ಕಾವ್ಯ ಸಂಗಾತಿ
ಗಜಲ್ ಜುಗಲ್- ಬಂದಿ
ಶಂಕರಾನಂದ ಹೆಬ್ಬಾಳ ಮತ್ತು ಅಭಿಜ್ಞಾ ಪಿ ಎಮ್ ಗೌಡ
ನಿಷ್ಕಲ್ಮಶ ಮನ ಕಾರ್ಮಳೆಗೆ ಸಿಕ್ಕರು
ಮೌನ ಮೆರೆದೆಯಲ್ಲ ನೀನು
ಹುಣ್ಣಿಮೆಯ ಬೆಳದಿಂಗಳಂತೆ ಹೊಳೆದರು
ಉದಾಸೀನದಿ ತೊರೆದೆಯಲ್ಲ ನೀನು
ಮೃದುತ್ವದ ಮೃದ್ವಂಗಿಯಾಗಿ ಬಂದರು
ಧೃತಿಗೆಡುವಂತೆ ಮಾಡಿದೆಯೇಕೆ
ಪಲ್ಲಕ್ಕಿಯಲಿ ನಾಚಿ ನೀರಾದರು ಬಿಡದೆ
ಮಾತಿನಲ್ಲೆ ಕೊರೆದೆಯಲ್ಲ ನೀನು
ಹುಟ್ಟೋ ಆಸೆಗಳೆಲ್ಲ ಪಟಾಕಿ ಸಿಡಿದಂತೆ
ಚೆಲ್ಲಾಪಿಲ್ಲಿಯಾದವಲ್ಲ
ಬಂದಾಗ ಆಹ್ವಾನಿಸದೆ ಬರದಿದ್ದಾಗಲೆ
ಆಸ್ತೆಯ ಬಾಗಿಲ ತೆರೆದೆಯಲ್ಲ ನೀನು
ನೆನಪುಗಳ ಉಯ್ಯಾಲೆಯಲಿ ಜೀಕುತಿವೆ ಅಪೇಕ್ಷೆಗಳ ತೋರಣ
ಅಡಿಗಡಿಗಡಿಗೂ ಪ್ರೀತಿಯ ಮಹಲೇರಿಸಿ
ಬೀಗುತ್ತ ಕರೆದೆಯಲ್ಲ ನೀನು
ಅಭಿಯೊಡಲು ನಿತ್ಯನಿರತ ಕನವರಿಸುತಿದೆ
ಎನ್ನೊಲವ ಹಾದಿಯನು
ಅರ್ಕನ ರಶ್ಮಿಯಂತೆ ನಿನ್ನಲ್ಲಿ ಕೂಡಿದರು
ಇಲ್ಲದ್ದನ್ನೆ ಬರೆದೆಯಲ್ಲ ನೀನು
****
ಅಭಿಜ್ಞಾ ಪಿ ಎಮ್ ಗೌಡ
ಹೃದಯದಿ ಬೆಂದು ನನಸಾಗದ
ಕನಸಾಗಿ ಉಳಿದೆಯಲ್ಲ ನೀನು
ಮುದದಲ್ಲಿ ಒಲವನ್ನು ಪಸರಿಸಲು
ತಿರಸ್ಕರಿಸಿ ಮುಳಿದೆಯಲ್ಲ ನೀನು
ಸುಖದ ಸೋಪಾನವ ಏರುವಾಗ
ಜಾರಿಸಿದೆಯಲ್ಲ ಏಕೆ
ಒಡಲಿನ ಆಭಿಪ್ಸೆಗಳ ಮೂಟೆಕಟ್ಟಿ
ಒತ್ತಂಬದಿ ಎಳೆದೆಯಲ್ಲ ನೀನು
ಕಟ್ಟಿದ ಗೋಪುರದಲಿ ನೇಹದ
ರಾಣಿಯಾಗಿ ಕೂಡಲಿಲ್ಲ
ಅನುರಾಗ ಬಂಧನದಿ ಸಿಲುಕದೆಯೆ
ಸ್ಪರ್ಶವಾಗಿ ಸುಳಿದೆಯಲ್ಲ ನೀನು
ಹರಿಯುವ ನದಿಯಲ್ಲಿ ಪ್ರತಿರೂಪವ
ಬಿಂಬಿಸಿ ನಿಂತಿರುವೆ
ಸುರಿಯುವ ಮಳೆಯಲ್ಲಿ ಅಂತರಂಗದ
ಸತ್ಯವನು ತಿಳಿದೆಯಲ್ಲ ನೀನು
ಅಭಿನವನಲಿ ಅನುಮಾನ ಮೂಡುವ
ಮುಂಚೆಯೆ ಬಂದುಬಿಡು
ಕಂಗಳಲಿ ಕಾಣುವ ತವಕದಲ್ಲಿರಲು
ಭಿನ್ನಭಾವ ತಳೆದೆಯಲ್ಲ ನೀನು
===================
ಶಂಕರಾನಂದ ಹೆಬ್ಬಾಳ
ಸೊಗಸಾಗಿದೆ
ಸುಂದರ ಜುಗಲ್ ಬಂದಿ
ವಾಹ್…ಬಹುಸುಂದರ ನಿಮ್ಮ ಜುಗಲ್ ಬಂದಿ…