ಕಾವ್ಯಸಂಗಾತಿ
ನವೋದಯ
ಜಯಲಕ್ಷ್ಮಿ ಎಂ.ಬಿ.
ಮುಂಜಾನೆ ಮಂಜಹನಿ ರವಿಕಿರಣ ಸೋಕಿರಲು ಮಿಂಚೊಂದು ಹರಿದಂತೆ ಕಾಣುತ್ತಿತ್ತು
ತಣ್ಣನೆಯ ಗಾಳಿಯೊಳು ಮೈಯೊಡ್ಡಿ ನವಕುಸುಮ ವಿಕಸಿಸುತ ಪರಿಮಳವ ಸೂಸುತ್ತಿತ್ತು
ದುಂಬಿಗಳ ಝೇಂಕಾರ ಗುಂಯ್ ಗುಡುತ ಪ್ರತಿಧ್ವನಿಸಿ ಕಿವಿಗಳಿಗೆ ಮುದವನ್ನು ನೀಡುತ್ತಿತ್ತು
ಚಿಗುರೆಲೆಯ ಮಾಮರವು ಸುಳಿಗಾಳಿ ಸೋಕಿದೆಡೆ ತಂಪೆಲರ ಪಸರಿಸುತ ನಲಿಯುತ್ತಿತ್ತು
ಮೂಡಣವು ರಂಗೇರಿ ಹಕ್ಕಿಗಳ ಚಿಲಿಪಿಲಿಯು ಮರಗಿಡಗಳೆಡೆಯಲ್ಲಿ ಧ್ವನಿಸುತ್ತಿತ್ತು
ನವಿಲೊಂದು ಗರಿಬಿಚ್ಚಿ ನಲಿಯುತ್ತ ಸೊಬಗಿನಲಿ ವನದೊಳಗೆ ಆಡುತ್ತ ಕುಣಿಯುತ್ತಿತ್ತು
ಇಂಪಾದ ದನಿಯಲ್ಲಿ ಹಾಡೊಂದು ಗುನುಗುತ್ತ ತಂತಾನೆ ಕೋಗಿಲೆಯು ನಲಿಯುತ್ತಿತ್ತು
ಪ್ರಕೃತಿಯು ಎಲ್ಲೆಡೆಯು ಹೊಸಬೆಳಕಿನಲೆಯಲ್ಲಿ ಮಿಂದೆದ್ದು ಶುಭ್ರತೆಯ ತೋರುತ್ತಿತ್ತು