ಅಂಕಣ ಸಂಗಾತಿ

ಒಲವ ಧಾರೆ

ಬಾರ್‌ನವೇಟರ್‌ಗಳ

ನೋವಿನೊಳಗಿನ

ಬತ್ತದವಾತ್ಸಲ್ಯದಒರತೆ…

Angry waiter Stock Photos, Royalty Free Angry waiter Images | Depositphotos

ಬಾರ್ ವೇಟರ್ಗಳ ನೋವಿನೊಳಗಿನ ಬತ್ತದ ವಾತ್ಸಲ್ಯದ ಒರತೆ

೨೦ ವರ್ಷಗಳ ಹಿಂದಿನ ಮಾತು. ಯಾಕೋ ನನ್ನ ಅಂದಿನ  ಬದುಕು ನೆನಪಾಯಿತು. ಮನೆಯಲ್ಲಿ ಕಿತ್ತು ತಿನ್ನುವ ಬಡತನ.ಹೇಗಾದರೂ ಮಾಡಿ ಓದಬೇಕೆಂಬ ಹಂಬಲ. ಅದಕ್ಕಾಗಿ ನಾನು ಮಾಡದ ಉದ್ಯೋಗವೇಇಲ್ಲ. ಬೇಸಿಗೆ ರಜೆ ಬಂದರೆ ಸಾಕು ನನ್ನೂರಿನ ನನಂತಹ ಹಲವು ಗೆಳೆಯರು ದೂರದ ಹುಬ್ಬಳ್ಳಿಯ ನಗರದಲ್ಲಿ ಹೋಟೆಲ್ ಮಾಣಿಯಾಗಿ, ಲಾಜ್‌ಗಳಲ್ಲಿ ರೂಂಬಾಯಾಗಿ, ಸಪ್ಲೈರ್ ಆಗಿ ನಾನಾ ಕೆಲಸಕ್ಕೆ ಒಗ್ಗಿಕೊಂಡು ಕೆಲಸ ಮಾಡುತ್ತಿದ್ದೆವು. ಬಾರ್ ವೇಟರಾಗಿ ಕೆಲಸ ಮಾಡಿದ ಆ..ನೋವುಗಳು, ಸಂಕಟಗಳು, ಓದಿನ ಮತ್ತು ಕುಟುಂಬದ ಒಲವಿನ ಅನಿವಾರ್ಯತೆಗೆ ಈ ಬದುಕನ್ನು ತೆರೆದ ನೆನಪುಗಳು ಯಾಕೋ ಮನಸ್ಸು ಕಲಕಿದವು…

