ಸಿನಿಮಾ ಸಂಗಾತಿ
“ಸಮಾಜಮುಖಿ ಮುತ್ತುರಾಜ್”
ಕುಸುಮಾ ಮಂಜುನಾಥ
ಡಾಕ್ಟರ್ ರಾಜ್ ಕುಮಾರ್ ಚಿತ್ರಗಳಲ್ಲಿ ಸಾಮಾಜಿಕ ಕಳಕಳಿ
“ಸಮಾಜಮುಖಿ ಮುತ್ತುರಾಜ್”
ಕನ್ನಡ ಚಿತ್ರರಂಗದ ಅನಭಿಷಕ್ತ ದೊರೆ ರಾಜಕುಮಾರ್.ಮುತ್ತುರಾಜ ‘ನೆಂಬ ಮುತ್ತು ರಾಜಕುಮಾರನಾಗಿ ರೂಪುಗೊಳ್ಳುತ್ತಾ, ಚಿತ್ರರಂಗವನ್ನು ಆವರಿಸಿಕೊಂಡಿದ್ದು ಒಂದು ಇತಿಹಾಸ. ಆಳಾಗಿ ,ಅರಸಾಗಿ ,ಸಾಮಾನ್ಯರಲ್ಲಿ ಸಾಮಾನ್ಯನಾಗಿ ಹಲವಾರು ವೈವಿಧ್ಯಮಯ ಚಿತ್ರಗಳಲ್ಲಿ ಮಿಂಚುತ್ತಿದ್ದುದು ರಾಜ್ ರ ವಿಶೇಷತೆ. ಸಾಮಾಜಿಕ ವಿರಲಿ, ಪೌರಾಣಿಕವಿರಲಿ, ಐತಿಹಾಸಿಕವಿರಲಿ ಯಾವುದೇ ರೀತಿಯ ಸಿನಿಮಾವಿರಲಿ- ಅವು ನೀಡುತ್ತಿದ್ದ ಅನುಭವಗಳು ವಿಶಿಷ್ಟ……
ರಾಜರ ಚಿತ್ರಗಳು ಕೇವಲ ಮನರಂಜನೆಯನ್ನಷ್ಟೇ ನೀಡದೆ, ಸಮಾಜಕ್ಕೆ ಒಂದು ಸಂದೇಶವನ್ನು ನೀಡುತ್ತಿದ್ದವು. ಬೆಳ್ಳಿತೆರೆಯ ನಾಯಕರಂತೆ ನಾವು ಆಗಬೇಕೆಂದು ಜನರಲ್ಲಿ ಭಾವನೆ ಮೂಡಿಸುತ್ತಿದ್ದವು. ಅಂತಹ ಒಂದಷ್ಟು ಚಿತ್ರಗಳ ಬಗ್ಗೆ ಒಂದು ಇಣುಕುನೋಟ.
ಮೊದಲನೆಯದಾಗಿ ಈ ಮಣ್ಣಿನ ವಾಸನೆಯನ್ನು ಘನತೆಯನ್ನು ಎತ್ತಿ ಹಿಡಿದಂತಹ ಚಿತ್ರ “ಬಂಗಾರದ ಮನುಷ್ಯ”. ರಾಜೀವ ಎಂಬ ವಿದ್ಯಾವಂತ ಹಳ್ಳಿಗೆ ಬಂದು ಬರಡು ಭೂಮಿಯನ್ನು ಹಸನು ಮಾಡಿ ಬಂಗಾರ ಬೆಳೆದು ಮಾದರಿಯಾದ.ಈ ಚಿತ್ರದಿಂದ ಪ್ರೇರಿತರಾಗಿ ಹಲವರು ಮರಳಿ ಮಣ್ಣಿಗೆ ಮರಳಿದ್ದುಇತಿಹಾಸದಲ್ಲಿ ದಾಖಲೆ. ಅವರ ಮತ್ತೊಂದು ಚಿತ್ರ “ಕಾಮನಬಿಲ್ಲು “ಇಲ್ಲಿ ಕುವೆಂಪುರವರ ನೇಗಿಲ ಹಾಡು ಚಿತ್ರಿತವಾಗಿದ್ದು ರೈತನ ಹಿರಿಮೆಯನ್ನು ಅದು ಎತ್ತಿ ಹಿಡಿದಿದೆ .ಇಲ್ಲಿಯೂ ನಾಯಕ ಮಣ್ಣಿಗೆ ಹತ್ತಿರವಾಗಿ ಮಿಂಚುತ್ತಾನೆ .ಅವರ “ಮಣ್ಣಿನ ಮಗ “ಚಿತ್ರವು ಮಣ್ಣಿನ ವಾಸನೆಗೆ ಹತ್ತಿರವಾದ ಸಿನಿಮಾ.
