ಕಾವ್ಯ ಸಂಗಾತಿ
ಮಳೆ- ಜೀವಕಳೆ
ಶಾಲಿನಿ ಕೆಮ್ಮಣ್ಣು
ಮಳೆಯೇ
ನೀ ವಾತ್ಸಲ್ಯದ ಖನಿಯೇ
ಪಂಚಭೂತಗಳಿಗೆ ಒಡತಿಯೇ
ನೀ ಸೃಷ್ಟಿಯ ವಿಶೇಷ ಕೊಡುಗೆ
ನಿನ್ನ ಆಗಮನಕೆ ಸರಿಯಿತು ಬೇಸಿಗೆ
ನೀ ನಭದ ಭಾರ ಇಳಿಸಿದೆ
ಕಾದ ಧರೆಗೆ ತಂಪ ಧಾರೆ ಸುರಿದೆ
ಬಣ್ಣ ರುಚಿ ವಾಸನೆ ಇಲ್ಲದ ಜಲಧಾರೆ
ಬೇದಬಾವ ಇರದು ದಾಹ ತೀರೆ
ಇಳೆಗೆ ಹೊಸತನ ತಂದೆ
ಜೀವರಾಶಿಗೆ ಜೀವಕಳೆಯಾದೆ
ಚಿಗುರೊಡೆಯಿತು ಎಲ್ಲೆಲ್ಲೂ ತರುಲತೆಗಳು
ವೈಯಾರದೆ ನರ್ತಿಸುವ ನವ್ವಾಲೆ ಸಾಲು
ನಳನಳಿಸುವ ಸಸ್ಯರಾಶಿ
ಭೂರಮೆಯೊಳು ಪ್ರೇಮ ಕಾಶಿ
ಎಲ್ಲೆಲ್ಲೂ ಸಂತೋಷ ತರಲು ವರ್ಷ
ಮನೆ ಮನಗಳಲ್ಲಿ ಬೆಸುಗೆಯ ಉತ್ಕರ್ಷ