ಬದುಕು ನಮಗೆಂತಹ ಪಾಠವನ್ನು ಕಲಿಸುತ್ತದೆ ಎನ್ನುವುದಕ್ಕೆ ಕಂಡುಂಡ ನೋವುಗಳೇ ಸಾಕ್ಷಿಯಾಗುತ್ತದೆ. ಎಲ್ಲರಂತೆ ನಾನು ಬದುಕಿನಲ್ಲಿ ಏನಾದರೂ ಸಾಧಿಸಬೇಕು. ಒಂದು ಗುರಿಯನ್ನು ಇಟ್ಟುಕೊಂಡು ಕುಟುಂಬವನ್ನು, ನನ್ನ ಸಲಹಿದವರನ್ನು  ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಮಹದಾಸೆ ಹೊತ್ತು ನಗರಕ್ಕೆ ಬರುವ ನನ್ನಂತಹ ಯುವಕರ ದಂಡಿಗೆ ಕೊರತೆಯಿಲ್ಲ. ಕೆಲಸದ ಹುಡುಕಾಟದಲ್ಲಿ ತಮ್ಮನ್ನು ತಾವೇ ಕಳೆದು ಹೋಗುತ್ತಾರೆ. ಕೆಲಸವು ಎಲ್ಲಿಯೂ ದೊರೆಯದಿದ್ದಾಗ ಅನಿವಾರ್ಯವಾಗಿ ಹೋಟೆಲ್ ಕಾರ್ಮಿಕರಾಗಿಯೋ, ಬಾರ್ ಅಂಡ್ ರೆಸ್ಟೋರೆಂಟ್ ಮಾಣಿಯಾಗಿಯೋ ಕೆಲಸಕ್ಕೆ ಸೇರುವುದು ಸುಲಭವಾಗುತ್ತದೆ. ಯಾಕೆಂದರೇ ಹೊಟ್ಟೆ ತುಂಬಾ ಊಟ, ಪ್ರತಿ ತಿಂಗಳು ಸಂಬಳ ಎನ್ನುವ ಆಲೋಚನೆಯೊಂದಿಗೆ ಯಾವುದಾದರೂ ಆಗಲಿ ಒಂದು ಕೆಲಸ ಆದರೆ ಸಾಕು ಎನ್ನುವ ನಿಶ್ಚಿಂತೆಯ ನಿರ್ಣಯದೊಳಗೆ ಕೆಲಸಕ್ಕೆ ಸೇರುತ್ತಾರೆ. ಊರಿನಿಂದ ಬರುವಾಗ ಅರ್ಧಕ್ಕೆ ಶಾಲೆ ನಿಲ್ಲಿಸಿ ಅಕ್ಕನ ಮದುವೆಗೆ ಹಣ ಹೊಂದಿಸಲು ಒದ್ದಾಡುತ್ತಿದ್ದ ಯುವ ಮನಸ್ಸುಗಳು, ಬಾಳಿನ ಹೋರಾಟಕ್ಕೆ  ಆಸರಾದೀತೆಂಬ ಭರವಸೆಯೊಂದಿಗೆ ಬರುವ ನನ್ನಂತಹ ಯುವಕರು. ಅತಿಯಾದ ಅಪ್ಪನ ಕುಡಿತವು ಇಡೀ ಸಂಸಾರವನ್ನು ಹಾಳು ಮಾಡುವುದನ್ನು ಕಣ್ಣಾರೆ ಕಂಡು ತಾಯಿಯ ಸಂಕಟವನ್ನು ಅನುಭವಿಸಲಾಗದ ಯುವಕರು. ಓದಿದ್ದು ಸಾಕು ಕುಟುಂಬಕ್ಕೆ ಆಸರೆಯಾಗೋಣವೆಂದು ಭರವಸೆಯ ಹೆಜ್ಜೆಯನ್ನಿಕ್ಕುತ್ತಾ, ಅಳುಕಿನಿಂದಲೇ ನಗರವನ್ನು ಪ್ರವೇಶ ಮಾಡುವ ಯುವಮನಸ್ಸುಗಳಿಗೆ ಆತಂಕ ಬೇರೆ..!!

      ಎಸ್ ಎಸ್ ಎಲ್ ಸಿ ಮುಗಿಯಿತು ಮುಂದೆ ಓದಲು ಸಾಕಷ್ಟು ಆಸೆಯಿದೆ, ಗುರಿಯಿದೆ ಆದರೆ ಕೌಟುಂಬಿಕ ಜವಾಬ್ದಾರಿಗಳೂ ಕೂಡ ನಮ್ಮನ್ನು ಕೈಬೀಸಿ ಕರೆದಾಗ ದಿಕ್ಕೇ ತೋಚದಾಗಿತ್ತು. ಹೊಲದಲ್ಲಿ ಕೆಲಸ ಮಾಡಲಾಗದೆ, ಮನೆಯಲ್ಲಿ ನಿರುದ್ಯೋಗಿಯ ಪಟ್ಟವನ್ನು ಕಟ್ಟಿಕೊಳ್ಳಲಾರದೆ ಒಂದು ಕೆಲಸ ಅಂತ ಸಿಕ್ಕರೆ ಸಾಕು ಎನ್ನುವ ಮುಂದಾಲೋಚನೆಯಿಂದ ನಗರಕ್ಕೆ ಕೆಲಸದ ಆಸೆಯೊಂದಿಗೆ ಬರುವ ಮನಸ್ಸುಗಳ ಹಲವಾರು.

