ಹೇ ರಾಮ್
ಡಿ.ಎಸ್.ರಾಮಸ್ವಾಮಿ
ಅವತ್ತು ಆ ದುರುಳನ ಗುಂಡಿಗೆ
ಹೇ ರಾಂ ಎನ್ನುತ್ತಲೇ ಗುಂಡಿಗೆಯಿತ್ತವನನ್ನೂ
ಅನುಮಾನಿಸಿ ಅವಮಾನಿಸಿದವರು
ಮತ್ತೀಗ ವಿಝೃಂಭಣೆಯ ತುರೀಯದಲ್ಲಿ
ಗತದ ನೋವುಗಳನ್ನರಿಯದೇ ಬರಿದೇ
ಸ್ವಚ್ಛತೆಯ ಮಾತ ಭಜನೆ ಮಾಡುತ್ತಿದ್ದಾರೆ,
ಪೊರಕೆ ಹಿಡಿದಂತೆ ಆ ಅವರ ಭಂಗಿ
ಕುಡಿಸಿ ಅಮಲೇರಿಸುವ ಮಾತು
ನಾಳೆಗಿರಲಿ ಇವತ್ತಿಗೇ ನಕಲಿ ಸಾಬೀತಾಗಿ
ನಿಜಕ್ಕೂ ಕೊಳೆ ತೆಗೆಯ ಹೊರಟವರೆಲ್ಲರಿಗೂ
ಆಘಾತ, ಸಂವಿಧಾನದ ವಿಧಿಗೂ ವಿಧ ವಿಧದ
ಮರು ಜೋಡಣೆಯ ವ್ಯಾಖ್ಯಾನ
ಗಾಂಧಿ ಎಂದರೆ ಅವನೊಬ್ಬನೇ ತಾತ
ಈ ದೇಶಕ್ಕಷ್ಟೇ ಅಲ್ಲ, ಅವನು ವಿಶ್ವ ವಿಖ್ಯಾತ.
ಬೋಂಗು ಬಿಡುವವರಿಗೆ ಸತ್ಯ ಬೇಕಿರುವುದಿಲ್ಲ
ಅವರದೇನಿದ್ದರೂ ಮನ ರಂಜನೆಯದೇ ಗುರಿ
ಚಪ್ಪಾಳೆಗೆ ಖುಷಿಪಡುವವರಿಗೆ ಬೌದ್ಧಿಕತೆಯ
ಅಗತ್ಯಕ್ಕಿಂತಲೂ ದಿರಿಸಿನದೇ ಸದಾ ಧ್ಯಾನ
ತುಂಡುಡುಗೆಯ ಈ ಬಾಪು ಗರೀಬನೇನಲ್ಲ
ಹುಟ್ಟುವಾಗಲೇ ಬಾಯಲ್ಲಿ ಚಿನ್ನದ ಚಮಚ
ಪದವಿಗೆಂದು ವಿದೇಶಕ್ಕೆ ಹಾರಿದ್ದರೂ ಅವನ
ಗಮನವಿದ್ದದ್ದೇ ಅಸಮಾನತೆಯ ಹದ್ದಿನ ಮೇಲೆ
ರಗಿ ಸಾಧಿಸಿದ ವಿಜಯಕ್ಕೆ ಹರತಾಳ ಬಂಡವಾಳ
ಸತ್ಯಕ್ಕೆ ಆಗ್ರಹಿಸುವುದಷ್ಟೇ ನಿಯತ ಕಾಯಕ
ಹುತಾತ್ಮನಾಗುವನು ಈ ದೇಶದ ಸಿಪಾಯಿ
ಪರದೇಶಕ್ಕವನು ಯಾವತ್ತಿಗೂ ಬದ್ಧ ವೈರಿ
ಈ ಇಂಥ ಗಾಂಧಿಗೇ ಶತೃವೆನ್ನುವವನು
ಪರದೇಶಿಯಲ್ಲದೇ ದೇಶೀಯ ಹೇಗಾದಾನು
ಅಂದರೆ ಮತ್ತೆ ಬಿಚ್ಚುತ್ತಾರೆ ಅಂತೆ ಕಂತೆಯ ಕತೆ
ಯಲ್ಲಷ್ಟೇ ಶ್ರೀ ರಾಮನದೂ ಕಲ್ಪನೆಯ ರಾಜ್ಯ!!
***********************************