ಅಂಕಣ ಸಂಗಾತಿ
ಗಜಲ್ ಲೋಕ
ಅಮೃತ ಅವರ ಗಜಲ್ ಭಾವಯಾನ…
ಅಮೃತ ಅವರ ಗಜಲ್ ಭಾವಯಾನ…
ಹಲೋ.. ಗಜಲ್ ಕನವರಿಸುವ ಮನಸುಗಳೆ, ತಮಗೆಲ್ಲರಿಗೂ ನನ್ನ ಪುಟ್ಟ ಹೃದಯದಿಂದ ಸಲಾಮ್…ಗುರುವಾರ ಬಂತೆಂದರೆ ಸಾಕು, ಸುಖನವರ್ ಒಬ್ಬರ ಪರಿಚಯಕ್ಕಾಗಿ ನಿಮ್ಮ ಮನಸುಗಳು ಕಾಯುತ್ತಿರುತ್ತವೆ ಎಂಬುದು ನಾನು ಬಲ್ಲೆ… ತಮ್ಮೆಲ್ಲರ ಈ ಪ್ರೀತಿಗೆ ಏನೆಂದು ಹೇಳಲಿ ಸಹೃದಯಿ ಓದುಗರೇ…ತಮ್ಮೆಲ್ಲರ ನಿರೀಕ್ಷೆಯಂತೆ ಇಂದು ಓರ್ವ ಗಜಲ್ ಗೋ ಅವರ ಹೆಜ್ಜೆ ಗುರುತುಗಳೊಂದಿಗೆ ತಮ್ಮ ಮುಂದೆ ಹಾಜರಾಗಿದ್ದೇನೆ. ಸ್ವಾಗತಿಸುವಿರಲ್ಲವೇ….!!
“ಕೇಳಬೇಡ ಹೃದಯದ ಕನ್ನಡಿಯು ಬಿರುಕು ಬಿಟ್ಟಿದ್ದು ಏಕೆಂದು
ಬಿಸಿ ಕಣ್ಣೀರ ಹನಿಯೊಂದು ಹೃದಯದ ಮೇಲೆ ಸಿಡಿದಿರಬೇಕು“
–ಡಾ. ಕುಂವರ್ ಬೇಚೈನ್
ಮನುಷ್ಯ ಯಾವಾಗಲೂ ಚಿರಯುವಕನಾಗಿರಲು ಸದಾ ಹಂಬಲಿಸುತ್ತಿರುತ್ತಾನೆ, ಅದರೊಂದಿಗೆ ಸಾವಿನ ಅಂಚಿಗೆ ಕರೆದೊಯ್ಯುವ ಶತ್ರು ಎಂದು ಭಾವಿಸಿರುವ ಮುಪ್ಪನ್ನು ಶಪಿಸುತ್ತಿರುತ್ತಾನೆ!! ಆದರೆ ‘ಯೌವ್ವನ’ ಎಂದರೆ ಕೇವಲ ಭೋಗ, ಮಸ್ತಿ ಎಂದಲ್ಲ, ಯುವಕನಾಗುವುದು ಎಂದರೆ ಅಮೃದೊಂದಿಗೆ ಬಂಧುತ್ವವನ್ನು ಸ್ಥಾಪಿಸುವುದು, ತನ್ನಾತ್ಮವನ್ನು ಪರಿಶೋಧಿಸುವುದು, ಅಂತರಂಗದ ಗರ್ಭಗುಡಿಯಲ್ಲಿ ಪ್ರಾರ್ಥಿಸುವುದು..!! ಆದರೆ ದುರಂತವೆಂದರೆ ಮನುಕುಲ ಮಾತ್ರ ‘ಯೌವ್ವನ’ದ ಅರ್ಥವನ್ನು ಪರಿಭಾವಿಸಿರೋದೆ ಬೇರೆ ನೆಲೆಗಳಲ್ಲಿ. ಮನುಷ್ಯನ ಆರೋಗ್ಯವೆಂದರೆ ಶಾರೀರಿಕ ಸದೃಢತೆಯೊಂದಿಗೆ ಮಾನಸಿಕ ವಿಕಸನವೂ ಒಳಗೊಂಡಿದೆ. ಇದು ಸಾಧ್ಯವಾಗುವುದು ಸೆಲ್ಫ್ ಫ್ರೀಡಂನಿಂದ. ಬಾಳೊಂದು ಸುಂದರ ತಾಣ. ಹಾಡುಗಳಿಂದ, ಹೂಗಳಿಂದ, ರೆಕ್ಕೆ ಬಲಿತ ಹಕ್ಕಿಗಳಂತೆ ನಾವು ನಾವಾಗಿಯೇ ವಿಕಸಗೊಳ್ಳಲು ಸ್ವಾತಂತ್ರ್ಯ ನೀಡುವುದೆ ಜೀವನವಾಗಿದೆ. ಸ್ವರ್ಗವನ್ನು ಬಣ್ಣಿಸಲಿಕ್ಕಾಗಿ, ನರಕವನ್ನು ಸೃಷ್ಟಿಸಿ ಮನುಕುಲದ ಮನಸ್ಸಿನಲ್ಲಿ ಭಯದ ನೆರಳನ್ನು ಛಾಪಿಸುವುದಕ್ಕಾಗಿ, ಸಮಾಜದ ಹಾದಿ ತಪ್ಪಿಸಿ ತುಂಡು ತುಂಡಾಗಿ ಕತ್ತರಿಸಿ ತಮ್ಮ ದುರಾಶೆಯನ್ನು ವಿಸ್ತರಣೆ ಮಾಡಿಕೊಳ್ಳುವುದಕ್ಕಾಗಿ ಮತಗಳು ನಿರ್ಮಿಸಿದ ವ್ಯವಸ್ಥಿತ ಸಂಚೆ ದೇವರ ಹೆಸರಿನಲ್ಲಿ ನಡೆಯುತ್ತಿರುವ ವಾಣಿಜ್ಯೋದ್ಯಮ!! ಮನುಷ್ಯ ಇದನ್ನು ಅರಿತಾಗ ಮಾತ್ರ ತನ್ನ ಭವ ಬಂಧನದಿಂದ ಮುಕ್ತನಾಗಲು ಸಾಧ್ಯ. ಇದಕ್ಕೆ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ ಸಾಹಿತ್ಯ ಎನ್ನುವುದು ‘ಪ್ರೇಮದ ಹೊರತಾಗಿ ಜಗತ್ತಿನಲ್ಲಿ ಯಾವೊಬ್ಬ ವ್ಯಕ್ತಿಗೂ ಆತ್ಮತೃಪ್ತಿ ಎಂಬುದಿಲ್ಲ’ ಎಂಬುದನ್ನು ಸಾರುತ್ತ ಬಂದಿದೆ. ವಿಶೇಷವಾಗಿ ಕಾವ್ಯ ಪ್ರಕಾರ ಮನುಷ್ಯನಲ್ಲಿ ಜೀವನಪ್ರೀತಿಯನ್ನು ಮೂಡಿಸುತ್ತದೆ. ಈ ಸಂಸಾರದ ಎಲ್ಲ ಲಿಪಿಯುಳ್ಳ ಭಾಷೆಗಳು ಕಾವ್ಯದ ಮಡಿಲಲ್ಲಿ ನಳನಳಿಸುತ್ತಿವೆ. ಇಂಥಹ ಕಾವ್ಯದಲ್ಲಿ ಇಡೀ ಜಾಗತಿಕ ವಲಯವನ್ನೆ ತನ್ನ ಸಂಮೋಹಕ ಜಾದುವಿನಿಂದ ಪರವಶಗೊಳಿಸಿದ್ದು ಅರಬ್ ಕನ್ಯೆ, ಪರ್ಷಿಯನ್ ಚಾಂದನಿ ‘ಗಜಲ್’ ಎನ್ನುವ ಪ್ರೇಮದ ರಸಗಟ್ಟಿ!! ಆ ಪ್ರೇಮದ ಪ್ರವಾಹವು ದಕ್ಷಿಣ ಏಷ್ಯಾದ ಮಾರ್ಗವಾಗಿ ಹಿಂದೂಸ್ಥಾನವನ್ನು ಆವರಿಸಿ, ಕರುನಾಡನ್ನು ಗಜಲ್ ಮಯವಾಗಿಸಿದೆ. ಆ ಆವರಣದಲ್ಲಿ ನೂರಾರು ‘ಗಜಲ್’ ಲೈಲಾ-ಮಜನುಗಳು ಗಜಲ್ ಅನ್ನು ಪ್ರೀತಿಸುತ್ತ, ಗಜಲ್ ಗಳನ್ನು ಬರೆಯುತ್ತಿದ್ದಾರೆ. ಅವರುಗಳಲ್ಲಿ ಕುಮಾರಿ ಅಮೃತ ಎಂ.ಡಿ. ಅವರೂ ಒಬ್ಬರು!!