      ಒಂದೇ ಎರಡೇ ಅಂತೂ ಇಂತೂ ನಗರಕ್ಕೆ ಬಂದಾಯಿತು. ಸುಲಭವಾದ ಕೆಲಸವೆಂದರೆ ಬಾರ್ ಅಂಡ್ ರೆಸ್ಟೋರೆಂಟ್ ಅಲ್ಲಿ ಕೆಲಸ ಕೊಡು ಎಂದರೆ ಒಂದೇ ಸಲಕ್ಕೆ ಅಲ್ಲಿಯ ವ್ಯವಸ್ಥಾಪಕರಾಗಲಿ,  ಮಾಲೀಕರಾಗಲಿ ಒಪ್ಪುವುದಿಲ್ಲ. ನಮ್ಮಂತಹ ಹೊಸ ಯುವಕರ ಚಲನವಲನವನ್ನು ಗಮನಿಸಲು ಮೊದಲು ಟೇಬಲ್ ಸಾಪ್ ಮಾಡುವ, ದಿನಸಿ ತಂದು ಹಾಕುವ, ಲಿಕ್ಕರ್ ಸರಬರಾಜು ಮಾಡುವ, ಸಣ್ಣಪುಟ್ಟ ಕೆಲಸಗಳಿಗೆ ನೇಮಿಸಿ ಯುವಕನ ಪ್ರಮಾಣಿಕತೆಗೆ ಮುದ್ರೆ ಬಿದ್ದ ನಂತರ ಆತ ಮಣಿಯಾಗಿ ಬಡ್ತಿ ಹೊಂದುವ ಅಮೂಲ್ಯ ಕ್ಷಣಗಳಿಗೆ ಜಾತಕಪಕ್ಷಿಯಂತೆ ಕಾಯುತ್ತಿರುತ್ತಾರೆ.  ಅಂತೂ ಇಂತೂ ಬಾರಿನೊಳಗೆ  ಬರುವ ಗಿರಾಕಿಯೊಂದಿಗೆ ಆತನ ಕೆಲಸದ ದಿನಗಳು ಪ್ರಾರಂಭವಾಗುತ್ತವೆ.

       ಇಷ್ಟು ದಿವಸ ಅನುಭವಿಸಿದಯಾತನೆ ಒಂದು ಕಡೆಯಾದರೆ. ಇಂದಿನಿಂದ ಅನುಭವಿಸುವ ಕೆಲಸದ ಯಾತನೆಗಳು ಹತ್ತು ಹಲವಾರು. ಆ ಯಾತನೆಗಳನ್ನು ಯಾರ ಮುಂದೆಯೂ ಹಂಚಿಕೊಳ್ಳುವಂತಿಲ್ಲ. ನೋವುಗಳನ್ನು ತೋಡಿಕೊಳ್ಳುವಂತಿಲ್ಲ.  ವ್ಯವಸ್ಥಾಪಕರ ಮುಂದೆಯೋ, ಮಾಲಕರ ಮುಂದೆಯೋ ತನ್ನ ಸಂಕಟಗಳನ್ನು ತೋಡಿಕೊಂಡರೆ ಕೆಲಸಕ್ಕೆ ಎಲ್ಲಿ ಹಿಂಬಡ್ತಿ ಸಿಕ್ಕಿಬಿಡುತ್ತದೆ ಎನ್ನುವ ಚಿಂತೆ ಸದಾ ಕಾಡುತ್ತದೆ. ಅಂತಹ ಆತಂಕದಲ್ಲಿಯೇ ಕೆಲಸ ಪ್ರಾರಂಭವಾಗುತ್ತದೆ.

