ಪುಸ್ತಕ ಸಂಗಾತಿ

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

 ಸಮಾಜವೆಂದರೆ ಹೀಗೆ ನಮ್ಮ ನಿಮ್ಮ ಹಾಗೆ

ಲೇಖನಗಳ ಸಂಕಲನ 

 ಸಮಾಜವೆಂದರೆ ಹೀಗೆ ನಮ್ಮ ನಿಮ್ಮ ಹಾಗೆ

ಲೇಖನಗಳ ಸಂಕಲನ 

ಲೇಖಕರು ; ಡಿ. ಎಸ್ . ಶ್ರೀನಿವಾಸ ಪ್ರಸಾದ್

ಪ್ರಥಮ ಮುದ್ರಣ:  ೨೦೧೭

ಪ್ರಕಾಶಕರು ; ನಿವೇದಿತ ಪ್ರಕಾಶನ ಬೆಂಗಳೂರು 

“ನವೋದಯ ಹಿನ್ನೆಲೆಯಲ್ಲಿ ದೊಡ್ಡರಂಗೇಗೌಡರ ಕಾವ್ಯ” ಎಂಬ ವಿಷಯದಲ್ಲಿ ಡಾಕ್ಟರೇಟ್ ಪಡೆದು ಕೆ.ಜಿ.ಎಫ್ ನ ಶ್ರೀ ಭಗವಾನ್ ಮಹಾವೀರ ಜೈನ್ ಕಾಲೇಜಿನಲ್ಲಿ ೧೩ ವರ್ಷದಿಂದ ಹಿರಿಯ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ  ಡಿಎಸ್ ಶ್ರೀನಿವಾಸ್ ಪ್ರಸಾದ್ ಅವರ ೩೭ ಲೇಖನಗಳ ಸಂಕಲನ ಇದು “ಸಮಾಜವೆಂದರೆ ಹೀಗೆ ನಮ್ಮ ನಿಮ್ಮ ಹಾಗೆ “. ಸಮಾಜದ ನಾನಾ ವಿಷಯಗಳ ಮೇಲೆ ದೃಷ್ಟಿ ಹರಿಸಿ ವಿಚಾರಪೂರ್ಣ ವಿಮರ್ಶಾತ್ಮಕ ನೋಟ ಬೀರಿರುವ ಈ ಲೇಖನಗಳು ನಿಜಕ್ಕೂ ನಮ್ಮನ್ನು ಚಿಂತನೆಗೆ ತೊಡಗುವಂತೆ ಪ್ರೇರೇಪಿಸುತ್ತದೆ.  ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಹಲಕೆಲ ಲೇಖನಗಳ ಸಂಗ್ರಹ .ಇದು “ಕನ್ನಡ ಚಿತ್ರರಂಗಕ್ಕೆ ಚಿ ಉದಯಶಂಕರ್ ಅವರ ಕೊಡುಗೆ” ಎಂಬ ವಿಷಯದಲ್ಲಿ ದೊಡ್ಡರಂಗೇಗೌಡರ ಮಾರ್ಗದರ್ಶನದಲ್ಲಿ ಎಂಫಿಲ್ ಪಡೆದಿದ್ದಾರೆ ಈ ಲೇಖಕರು. ಇವರ ಸಾಹಿತ್ಯ ಕೃಷಿಯಂತೂ ಬೆರಗು ಹುಟ್ಟಿಸುತ್ತದೆ ಹದಿನೈದು ಕಥಾಸಂಕಲನ ಹತ್ತು ನಾಟಕಗಳು ಅಸಂಖ್ಯಾತ ಹಾಸ್ಯ ಬರಹಗಳ ಜೊತೆ ಅನೇಕ ವಿಜ್ಞಾನ ಸಂಬಂಧಿತ ಲೇಖನಗಳನ್ನು ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಯಲ್ಲಿ ರಚಿಸಿದ್ದಾರೆ.

