ಕಾವ್ಯ ಸಂಗಾತಿ
ಗಜಲ್ ಜುಗಲ್ ಬಂದಿ
ಮಂಡಲಗಿರಿ ಪ್ರಸನ್ನ ಮತ್ತು ಮಾಜಾನ್ ಮಸ್ಕಿ
ಗಜಲ್
ಸುಮವು ಅರಳುತಿದೆ ನೀ ಬರುವ ದಾರಿಯಲಿ
ಸುವಾಸನೆ ಬೀರುತಿದೆ ನೀ ಬರುವ ದಾರಿಯಲಿ
ಜಗವೇ ದೂಷಿಸಿದರು ಜೊತೆಯಾದೆ ನನಗೆ
ಎದೆ ಮಿಡಿಯುತಿದೆ ನೀ ಬರುವ ದಾರಿಯಲಿ
ಹಮ್ಮು ಬಿಮ್ಮುಗಳಿಲ್ಲದ ಗೆಳೆತನ ನಮ್ಮದು
ಮನ ನಲಿಯುತಿದೆ ನೀ ಬರುವ ದಾರಿಯಲಿ
ಅದೆಷ್ಟೋ ಚೂರಿಗಳು ಇರಿದಿವೆ ಬೆನ್ನ ಹಿಂದೆ
ಗಾಯ ಮಾಯುತಿದೆ ನೀ ಬರುವ ದಾರಿಯಲಿ
ಸಾಂತ್ವನ ನೀಡುವ ಒಡನಾಟವಿದು ‘ಮಾಜಾ’
ನೋವು ಮರೆಯಾಗಿದೆ ನೀ ಬರುವ ದಾರಿಯಲಿ
***
ಮಾಜಾನ್ ಮಸ್ಕಿ
ಗಜಲ್
ತೋರಣ ತೂಗಿದೆ ನೀ ಬರುವ ದಾರಿಯಲಿ
ಕೋಗಿಲೆ ಹಾಡಿದೆ ನೀ ಬರುವ ದಾರಿಯಲಿ
ಜಗವು ಹಸಿರುಟ್ಟಿದೆ ನಮ್ಮೊಲವ ಹಾಡಿಗೆ
ಬಿಸಿಲು ಸೋತಿದೆ ನೀ ಬರುವ ದಾರಿಯಲಿ
ಹಗಲಲು ತಾರೆಗಳ ಮಿನುಗಿದೆ ಇಂದೇತಕೊ
ಎದೆವೀಣೆ ಮೀಟಿದೆ ನೀ ಬರುವ ದಾರಿಯಲಿ
ಮೋಡ ಗುಡುಗು ಮಿಂಚು ಕಳೆಗಟ್ಟಿಹುದು
ಸೋನೆ ಸುರಿದಿದೆ ನೀ ಬರುವ ದಾರಿಯಲಿ
ಗಿರಿ ಕಂದರದಿಂದ ತೊರೆಯಾದ ನಲ್ಮೆ ಹೊಳೆ
ಗಂಗೆಯಾಗಿ ಹರಿದಿದೆ ನೀ ಬರುವ ದಾರಿಯಲಿ
ಮಂಡಲಗಿರಿ ಪ್ರಸನ್ನ
ಏಕ್ ಬಡಕರ್ ಏಕ್ ……
Tq. Sir
ಚಂದದ ಭಾವ ಹೊತ್ತ ಚಿಕ್ಕ ಚೊಕ್ಕ ಗಜಲ್ ಗಳು!! ಜುಗಲ್…ಬಂಧಿ ಸುಂದರ . .
Tq. Madam