ಗಜಲ್

ಕಾವ್ಯ ಸಂಗಾತಿ

ಗಜಲ್

ಮಾಜಾನ್ ಮಸ್ಕಿ

ಉಮರ ಖಯಾಮನ ಖಯಾಲಿಯ ಸುಂದರತೆ ನೀನಾಗಿರುವೆ ಚೆಲುವೆ
ಮಿಂಚಿನ ಹೊಳಪುಳ್ಳ ಕಂಗಳ ಉಪಮೆಯ ನಕ್ಷತ್ರತೆ ನೀನಾಗಿರುವೆ ಚೆಲುವೆ

ಗಿರಿಯ ತುದಿಯಿಂದ ಹರಿಯುವ ಹಾಲಿನ ನೊರೆಯಿಂದ ಎದ್ದಂತೆ ನೀ
ಆ ಮಂಜಲ್ಲಿ ಮೂಡಿದ ಬೆಳದಿಂಗಳ ಬಾಲೆಯ ಕೋಮಲತೆ ನೀನಾಗಿರುವೆ ಚೆಲುವೆ

ಕಾಮನ ಬಿಲ್ಲೊಂದು ಮೂಡಿ ನಿನ್ನಯ ರಂಗು ಹೆಚ್ಚಿಸಿದೆ ಹೇ ದಿಲ್ ರುಬಾ
ನಿನ್ನ ಅಂದವ ನೋಡಲೆಂದೆ ಬರುವ ನೇಸರನ ವ್ಯಾಕುಲತೆ ನೀನಾಗಿರುವೆ ಚೆಲುವೆ

ನನ್ನೆಲ್ಲ ಒಲುಮೆಯ ಧಾರೆ ನಿನಗೆಂದೆ ಎರೆದು ಸೋತು ಸೋಲುತ್ತಿರುವೆ
ನಿನಗೆಷ್ಟು ಪ್ರೀತಿಸಿದರು ಹೃದಯ ತುಂಬದ ನಿರಂತರತೆ ನೀನಾಗಿರುವೆ ಚೆಲುವೆ

ಮೌನದ ಸಂಭಾಷಣೆ ಅದೆಷ್ಟು ಹಿತ ಸೊಗಸು ಅಲ್ಲವೆ “ಮಾಜಾ”
ನಿನ್ನನ್ನು ನೆನೆದರೆ ಮಧುರ ಗಾನದ ಏಕತಾನತೆ ನೀನಾಗಿರುವೆ ಚೆಲುವೆ


Leave a Reply

Back To Top