ಕಾವ್ಯ ಸಂಗಾತಿ
ನಾ ಹ್ವಾದ ಮ್ಯಾಲ ನೀ ಹೆಂಗ ಇರತಿ..?
ಶಂಕರಾನಂದ ಹೆಬ್ಬಾಳ
ನನ್ನ ಜೀವಕ್ಕ ಜೀವಾ ಕೊಡತಿ
ನಾನಂದ್ರ ದೇವರಂಗ ಕಾಣತಿ
ನನ್ನಂದ್ರ ಜಗತ್ತ ಮರಿತಿ
ಖರೆ ಹೇಳು,
ನಾ ಹ್ವಾದ ಮ್ಯಾಲ ನೀ ಹೆಂಗ ಇರತಿ..?
ನನ್ನ ಜೊತಿ ಸದಾ ಇರತಿ
ಕಣ್ಣಿನ್ಯಾಗ ನನ್ನ ಕರಿತಿ
ನನ್ನ ಸುಖಕ್ಕ ಜೀವಾ ಕೊಡತಿ
ಖರೆ ಹೇಳು,
ನಾ ಹ್ವಾದ ಮ್ಯಾಲ ನೀ ಹೆಂಗ ಇರತಿ..?
ಖಾಲಿಯಾಗದ ಪ್ರೀತಿ ಕೊಡತಿ
ಕಷ್ಟದಾಗೂ ನಕ್ಕೊಂತ ಇರತಿ
ನಾ ಸಿಟ್ಟಾದ್ರ ಸುಮ್ಮ ಕೂಡತಿ
ಖರೆ ಹೇಳು,
ನಾ ಹ್ವಾದ ಮ್ಯಾಲ ನೀ ಹೆಂಗ ಇರತಿ..?
ರೊಟ್ಟಿ ಖಾರ ತಿಂದ್ರೂ ಅಮೃತಂತಿ
ಮಹಡಿಮನಿ ಬ್ಯಾಡ ಅಂತಿ
ಈ ಗುಡಿಸ್ಲಾನ ಅರಮನಿ ಅನತಿ
ಖರೆ ಹೇಳು,
ನಾ ಹ್ವಾದ ಮ್ಯಾಲ ನೀ ಹೆಂಗ ಇರತಿ..?
ಸದಾ ನಿನಗ ನಂದ ಚಿಂತಿ
ಎದಿಗೂಡನ್ಯಾಗ ಗಪ್ಪ ಕುಂತಿ
ನಮ್ಮ ಲೋಕಕ್ಕ ಇನ್ನೇನ ಕೊರತಿ
ಖರೆ ಹೇಳು ,
ನಾ ಹ್ವಾದ ಮ್ಯಾಲ ನೀ ಹೆಂಗ ಇರತಿ..?
ನಾ ಹಾಸಿಗಿ ಹಿಡದಾಗ ಜ್ವಾಪಾನ ಮಾಡತಿ
ತಾಯಿಯಂಗ ಪಿರುತಿ ತೋರತಿ
ಈ ದೇಹಕ್ಕ ನೀನೋಬ್ಬಾಕಿನೆ ಒಡತಿ
ಖರೆ ಹೇಳು,
ನಾ ಹ್ವಾದ ಮ್ಯಾಲ ನೀ ಹೆಂಗ ಇರತಿ..?
ನನ್ನ ಸುಖಾದುಃಖಕ್ಕ ಭಾಗಿಯಾಗತಿ
ಕಣ್ಣೆದುರಿಗಿ ಸ್ವರ್ಗಾ ತೋರತಿ
ಈ ಬಾಳು ಬಂಗಾರ ಮಾಡತಿ
ಖರೆ ಹೇಳು,
ನಾ ಹ್ವಾದ ಮ್ಯಾಲ ನೀ ಹೆಂಗ ಇರತಿ…?
ಆಕಿ ಹ್ಯಾಂಗರ ಮಾಡ್ಲೀ, ಕವನ ಮುದ್ದಾಗೈತಿ.