ಕುಮಾರಿ ಅಮೃತ ಎಂ.ಡಿ ಯವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಾಗನಹಳ್ಳಿ ಎಂಬ ಗ್ರಾಮದಲ್ಲಿ ಶ್ರೀಮತಿ ಸವಿತಾ ಮತ್ತು ಶ್ರೀ ದೇವರಾಜು ದಂಪತಿಗಳ ಮಗಳಾಗಿ ೧೯೯೯ ಜೂನ್ ೨೦ ರಂದು ಜನಿಸಿದರು. ತಮ್ಮ ಅಜ್ಜಿಯ ಊರಾದ ಮೈಸೂರು ಜಿಲ್ಲೆಯ ಮಾರಗೌಡನಹಳ್ಳಿಯಲ್ಲಿ ತಮ್ಮ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸವನ್ನು ಮುಗಿಸಿ ಮುಂದೆ ಮಿಕ್ಕೆರೆಯಲ್ಲಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾಭ್ಯಾಸವನ್ನು ಮುಗಿಸಿದರು. ಪ್ರಾಥಮಿಕ, ಪ್ರೌಢ ಹಂತದಿಂದಲೇ ಸಾಹಿತ್ಯ ಹಾಗೂ ಸಾಂಸ್ಕೃತಿಕ ಒಲವನ್ನು ಬೆಳೆಸಿಕೊಂಡು ವೇದಿಕೆಯಲ್ಲಿ ಭಾಷಣಗಳನ್ನು ಮಾಡಲು ಆರಂಭಿಸಿದರು. ಅವಕಾಶಗಳಿಗಾಗಿ ಕಾಯುತ್ತ ಕೂರದೆ ಅವಕಾಶಗಳನ್ನು ಸೃಷ್ಟಿ ಮಾಡಿಕೊಂಡು ನಿರೂಪಣೆ, ಸ್ವಾಗತ ಭಾಷಣ, ವಂದನಾರ್ಪಣೆಯಿಂದ ಆರಂಭಿಸಿ ಆಶುಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ …. ಎಂದೆಲ್ಲ ಭಾಗವಹಿಸಲು ಆರಂಭಿಸಿ ಪಠ್ಯೇತರ ಪುಸ್ತಕಗಳ ಓದಿನ ಗೀಳನ್ನು ಅಂಟಿಸಿಕೊಂಡು ಬರವಣಿಗೆಯತ್ತ ವಾಲಿದರು. ಮುಂದೆ ತಮ್ಮ ಪದವಿಪೂರ್ವ ಶಿಕ್ಷಣವನ್ನು ಬನ್ನೂರು ಸಂತೆಮಾಳ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡು ತೇರ್ಗಡೆಯಾಗಿ ಮಂಡ್ಯದಲ್ಲಿ ಬಿ.ಎಸ್ಸಿ ಪದವಿಯನ್ನು ಪೂರ್ಣಗೊಳಿಸಿದರು. ತಮ್ಮ ಬಿಡುವಿನ ವೇಳೆಯನ್ನು ಸಾಹಿತ್ಯ ಸರಸ್ವತಿಯ ಸಂಗದಿಂದ ಸದುಪಯೋಗವನ್ನು ಮಾಡಿಕೊಂಡರು. ನಂತರ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಪ್ರಸುತ್ತದಲ್ಲಿ ಶಿವಮೊಗ್ಗದ ‘ಒಪೆನ್ ಮೈಂಡ್ ವರ್ಲ್ಡ್ ಸ್ಕೂಲ್’ ನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿದ್ಯಾಭ್ಯಾಸದೊಂದಿಗೆ ಬರವಣಿಗೆಯನ್ನು ರೂಢಿಸಿಕೊಂಡ ಶ್ರೀಯುತರು ಕವನ, ಚುಟುಕು, ಗಜಲ್, ಹೈಕು, ತಂಕಾ, ಅಬಾಬಿ, ಹನಿಗವನ… ಮುಂತಾದ ಹೊಸಗನ್ನಡದ ಕಿರು ಕಾವ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡುತ್ತಿದ್ದಾರೆ. ಆಧುನಿಕತೆಯ ಅವಿಭಾಜ್ಯ ಅಂಗವಾಗಿರುವ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು