ಕಾವ್ಯಸಂಗಾತಿ
ಗಜಲ್
ಮಾಜಾನ್ ಮಸ್ಕಿ
ತಪ್ಪಿಲ್ಲದಿದ್ದರು ಸೋತು ಶೂಲಕ್ಕೆ ಏರುತ್ತಿದೆ ಮೌನ
ವಾಚಾಳಿಗಳ ಮುಂದೆ ಸತ್ಯ ಶಬ್ದಗಳನ್ನೇ ಮರೆಯುತ್ತಿದೆ ಮೌನ
ಸ್ಮಶಾನದ ಹೊಸ್ತಿಲಿಗೆ ದಾರಿ ಸಾಗುತ್ತಿದೆ ಬದುಕು ಬೇಸರವಾಗಿ
ಮೊಹಬತ್ ಇಲ್ಲದ ಮುಖವಾಡಗಳಲ್ಲಿ ನರಳುತ್ತಿದೆ ಮೌನ
ಬೇವಿನ ಬೀಜ ಬಿತ್ತಿ ಮಾವಿನ ಹಣ್ಣು ಪಡೆಯಲಾದಿತೆ
ಇರ್ಶೆ ಅಸೂಯೆಯ ಬದುಕಲ್ಲಿ ಸಹಬಾಳ್ವೆ ಹುಡುಕುತ್ತಿದೆ ಮೌನ
ಬಣ್ಣದ ಮಾತುಗಳಲ್ಲಿ ಓಕುಳಿ ಆಡುತ್ತಿದೆ ಜನ ಜೀವನ
ಬಾಳಿನ ಭರವಸೆಗಳು ಬೆಂಕಿಯಲ್ಲಿ ದಹಿಸುತ್ತಿದೆ ಮೌನ
ಮುಳುಗಿದ ಸೂರ್ಯನಿಗೂ ನಾಳೆಯ ಉದಯ ಇದೆ “ಮಾಜಾ”
ಎಲ್ಲವನ್ನು ತೊರೆದು ಹಕ್ಕಿಯಂತೆ ಹಾರಲು ಮುಂದಾಗುತ್ತಿದೆ ಮೌನ