ಕಾವ್ಯ ಸಂಗಾತಿ
ಶಹರದ ಮಳೆ.
ಶೋಭಾ ನಾಯ್ಕ. (ಹಿರೇಕೈಕಂಡ್ರಾ)
ನೆತ್ತಿ ನೆನೆದು
ಹೆರಳು ತೋದು
ಮೂಗ ತುದಿಯಿಂದ
ಹನಿ ಹನಿ ಜಾರಿ ,ತುಟಿ ತಾಕಿ
ಗಲ್ಲದ ಗುಂಟ
ಎದೆ ಕುಳಿಯೊಳಗಿಳಿದು
ಕಚಗುಳಿಯಿಟ್ಟು, ಮೈಯ್ಯ
ಮೆದುವಾಗಿಸಲು ಮಳೆಗೆ
ಅನುವಾಗಿಸದ ಈ ಮಳೆಯಂಗಿಯನ್ನೊಮ್ಮೆ
ಕಳಚಿ ಬಿಡಬೇಕೆನಿಸಿದೆ.
ಹೊತ್ತು ತಂದ ಹನಿಯೊಲವ
ಸರ್ರನೆ ಎದೆಯೊಳಗೆ
ಸುರಿದು
ಮೈ ಮನವ ಘಮ್ಮೆನಿಸಿ
ಒಳಗೊಳಗೇ ಹರಿದು
ಇಳೆಯ ಐಕ್ಯಕೆ ಮಳೆಗೆ
ತಡೆಯಾದ
ಈ ಟಾರು ಬೀದಿಗಳ
ಕಿತ್ತೆಸೆಯ ಬೇಕೆನಿಸಿದೆ.
ಮುದ್ದುಪಾದಗಳ ಅದ್ದಗೊಡದ
ಹಾಳೆ ದೋಣಿಗಳ ತೇಲಗೊಡದ
ಮಕ್ಕಳಾಟಕೆ ತಣ್ಣನೆ
ತಿಳಿನೀರ ನೀಡದ
ಇಡೀ ನಗರದ ಮೈ ಕೊಳೆಯ
ಹೊತ್ತು ತರುವ,
ಈ ಚಂಡಿ ಚರಂಡಿಗಳ
ಗಬ್ಬು ಬಾಯಿಗಳನ್ನೆಲ್ಕ
ಮುಚ್ಚಿ ಬಿಡಬೇಕೆನಿಸಿದೆ.
ನೆಲ ನೆನೆಸದ,
ಹಸಿರು ಹುಟ್ಟಿಸದ
ನದಿಯ ಉಕ್ಕಿಸದ
ಕಡಲ ಸೇರಿಸದ
ಮಣ್ಣ ಗಂಧವ ಪಾದಕ್ಕಂಟಿಸದ
ಈ ಶಹರದ ಮಳೆಯಿಲ್ಲಿ
ಬಿಕ್ಕಿ ಬಿಕ್ಕಿ ಅತ್ತಂತೆನಿಸಿದೆ
ನನಗೋ…
ಈ ಮಳೆಯ ಸಂತೈಸುತ್ತ
ತೋಯಬೇಕೆನಿಸಿದೆ.
ಶೋಭಾ ನಾಯ್ಕ. (ಹಿರೇಕೈಕಂಡ್ರಾಜಿ.
ಮಳೆ ಹನಿಯಷ್ಟೇ ಚೆಂದದ ಕವಿತೆ ಶೋಭಾ
ಶಹರವೇ ಬಂಧನ ಎಂಬುದನ್ನು ಧ್ವನಿಸುವ ಕವಿತೆ ಇದು. ಮಣ್ಣ ಗಂಧವಪಾದಕ್ಕಂಟಿಸದ …ಎಂಬುದು ಕಾವ್ಯದ ಕಸುವನ್ನು ಹೆಚ್ಚಿಸಿದೆ. ಹಾಗೆ ಹೆಣ್ಣಿನ ಸುತ್ತಣ ಇರುವ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ,ಸ್ವಾತಂತ್ರ್ಯದ ಹಂಬಲವನ್ನು ಕವಿತೆ ಗುಟ್ಟಾಗಿ ಹೇಳುತ್ತದೆ.
ಒಳ್ಳೆಯ ಕವಿತೆ.
ಕವಿತೆಯ ನಾಲ್ಕನೇ ಪ್ಯಾರಾ ಸೊಗಸು.