ಕಾವ್ಯ ಸಂಗಾತಿ
ಮಾನ್ಸೂನ್ ಮಳೆ
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಮಾನ್ಸೂನ್ ಮಳೆ ಸುರಿಯುವುದೇ
ಹೀಗೆ
ವಿದ್ಯುತ್ತಿಲ್ಲದ ಕಗ್ಗತ್ತಲೆ ಎನ್ನದೆ
ಸೂರ್ಯ ಉರಿಸಿದ ಕರೆಂಟಿನ ಹಗಲೆನ್ನದೆ
ರಾತ್ರಿ ಧೋ ಸುರಿಯುತ್ತದೆ ಭಯ ಇಲ್ಲದೆ
ಹಗಲು ಇಳೆಗಿಳಿಯುತ್ತದೆ ಕಪ್ಪು ಕೊಡೆ ಹಿಡಿದೆ
ಮಾನ್ಸೂನ್ ಮಳೆ
ಕೇಳುಗರ ತದೇಕತೆಯಲಿ
ತುಂಬು ಸಭಾಂಗಣ ಗಾಢ ಮೌನದಲಿ
ಮಂಗಳ ವಾದ್ಯದ ಸ್ವರಸಮ್ಮೇಳನದಲಿ
ಸುಶ್ರಾವ್ಯ ಕಾವ್ಯವಾಚನದ ಸೋನೆ
ಗುಡು ಗುಡುಗು ಡೋಲು ಸದ್ದು
ಠಳಾರ್ ಫಟಾರ್
ಭೂತಲ ಗಡಗಡ ನಡುಗುವಂಥ
ಸಿಡಿಲಾರ್ಭಟ ಜಗದಗಲ ಗದ್ದಲ
ಫಳ್ಳನೆ ಕ್ಷಣಾರ್ಧದಲಿ ನೆಲದುದ್ದಗಲ
ತೀಕ್ಷ್ಣಾಂಶು ಬೆಳಕ ಕ್ಷಣ ಬೆಳಗಿ
ಮರು ಘಳಿಗೆ ಕತ್ತಲೆಯ ಕಾಡಿಗೆ
ಮುಗಿಲಾಚ್ಛಾದಲಿ ಧಬಧಬ ಸುರಿವ
ಧಾರಾಕಾರ ಜಳಕ ಬುವಿಯ ಮೈಗೆ!
ಮಾನ್ಸೂನ್ ಮಳೆ
ಅಂತ್ಯದ ಕಾಲಕೆ
ಊರೂರಲು ಅಂಕಗಣಿತ:
ಎಷ್ಟೆಷ್ಟು ಕೆರೆ ಹಳ್ಳಗಳೆಷ್ಚೆಷ್ಟು
ತುಂಬಿದ್ದು ಕೋಡಿ ಒಡೆದು ಹರಿದದ್ದು
ನದಿ ಕಟ್ಟೆಗಳಾಳ ಎಷ್ಟು
ಜನ ಜಾನುವಾರುಗಳ ಆಹುತಿ ಎನಿತು
ಮುಳಿಗಿದ್ದು ಕೊಚ್ಚಿ ಹೋದದ್ದು
ಇಂಥ ರೋದನದ ಬಾಬತ್ತು…
ಆದರೂ ವರುಷ ವರುಷ
ಮಾನ್ಸೂನ್ ಮಳೆಗಾಗಿ ಬಾಯಿ ಬಿಡುವ
ಜಗತ್ತು
ಎಲ್ಲ ಥರ ತೊಳೆವ ಬಳಿವ
ನೀರ ಜೀವ ಹನಿಗಾಗಿ
ಜಗದೆಲ್ಲ ಜೀವಿಗಳ ಅನ್ನಕಾಗಿ
ಇನ್ನೂ ಮುಂತಾಗಿ…
ತುಂಬಾ ಚೆನ್ನಾಗಿದೆ ಮೂರ್ತಿ !!