ಆನ್ಲೈನ್ ನಲ್ಲಿ ನಡೆಯುವ ಸಾಹಿತ್ಯಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಓದು, ಬರಹದಲ್ಲಿ ಆಸಕ್ತಿಯನ್ನು ಹೊಂದಿರುವ ಇವರ ‘ಭಾವನೆಗಳಿಲ್ಲದವಳ ಭಾವತೀರಯಾನ’ ಎಂಬ ಗಜಲ್ ಸಂಕಲನವು ೨೦೨೦ ನೇ ಸಾಲಿನ ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರ ಕೊಡ ಮಾಡುವ ಯುವ ಬರಹಗಾರರ ಚೊಚ್ಚಲ ಕೃತಿ ಪ್ರೋತ್ಸಾಹಧನಕ್ಕೆ ಆಯ್ಕೆಯಾಗಿ ಅದರ ಸಹಕಾರದಡಿಯಲ್ಲಿ ಪ್ರಕಟವಾಗಿದೆ. ಇವರ ಹಲವು ಬರಹಗಳು ಅಂತರ್ಜಾಲದ ಪತ್ರಿಕೆಗಳಲ್ಲಿ, ದೈನಂದಿನ ದಿನಪತ್ರಿಕೆಗಳಲ್ಲೂ ಪ್ರಕಟಗೊಂಡಿವೆ.
ಕಾವ್ಯ ಅನ್ಯರ ನೋವನ್ನು ತನ್ನದಾಗಿಸಿಕೊಂಡು ಓದುಗರನ್ನು ಖುಷಿ ಪಡಿಸುವ ದಿವ್ಯಾಮೃತ. ಈ ಅಮೃತ ಸವಿಯಬೇಕಾದರೆ ಸಹೃದಯಿ ತಾತ್ವಿಕ ಮಗುವಾಗಬೇಕು. ಇನ್ನೂ ಕಾವ್ಯದ ಆಗಸದಲ್ಲಿ ತಿಂಗಳ ಬೆಳಕಲಿ ಹೊಳೆಯುವ ಚಾಂದನಿಯೆಂದರೆ ಅದೂ ‘ಗಜಲ್’. ಈ ಗಜಲ್ ಎನ್ನುವುದು ನರ್ತಕಿಯ ನರ್ತನದಂತೆ. ಅನಾವಶ್ಯಕವಾಗಿ ಒಂದು ಹೆಜ್ಜೆಯನ್ನು ಸಹ ಬಯಸದಂತದ್ದು. ಇದು ಲಯ ಮತ್ತು ಛಂದಸ್ಸುಗಳ ತಾಂತ್ರಿಕ ಮಟ್ಟ ಹಾಗೂ ಪರಿಕಲ್ಪನೆಗಳ ತಾತ್ವಿಕ ಮಟ್ಟವನ್ನೂ ತನ್ನ ಅಶಅರ್ ನಲ್ಲಿ ಹುದುಗಿಸಿಕೊಂಡಿರುತ್ತದೆ. ಇಂದಿನ ಬರಹವು ಅಭಿವ್ಯಕ್ತಿಯ ಆಯಾಮದಿಂದ ತನ್ನನ್ನು ಮುಕ್ತವಾಗಿಸಿಕೊಂಡಿದೆ. ಬರಹ ಕೇವಲ ತನ್ನೊಳಗಿಗೆ ಜೋತುಬೀಳದೆ, ಇನ್ನೂ ತೆರೆದುಕೊಳ್ಳದಿರುವ ತನ್ನದೇ ಹೊರ ಆವರಣದೊಂದಿಗೂ ಗುರುತಿಸಿಕೊಂಡಿದೆ. ಇಂದು ಹೆಚ್ಚಿನ ಬರಹಗಾರರು ಉಳಿದ ಯಾವ ಪ್ರಕಾರಗಳಲ್ಲೂ ಹೇಳಲು ಅಸಾಧ್ಯವಾದ ಅಂಶಗಳನ್ನು ‘ಗಜಲ್’ ನಲ್ಲಿ ರೂಪಕಗಳ, ಪ್ರತಿಮೆಗಳ ಅಡಗುದಾಣಗಳಲ್ಲಿ ಹೇಳಲು ಪ್ರಯತ್ನಿಸುತ್ತಿದ್ದಾರೆ. ಗಜಲ್ ಗೋ ಅಮೃತ ಎಂ.ಡಿ ಅವರ ಗಜಲ್ ಗಳಲ್ಲಿ ಬಡತನದ ಬೇಗುದಿ, ಯುವಜನತೆಯ ಮನಸುಗಳನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಕೀಳರಿಮೆ, ಸ್ತ್ರೀ ಸಂವೇದನೆಯ ಮೆಲುಮಾತುಗಳು, ಮಾನವೀಯ ಮೌಲ್ಯಗಳ ಚಿಂತನೆ, ಸಮಾಜದ ಓರೆಕೋರೆಗಳನ್ನು ಸೀಳಿ ನೋಡುವ ಚೂಪುಗಣ್ಣು, ವಂಚನೆಯನ್ನು ತಕ್ಷಣ ಪತ್ತೆ ಮಾಡುವ ಹದ್ದಿನಗಣ್ಣು… ಇವುಗಳೊಂದಿಗೆ ‘ಗಜಲ್’ ನ ಸ್ಥಾಯಿಭಾವವಾದ ಅನುರಾಗದ ಮೆರವಣಿಯ ಝಲಕ್ ಇಲ್ಲಿದೆ.
