ಕಾವ್ಯ ಸಂಗಾತಿ
ನಯನ.ಜಿ.ಎಸ್.ರವರ ಗಜಲ್
ಮತಿಭ್ರಮಣೆಯ ವ್ಯೂಹದಲಿ ಬೆರೆಯುವೆ ಏಕೆ ಆಲಿಸು ವೀರತ್ವದ ದನಿಯ
ಚಿತ್ತ ಚಾಪಲ್ಯತೆಗೆ ಒಗ್ಗುತ ನಿತ್ಯ ಮೆರೆಯುವೆ ಏಕೆ ಆಲಿಸು ವೀರತ್ವದ ದನಿಯ
ಸುಖದ ನಶೆಯನು ಇರಿದು ಶೌರ್ಯತೆಯಲಿ ಬೀಗಿ ಬಾಗುತಿಹುದು ಹೃನ್ಮನ
ಎಣಿಕೆಗಳ ದಾಸ್ಯದಲಿ ಕೊರಳ ಕೊಂಕಿಸುವೆ ಏಕೆ ಆಲಿಸು ವೀರತ್ವದ ದನಿಯ
ಕೆಚ್ಚೆದೆಯ ಕಾಮನೆಗಳನು ಹಿಂಜಿ ಹಿಂಡುತಿದೆ ಕುಕೃತ್ಯ ನುಸುಳದಿರಲಿ ಕಾವು
ಕೋಪ ತಾಪಗಳನು ಭುಗಿಲೆಬ್ಬಿಸುತ ನಗುವೆ ಏಕೆ ಆಲಿಸು ವೀರತ್ವದ ದನಿಯ
ಹುಲುಸು ಭಾವಕ್ಕೆ ಭಾವ ಮಿಲನದಲೇ ಹೊಳಪು ಹುಂಬನಾಗದಿರು ಮನುಜ
ಹಳಸು ನಂಟುಗಳ ಹೊಸೆದು ಈಜಿ ನುಗ್ಗುವೆ ಏಕೆ ಆಲಿಸು ವೀರತ್ವದ ದನಿಯ
ಸ್ವಾರ್ಥ ತೊರೆದ ಸಾರ್ಥಕ್ಯ ಹೃದಯದ ಆದರಕೆ ನಿತ್ಯ ಸಖಿಯಿವಳು ‘ನಯನ’
ಶಾಂತಿ ಸೂತ್ರಕೆ ಇರಿಯುವ ಶೂಲೆಯಾಗುವೆ ಏಕೆ ಆಲಿಸು ವೀರತ್ವದ ದನಿಯ