        ತಂದೆ ತಾಯಿಗಳ ಮೇಲಿನ ಪ್ರೀತಿ, ಅಕ್ಕನ ಮದುವೆಯ ಚಿಂತೆ, ತಮ್ಮನ ಓದಿಗೆ ಹಣವನ್ನು ಹೊಂದಿಸುವ ಧಾವಂತ ಹೀಗೆ ನೂರಾರು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿರುವ ನನ್ನಂತಹ ಯುವ ಮನಸ್ಸುಗಳು ಬರುವ ಗಿರಾಕಿಯೊಂದಿಗೆ ನಯ ವಿನಯದಿಂದ ಆತನು ಕೇಳುವ ಎಲ್ಲಾ ಆಸೆಗಳಿಗೆ ಪೂರಕವಾಗಿ ನಡೆದುಕೊಳ್ಳಬೇಕು. ಗಿರಾಕಿ ಕೇಳಿದ ಬ್ರಾಂಡ್ ಮದ್ಯವನ್ನು ಹುಡುಕಿ ತರಬೇಕು. ಗಿರಾಕಿ ಹೇಳುವ ಸ್ಯಾಕ್ಸ್ ಗಳು ಬೇಗ ಬೇಗ ಮಾಡಿಸಿಕೊಂಡು ತಂದುಕೊಡಬೇಕು. ಸ್ವಲ್ಪ ತಡವಾದರೆ ಸಾಕು ಕುಡಿತದ ಮತ್ತಿನಲ್ಲಿರುವ ಕೆಲವು ಗಿರಾಕಿಗಳು ಮದ್ಯವನ್ನೇ ಮುಖಕ್ಕೆ ಉಗುಳುವ, ನಾಲಿಗೆಯನ್ನು ಹರಿಬಿಟ್ಟು ಬಯ್ಯುವ, ಮಾಲಕರಿಗೆ  ಕಂಪ್ಲೇಂಟ್ ಮಾಡಲು ಏನು ಸಿಗದಿದ್ದಾಗ  ಏನಾದರೂ ಚಾಡಿಯನ್ನು ಹೇಳಿ ಸರ್ವಿಸ್ ಸರಿಯಾಗಿ ಮಾಡುವುದಿಲ್ಲವೆಂದು ಹೀಯಾಳಿಸುವ ಗಿರಾಕಿಗಳಿಗೇನು  ಕಡಿಮೆ ಇಲ್ಲ. ಸೂರ್ಯ ಮುಳುಗಿ ಮಬ್ಬುಗತ್ತಲಾದರೆ ಮಂದ ಬೆಳಕಿನಲ್ಲಿ ಇಂತಹ ಸನ್ನಿವೇಶಗಳು ಬಾರಿನ ಮಾಣಿ (ವೇಟರ್)ಗಳಿಗೆ ಸರ್ವೇಸಾಮಾನ್ಯವಾಗುತ್ತವೆ.

        ಬಾರಿಗೆ ಕುಡಿಯಲು ಬರುವ ಎಲ್ಲಾ ಗಿರಾಕಿಗಳು ಹೀಗೆ ತೊಂದರೆ ಕೊಡುವುದಿಲ್ಲ.  ತಮ್ಮ ಕುಟುಂಬದ ಸಮಸ್ಯೆಗಳನ್ನು ಮನಸ್ಸಿನೊಳಗೆ ಅದುಮಿಟ್ಟುಕೊಳ್ಳಲಾರದೆ, ಕುಡಿದು ಹಗುರಾಗಲು ಬರುವವರುಂಟು. ಮಾಡುವ ಕೆಲಸದಲ್ಲಿ ಸಾಕಷ್ಟು ಒತ್ತಡಗಳನ್ನು ಅನುಭವಿಸಿ, ಕಛೇರಿಯ ಮುಖ್ಯಸ್ಥನಿಂದಲೋ,  ಮೇಲಾಧಿಕಾರಿಗಳಿಂದಲೋ ಬೈಗುಳಗಳನ್ನು ತಿಂದು ಮಾನಸಿಕವಾಗಿ ಜರ್ಜರಿತರಾಗಿ ಕೆಲಸದ ಒತ್ತಡವನ್ನು ಮರೆಯಲು ಕುಡಿಯುವುದಕ್ಕೆ ಮೊರೆಹೋದ ಗಿರಾಕಿಗಳು.  ಒಂದು ಕಡೆ ವಯಸ್ಸಿನಲ್ಲಿ ಮನಸ್ಸು ಹೃದಯವನ್ನು ಕದ್ದವಳು ಇನ್ನೊಬ್ಬನ ತೋಳ ತೆಕ್ಕೆಯಲ್ಲಿ ಬದುಕಿಗೆ ಬಂಧನವಾದ ಪ್ರಿಯತಮೆಯನ್ನು ನೆನಪಿಸಿಕೊಂಡು ದುಃಖವನ್ನು ತಡೆದುಕೊಳ್ಳಲು ಕುಡಿಯಲು ಬರುವ ಪ್ರೇಮಿಗಳು. ಮತ್ತೊಂದು ಕಡೆ ಯಾವುದೋ ಕ್ಷಣದಲ್ಲಿ ತನ್ನದಲ್ಲದ ತಪ್ಪಿಗೆ ಹಿರಿಯರಿಂದಲೋ, ಊರ ಪ್ರಮುಖರಿಂದಲೋ, ಕಾನೂನಿನ ದೃಷ್ಟಿಯಿಂದಲೋ ಅಪರಾಧಿ ಸ್ಥಾನದಲ್ಲಿ ನಿಂತುಕೊಂಡು ನೋವು ಅನುಭವಿಸಿದ ವ್ಯಕ್ತಿಗಳು ಕುಡಿಯುವ ಚಟಕ್ಕೆ ಬಿದ್ದು ಬಾರಿನ ಸ್ನೇಹ ಮಾಡಿದವರೂ ಉಂಟು. ಎಲ್ಲರೂ ಒಂದಿಲ್ಲೊಂದು ಕಾರಣ ದೊಂದಿಗೆ  ಮದ್ಯದೊಂದಿಗೆ ಸ್ನೇಹವನ್ನು ಇಟ್ಟುಕೊಂಡು, ಅತಿಯಾದ ಕುಡಿತವು ಹೆಚ್ಚಾದಾಗ ತಮ್ಮನ್ನು ತಾವೇ ಮರೆತುಬಿಡುತ್ತಾರೆ. ತಮ್ಮ ಎದೆಯಾಳದ ನೋವುಗಳನ್ನು ತನ್ನ ಜೊತೆಗೆ ಕುಡಿಯಲು ಬಂದ ಸ್ನೇಹಿತರೊಂದಿಗೆ ಸಲುಗೆಯಿಂದಲೇ ಮಾತನಾಡುತ್ತಾರೆ,  ಕಣ್ಣೀರು ಸುರಿಸುತ್ತಾರೆ,  ದುಃಖಿಸುತ್ತಾರೆ,  ಬಿಕ್ಕಳಿಸುತ್ತಾರೆ. ನೋವು ಹಂಚಿಕೊಳ್ಳಲು ಸ್ನೇಹಿತರು ಸಿಗದಿದ್ದಾಗ ಬಾರ್‌ನ ನನ್ನಂತಹ ಮಾಣಿಯೇ ಸ್ನೇಹಿತನಾಗುತ್ತಾನೆ. ತನ್ನೆಲ್ಲ ನೋವುಗಳನ್ನು ಅವನೆದುರು ಹಂಚಿಕೊಂಡು ಹೃದಯವನ್ನು ಹಗುರ ಮಾಡಿಕೊಳ್ಳುತ್ತಾನೆ. ಪ್ರತಿಬಾರಿ ಬಂದಾಗಲೊಮ್ಮೆ ಪ್ರೀತಿಯಿಂದ ಮಾಣಿಯನ್ನು ಮಾತನಾಡಿಸಿ, ಅವರಿಗೊಂದಿಷ್ಟು ಪ್ರೀತಿಯ ಕಾಣಿಕೆಯನ್ನು (ಟಿಪ್ಸ್) ಕೊಡುತ್ತಾರೆ.

