ಕಾವ್ಯ ಸಂಗಾತಿ
ಪಂಜು ಹಿಡಿದವಳು …..!!
ದೇವರಾಜ್ ಹುಣಸಿಕಟ್ಟಿ
ಅದೆಷ್ಟು ಬೇಡಿ
ತೊಡಿಸಿದ್ದಿರಿ ಅವಳ ಕೈಗೆ……!
ಉಸಿರು ಚೆಲ್ಲಿದೆಡೆಯಲೆಲ್ಲ
ಹೂವ್ ಬನವಾಗಿ ಹಬ್ಬಿಬಿಡುವ
ಸ್ವಾತಂತ್ರ್ಯದ ದೀಪವವಳು….!
ಅದೆಷ್ಟು ಬೀಗ ಜಡಿದು
ಅವಳ ಕರುಣ ಬಟ್ಟಲಿಗೆ….!
ಹಿರಿ ಹಿರಿ ಹಿಗ್ಗಿದಿರಿ…
ಸುಟ್ಟ ನೆತ್ತರಿಗೆಲ್ಲ
ಸಾಂತ್ವನ ಗೀತೆ ಹಾಡುವ
ತಾಯಿ ಹೃದಯದವಳು….
ಅದೆಷ್ಟು ಮುಳ್ಳು ಬಿಗಿದಿರಿ
ಅವಳ ಕಾಲಿಗೆ…!
ಬೀದಿಯಲಿ ದಂಗೆಯಬ್ಬಿಸಿ
ಗಲ್ಲಿ ಗಲ್ಲಿಗೆ ಹಬ್ಬಿಸಿದ
ರಕ್ಕಸರ ಕೊಳಪಟ್ಟಿ ಹಿಡಿದ
ರುದ್ರೆಯವಳು….!!
ಅದೆಷ್ಟು ಗುಂಡಿನ
ಗುರಿ ಇರಿಸಿದ್ದಿರಿ ಅವಳ ಎದೆಗೆ..!
ನೀರು ಸಿಗದ ನಾಡಿನಲ್ಲಿ
ಎದೆಯ ಹಾಲನ್ನೆ
ಬಸಿದು ನೀಡಿದವಳು….!
ಜೀವಂತವಿದ್ದು ಸತ್ತವರ
ನಾಡಿನಲ್ಲಿ ಮನುಷ್ಯತ್ವದ
ಜೀವಂತ ಚಿಲುಮೆಯವಳು……!!
ಕಾರ್ಗತ್ತಲಯ ಬೀದಿಗಳಲಿ
ಪಂಜು ಹಿಡಿದು ನಡೆದವಳು….!!
Beautiful