ಕಾಲಾಯ ತಸ್ಮೈ ನಮಃ

ಕಾವ್ಯ ಸಂಗಾತಿ

ಕಾಲಾಯ ತಸ್ಮೈ ನಮಃ

ಡಾ.ಡೋ ನಾ ವೆಂಕಟೇಶ

ದೇಶ ಸುತ್ತಲಿಲ್ಲ
ಕೋಶ ಓದಲಿಲ್ಲ
ಬಲ್ಲವರ ಮಾತು ಕೇಳಲೇ ಇಲ್ಲ
ಆದರೆ
ನಿನ್ನ ಕಾಲ ಬರುತ್ತಿದ್ದಾನೆ ನಿನಗಾಗಿ
ನಿಧಾನವಾಗಿ

ಜೀವ ಸಂಗೀತ ಮೀಟಲಿಲ್ಲ
ನಿನ್ನತನ ತಾರಕ್ಕೇರಲಿಲ್ಲ
ಆದರೂ
ಬರುವನೀಗ ಕಾಲ ನಿನ್ನ ಯಮನಾಗಿ
ನಿಧಾನವಾಗಿ!

ನಿನ್ನಾತ್ಮ ಗೌರವ ಎದ್ದು
ತವಕ ನಿನಗಿಲ್ಲವಾಗಿ
ಖಂಡಿತ ಬರುವ ಆ ಕಾಲ
ನಿನಗಾಗಿ ನಿಧ ನಿಧಾನವಾಗಿ!

ನಿನ್ನ
ಹಿತೈಷಿಗಳ ಹಸ್ತ ನೀ
ದೂರ ಮಾಡಿದ ದಿನ
ಅಳಿವ ಅಂಚಿಗೆ ನೀ
ಬಂದು ನಿಲ್ಲುವ ದಿನ
ಕಾಲ ಕಾಯುತ್ತಾನೆ
ನಿಧಾನವಾಗಿ

ಗತ ಹಾದಿಗಳ ಮರೆತು
ನೀ
ಹೊಸ ಬೀದಿಗಳಲ್ಲಿ ಮೆರೆಯದ
ನೀ
ಹೊಸ ರಂಗುಗಳಲ್ಲಿ ಕಂಗೊಳಿಸದ
ನೀ
ಕಾಯುತ್ತಿದ್ದೀ ನಿನ್ನದೇ ಕಾಲನನ್ನ
ನಿಧ ನಿಧಾನವಾಗಿ !

ಅವನೋ ಶಿಸ್ತಿನ ಸಿಪಾಯಿ
ಬರುವನು ಸದ್ದಿಲ್ಲದೇ
ಶಬ್ಧ ಮಾಡದೇ
ಅತಿ ನಿಧಾನವಾಗಿ!

ನೀ
ಅಪರಿಚಿತ ಅಸಹಾಯಕನ ಹೆಗಲ ಮೇಲೆ ಕೈಹಾಕಿ
ಸಂತೈಸದ ದಿನ
ನಿನ್ನ ಭಾವನೆಗಳ ಏರಿಳಿತದ
ಅಲೆಗಳ ಮೇಲೆ ತೇಲಾಡದ ದಿನ
ನಿನ್ನಾಸೆ ನಿರಾಸೆಗಳ
ಮೂಸೆಯಲಿ
ನೀ ಪ್ರಜ್ವಲಿಸದ ದಿನ

ನಿನ್ನದೇ ಕಣ್ಣಂಚಿನ
ಹನಿಯಲ್ಲಿ ನೀ
ಮಸುಕಾಗದ ದಿನ
ಗೆಳೆಯಾ
ಕಾಲ ಬರುತ್ತಾನೆ ಕಂಡೆಯಾ!

ಆ ಕಾಲ
ನಿಧಾನವಾಗಿ ಪಿಸು ಮಾತಿನಲ್ಲಿ
ಕರೆಯುತ್ತಾನೆ
ನಿನ್ನನ್ನ ತನ್ನಲ್ಲಿ ಲೀನನಾಗಿಸುತ್ತಾನೆ
ಆ ಕಾಲ
ಕರಾಳ ಕಾಲ!!

ಕಾಲಾಯ ತಸ್ಮೈ ನಮಃ


15 thoughts on “ಕಾಲಾಯ ತಸ್ಮೈ ನಮಃ

  1. ಕಾಲನಿಗೆ ಕಾಲವೇ ಉತ್ತರಿಸುತ್ತದೆ ಯಾರೂ ಇಲ್ಲಿ ಶಾಶ್ವತವಲ್ಲ ಎಂಬುದನ್ನು ನೆನಪಿನಲ್ಲಿ ಉಳಿಯುವಂತೆ ಮಾಡಿದ ಕವನ… ಸುಂದರ ಸಾಲುಗಳು.

  2. ನಾವಿರುವಷ್ಟು ಕಾಲ ಸತ್ಪಥದ ಹಾದಿಯಲ್ಲಿ ಸಾಗುವ ಮನಸ್ಸು ಬರಲಿ. Very nice Venkanna,

Leave a Reply

Back To Top