ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಾನಾರು…..?

ಶಂಕರಾನಂದ ಹೆಬ್ಬಾಳ

ನಾನು,
ದೇವಕಿ ಗರ್ಭಸಂಜಾತನಲ್ಲ,
ಅಂಜನಾ ಸುತನಲ್ಲ,
ಅಯೋಧ್ಯೆಯ ಪುರದರಸನಲ್ಲ…
ಮತ್ತೆ,
ನಾನಾರು….?

ನಾನು,
ನಾರಾಯಣನ ರಿಪುವಲ್ಲ,
ಶುಕ್ರಾಚಾರ್ಯನು ಅಲ್ಲ,
ಭುವನತ್ರಯವ ಜಯಿಸಿದವನಲ್ಲ…
ಮತ್ತೆ,
ನಾನಾರು….?

ನಾನು,
ಋಷಿಕುಮಾರನಲ್ಲ,
ಅಜನಲ್ಲ,ಹರಿಯಲ್ಲ,ಹರನಲ್ಲ,
ಯಮಸುತನಲ್ಲ, ವಜ್ರಕಾಯನಲ್ಲ,
ಮತ್ತೆ,
ನಾನಾರು….?

ನಾನು,
ತ್ರಿಲೋಕ ಸಂಚಾರಿಯಲ್ಲ,
ವೈಕುಂಠದ ದ್ವಾರಪಾಲಕನಲ್ಲ,
ದೇವರ್ಷಿಯು ಅಲ್ಲ,
ಮತ್ತೆ,
ನಾನಾರು…?

ನಾನು
ಜಮದಗ್ನಿಕುಮಾರನಲ್ಲ,
ದುಶ್ಯಂತ ಮಹಾರಾಜನಲ್ಲ,
ಸತ್ಯವನರಸಿದ ಸತ್ಯಹರಿಶ್ಚಂದ್ರನಲ್ಲ,
ಮತ್ತೆ,
ನಾನಾರು…?

ನಾನು,
ಮನ್ಮಥನಲ್ಲ,
ದೈವಾಂಶಸಂಭೂತನಲ್ಲ,
ಪೃಥ್ವಿಯನಾಳುವ ನೃಪನಲ್ಲ,
ಮತ್ತೆ,
ನಾನಾರು…?

ನಾನು,
ಶಿಷ್ಯರೊಡಗೂಡಿದ ಗುರುವಲ್ಲ,
ತಪೋರನಿರತನಾದ ತಪಸ್ವಿಯಲ್ಲ,
ಧಾಮನಿಧಿಯಲ್ಲ,ಸುಧಾಂಶುವಲ್ಲ,
ಮತ್ತೆ,
ನಾನಾರು…?

ನಾನು,
ಅರಿಷಡ್ವರ್ಗಗಳ ಗೆಲ್ಲಲಿಲ್ಲ,
ನಾನು ನಾನಾಗಲಿಲ್ಲ
ಸ್ವಾರ್ಥದ ಕಡಲಿನಲ್ಲಿ
ಮುಳುಗಿ ನಾನು ಮೇಲೇಳಲಿಲ್ಲ..

ನಾನು,
ಯಾರೆಂಬುದು ನನಗೆ
ಗೊತ್ತಾಗಲಿಲ್ಲ,,,,
ಗೊತ್ತಾದಾಗ,
ಭುವಿಯಲ್ಲಿ ನಾನಿರಲಿಲ್ಲ…



About The Author

Leave a Reply

You cannot copy content of this page

Scroll to Top