ಅವರ “ಜೀವನ ಚೈತ್ರ” ವನ್ನು ಉಲ್ಲೇಖಿಸುವುದಾದರೆ ,ಅಲ್ಲಿಯ ನಾಯಕ ಕುಡಿತದ ವಿರುದ್ಧ ಸಮರ ಸಾರಿ ಇಡೀ ಹಳ್ಳಿಯನ್ನು ಮಧ್ಯಪಾನ ರಹಿತ ವನ್ನಾಗಿ ಮಾಡುತ್ತಾನೆ.” ಶಬ್ದವೇಧಿ”ಚಿತ್ರದ ನಾಯಕ ಮಾದಕ ವ್ಯಸನದ ವಿರುದ್ಧ ಹೋರಾಡುತ್ತಾನೆ .ಯುವಜನರನ್ನು ವ್ಯಸನ ಮುಕ್ತರನ್ನಾಗಿಸಲು ಟೊಂಕ ಕಟ್ಟಿ ನಿಲ್ಲುತ್ತಾನೆ.
ರಾಜ್ ತಮ್ಮ “ಆಕಸ್ಮಿಕ” ಚಿತ್ರದಲ್ಲಿ ದಕ್ಷ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ .ಇಲ್ಲಿ ನಾಯಕ ಸಮಾಜದಲ್ಲಿ ಶೋಷಿತರಾಗಿ ವೇಶ್ಯಾವಾಟಿಕೆಗೆ ತಳ್ಳಲ್ಪಡುವ ಹೆಣ್ಣುಮಕ್ಕಳನ್ನು ಕಾಪಾಡಲು ಪ್ರಯತ್ನಿಸುತ್ತಾನೆ.
“ಜ್ವಾಲಾಮುಖಿ” ಚಿತ್ರದಲ್ಲಿ ಪತ್ರಕರ್ತರಾಗಿ ವ್ಯವಸ್ಥೆಯ ವಿರುದ್ಧ ಹೋರಡುತ್ತಾರೆ. ‘ಧ್ರುವತಾರೆ’ ಚಿತ್ರದಲ್ಲಿ ನಾಯಕನಾಗಿ ರೈತರ ಪರವಾಗಿ ಧ್ವನಿಯೆತ್ತುವ ರೈತ ಚಳುವಳಿಗೆ ನಾಂದಿ ಹಾಡುವ ರಾಜಕುಮಾರರ ಪಾತ್ರವನ್ನು ಮರೆಯಲಾದೀತೆ.
“ಏನೆಂದು ನಾ ಹೇಳಲಿ ಮಾನವನಾಸೆಗೆ ಕೊನೆಯಲ್ಲಿ ?” ಎಂದು ಗಿರಿಕನ್ಯೆಯ ನಾಯಕ ಪ್ರಕೃತಿಯ ಮೇಲೆ ಮನುಷ್ಯನ ದೌರ್ಜನ್ಯವನ್ನು ಪ್ರಶ್ನಿಸುತ್ತಾನೆ.
ಕೂಡಿಬಾಳೋಣ ಸೇರಿ ದುಡಿಯೋಣ ಎಂದು ದುಡಿಮೆಯ ಮಹತ್ವವನ್ನು ಸಾರುತ್ತಾನೆ.
ಹಳ್ಳಿಯ ಮುಗ್ಧ ಯುವಕ ಕೆಟ್ಟು ಪಟ್ಟಣ ಸೇರಿ ಸಮುದಾಯದ ನಾಯಕನಾಗಿ ರೂಪುಗೊಂಡು ಊರಿಗೆ ಮೇಯರಾಗಿ ರೂಪುಗೊಳ್ಳುವ ‘ಮೇಯರ್ ಮುತ್ತಣ್ಣ’ ಸಮಾಜ ಕಟ್ಟುವ ಕೆಲಸವನ್ನು ಮಾಡುತ್ತದೆ.
