ಕಾವ್ಯ ಸಂಗಾತಿ
ಹುಲಿದಿನಕ್ಕೊಂದು ಕವಿತೆ
ವಿಜಯಶ್ರೀ ಹಾಲಾಡಿ
ನಾನೂ ಹುಲಿಯಾದೆ!
ನಾನೂ ಹುಲಿಯಾದೆ!
**
ಅದು ಹೇಗೋ ಹುಲಿಯೊಂದರ
ಗೆಳೆತನ ಸಂಭವಿಸಿತು
ದೊಡ್ಡ ಮರಗಳ ಕಾಡೊಳಗೆ
ಸದ್ದಿರದೆ ಜೊತೆ ತಿರುಗುತ್ತ
ತೊರೆಯ ನೀರು ಕುಡಿದು
ಸ್ವಚ್ಛ ಗಾಳಿ ಉಸಿರಾಡಿ
ಸಿಕ್ಕಿದ್ದು ತಿಂದು, ಚುಕ್ಕಿಗಳ
-ಕೆಳಗೆ ಮಲಗಿ ನಿದ್ರಿಸಿ
ಹಗಲು ರಾತ್ರಿಗಳು ಮುಳುಗಿದವು
ನಿರಾಳ ಕೆಸರಲ್ಲಿ ಉರುಳಾಡಿ
ಮರಗಳಿಗೆ ಮೂತಿ ಒರೆಸಿ
ಗಡಿ ಗಡಿಗೆ ಉಚ್ಚೆ ಸಿಂಪಡಿಸಿ
ಧೂಳ ಸ್ನಾನಕ್ಕೆ ಬೆನ್ನಿರಿಸಿ
ನಲ್ಲೆಯನ್ನು ಮುದ್ದಿಸಿ
ಮರಿಗಳ ಪೊರೆವ ಹುಲಿ
ನನ್ನ ಸಂಗಾತಿಯೆನಿಸಿತು
ತಣ್ಣನೆಯ ಝರಿಯಲ್ಲಿ
ಮಿಂದೇಳುತ್ತಾ
ಹುಲಿಯ ಕಣ್ಣಿನ ದೀಪ
ತುಂಬಿಕೊಳ್ಳುತ್ತಾ
ಕಾಡು ಹೂಗಳ ಗಂಧ
ಸುಖಿಸುತ್ತಾ
ಮಣ್ಣ ಮೆತ್ತೆಯೊಳಗೆ
ಮಿದು ಪಾದವಿರಿಸಿ
ಹಸಿವಿನ ಬೆಂಕಿಗೆ
ತಕ್ಕಷ್ಟೆ ಉಂಡು
ಗಾಢ ಕಣ್ಣೆವೆಯಾಳವ
ತಲುಪುತ್ತ….
ನಾನೂ ಹುಲಿಯಾದೆ!
****
ವಿಜಯಶ್ರೀ ಹಾಲಾಡಿ
ಟಿಪ್ಪಣಿ: ತನ್ನ ಆಹಾರವನ್ನು ಮಾತ್ರ ಕೊಂದು ತಿನ್ನುವ ಹುಲಿಯನ್ನು ಕ್ರೂರ ಪ್ರಾಣಿ ಎಂದು ಹೆಸರಿಸಿ ಬಿಟ್ಟಿದ್ದೇವೆ ನಾವು. ಆದರೆ ಈ ಪರಿಸರದ ಒಂದು ಸಹಜ ಪ್ರಾಣಿಯಾಗಿ ಅದರ ಇನ್ನೊಂದು ಮುಖವನ್ನು ತಿಳಿಯುವ ಪ್ರಯತ್ನವನ್ನು ನಾವು ಅನೇಕರು ಇನ್ನೂ ಮಾಡಿಲ್ಲ… ಆ ಹಿನ್ನೆಲೆಯಲ್ಲಿ ಕವಿತೆ.
ಹುಲಿ ನರಭಕ್ಷಕನಾಗಲು ಕೆಲವು ನಿರ್ದಿಷ್ಟ ಕಾರಣಗಳಿವೆ. ಹೆಚ್ಚಿನ ಸಂದರ್ಭಗಳಲ್ಲಿ ಮನುಷ್ಯನ ಗುಂಡಿನ ಪೆಟ್ಟು ತಾಗಿ ಗಾಯಗೊಂಡ ಹುಲಿ ಆಹಾರ ಸಂಪಾದಿಸಲಾಗದೆ ಊರಿನ ಕಡೆ ಸುಲಭವಾಗಿ ಸಿಗುವ.ದನಕರುಗಳನ್ನು ಹಿಡಿಯುತ್ತದೆ. ಆ ಸನ್ನಿವೇಶದಲ್ಲಿ ನರಭಕ್ಷಕನಾಗಬಹುದು. ಇದು ಅಪರೂಪದ ಸಂದರ್ಭ. ಉಳಿದಂತೆ ಹುಲಿ ಕಾಡೊಳಗೆ ತನ್ನ ಬೇಟೆಯನ್ನು ಹಿಡಿದು ತಿಂದು ತನ್ನಷ್ಟಕ್ಕೆ ಜೀವಿಸುತ್ತದೆ. ಮನುಷ್ಯನ ವಿಕೃತಿಗಳಿಗೆ ಹೋಲಿಸಿದರೆ ಹುಲಿ ಮತ್ತು ಇನ್ನಿತರ ಎಲ್ಲಾ ಪ್ರಾಣಿಗಳೂ ಅಪಾಯರಹಿತವೇ.