            ಸ್ನೇಹದಿಂದ ವರ್ತಿಸುವ ಗಿರಾಕಿಗಳೊಡನೆ, ಬದುಕಿನ ಹೋರಾಟಕ್ಕಾಗಿ ಬಂದು ಇಂತಹ ಬಾರಿನ ಕೆಲಸ ಮಾಡುವ ಯುವ ಮನಸ್ಸುಗಳು ಅವರು ಕೊಡುವ ಚಿಕ್ಕ ಚಿಕ್ಕ ಟಿಪ್ಸಗಾಗಿ ಅದು ನನ್ನ ಗಿರಾಕಿ, ಅವರು ನನ್ನ ಗಿರಾಕಿ ಎಂದು ಸ್ಪರ್ಧೆಗೆ ಬಿದ್ದವರಂತೆ ತಮ್ಮ-ತಮ್ಮ ಟೇಬಲ್‌ಗಳಿಗೆ ನಿತ್ಯದ ಗಿರಾಕಿಗಳನ್ನು ಕರೆಯುವುದುಂಟು. ಅವರು ಅತಿಯಾಗಿ ಕುಡಿದು ತಮ್ಮ ನಿಯಂತ್ರಣವನ್ನು ಕಳೆದುಕೊಂಡಾಗ ಅವರಿಗೆ ಸಹಾಯ ಮಾಡಿ, ಅವರ ಮನೆಯವರ ಜೊತೆಗೆ ಕಳುಹಿಸುವುದು, ಮನೆಯವರಿಗೆ ವಿಷಯವನ್ನು ಮುಟ್ಟಿಸುವುದು ನಿತ್ಯದ ಕೆಲಸವಾಗಿರುತ್ತದೆ. ಗಿರಾಕಿಗಳು ಕೊಡುವ ಚಿಕ್ಕ ಚಿಕ್ಕ ಕಾಣಿಕೆಯೊಂದಿಗೆ, ತಿಂಗಳ ಸಂಬಳವನ್ನು ಹೊಂದಿಸಿಕೊಂಡು ಹೇಗಾದರೂ ಮಾಡಿ ತನ್ನ ಮುಂದಿನ ಕನಸುಗಳನ್ನು ಕೈಗೂಡಿಸುವ ಆಶಾ ಮನೋಭಾವನೆಯನ್ನು ಬಾರ್‌ನ ಮಾಣಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ಎಲ್ಲಾ ಕೆಲಸ ಮುಗಿದ ಮೇಲೆ ರಾತ್ರಿ ಹೊತ್ತು ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಾರೆ. ಅವ್ವನ ರೋಗದ ಔಷಧಕ್ಕೋ, ಅಕ್ಕನ ಮದುವೆಗೋ, ತಮ್ಮನ ವಿದ್ಯಾಭ್ಯಾಸಕ್ಕೋ, ಊರ ಶ್ರೀಮಂತನ ಸಾಲಕ್ಕಾಗಿ ಅಡವಿಟ್ಟ ಹೊಲವನ್ನು ಬಿಡಿಸಿಕೊಳ್ಳಲ್ಲೋ, ಹೇಗಾದರೂ ಸರಿಯೇ ತನ್ನ ಓದಿನ ಕನಸಿಗಾದರೂ ಸರಿ ಹಣವನ್ನು ಹೊಂದಿಸಿಕೊಂಡು, ವಾತ್ಸಲ್ಯವನ್ನು ಇಟ್ಟುಕೊಂಡು. ಕನಸುಗಳನ್ನು ನನಸು ಮಾಡುವ ಭರವಸೆಯೊಂದಿಗೆ ಬಾರ್‌ನ ಮಬ್ಬುಗತ್ತಲಲ್ಲಿ ಬದುಕನ್ನು ತಳ್ಳುವ ಯುವಮನಸ್ಸುಗಳ ಬತ್ತದ ವಾತ್ಸಲ್ಯವು ಕೌಟುಂಬಿಕ ಒಲವಧಾರೆಯಲ್ಲಿ ಸದಾ ಜೀವಂತವಾಗಿರುತ್ತದೆ.