ನಮ್ಮ ಸುತ್ತಮುತ್ತಲ ಪ್ರಪಂಚದ ಆಗು ಹೋಗುಗಳನ್ನು ಅವಲೋಕಿಸಿದಾಗ ನಮಗೂ ನೂರೆಂಟು ಆಲೋಚನೆಗಳು ಅಭಿಪ್ರಾಯಗಳು ಮನಸ್ಸಿನಲ್ಲಿ ಹಾದು ಹೋಗಿರುತ್ತದೆ. ಆದರೆ ಅವುಗಳಿಗೊಂದು ಸ್ಪಷ್ಟ ರೂಪ ಕೊಟ್ಟು ಬೇಕಾದಲ್ಲಿ ಇನ್ನಷ್ಟು ಅಧ್ಯಯನ ನಡೆಸಿ ಶ್ರಮಪಟ್ಟು ಬರಹ ರೂಪ ಕ್ಕಿಳಿಸಿದಾಗ ಮಾತ್ರ  ಉತ್ತಮ ಲೇಖನಗಳು ಹೊರಬರುತ್ತದೆ ಪ್ರಕಟಣಾ ಹಾಗೂ ಸಂಗ್ರಹ ಯೋಗ್ಯವಾಗುತ್ತದೆ.  ಈ ಪರಿಶ್ರಮದ ಫಲವೇ ಇದು.  

ಇಲ್ಲಿನ ಲೇಖನಗಳನ್ನು ವ್ಯಕ್ತಿ ಕುರಿತ ಲೇಖನಗಳು, ಕನ್ನಡ ನಾಡು ನುಡಿಯ ಬಗ್ಗೆ, ಭಾವನಾತ್ಮಕ ಲೇಖನಗಳು, ಪೌರಾಣಿಕ ವ್ಯಕ್ತಿ ಆಚರಣೆಗಳು, ಸಂಗೀತ ಹಾಗೂ ಮುಖ್ಯ ವಾಹಿನಿಯ ಸಮಾಜಮುಖಿ ಲೇಖನಗಳು ಹೀಗೆ ವಿಂಗಡಿಸಬಹುದು .

ವ್ಯಕ್ತಿ ಕುರಿತ ಲೇಖನಗಳು

ಸುಪ್ರಸಿದ್ಧ ಸಾಹಿತಿಗಳಾದ ಕೆಎಸ್ ನ ,ಗೊರೂರು ರಾಮಸ್ವಾಮಿ ಅಯ್ಯಂಗಾರ್ ,  ಡಿವಿಜಿ,  ಬೇಂದ್ರೆ,  ಕಾರಂತ, ಕಂಬಾರ, ರಾಜರತ್ನಂ ಹಾಗೂ ತರಾಸು ಅವರುಗಳ ಬಗ್ಗೆ ಬರೆದ ಸಂಕ್ಷಿಪ್ತ ಲೇಖನಗಳು ಮಾಹಿತಿಪೂರ್ಣ ಹಾಗೂ ಕುತೂಹಲಕಾರಿಯಾಗಿದ್ದು ಉದಾಹರಿಸಿದ ಕಾವ್ಯ ಕವನಗಳ ಝಲಕ್ ಪೂರ ಓದಬೇಕೆಂಬ ಅಭಿಲಾಷೆ ಮೂಡಿಸಲು ಶಕ್ತವಾಗುತ್ತದೆ.

