ಕಾವ್ಯ ಸಂಗಾತಿ
ಹೆಣ
ದೇವರಾಜ್ ಹುಣಸಿಕಟ್ಟಿ.
ಈಗೀಗ……!
ಹೆಣವೆಂದರೆ ತಾಯಿಯ
ಗೋಳು ತಂದೆಯ ಕಂಬನಿ…
ಅಲ್ಲ ಮಾರಾಯ….!
ಧರ್ಮದ ದಂಗಲ್ ಗೆ
ಕಾದಿಟ್ಟ ಕಿಚ್ಚು…..!
ಈಗೀಗ…..!
ಹೆಣವೆಂದರೆ ಹೆಂಡತಿಯ
ಹಣೆಮೇಲಿನ ಕುಂಕುಮ
ಮಕ್ಕಳ ತೆಲೆಮೇಲಿನ ನೆರಳು…
ಅಲ್ಲ ಮಾರಾಯ…!
ಚುನಾವಣೆಯ ಮುನ್ನ
ಮತ ಬ್ಯಾಂಕಿಗೆ ಕಾಯ್ದಿಟ್ಟ
ನಿಶ್ಚಿತ ಠೇವಣಿ….!!
ಈಗೀಗ…..!
ಹೆಣವೆಂದರೆ ಅಣ್ಣನಿಗೊ
ಅಕ್ಕನಿಗೊ ಕಾಡುವ
ಅನಾಥ ಪ್ರಜ್ಞೆ….
ಅಲ್ಲ ಮಾರಾಯ
ಚುನಾವಣಾ ಚಾಣಕ್ಯನ
ಬತ್ತಳಿಕೆಯಲ್ಲಿಯ ಅತ್ಯಂತ
ಪ್ರಬಲ ಅಸ್ತ್ರ….!!
ಈಗೀಗ….!
ಹೆಣವೆಂದರೆ ಮನೆಯಿಂದ
ಸ್ಮಶಾನದವರೆಗಿನ ದುಃಖದ
ಮಡುವು…!
ಅಲ್ಲ ಮಾರಾಯ
ಮಾಧ್ಯಮಗಳಿಗಾಗಿಯೇ
ಕಾಯ್ದಿಟ್ಟ ಟಿಆರ್ ಪಿಯ
ಮೀಸಲು ಕೋಟಾ…!
ಈಗೀಗ….!
ಹೆಣವೆಂದರೆ….ಸಂತಾಪ
ಸೂಚಕ ಮೌನ ಪ್ರಾರ್ಥನೆ….!
ಅಲ್ಲ ಮಾರಾಯ…
ಸ್ವ ಪಕ್ಷದಲ್ಲಿಯ ತಲೆ ಹಿಡುಕರು
ಭಿಕ್ಷೆ ಬೇಡಲೆಂದೇ ಮಾಡಿದ
ಚಟ್ಟದ ಥೈಲಿ….!!
ಈಗೀಗ…..!
ಹೆಣವೆಂದರೆ….
ಗೊರಿಯಿಂದ ಮೊಳೆಯುವ ಸಸಿಯಲ್ಲ….ಮಾರಾಯ
ಗದ್ದುಗೆಗಾಗಿಯೇ ನಿರ್ಮಿಸಿದ
ಶವದ ಮೆಟ್ಟಿಲು….!!
ತಾವೇ ತೂಗಿ ತಾವೇ ನಿಲ್ಲಿಸಿ
ಆಟವಾಡಿಸುವ ಅಧಿಕಾರ
ದಾಹದ ತೊಟ್ಟಿಲು…..
!
ಹೆಣವೆಂದರೆ…
ಮತ್ತೆ ನಮಗೋ….!!
ಆರಿದ್ದು ಒಂದು
ಮನೆಯ ದೀಪ….!
ಸುಟ್ಟಿದ್ದು ಒಂದು
ಜೀವಂತ ಕನಸು….!
ದಹಿಸಿದ್ದು ನಮ್ಮದೇ
ಅವ್ವನ ಅನಾದಿ ಕಾಲದ
ಒಂದು ಹೊಕ್ಕಳು ಬಳ್ಳಿ…!!
ಅವರಿಗೊ…!
ಹೆಣ ಒಂದು ಮತ ಪೆಟ್ಟಿಗೆ…!!
ಅಷ್ಟೇ..!
ನಿಜ ಸರ್ ಜಿ ವಾಸ್ತವದ ಚಿತ್ರಣ..