          ಉದ್ಯೋಗವಿಲ್ಲದೆ ನಿರುದ್ಯೋಗದಲ್ಲಿ ಕಾಲಹರಣ ಮಾಡುವ ಯುವಕರಿಗಿಂತ ವಿಭಿನ್ನವಾಗಿ ನಿಲ್ಲುವಂತಹ ಬಾರ್ ಮಾಣಿ(ವೇಟರ್)ಗಳ ಬದುಕು ಕೆಲವು ಸಲ ಪ್ರಪಾತಕ್ಕೆ ಬೀಳುವುದುಂಟು. ಕುಡಿತದ ರುಚಿಯನೆಂದೂ ಕಾಣದ ಇವರು ಆಕಸ್ಮಿಕವಾಗಿ ಕುಡಿತದ ಚಟಕ್ಕೆ ಬಿದ್ದರೆ ಬರುವ ಗಿರಾಕಿಗಳಗಿಂತಲೂ ಅತಿಹೆಚ್ಚು ಕುಡಿತದ ವ್ಯಾಮೋಹಕ್ಕೆ ಒಳಗಾಗಿ ಬದುಕನ್ನು ಛೀದ್ರಮಾಡಿಕೊಳ್ಳುತ್ತಾರೆ. ಕೆಲವು ಸಲ ಟಿಪ್ಸಗಾಗಿ ಗಿರಾಕಿಗಳ ಜೊತೆಗೆ ಜಗಳಮಾಡಿದವರು ಇದ್ದಾರೆ. ಕುಟುಂಬಕ್ಕೆ ಆಸರಾಗಬೇಕಾದವರು ಕುಟುಂಬಕ್ಕೆ ಹೊರೆಯಾದ ಉದಾಹರಣೆಗಳುಂಟು. ಬದುಕಿನ ದಾರಿ ಹುಡುಕುವ ಯುವ ಮನಸ್ಸುಗಳಿಗೆ ದಾರಿ ತಪ್ಪದಂತೆ ಹೊಸ ಬದುಕಿನತ್ತ ಹೆಜ್ಜೆ ಹಾಕಲು ಅವರ ಹೃದಯದ ತುಂಬಾ ಒಲವು ಬತ್ತದಿರಲಿ. ಬಾರ್‌ಗಳೆಂಬ ನೆಂಟಸ್ತನದಿಂದ ದೂರವಾಗಿ ನನಂತಯೇ ನನ್ನ ಗೆಳೆಯರ ಬದುಕು ಸುಖಕರವಾಗಲೆಂದು ಹಾರೈಸಬಲ್ಲನಷ್ಟೇ..