ಕನ್ನಡ ನಾಡು ನುಡಿಗೆ ಸಂಬಂಧಿಸಿದ ಲೇಖನಗಳು 

‘ಕನ್ನಡ ನುಡಿಯ ಗುಡಿಗೆ ನಮನ’ದಲ್ಲಿ ಭಾಷಾ ಪ್ರೀತಿಯ ರೀತಿ ಹೇಗಿರಬೇಕು, ಕನ್ನಡ ಅರಿವು ಹೇಗೆ ಮೂಡಬೇಕು ಎಂಬ ಬಗ್ಗೆ ವಿವರವಾಗಿ ಬರೆದಿದ್ದಾರೆ .’ಆಧುನಿಕ ಕನ್ನಡ ಸಾಹಿತ್ಯದಲ್ಲಿ ಬದುಕಿನ ಚಿತ್ರಣ’ ಲೇಖನದಲ್ಲಿ ವಿವಿಧ ಕವಿ ಕಾವ್ಯದಲ್ಲಿ ಬದುಕಿನ ಬಗ್ಗೆ ಚಿತ್ರಣ ಬರಹದ ಬಗ್ಗೆ ಬೆಳಕು ಚೆಲ್ಲಿದ್ದಾರೆ.  ಕುವೆಂಪು ಕೆಎಸ್ ನ ಡಿವಿಜಿ ಅಡಿಗರು ಪರಮೇಶ್ವರ ಭಟ್ಟರ ಕವನಗಳ ಉದ್ದ್ರತ ಸಾಲುಗಳು ಪೂರಾ ಕವನವನ್ನು ಓದಬೇಕೆಂಬ ಹಂಬಲ ಹುಟ್ಟಿಸುವಲ್ಲಿ ಸಫಲವಾಗುತ್ತದೆ.’ ಸಾಹಿತ್ಯ ಮತ್ತು ಪ್ರಸ್ತುತ ಬದುಕಿನ ಹಿನ್ನೆಲೆಯಲ್ಲಿ ಪುನರುಜ್ಜೀವನದ ಗ್ರಹಿಕೆಗಳು’ ಲೇಖನದಲ್ಲಿ 

ಹೊಸ ಪರಿಭಾಷೆಯ ಸಾಹಿತ್ಯಾತ್ಮಕ ಪಲ್ಲಟಗಳ ಬಗ್ಗೆ ವಿವರಿಸುತ್ತಾ ಬದಲಾಗುತ್ತಿರುವ ಸಾಹಿತ್ಯದ ಪರಿಭಾಷೆಯ ಬಗ್ಗೆ ವಿವರಿಸುತ್ತಾರೆ.  ಹಾಗೆಯೆ ‘ಕನ್ನಡ ಕಾವ್ಯ ಲಹರಿಯಲ್ಲಿ ತಾಯಿ ಅನಾವರಣ’  ಲೇಖನದಲ್ಲಂತೂ ವಿವಿಧ ಕವಿಗಳು ಅಮ್ಮನ ಬಗ್ಗೆ ಬರೆದ ಕವನದ ತುಣುಕುಗಳು ಮನಸ್ಸಿಗೆ ತಟ್ಟುತ್ತದೆ ಆರ್ದ್ರತೆ ಮೂಡಿಸುತ್ತದೆ.

ಇನ್ನು ಭಾವನಾತ್ಮಕ ಬರಹಗಳಾದ ‘ಕೌಟುಂಬಿಕ ವ್ಯವಸ್ಥೆಯಲ್ಲಿ ತಂದೆಯ ಮಹತ್ವ’ದಲ್ಲಿ ಅಪ್ಪನನ್ನು ಜತನದಿಂದ  ಸ್ನೇಹಿತನಂತೆ ಹೃದಯದ ಧಮನಿ ಅಪಧಮನಿಗಳ ಪ್ರಾಣವಾಯುವಿನ ಹಿಡಿತದಂತೆ ಇಟ್ಟು ನಿಡುಗಾಲ ಪ್ರೀತಿಸುತ್ತಲೇ ಇರಬೇಕು ಎಂಬ ಸಾಲು ಹೃದಯ ತಟ್ಟಿತು. ಎಷ್ಟು ಸತ್ಯ ಅಲ್ಲವೇ? ಇನ್ನು ‘ಅಪ್ಪ ಅಮ್ಮನ ನಡುವೆ ಶ್ರೇಷ್ಠತೆಯ ಆಯ್ಕೆ ನಿಲ್ಲಲಿ’ ಬರಹದಲ್ಲಿ ತಾಯಿ ಬತ್ತದ ಸಮುದ್ರ ಸದೃಶ ಪ್ರೀತಿಗೆ ದ್ಯೋತಕ,  ತಂದೆ ಆತ್ಮಸ್ಥೈರ್ಯ ಹಾಗೂ ಮಾನಸಿಕ ಸದೃಢತೆಯ ಸಂಕೇತ ಎನ್ನುತ್ತಾರೆ .