ಅಮಲು, ನಶೆ ಎಂದಾಗಲೆಲ್ಲ ನಮ್ಮ ಕಣ್ಣ ಮುಂದೆ ಮೈಖಾನ, ಮದಿರೆ, ಮಧುಬಟ್ಟಲು ಹಾದು ಹೋಗುತ್ತದೆ. ಆದರೆ ‘ನಶೆ’ ಎನ್ನುವುದು ಸಾರಾಯಿಯಲ್ಲಿ ಇದ್ದಿದ್ದರೆ ಸಾರಾಯಿ ತುಂಬಿದ ಬಾಟಲಿಗಳು ತೂರಾಡುತಿದ್ದವು! ಈ ನೆಲೆಯಲ್ಲಿ ಗಮನಿಸಿದಾಗ ಮತ್ತು ಮದಿರೆಯಲ್ಲಿಲ್ಲ, ಅದು ಪ್ರೇಮದ ಪಲ್ಲಕಿಯಲ್ಲಿದೆ ಎಂಬುದು ಮನದಟ್ಟಾಗುತ್ತದೆ. ಅಮೃತ ಅವರ ಗಜಲ್ ನ ಷೇರ್ ಒಂದನ್ನು ಇಲ್ಲಿ ಉದಾಹರಣೆಗೆಯಾಗಿ ಗಮನಿಸಬಹುದು.
“ಶರಾಬಿನ ಅಮಲಿಗಿಂತ ಮಾದಕತೆ ಪ್ರೀತಿಯಲ್ಲಿದೆ ಗಾಲಿಬ್
ಮರುಳುತನದ ಮೋಹಕತೆ ಮಾತಿನಲ್ಲಿದೆ ಗಾಲಿಬ್“
ಶರಾಬಿನ ನಶೆ ಒಂದು ಹಂತದವರೆಗೆ ಇರುತ್ತದೆ. ಆಮೇಲೆ ಇಳಿದು ಬಿಡುತ್ತದೆ. ಆದರೆ ಪ್ರೀತಿಯ ಮಾದಕತೆ ಹಾಗಲ್ಲ, ಅದು ಅಕ್ಷಯ ಪಾತ್ರೆಯಂತೆ ಸದಾ ಜೀವಂತವಾಗಿರುತ್ತದೆ. ಅಂತೆಯೇ ಪ್ರೇಮಿಗಳ ಕಣ್ಣೋಟ, ಹಗಲೆಲ್ಲ ಮಾತುಕತೆ ಪ್ರೇಮಿಗಳನ್ನು ಸದಾ ಅಮಲಿನಲ್ಲಿಯೆ ಇಡುತ್ತವೆ!! ಈ ಕಾರಣಕ್ಕಾಗಿಯೇ ಪ್ರೇಮಿಗಳನ್ನು ಪಾಗಲ್, ದೀವಾನಾ ಎಂದು ಕರೆಯಲಾಗುತ್ತದೆ.
