ಕಾವ್ಯ ಸಂಗಾತಿ

ಶಮಾ. ಜಮಾದಾರ ಮತ್ತು ಅಶ್ಫಾಕ್ ಪೀರಜಾದೆ.

ಗಜಲ್ ಜುಗಲ್ ಬಂದಿ

.

ಗಜ಼ಲ್

ಪಹರೆಯ ಹೆಸರಿನಲಿ ಮುಳ್ಳೇ ಕಾಡುತಿದೆ
ಪಸರಿಸಿದ ಸುಗಂಧ ವಿಷಗಾಳಿ ಬೀರುತಿದೆ

ಹಿಡಿದಿಟ್ಟ ಉಸಿರು ನಿಲ್ಲಲು ಅವನಾಜ್ಞೆ ಬೇಕಲ್ಲವೇ
ಗಾಳಿಯೊಡನೆ ಕದನಕಿಳಿದು ಕಾಯ ಸೋಲುತಿದೆ

ಪ್ರೀತಿಯನು ನೇಣಿಗೇರಿಸಿದವರಿಗೆ ಎಲ್ಲಿಯ ಮರ್ಯಾದೆ
ಸತ್ಯ ತಿಳಿದರೂ ಯುವಪಡೆ ಪ್ರೀತಿಯ ನಂಜು ಕುಡಿಯುತಿದೆ

ದಮನಕೀಡಾದುದು ನಮ್ಮದೇ ತಪ್ಪು ತಲೆಯೆತ್ತಲಿಲ್ಲ
ಮುಗ್ಧ ಮನಸುಗಳಲಿ ಕುಲ ವಿಷಬೀಜ ಬಿತ್ತುತಿದೆ

ಕುರುಡೆಂದ ಕಾನೂನಿಗೆ ಕಿವುಡು ಕೂಡ ಶುರುವಾಗಿದೆ
ನಿಲ್ಲದ ಒಸರಿದು ಒಲವೆಂಬುದು ಸತತ ಸಾಬೀತಾಗುತಿದೆ

ಪ್ರೇಮಿಗಳ ಪೀಡನೆ ಇಂದು ನಿನ್ನೆಯದಲ್ಲವಲ್ಲ ಶಮಾ
ಅದುಮಿದಷ್ಟು ಪುಟಿದೆದ್ದು ಪ್ರೇಮಸುಮ ಅರಳುತಿದೆ.

***

ಶಮಾ. ಜಮಾದಾರ

ಗಜಲ್

ಮುಳ್ಳುಗಳ ಪಹರೆಯಲಿ ಮಂದಾರ ತಣಿಯುತಿದೆ
ಸೀಮೆಗಳು ಮೀರಿ ಪ್ರೀತಿ ಸುಗಂಧ ಪಸರಿಸುತಿದೆ

ಉಸಿರು ಬಂಧಿಸುವ ವ್ಯರ್ಥ ಪ್ರಯತ್ನ ನಡೆಯುತಿದೆ
ಗಾಳಿಗೆ ಬಿರುಗಾಳಿಯಾಗಿಸುವ ಶ್ರಮ ಸಾಗುತಿದೆ

ಮರ್ಯಾದಾ ನೀತಿ ಒಲುಮೆಗೆ ಕಫನ್ ತೊಡಿಸುತಿದೆ
ಅಲೌಕಿಕ ಅನುಭೂತಿಗೆ ಜಾತಿ ನಂಜು ಸವರುತಿದೆ

ಅಗೋ ಅಲ್ಲಿ ಆ ದಮನಿತರ ಗುಡಿಸಲು ಸುಡುತಿದೆ
ಮಕ್ಕಳು ಕೂಡಿ ಆಡಿದ ತಪ್ಪಿಗೆ ಹಿಂಸೆ ವಿಜೃಂಭಿಸುತಿದೆ

ಮುಗ್ಧರನ್ನ ಶಿಕ್ಷಿಸುವ ಫರಮಾನ್ ಜಾರಿಯಾಗುತಿದೆ
ಸತ್ತರೂ ಪ್ರೇಮಿಗಳ ಅದೇ ಇತಿಹಾಸ ಮರುಕಳಿಸುತಿದೆ

ಅನುರಾಗಿಗಳ ದಾರಿಗೆ ಮುಳ್ಳಿನ ಮಳೆ ಸುರಿಯುತಿದೆ
ತುಳಿದರೂ ಬಿಡದೇ ಪವಿತ್ರ ಪುಷ್ಪ ಅರಳಿ ನಗುತಿದೆ.

***

ಅಶ್ಫಾಕ್ ಪೀರಜಾದೆ

Leave a Reply

Back To Top