                      ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಲೇಖಕರ ಪರಿಚಯ

ಜೀವಸೂಚಿ :

ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ವೃತ್ತಿ :   ಶಿಕ್ಷಕರು

ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ

ವಿದ್ಯಾಭ್ಯಾಸ : ಎಮ್ ಬಿಇಡಿ

ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ,  ಗದ್ಯ, ಚುಟುಕು ಬರಹಗಳು ಇತ್ಯಾದಿ

ಅಂಕಣಗಳು ಬರಹಗಳು :

ವಿನಯವಾಣಿ ಪತ್ರಿಕೆಯಲ್ಲಿ

ಶೈಕ್ಷಣಿಕ ಸ್ಪಂದನ

ಯುವಸ್ಪಂದನ

ವಿಜಯ ವಿಕ್ರಾಂತ ಪತ್ರಿಕೆಯಲ್ಲಿ

ಒಲವಧಾರೆ

ರೆಡ್ಡಿಬಳಗ ಮಾಸಿಕದಲ್ಲಿ

ಚಿಂತನ ಬರಹ

ವಿವಿಧ ಪತ್ರಿಕೆಯಲ್ಲಿ

ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)

ಪ್ರಕಟಿತ ಕೃತಿಗಳು:

ಹೆಜ್ಜೆ ಮೂಡದ ಹಾದಿ

(ಕವನ ಸಂಕಲನ)

ನೆಲ ತಬ್ಬಿದ ಮುಗಿಲು

(ಚುಟುಕು ಸಂಕಲನ)

ಕಾಣೆಯಾದ ನಗುವ ಚಂದಿರ

(ಕವನ ಸಂಕಲನ)

ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ

 (ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)

ಅಚ್ಚಿನಲ್ಲಿರುವ ಕೃತಿಗಳು :

ಚಿಟ್ಟೆಗೆಣೆದ ಬಟ್ಟೆ

(ಹಾಯ್ಕು ಸಂಕಲನ)

ಅನುದಿನ ಚಾಚಿದ ಬಿಂಬ

(ದ್ವೀಪದಿಗಳು)

ಶಿಕ್ಷಣವೆಂಬ ಹಾರೋ ಹಕ್ಕಿ

(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)

ಹಾಫ್ ಚಹಾ

(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)

ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ.


3 thoughts on “

  1. ಬಾರ್ ವೇಟರ್ ಗಳ ನೈಜ ಸ್ಥಿತಿಗಳನ್ನು ಹೊರ ಹಾಕಿದ ಉತ್ತಮ ಬರಹ. ತುಂಬಾ ಚೆನ್ನಾಗಿದೆ.

  2. ನಮಸ್ತೇ ಗುರುಗಳೇ ಕಾಡು ಕಗ್ಗಲ್ಲೊಂದು ಉಳಿಯ ಏಟು ತಿಂದು ಸುಂದರ ಶಿಲ್ಪವಾಗುವ ಹಾಗೆ ತಾವು ಅನುಭಪ್ರತಿಯೊಂದು ಬಾರಿನ ನಿಜಸ್ಥಿತಿಯನ್ನು ಕಣ್ಣೆದುರು ಬರುತ್ತದೆ ಇಂದಿನ ಸಂತೋಷ ನೆಮ್ಮದಿ ಸುಖ ಜೀವನ ವಿಸಿದ ನೋವು ಸಂಕಟಗಳು ಮುಂದಿನ ಸುಖ ಜೀವನಕ್ಕೆ ಅಡಿಗಲ್ಲು ಆಗಿವೆ ಅಂತ ಅನಿಸುತ್ತದೆ ಅಲ್ಲವೇ ಧನ್ಯವಾದಗಳು ಶುಭವಾಗಲಿ ಶ್ರೀನಿವಾಸ ಚಿತ್ರಗಾರ

Leave a Reply

Back To Top