ಸಮಾಜದ ಒಳಸುಳಿಗಳನ್ನು ಅರಿಯುವುದು ಅಷ್ಟು ಸರಳವಲ್ಲ, ಅರಿಯುತ್ತ ಹೋದಂತೆ ಅರಿವಿಗೆ ಬಂದದ್ದು ತುಂಬಾ ಕಡಿಮೆಯೆಂಬುದು ಮನವರಿಕೆಯಾಗುತ್ತದೆ. ಇಲ್ಲಿ ಸುಖನವರ್ ಅಮೃತ ಅವರು ಮನುಷ್ಯನ ವ್ಯಕ್ತಿತ್ವವನ್ನು ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಮನುಷ್ಯನಾಡುವ ಮಾತುಗಳಿಂದ ಅವನನ್ನು ಅಳಿಯಲಾಗದು. ಜೀವನವು ರೇಡಿಮೇಡ್ ವಸ್ತುವಲ್ಲ, ಕ್ಷಣ ಕ್ಷಣಕ್ಕೂ ಬದಲಾಗುತ್ತ; ಸದಾ ಸ್ಪಂದನೆಯನ್ನು ಬಯಸುತ್ತಿರುತ್ತದೆ. ನಾವಾಡುವ ಮಾತುಗಳೇ ನಮ್ಮ ಸಾಮಾಜಿಕ ವ್ಯವಸ್ಥೆಯ ಬೆನ್ನೆಲುಬು ಎಂಬುದನ್ನು ಈ ಕೆಳಗಿನ ಷೇರ್ ಸಾರುತ್ತಿದೆ.
“ಒರಟು ಮಾತಿನ ಮೊಗವು ಕೆಟ್ಟದಲ್ಲ ನಯದ ಮಾತಿನ ರೂಪವು ಒಳಿತಲ್ಲ
ಮೋಸ ಮಾಡಲು ಬಣ್ಣದ ಮಾತಿನ ಅವಶ್ಯಕತೆ ಬೇಕಂತೆ ರಬ್ಬಾ“
ಛಂದಸ್ಸಿನೊಂದಿಗೆ ಉಸಿರಾಡುತ್ತಿರುವ ‘ಗಜಲ್’ ಸಾಹಿತ್ಯ ಲೋಕದ ಹಲವು ಬದಲಾವಣೆಗಳಿಗೆ ಮುಖಾಮುಖಿಯಾಗುತ್ತಲೆ ತನ್ನ ಮೂಲವನ್ನು ಉಳಿಸಿಕೊಂಡು ಬರುತ್ತಿರುವ ವಿಶಿಷ್ಟ ಕಾವ್ಯ ರೂಪವಾಗಿದೆ. ಕುಮಾರಿ ಅಮೃತ ಎಂ.ಡಿ ಅವರಿಂದ ಗಜಲ್ ಪರಪಂಚ ಮತ್ತಷ್ಟು ಬೆಳಗಲಿ ಎಂದು ಶುಭ ಹಾರೈಸುತ್ತೇನೆ.
“Lived for the Gulmohar in our garden
Died for the Gulmohar in some stranger’s lanes.”
-Dushyant Kumar Tyagi
ಗಜಲ್ ಉದ್ಯಾನವನದ ವಿಹಾರ ತಮ್ಮ ಮನಸುಗಳಿಗೆ ಮುದ ನೀಡುತ್ತಿದೆ ಎಂದುಕೊಂಡಿರುವೆ, ಆರ್ ಯುವ್ ಅಗ್ರಿ… ಹೂಂ ಎಂದು ತಲೆಯಾಡಿಸುತ್ತಿರುವಿರಲ್ಲವೆ..ನನಗೊತ್ತಿಲ್ಲವೆ, ನಮ್ಮ ಗಜಲ್ ಪ್ರೇಮಿಗಳ ಮನಸು, ಕನಸು ಏನೆಂದು! ಆದರೂ ಏನು ಮಾಡೋದು, ಕಾಲದ ಮುಂದೆ ಮಂಡಿಯೂರಲೆ ಬೇಕಲ್ಲವೇ! ನನ್ನ ಈ ಕಲಮ್ ಗೆ ಪೂರ್ಣ ವಿರಾಮವನ್ನು ನೀಡುತ್ತ, ಮುಂದಿನ ಗುರುವಾರ ಮತ್ತೆ ಶಾಯರ್ ಒಬ್ಬರ ಪರಿಚಯದೊಂದಿಗೆ ಹಾಜರಾಗುವೆ. ಅಲ್ಲಿಯವರೆಗೆ ಟಾಟಾ, ಬೈ ಬೈ…ಸೀ ಯುವ್, ಟೇಕ್ ಕೇರ್…!! ಧನ್ಯವಾದಗಳು..
ರತ್ನರಾಯಮಲ್ಲ
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ
ಸೂಪರ್