ಸಮಾಜಮುಖಿ ಲೇಖನಗಳು 

‘ಸರ್ವಾಧಿಕಾರಿ ವ್ಯವಸ್ಥೆಯ ಜೈಲು ಹಕ್ಕಿಗಳು’ ಇಂದಿನ ಸಮಸ್ಯೆಗಳಾದ ಅಧಿಕಾರದ ದುರ್ಬಳಕೆ, ಸ್ವಜಾತಿ ಪ್ರೇಮ, ವೃತ್ತಿ ಮಾತ್ಸರ್ಯಗಳನ್ನು ವಿವರಿಸಿದರೆ, ಅಹಂಕಾರಿಗಳ ಪ್ರಪಂಚದಲ್ಲಿ ದುರ್ಬಳಕೆಯಾಗುತ್ತಿರುವ ಮಾತಿಗೆ ಕಿವಿಗೊಡಬೇಕೇ ಎಂದು ಪ್ರಶ್ನಿಸುತ್ತದೆ ಮತ್ತೊಂದು ಲೇಖನ. ಸುಳ್ಳು ಸುದ್ದಿಗಳನ್ನೇ ನಿಜ ಮಾಡುತ್ತಿರುವ ಇಂದಿನ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಕೆಂಡ ಕಾರುತ್ತಾರೆ .ಲೇಖಕರು ಅಧ್ಯಾಪಕರೂ ಆಗಿ ಯುವಜನಾಂಗದ ಪ್ರತಿನಿಧಿಯೂ ಆಗಿರುವುದರಿಂದ ಯುವ ಮನಸ್ಸುಗಳು ಮತ್ತು ಶಿಕ್ಷಣ ಲೇಖನದಲ್ಲಿ ಇಂದಿನ ಶೈಕ್ಷಣಿಕ ಪದ್ಧತಿ ಮೌಲ್ಯಗಳ ಅವಲೋಕನ ನಡೆಸಿ ಪ್ರಬುದ್ಧತೆ ಮೆರೆದಿದ್ದಾರೆ. 

‘ಹಣ ಜಗತ್ತನ್ನು ಹಾಳು ಮಾಡುತ್ತಿದೆಯೇ, ಎಂದು ಕೇಳುತ್ತಾ ಐಷಾರಾಮಿ ಬದುಕಿಗೆ ದಾಸರಾಗಿ ತಮ್ಮ ತಮ್ಮ ತಪ್ಪು ಮುಚ್ಚಲು ಹಣದ ದೂಷಣೆ ನೆಪ ಹುಡುಕುವ ದಾರಿ ಅನ್ನುವುದು,  ‘ಕಾಲ ಯಾರೂ ತೀರಿಸಲಾಗದ ಸಾಲ’ ಈ ಲೇಖನದಲ್ಲಿ “ಪ್ರಾಚೀನವಾಗಲಿ ನಿತ್ಯನೂತನವಾಗಿರಲಿ ಸರಿಯಾದ ದೃಷ್ಟಿಕೋನವು ಸಮಾಹಿತ ಸಂವೇದನೆಗಳ ಸಂಗತಿಗಳೇ .ಕಾಲವನ್ನು ನಮ್ಮ ಸಂಗಾತಿಯಾಗಿಸಿ ನೋಡುವ ಅಜಸ್ರನಂಟಿಗೆ ಮುನ್ನುಡಿ ಹಾಡುತ್ತದೆ” ಎಂಬ ಮಾತುಗಳು ನಿಜಕ್ಕೂ ಮನದಾಳಕ್ಕೆ ಇಳಿಯುತ್ತವೆ.  ನಮ್ಮದೇ ಯೋಚನೆಗಳಿಗೆ ಲೇಖಕರು ಧ್ವನಿಯಾಗಿದ್ದಾರೆ ನೋ ಎನ್ನುವಂತಾಗುತ್ತದೆ .”ನಮ್ಮ ನಿಮ್ಮ ಮನಸ್ಸುಗಳಿಗೆ ಭಾನುವಾರ ಸಿಕ್ಕಿದೆಯೇ”  ಎನ್ನುತ್ತಾ ಭಾನುವಾರದ ಸುತ್ತಲೂ ಹೆಣೆಯುತ್ತಾ ಹೋಗುವ ಸೊಗಸು ಓದಿಯೇ ಅರಿಯಬೇಕು .

