿಲ್ಲ
ಹಸಿರ ಸಿರಿಯಲಿ ಮೈಮರೆತು ಹಾರಾಡಿ ದಣಿದಿಯಂತೆ ಖಬರನ್ನೇಕೆ ಕಳಿಸಲಿಲ್ಲ

ನಿನ್ನ ನಗೆ ಬೆಳದಿಂಗಳ ಮುಂದೆ ಆ ಚಂದ್ರ ತಾರೆ ಮಂಕಾಗಿ ಕಾಣುತ್ತಾರೆ
ತೇಲಾಡುವ ಮೋಡಗಳ ಮುಖ ತೊಳೆದಿಯಂತೆ ಖಬರನ್ನೇಕೆ ಕಳಿಸಲಿಲ್ಲ

ನೀ ಹಾಡದೇ ಇರುವ ಪದಗಳು ಮೈನೆರೆದು ಮೂಲೆ ಸೇರಿವೆ ಸಖಿ
ಬೆರಳ ತಾಕಿಸದೆ ಏಕತಾರಿ ಮೀಟಿದಿಯಂತೆ ಖಬರನ್ನೇಕೆ ಕಳಿಸಲಿಲ್ಲ

ನೀ ಮೆಹಂದಿ ಹಚ್ಚಿಕೊಂಡು ಕೈ ತೊಳೆದ ನೀರು ಹೃದಯದಲಿ ಹರಿದಾಡಿ ರಂಗೇರಿದೆ
ಕಳೆಗುಂದಿದ ಕಣ್ಣ ರೆಪ್ಪೆಗಳಿಗೆ ಕನಸ ಮೆತ್ತಿದಿಯಂತೆ ಖಬರನ್ನೇಕೆ ಕಳಿಸಲಿಲ್ಲ

ಜೀವಕ್ಕೆ ಜೀವ ಕೊಡುವ ನನ್ನುಸಿರು ಹೋದರೂ ನಿನ್ನ ಹೆಸರು ಜೊತೆಗಿರಬೇಕು ಅರುಣಾ
ಗೋರಿಯೊಳಗಿನ ಕಥೆ ಹೇಗಿದ್ದ ರೇನು ಮೇಲೊಂದು ಗುಲಾಬಿ ನೆಡೆಸಿದಿಯಂತೆ ಖಬರನ್ನೇಕೆ ಕಳಿಸಲಿಲ್ಲ


ಅರುಣಾ ನರೇಂದ್ರ

2 thoughts on “

  1. ಸುಂದರ ಜುಗಲಬಂಧಿ ಗಜಲ್ ಗಳು..ಶುಭಾಶಯಗಳು ಹೈ ತೋ ಸರ್/ಅರುಣಾ ಮೇಡಂ.

Leave a Reply

Back To Top