‘ಬಂಗಾರದ ಹೂವು’ ಚಿತ್ರದ ನಾಯಕ ಕುಷ್ಟರೋಗಕ್ಕೆ ತುತ್ತಾದ ನಾಯಕಿಯನ್ನು ಸಂತೈಸಿ, ಸಮಾಜ ಅವಳನ್ನು ತಿರಸ್ಕರಿಸಿದರೂ ಅವಳಿಗೆ ಜೀವನಸಂಗಾತಿಯಾಗುತ್ತಾನೆ .”ಕಾಮನಬಿಲ್ಲು” ವಿನ ನಾಯಕ ಅಂಗವಿಕಲಳನ್ನು ಮದುವೆಯಾಗಿ ಸಮಾಜಕ್ಕೆ ದಾರಿದೀಪವಾಗುತ್ತಾನೆ. “ನಾಂದಿ”ಯಲ್ಲಿ ಮಾತು ಬಾರದ ನಾಯಕಿಗೆ ಬೆಂಬಲವಾಗಿ ನಿಲ್ಲುತ್ತಾನೆ. ಅವಳೊಂದಿಗೆ ಜೀವನ ಕಟ್ಟಿಕೊಳ್ಳುತ್ತಾನೆ.
ಹೀಗೆ ತಾವು ಅಭಿನಯಿಸಿದ ವಿಭಿನ್ನ ವ್ಯಕ್ತಿತ್ವಗಳ ಮೂಲಕ ಡಾಕ್ಟರ್ ರಾಜ್ ಮಾದರಿಯಾಗುತ್ತಾರೆ .ಅವರಲ್ಲಿ ಆದರ್ಶ ನಾಯಕನ ಗುಣಗಳು ಆವಿರ್ಭಾವಗೊಳ್ಳುತ್ತವೆ . ಅವರಂತೆಯೇ ನಾವಾಗಬೇಕು ಎಂಬ ಆಸೆಯನ್ನು ಹುಟ್ಟಿಸುತ್ತ.ವೆ .ತೆರೆಯ ಮೇಲಿನ ಅವರ ಆದರ್ಶಗಳು ನಿಜಜೀವನಕ್ಕೆ ಬಹಳ ಹತ್ತಿರವಾದವು .ಸ್ಫೂರ್ತಿ ತುಂಬುವಂಥ ರಾಜ್ ರ ತೆರೆಯ ಮೇಲಿನ ನಡೆ -ನುಡಿ, ನಿಲುವು ಭಾಷೆಯ ಉಚ್ಚಾರಣೆ ಅಮೋಘವಾಗಿದ್ದು ಅನುಕರಣೀಯ ವಾಗಿದ್ದವು .ಅವರ ಚಿತ್ರಗಳಲ್ಲಿ ಅಭಿವ್ಯಕ್ತಿಗೊಳ್ಳುತ್ತಿದ್ದ ಕನ್ನಡ ಪ್ರೇಮ ಸಮಾಜಕ್ಕೆ ಪ್ರೇರಕ. ಒಬ್ಬ ಆದರ್ಶ ಪತಿ,ಸಹೋದರ,ಗೆಳೆಯ,ನಾಯಕ,ಅರಸ ಹೀಗೆ ವಿಭಿನ್ನ ಛಾಯೆಗಳನ್ನು ರಾಜ್ ಪಾತ್ರಗಳಲ್ಲಿ ಕಾಣಬಹುದಿತ್ತು.
ಹೀಗೆ ರಾಜ್ ಚಿತ್ರಗಳು ಕೇವಲ ಚಿತ್ರಗಳಾಗದೇ ಸಮಾಜಕ್ಕೆ ಮಾರ್ಗಸೂಚಿಗಳಾಗಿವೆ .ದಾರಿದೀಪವಾಗಿವೆ ಎಂದರೆ ಅತಿಶಯೋಕ್ತಿಯಾಗಲಾರದು. ತಮ್ಮ ಚಿತ್ರಗಳ ಮೂಲಕ ತಮ್ಮ ಮೇಲಿದ್ದ ಸಾಮಾಜಿಕ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದವರು ಕನ್ನಡದ ರತ್ನ ಡಾಕ್ಟರ್ ರಾಜಕುಮಾರ್.
ಕುಸುಮಾ ಮಂಜುನಾಥ
Very nice
ಸುಂದರವಾಗಿ ಮೂಡಿಬಂದಿದೆ ಕುಸುಮ ಅವರೇ