ಪೌರಾಣಿಕವಾಗಿ ಪರಮಾನಂದದ ಪರಮಾತ್ಮ ಶ್ರೀಕೃಷ್ಣ ದಲ್ಲಿ ಕೃಷ್ಣಾವತಾರದ ವಿವರಣೆಯೊಂದಿಗೆ ಕವಿಗಳು ದಾಸರು ಹಾಗೂ ಚಲನಚಿತ್ರ ಸಾಹಿತ್ಯದಲ್ಲಿ ಕೃಷ್ಣನ ಕುರಿತಾದ ರಚನೆಗಳ ವಿವರವಿದೆ. ಹಬ್ಬಗಳ ವಿಶ್ವಾತ್ಮಕ 

ಮೌಲ್ಯ ಮತ್ತು ಯುಗಾದಿ ಯುಗದಾದಿ ಲೇಖನಗಳು ವಿಶ್ವ ಭಾತೃತ್ವದ ಸಂದೇಶ ಸಾರುತ್ತದೆ.

ಇವಷ್ಟೇ ಅಲ್ಲದೆ ಸಿನಿ ಪ್ರಪಂಚದ ದಿಗ್ಗಜಗಳ ಕಿರುಪರಿಚಯ “ಶರೀರ ಡಾಕ್ಟರ್ ರಾಜ್ಕುಮಾರ್ ಶಾರೀರ ಪಿ ಬಿ ಶ್ರೀನಿವಾಸ್”  “ಕನ್ನಡದ ಸುಶ್ರಾವ್ಯ ಗೀತೆಗಳು ಏಕೆ ಹೇಗೆ ಚಿರಂತನ”  ಲೇಖನಗಳು ಚಲನಚಿತ್ರರಂಗದ ಬಗ್ಗೆ ಅರಿವು ಮೂಡಿಸುವಲ್ಲಿ ಶಕ್ಯವಾಗುತ್ತದೆ . ರಾಗಕೆ ಸ್ವರವಾಗಿ ಸ್ವರಕ್ಕೆ ಪದವಾಗಿ ಲೇಖನವಂತೂ ಸಿನಿಮಾ ಹಾಡುಗಳಲ್ಲಿ ಬಳಕೆಯಾಗಿರುವ ರಾಗಗಳ ಬಗ್ಗೆ ವಿಸ್ತೃತ ಮಾಹಿತಿ ನೀಡುತ್ತದೆ.  

ಹೀಗೆ ಸಮಾಜವೆಂದರೆ ಹೀಗೆ ನಮ್ಮ ನಿಮ್ಮ ಹಾಗೆ ಎನ್ನುತ್ತಾ ಓರೆ ಕೋರೆ ಅಂಕು ಡೊಂಕುಗಳ ಜೊತೆ ಜೊತೆಗೆ ಪ್ರಾಚೀನತೆ ಪರಂಪರೆಗಳ ಬಗ್ಗೆಯೂ ತಿಳಿಸುವ ಲೇಖನಗಳು ಹೃದಯಂಗಮವಾಗಿದೆ . ಡಾ ದೊಡ್ಡರಂಗೇಗೌಡ ಅವರು  ಮುನ್ನುಡಿಯಲ್ಲಿ ನುಡಿದಂತೆ “ಭಾವಲೋಕಕ್ಕೆ ಹೇಗೆ ಪ್ರಾಧಾನ್ಯತೆ ಇದೆಯೋ ಹಾಗೆಯೇ ವೈಚಾರಿಕ ಲೋಕಕ್ಕೆ ವಿಶೇಷ ಸ್ಥಾನಮಾನ ಇದ್ದೇ ಇದೆ “. ಹಿರಿ ಕವಿಗಳ ಹಾರೈಕೆಯ ಜೊತೆಗೆ ಈ ಯುವ ಚಿಂತಕ ನಿರಂತರವಾಗಿ ಬರೆಯಬೇಕು ಮತ್ತಷ್ಟು ಮಗದಷ್ಟು ಕೃತಿಗಳು ಓದುಗರನ್ನು ಮುಟ್ಟಬೇಕು ಎಂಬುದು ನಮ್ಮ ಶುಭ ಕಾಮನೆಗಳು ಸಹ .


                               ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top