ಕಾವ್ಯ ಸಂಗಾತಿ
ಆ ಒಂದು ಒಂಟಿ ಸಂಜೆ…..!
ದೇವರಾಜ್ ಹುಣಸಿಕಟ್ಟಿ
ನಿನ್ನ ಮೌನದ ಹೊರತು……
ಏನೇನು ಉಳಿದಿತ್ತು
ಅಲ್ಲಿ…
ಹನಿಯೊಡದ ಮೋಡದಿ
ಉಳಿದ ಎರಡು ಹನಿ…!!
ಇರಬೇಕ್ ನನ್ನದೇ
ಕಂಬನಿ….!!
ಸವೆಯದ ಅರ್ಧ ರಾತ್ರಿ…
ಇಷ್ಟೇ ಇಷ್ಟು ಬೆಟ್ಟದಷ್ಟಾದರೂ
ಅರ್ಧಕ್ಕೆ ತುಂಡಾದ
ಮಾತು ಉಳಿದಿದೆ ಖಾತ್ರಿ…!
ಉಳಿದ ಅರ್ಧ ಕಪ್ ಕಾಫಿ..
ಅರ್ಧ ಸಾಗಿ ಸವೆದ ದಾರಿ…..
ಸೋ ಕಾಲ್ಡ್…
ಸಭ್ಯತೆ ಗೆರೆ ದಾಟಿದ್ದರೆ
ಅದೆಷ್ಟು ಕುಡಿದರೂ ನಶೆ
ಏರದೆ ಸೋತು ಉಳಿದ ಅರ್ಧ ಪೆಗ್…..
ತಿನ್ನಲು ತಂದರೂ
ತಿನ್ನಲಾಗದ ಅರೆಬೆಂದ ಎಗ್….
ಅರ್ಧ ಸೇದಿ ತುಂಡಾದ ಸಿಗರೇಟ್….
ಅಪೂರ್ಣ ಕಣ್ಣೀರ ಎರಡು ಹನಿ…
ಗಂಟಲಲ್ಲೆ ಒದ್ದೆಯಾಗಿ ಉಳಿದ
ಹೃದಯದ ಒಂದೆರಡು ಮಾತು..
ಎರಡು ಅರೆಬರೆ ಬೆಂದ
ಕನಸು…..
ನನ್ನ ಮೇಲೆ ನನಗೆ
ತೀರಿಸಲಾಗದಷ್ಟು ಮುನಿಸು…..!
ಅಷ್ಟೇ ಕಿಟಕಿಯಿಂದ
ಇಣುಕಿದ ಎರಡು..
ಹಸಿ ಬಯಕೆ…….
ನೆತ್ತರಲ್ಲಿ ನೆಂದ ಮೇಲೂ
ಒದ್ದೆಯಾಗದೆ ಉಳಿದ ಒಂದಿಷ್ಟು
ಬೊಗಸೆಯಷ್ಟೇ ಪ್ರೀತಿ….
ಮತ್ತೇನೂ ಇಲ್ಲಾ…
ಬರೀ ಇಷ್ಟೇ ಅಂದ್ರ್ ಇಷ್ಟೇ
ಖಾಲಿ ಹೃದಯದಿ
ಉಳಿದ ಒಂದೆರಡು ಬಿಕ್ಕಳಿಕೆ….!!
ತೀವ್ರ ತೇವಗೊಂಡ
ಎದೆಯ ಒಂದಂಗುಲ ಹೊಲ….!!
ಇರುಳೀಡಿ ಕಣ್ಣ್ ರೆಪ್ಪೆ
ಮುಚ್ಚದೆಯೂ ನಿರಾಯಸ
ನಿದ್ದೆ ನಿರಾಕರಿಸುವ
ಕಂಗಳಲ್ಲಿಯ
ಒಂದ್ ಹನಿ ಪ್ರೀತಿಯೇ
ಜೀವಜಲ….!!
ಛೇ…ಇಷ್ಟಾಗಿಯೂ…..!
ಈಗೀಗ ಈ ಹೃದಯ
ತುರ್ತು ನಿಗಾಘಟಕದಲ್ಲಿ..!