ಮಳೆ ಬಿಡಿಸಿದ ಚಿತ್ರ

ಕಾವ್ಯ ಸಂಗಾತಿ

ಮಳೆ ಬಿಡಿಸಿದ ಚಿತ್ರ

ಸೋಮಲಿಂಗ ಬೇಡರ ಆಳೂರ

ಮಳೆಗಾಲದ ಮಳೆಹಾಡಿದು
ಜಲಲಲ ಜಲಧಾರೆ
ಮುಂಗಾರಿನ ಮಳೆ ಮಾರುತ
ಹೊರಟಿವೆ ದಿಬ್ಬಣಕೆ

ಹಸುರಿದ್ದೆಡೆ ಹನಿಯುತ್ತಲಿ
ಸಾಗುತ್ತಿವೆ ಮಳೆಮೋಡ
ಗಿರಿಬೆಟ್ಟಕೆ ಮುತ್ತಿಡುತಲಿ
ಕರಗುತ್ತಿವೆ ಬಿಳಿಮೋಡ

ಸುರಿಮಳೆಗೆ ಹಿರಿಹೊಳೆಗಳು
ಹರಿಯುತ್ತಿವೆ ಧುಮ್ಮಿಕ್ಕಿ
ಹಸಿರೊಡಲಲಿ ಮಿನುಗುತ್ತಿವೆ
ಹಲ್ನೊರೆಯ ಬೆಳ್ಳಕ್ಕಿ

ಮಳೆಹನಿಯ ಸಿಂಚನವು
ಬಲು ಹಿತವು ಮೈಮನಕೆ
ಮುತ್ತುವವು ಹನಿಮುತ್ತು
ಹೊಳೆಹೊಳೆದು ಹೂಬನಕೆ

ಕಣ್ಕುಕ್ಕುವ ಸಿರಿನೋಟ
ಮಳೆ ಬಿಡಿಸಿದ ಚಿತ್ರ
ಮಳೆ ನಿಂತ ಘಳಿಗೆಯದು
ಶೃಂಗಾರದ ಪತ್ರ,!


Leave a Reply

Back To Top